ಬೈರೂತ್ ನಗರದ ಮೇಲೆ ಇಸ್ರೇಲ್ ದಾಳಿ
(ರಾಯಿಟರ್ಸ್ ಸಂಗ್ರಹ ಚಿತ್ರ)
ಜೆರುಸಲೇಂ: ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರ ನಡುವೆ ಬುಧವಾರ ನಸುಕಿನಿಂದ ಕದನ ವಿರಾಮ ಜಾರಿಗೆ ಬಂದಿದೆ.
ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್ ಪಡೆಗಳ ತೀವ್ರ ದಾಳಿಯಿಂದ ಬೈರೂತ್ ನಗರದ ನಿವಾಸಿಗಳು ನಲುಗಿಹೋಗಿದ್ದರು. ಯುದ್ಧ ನಿಲ್ಲಿಸುವ ಒಪ್ಪಂದವು ನಿಜಕ್ಕೂ ಏರ್ಪಡಲಿದೆಯೇ ಎಂದು ಹಲವು ಮಂದಿ ಆಶ್ಚರ್ಯ ಕೂಡ ಪಟ್ಟಿದ್ದರು. ಈ ನಡುವೆ ಮಂಗಳವಾರ ಘೋಷಿಸಿರುವ ಕದನ ವಿರಾಮ ಒಪ್ಪಂದವನ್ನು ಹಿಜ್ಬುಲ್ಲಾ ಮುರಿದರೆ ಮರು ಗಳಿಗೆಯಲ್ಲೇ ದಾಳಿ ನಡೆಸುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿದೆ.
ಇಸ್ರೇಲ್-ಹಿಜ್ಬುಲ್ಲಾ ಕದನ ವಿರಾಮವು, 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಿಂದ ಪ್ರಚೋದಿಸಲ್ಪಟ್ಟ ಪ್ರಾದೇಶಿಕ ಅಶಾಂತಿಯನ್ನು ಕೊನೆಗೊಳಿಸುವ ಮೊದಲ ಪ್ರಮುಖ ಹೆಜ್ಜೆಯಾಗಿದೆ. ಆದರೆ, ಇದು ಗಾಜಾದಲ್ಲಿ ನಡೆಯುತ್ತಿರುವ ವಿನಾಶಕಾರಿ ಯುದ್ಧವನ್ನು ಕೊನೆಗೊಳಿಸುವ ಪ್ರಸ್ತಾವವನ್ನು ಹೊಂದಿಲ್ಲ.
42 ಜನ ಸಾವು:
ಮಂಗಳವಾರ ಲೆಬನಾನ್ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ 42 ಜನರು ಮೃತಪಟ್ಟಿದ್ದಾರೆ. ಹಿಜ್ಬುಲ್ಲಾ ಬಂಡುಕೋರರು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ದೇಶದ ಉತ್ತರ ಭಾಗದಲ್ಲಿ ವಾಯುದಾಳಿಯ ಎಚ್ಚರಿಕೆ ಸಂದೇಶಗಳು ಮೊಳಗಿದವು.
ಗಾಜಾದಲ್ಲಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ಸುಮಾರು 14 ತಿಂಗಳ ಯುದ್ಧದಲ್ಲಿ 44,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 1,04,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಲೆಬನಾನ್‌ನಲ್ಲಿ ಶಾಂತಿ ಆರಂಭ:
ಗುಂಡಿನ ಮೊರೆತ, ಬಾಂಬ್ ಸ್ಫೋಟದ ಸದ್ದಿನಲ್ಲಿ ನಲುಗಿದ್ದ ದಕ್ಷಿಣ ಮತ್ತು ಪೂರ್ವ ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಗೆ ಬರುತ್ತಿದ್ದಂತೆ ಪರಿಸ್ಥಿತಿ ಶಾಂತವಾಗಿತ್ತು. ಆದರೆ, ಸಂಪೂರ್ಣ ಚೇತರಿಕೆಗೆ ಇನ್ನಷ್ಟು ಸಮಯ ಹಿಡಿಯಬಹುದು.
ಯುದ್ಧದಿಂದಾಗಿ ಕಳೆದ ಎರಡು ತಿಂಗಳಿಂದ ಜರ್ಜರಿತವಾಗಿರುವ ಬೈರೂತ್‌ನ ದಕ್ಷಿಣ ಉಪನಗರಗಳ ಭಾಗಗಳಲ್ಲಿ ಕೆಲವು ಜನರು, ಕದನ ವಿರಾಮ ಜಾರಿಗೆ ಬರುತ್ತಿದ್ದಂತೆ ಬಂದೂಕಿನಿಂದ ಮುಗಿಲಕಡೆಗೆ ಗುಂಡುಗಳನ್ನು ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಇಸ್ರೇಲ್‌ನ ಅರೇಬಿಕ್ ಮಿಲಿಟರಿ ವಕ್ತಾರ ಅವಿಚಾಯ್ ಅಡ್ರೇ ಅವರು ಸ್ಥಳಾಂತರಗೊಂಡಿರುವ ಲೆಬನಾನ್ ಜನರಿಗೆ ದಕ್ಷಿಣ ಲೆಬನಾನ್‌ನಲ್ಲಿರುವ ತಮ್ಮ ಹಳ್ಳಿಗಳಿಗೆ ಹಿಂತಿರುಗದಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಲೆಬನಾನ್ ಜನರು ಇದನ್ನು ಧಿಕ್ಕರಿಸಿ ದಕ್ಷಿಣದ ಕರಾವಳಿ ನಗರ ಟೈರ್ ಬಳಿಯ ಹಳ್ಳಿಗಳಿಗೆ ಹಿಂದಿರುಗುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿವೆ.
ಅಕ್ಟೋಬರ್‌ನಲ್ಲಿ ಇಸ್ರೇಲ್ ಭೂ ಆಕ್ರಮಣ ಪ್ರಾರಂಭಿಸಿದ ನಂತರ, ಇಸ್ರೇಲ್ ಪಡೆಗಳು ದಕ್ಷಿಣ ಲೆಬನಾನ್‌ನ ಕೆಲವು ಭಾಗಗಳಲ್ಲಿ ಇನ್ನೂ ಬೀಡುಬಿಟ್ಟಿವೆ. ಲೆಬನಾನ್ ಸರ್ಕಾರದ ಪ್ರಕಾರ, ಯುದ್ಧದಿಂದಾಗಿ ಸುಮಾರು 1.2 ದಶಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.