ನರೇಂದ್ರ ಮೋದಿ, ವ್ಲಾದಿಮಿರ್ ಪುಟಿನ್
(ಚಿತ್ರ ಕೃಪೆ: X/@narendramodi)
ತಿಯಾನ್‌ಜಿನ್: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಇಂದು (ಸೋಮವಾರ) ಭೇಟಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಉಕ್ರೇನ್ ಹಾಗೂ ರಷ್ಯಾ ನಡುವಣ ಯುದ್ಧವನ್ನು ರಚನಾತ್ಮಕ ಮಾತುಕತೆಯ ಮೂಲಕ ಆದಷ್ಟು ಬೇಗನೇ ಕೊನೆಗೊಳಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.
'ಉಕ್ರೇನ್ ವಿರುದ್ಧ ಸಂಘರ್ಷವನ್ನು ಆದಷ್ಟು ಬೇಗನೇ ಕೊನೆಗೊಳಿಸುವುದು ಮಾನವೀಯತೆಯ ಬೇಡಿಕೆಯಾಗಿದೆ. ಆ ಮೂಲಕ ಈ ಪ್ರದೇಶದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಬೇಕು' ಎಂದು ಪುಟಿನ್ ಅವರಿಗೆ ಪ್ರಧಾನಿ ಮೋದಿ ತಿಳಿಸಿದ್ದಾರೆ.
'ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ಎಲ್ಲ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ. ಈ ಸಂಬಂಧ ಉಭಯ ರಾಷ್ಟ್ರಗಳು ರಚನಾತ್ಮಕವಾಗಿ ಮುಂದುವರಿಯುವ ನಂಬಿಕೆಯಿದೆ' ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತಕ್ಕೆ ರಷ್ಯಾ ಅಧ್ಯಕ್ಷರನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ. ವರ್ಷಾಂತ್ಯದಲ್ಲಿ ಪುಟಿನ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.
'ಜಾಗತಿಕ ಶಾಂತಿ, ಸ್ಥಿರತೆ ಹಾಗೂ ಸಮೃದ್ಧಿಗೆ ಭಾರತ ಹಾಗೂ ರಷ್ಯಾ ನಡುವಣ ನಿಕಟ ಬಾಂಧವ್ಯ ಮಹತ್ವದ್ದಾಗಿದೆ' ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು 'ಆತ್ಮೀಯ ಸ್ನೇಹಿತ' ಎಂದು ಪುಟಿನ್ ಸಂಬೋಧಿಸಿದ್ದಾರೆ.
ಒಂದೇ ಕಾರಿನಲ್ಲಿ ತೆರಳಿದ ಮೋದಿ-ಪುಟಿನ್...
ಶಾಂಘೈ ಸಹಕಾರ ಸಂಘಟನೆಯ ಶೃಂಗದ ವೇಳೆ ದ್ವಿಪಕ್ಷೀಯ ಮಾತುಕತೆಯಾಗಿ ಪ್ರಧಾನಿ ಮೋದಿ ಹಾಗೂ ಪುಟಿನ್ ಒಂದೇ ವಾಹನದಲ್ಲಿ ಜೊತೆಯಾಗಿ ತೆರಳಿದರು. ಈ ಸಂಬಂಧ ಚಿತ್ರವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ವ್ಲಾದಿಮಿರ್ ಪುಟಿನ್, ನರೇಂದ್ರ ಮೋದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.