ADVERTISEMENT

ಮಾಸ್ಕೋದಲ್ಲಿ ಉಗ್ರರ ಅಟ್ಟಹಾಸ: ಮುಂಬೈ ಮಾದರಿಯ ದಾಳಿಗೆ ನಡುಗಿದ ರಷ್ಯಾ

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಶುಕ್ರವಾರ ನಡೆದ ಉಗ್ರರ ಭೀಕರ ದಾಳಿಯನ್ನು 26/11 ಮುಂಬೈ ದಾಳಿಗೆ ಹೋಲಿಸಲಾಗುತ್ತಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2024, 7:04 IST
Last Updated 23 ಮಾರ್ಚ್ 2024, 7:04 IST
<div class="paragraphs"><p>ಘಟನೆ ನಡೆದ ಸಂದರ್ಭ</p></div>

ಘಟನೆ ನಡೆದ ಸಂದರ್ಭ

   

ರಾಯಿಟರ್ಸ್ ಚಿತ್ರ

ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಶುಕ್ರವಾರ ನಡೆದ ಉಗ್ರರ ಭೀಕರ ದಾಳಿಯನ್ನು 26/11 ಮುಂಬೈ ದಾಳಿಗೆ ಹೋಲಿಸಲಾಗುತ್ತಿದೆ.

ADVERTISEMENT

ಶುಕ್ರವಾರ ರಾತ್ರಿ ಮಾಸ್ಕೋದ ಅತೀ ದೊಡ್ಡ ಒಳಾಂಗಣ ಸಭಾಂಗಣವಾದ ಕ್ರಾಕಸ್ ಸಿಟಿ ಹಾಲ್‌ಗೆ (Crocus City Hall) ನುಗ್ಗಿದ ಶಸ್ತ್ರಸಜ್ಜಿತ ಉಗ್ರರ ಗುಂಡಿನ ದಾಳಿಯಿಂದ 60 ಜನ ಮೃತಪಟ್ಟಿದ್ದಾರೆ. 150 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕ್ರಾಕಸ್ ಸಿಟಿ ಹಾಲ್‌ನಲ್ಲಿ ಶುಕ್ರವಾರ ರಾತ್ರಿ ಸಂಗೀತ ಕಛೇರಿ ನಡೆಯುತ್ತಿತ್ತು. ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಈ ವೇಳೆ ಏಕಾಏಕಿ ಹಾಲ್ ಒಳಗೆ ನುಗ್ಗಿದ ಉಗ್ರರು ಮನಸೋಇಚ್ಚೆ ಗುಂಡು ಹಾರಿಸಿ ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ.

ಉಗ್ರರು ಮುಸುಕುಧಾರಿಗಳಾಗಿ ಬಂದು ಕೃತ್ಯ ಎಸಗಿ ಹೋಗಿದ್ದಾರೆ. ಸ್ವಯಂಚಾಲಿತ ಗನ್‌ಗಳಿಂದ ಕಂಡ ಕಂಡವರಿಗೆ ಗುಂಡಿನ ಮಳೆಗರೆದು ಕೈಬಾಂಬ್‌ಗಳನ್ನು ಛಾವಣಿಯ ಮೇಲೆ ಎಸೆದು ಹೋಗಿದ್ದಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಂಬಂಧಿಸಿದ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸುತ್ತಿರುವ ಅಧ್ಯಕ್ಷ ಪುಟಿನ್ ಅವರು, ಗಾಯಾಳುಗಳ ರಕ್ಷಣಗೆ ಎಲ್ಲ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದ್ದಾರೆ. ಶೀಘ್ರದಲ್ಲೇ ಅಧ್ಯಕ್ಷರು ಘಟನೆಯ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ರಷ್ಯಾ ‍ಪ್ರಧಾನಿ ತಿಳಿಸಿದ್ದಾರೆ. ಘಟನೆ ಬಗ್ಗೆ ಇನ್ನೂ ಪುಟಿನ್ ಅವರು ಬಹಿರಂಗ ಹೇಳಿಕೆ ನೀಡಿಲ್ಲ.

ಏತನ್ಮಧ್ಯೆ ದಾಳಿಯ ಹಿಂದೆ ಐಸಿಸ್ ಕೈವಾಡ ಇದೆ ಎಂದು ಅಮೆರಿಕ ಹೇಳಿರುವುದಾಗಿ ವರದಿಯಾಗಿದೆ.

ದಾಳಿಯನ್ನು ಖಂಡಿಸಿರುವ ಜಾಗತಿಕ ನಾಯಕರು ದಾಳಿಕೋರರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿವೆ. ಪುಟಿನ್ ಅವರಿಗೆ ಕರೆ ಮಾಡಿ ಮಾತನಾಡಿರುವ ಚೀನಾ ಅಧ್ಯಕ್ಷರು ಷಿ ಜಿನ್ ಪಿಂಗ್ ರಷ್ಯಾ ಜೊತೆ ನಾವಿರಲಿದ್ದೇವೆ ಎಂದು ಹೇಳಿರುವುದಾಗಿ ಚೀನಾ ಸ್ಟೇಟ್ ಮೀಡಿಯಾ ಹೇಳಿಕೆ ಆಧರಿಸಿ ವರದಿಯಾಗಿದೆ.

ಸಾಮಾಜಿ ಮಾಧ್ಯಮಗಳಲ್ಲಿಯೂ ಈ ದಾಳಿ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, 2008 ನವೆಂಬರ್ 26ರಂದು ಮುಂಬೈ ಮೇಲೆ ನಡೆದಿದ್ದ ಉಗ್ರರ ದಾಳಿಗೆ (26/11) ಇದು ಹೋಲಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.