ADVERTISEMENT

ಮ್ಯಾನ್ಮಾರ್: ಫೇಸ್‌ಬುಕ್ ನಿರ್ಬಂಧ, ಟ್ವಿಟರ್, ಇನ್‌ಸ್ಟಾಗ್ರಾಂ ಸ್ಥಗಿತಕ್ಕೆ ಆದೇಶ

ಪ್ರತಿಭಟನೆ ಹತ್ತಿಕ್ಕಲು ಮಿಲಿಟರಿ ಆಡಳಿತದ ಕ್ರಮ

ಏಜೆನ್ಸೀಸ್
Published 6 ಫೆಬ್ರುವರಿ 2021, 7:59 IST
Last Updated 6 ಫೆಬ್ರುವರಿ 2021, 7:59 IST
ಮ್ಯಾನ್ಮಾರ್‌ನ ಯಾಂಗೂನ್‌ನಲ್ಲಿ ಶನಿವಾರ ಮಿಲಿಟರಿ ಆಡಳಿತದ ವಿರುದ್ಧ ನಾಗರಿಕರು ನಡೆಸುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಶೀಲ್ಡ್‌ಗಳನ್ನು ಹಿಡಿದು ನಿಂತಿರುವ ದೃಶ್ಯ.  (ಎಎಫ್‌ಟಿವಿ/ಎಎಫ್‌ಪಿ ಚಿತ್ರ)
ಮ್ಯಾನ್ಮಾರ್‌ನ ಯಾಂಗೂನ್‌ನಲ್ಲಿ ಶನಿವಾರ ಮಿಲಿಟರಿ ಆಡಳಿತದ ವಿರುದ್ಧ ನಾಗರಿಕರು ನಡೆಸುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಶೀಲ್ಡ್‌ಗಳನ್ನು ಹಿಡಿದು ನಿಂತಿರುವ ದೃಶ್ಯ.  (ಎಎಫ್‌ಟಿವಿ/ಎಎಫ್‌ಪಿ ಚಿತ್ರ)   

ಯಾಂಗೂನ್: ನಗರದಲ್ಲಿ ಮಿಲಿಟರಿ ಆಡಳಿತದ ವಿರುದ್ಧದ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ಪ್ರತಿಭಟನೆಗಳನ್ನು ಹತ್ತಿಕ್ಕಲು ಸೇನೆ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ ನಿಷೇಧವನ್ನು ವಿಸ್ತರಿಸಿದ್ದು, ಶನಿವಾರ ಟ್ವಿಟರ್, ಇನ್‌ಸ್ಟಾಗ್ರಾಂ ಅನ್ನೂ ಬಂದ್‌ ಮಾಡಿದ್ದಾರೆ.

ಇದರ ಜತೆಗೆ ನಾಗರಿಕರಿಗೆ ಫೇಸ್‌ಬುಕ್‌ ಸಂಬಂಧಿತ ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂ ಪ್ರವೇಶವನ್ನು ಕಡಿತಗೊಳಿಸುವಂತೆ ಮಿಲಿಟರಿ ಸರ್ಕಾರ ಶುಕ್ರವಾರ ಆದೇಶಿಸಿದೆ. ನಕಲಿ ಸುದ್ದಿಗಳನ್ನು ಹರಡಲು ಕೆಲವರು ಈ ಎರಡೂ ಡಿಜಿಟಲ್ ವೇದಿಕೆಗಳನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಿಲಿಟರಿ ಆಡಳಿತ ಹೇಳಿಕೆಯಲ್ಲಿ ತಿಳಿಸಿದೆ.

‘ಈಗಾಗಲೇ ಇನ್‌ಸ್ಟಾಗ್ರಾಂ ನಿಬಂಧನೆಗಳಿಗೆ ಒಳಪಟ್ಟಿದ್ದು, ಇಂದು ರಾತ್ರಿ 10 ಗಂಟೆಯಿಂದಲೇ ಟ್ವಿಟರ್‌ ಸೇವೆಯೂ ಸ್ಥಗಿಗೊಳ್ಳುವುದಾಗಿ ಸಾಮಾಜಿಕ ಜಾಲತಾಣಗಳ ಸ್ಥಿತಿಗತಿಯ ಮೇಲೆ ಗಮನವಿಡುವ ‘ನೆಟ್‌ಬ್ಲಾಕ್ಸ್‌‘ ಕಂಪನಿ ಖಚಿತ ಪಡಿಸಿದೆ.

ADVERTISEMENT

ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳ ಮೇಲೂ ತೀವ್ರ ನಿರ್ಬಂಧ ಹೇರಲಾಗುತ್ತಿದೆ. ಸುದ್ದಿ ಮತ್ತು ಮಾಹಿತಿಗಳನ್ನು ನೀಡುವ ಹಾಗೂ ಪ್ರತಿಭಟನೆಗಳನ್ನು ಆಯೋಜಿಸಲು ನೆರವಾಗುವ ಪ್ರಮುಖ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.

ವಿಶ್ವಸಂಸ್ಥೆ ಖಂಡನೆ: ಬಂಧಿತ ನಾಯಕರ ಬಿಡುಗಡೆಗೆ ಒತ್ತಾಯ

ವಿಶ್ವಂಸ್ಥೆ: ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಹಿತರ ಘಟನೆಗಳನ್ನು ತೀವ್ರವಾಗಿ ಖಂಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಮ್ಯಾನ್ಮಾರ್‌ನ ವಿಶೇಷ ರಾಯಭಾರಿ, ಬಂಧಿತ ಎಲ್ಲ ರಾಜಕೀಯ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಸೇನಾ ಉಪಮುಖ್ಯಸ್ಥರನ್ನು ಒತ್ತಾಯಿಸಿದ್ದಾರೆ.

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ಮ್ಯಾನ್ಯಾರ್‌ನ ವಿಶೇಷ ರಾಯಭಾರಿ ಕ್ರಿಸ್ಟೀನ್ ಶ್ರೆನರ್ ಬರ್ಗೆನರ್ ಅವರು, ಮ್ಯಾನ್ಮಾರ್‌ನ ಸೇನಾ ಉಪ ಮುಖ್ಯಸ್ಥ ಜನರಲ್ ಸೊ ವಿನ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.