
ಕೀರ್ ಸ್ಟಾರ್ಮರ್, ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ಲಂಡನ್: ಅಫ್ಗಾನಿಸ್ತಾನದಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ನ್ಯಾಟೊ ಮಿತ್ರರಾಷ್ಟ್ರಗಳ ಸೇನಾಪಡೆಯು ಫ್ರಂಟ್ ಲೈನ್‌ನಲ್ಲಿ ಇರಲಿಲ್ಲ (ಸೇನಾಮುಖ) ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯು 'ಅತ್ಯಂತ ಅವಮಾನಕರ' ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಪ್ರತಿಕ್ರಿಯಿಸಿದ್ದಾರೆ.
ನ್ಯಾಟೊ ಪಡೆ ಕುರಿತು ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸ್ಟಾರ್ಮರ್, ಟ್ರಂಪ್ ಕ್ಷಮೆಯಾಚನೆಯನ್ನು ಬಯಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಟಾರ್ಮರ್, '2001ರಲ್ಲಿ ಅಮೆರಿಕದಲ್ಲಿ ನಡೆದ ದಾಳಿಯ ಬಳಿಕ ಅಫ್ಗಾನಿಸ್ತಾನದಲ್ಲಿ ನಡೆದ ಸಂಘರ್ಷದ ಸಂದರ್ಭದಲ್ಲಿ 457 ಬ್ರಿಟಿಷ್ ಯೋಧರು ಮೃತಪಟ್ಟಿದ್ದರು ಎಂಬುದು ಬಹುಶಃ ಟ್ರಂಪ್‌ಗೆ ಗೊತ್ತಿರಲಿಕ್ಕಿಲ್ಲ' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
'ಅಫ್ಗಾನಿಸ್ತಾನಕ್ಕೆ ನ್ಯಾಟೊ ಪಡೆಗಳು ಸೈನಿಕರನ್ನು ಮಾತ್ರ ಕಳುಹಿಸಿದ್ದರು. ಆದರೆ ಸೇನೆಯು ಹಿಂದೆಯೇ ಉಳಿದಿತ್ತು. ಮುಂಭಾಗದಲ್ಲಿ ಇರಲಿಲ್ಲ. ಒಂದು ವೇಳೆ ಅಮೆರಿಕ ಬಯಸಿದ್ದರೂ ನ್ಯಾಟೊ ಪಡೆಗಳು ನೆರವಿಗೆ ಬರುತ್ತಿರಲಿಲ್ಲ' ಎಂದು ಟ್ರಂಪ್ ಹೇಳಿದ್ದರು. ಇದು ಬ್ರಿಟನ್‌ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
'ಆದರೆ ವಾಸ್ತವಾಗಿ 9/11ರ ದಾಳಿಯ ನಂತರ ಬ್ರಿಟನ್ ಸೇರಿದಂತೆ ಯುರೋಪಿನ ಹಲವು ರಾಷ್ಟ್ರಗಳು ಅಫ್ಗಾನಿಸ್ತಾನದಲ್ಲಿ ಅಮೆರಿಕದ ಕಾರ್ಯಾಚರಣೆಯ ಜೊತೆಗೆ ಕೈಜೋಡಿಸಿಕೊಂಡಿದ್ದವು. ಈ ಸಂಘರ್ಷದಲ್ಲಿ ಬ್ರಿಟನ್ ಸಹಿತ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಡೆನ್ಮಾರ್ಕ್ ಮತ್ತು ಇತರೆ ದೇಶಗಳ ಯೋಧರು ಮೃತಪಟ್ಟಿದ್ದರು' ಎಂದು ಸ್ಟಾರ್ಮರ್ ಹೇಳಿದ್ದಾರೆ.
'ಮೊದಲನೆಯದಾಗಿ ಅಫ್ಗಾನಿಸ್ತಾನ ಸಂಘರ್ಷದಲ್ಲಿ ಹುತಾತ್ಮರಾಗಿದ್ದ 457 ಸೈನಿಕರಿಗೆ ಗೌರವ ಸಲ್ಲಿಸುತ್ತೇನೆ. ಅವರ ಧೈರ್ಯ, ಸ್ಥೈರ್ಯ ಹಾಗೂ ದೇಶಕ್ಕಾಗಿ ಮಾಡಿದ ಬಲಿದಾನವನ್ನು ಎಂದಿಗೂ ಮರೆಯುವುದಿಲ್ಲ' ಎಂದಿದ್ದಾರೆ.
'ಈ ಸಂಘರ್ಷಲ್ಲಿ ಹಲವಾರು ಮಂದಿ ಗಾಯಗೊಂಡಿದ್ದರು. ಕೆಲವರಿಗೆ ಬದುಕನ್ನೇ ಬದಲಿಸುವ ರೀತಿಯ ಗಾಯಗಳಾಗಿದ್ದವು. ಹಾಗಾಗಿ ಟ್ರಂಪ್ ಹೇಳಿಕೆ ಅವಮಾನಕರ ಹಾಗೂ ಭೀತಿ ಹುಟ್ಟಿಸುತ್ತಿದೆ. ಅಫ್ಗಾನಿಸ್ತಾನ ಸಂಘರ್ಷದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಕುಟುಂಬದವರಿಗೆ ನೋವನ್ನುಂಟು ಮಾಡಿದೆ' ಎಂದು ಹೇಳಿದ್ದಾರೆ.
ಏತನ್ಮಧ್ಯೆ ಬ್ರಿಟನ್ ಪ್ರಧಾನಿಯ ಹೇಳಿಕೆಯನ್ನು ಅಮೆರಿಕದ ಟ್ರಂಪ್ ಆಡಳಿತ ತಿರಸ್ಕರಿಸಿದೆ. 'ನ್ಯಾಟೊಗಾಗಿ ಮಿತ್ರರಾಷ್ಟ್ರಗಳಿಗಿಂತ ಅಮೆರಿಕವೇ ಹೆಚ್ಚಿನದ್ದನ್ನು ಮಾಡಿದೆ' ಎಂದು ಶ್ವೇತಭವನದ ವಕ್ತಾರೆ ಟೇಲರ್ ರೋಜರ್ಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.