ವೊಲೊಡಿಮಿರ್ ಝೆಲೆನ್‌ಸ್ಕಿ, ಡೊನಾಲ್ಡ್ ಟ್ರಂಪ್
(ಚಿತ್ರ ಕೃಪೆ: X/@ZelenskyyUa)
ದಿ ಹೇಗ್ (ನೆದರ್ಲೆಂಡ್ಸ್): ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ ನ್ಯಾಟೊ ಶೃಂಗಶಭೆಯ ವೇಳೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ರಕ್ಷಣೆ, ಮಿಲಿಟರಿ ಸಹಕಾರ ಮತ್ತು ರಷ್ಯಾ ಜತೆಗಿನ ಈಗ ನಡೆಯುತ್ತಿರುವ ಸಂಘರ್ಷ ಸೇರಿದಂತೆ ಹಲವು ವಿಷಯಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಮಾಹಿತಿ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, 'ನಾನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸುದೀರ್ಘ ಹಾಗೂ ಅರ್ಥಪೂರ್ಣ ಮಾತುಕತೆ ನಡೆಸಿದ್ದೇನೆ. ಮುಖ್ಯವಾದ ಎಲ್ಲ ವಿಷಯಗಳ ಕುರಿತು ಚರ್ಚಿಸಿದ್ದೇನೆ. ಈ ಸಂದರ್ಭದಲ್ಲಿ ಅಮೆರಿಕ ಹಾಗೂ ಅಮೆರಿಕ ಅಧ್ಯಕ್ಷರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ರಷ್ಯಾ ಜತೆ ಕದನ ವಿರಾಮ ಹಾಗೂ ಶಾಂತಿ ಸ್ಥಾಪನೆಯ ಕುರಿತಾಗಿಯೂ ಮಾತುಕತೆ ನಡೆಸಿದ್ದೇನೆ. ನಮ್ಮ ಜನರ ರಕ್ಷಣೆಯ ಕುರಿತಾಗಿಯೂ ಮಾತನಾಡಿದ್ದೇನೆ. ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಟ್ರಂಪ್ ಅವರ ಒಲವನ್ನು ನಾನು ಮೆಚ್ಚುತ್ತೇನೆ' ಎಂದು ತಿಳಿಸಿದ್ದಾರೆ.
'ಮೊದಲನೆಯದಾಗಿ ನಮ್ಮ ನಾಗರಿಕರು, ನಗರ ಮತ್ತು ಮೂಲಸೌಕರ್ಯಗಳ ರಕ್ಷಣೆಗಾಗಿ ಅಮೆರಿಕದಿಂದ ವಾಯು ರಕ್ಷಣಾ ವ್ಯವಸ್ಥೆಗಳ ಖರೀದಿ ಸಂಬಂಧ ಮಾತುಕತೆ ನಡೆಸಿದ್ದೇವೆ. ಯುರೋಪ್ ಕೂಡ ಸಹಾಯ ಮಾಡಬಹುದು. ಡ್ರೋನ್‌ಗಳ ಜಂಟಿ ಉತ್ಪಾದನೆಯ ಬಗ್ಗೆಯೂ ಚರ್ಚಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.
'ಈ ಯುದ್ಧವನ್ನು ಪುಟಿನ್ ಖಂಡಿತವಾಗಿಯೂ ಗೆಲ್ಲುವುದಿಲ್ಲ. ಪ್ರದೇಶದಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದರ ಕುರಿತು ಟ್ರಂಪ್‌ಗೆ ಮಾಹಿತಿ ನೀಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
'ಇದೇ ವೇಳೆ ಮಧ್ಯಪ್ರಾಚ್ಯದಲ್ಲಿ ಯಶಸ್ವಿ ಕಾರ್ಯಾಚರಣೆಗಾಗಿ ನಾನು ಟ್ರಂಪ್ ಅವರಿಗೆ ಧನ್ಯವಾದ ಸಲ್ಲಿಸಿದ್ದೇನೆ. ಅಮೆರಿಕದ ಕಾರ್ಯಾಚರಣೆಯಿಂದಾಗಿ ಪರಮಾಣು ಉತ್ಪಾದನಾ ಸಾಮರ್ಥ್ಯ ದುರ್ಬಲಗೊಳಿಸಲಾಗಿದೆ' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.