ನ್ಯೂಯಾರ್ಕ್: ‘ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಆರ್ಥಿಕ ಭಯೋತ್ಪಾದನೆ. ಕಾಶ್ಮೀರದಲ್ಲಿ ಪ್ರವಾಸೋದ್ಯಮವನ್ನು ನಾಶಪಡಿಸುವುದೇ ಅದರ ಉದ್ದೇಶವಾಗಿತ್ತು’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಇಲ್ಲಿ ಪ್ರತಿಪಾದಿಸಿದರು.
ಆದರೆ, ನೆರೆಯ ಪಾಕಿಸ್ತಾನದಿಂದ ಕಾರ್ಯಾಚರಣೆ ಆಗುತ್ತಿರುವ ಭಯೋತ್ಪಾದನೆ ಹತ್ತಿಕ್ಕುವ ಕಾರ್ಯದಲ್ಲಿ ಯಾವುದೇ ರೀತಿಯ ಅಣ್ವಸ್ತ್ರ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ ಎಂದೂ ಅವರು ಹೇಳಿದರು.
‘ನ್ಯೂಸ್‌ವೀಕ್’ನ ಸಿಇಒ ದೇವ್ ಪ್ರಗದ್ ಜೊತೆಗೆ ನಡೆದ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಜೈಶಂಕರ್, ‘ಪ್ರವಾಸೋದ್ಯಮ ನಾಶಪಡಿಸುವ ಜೊತೆಗೆ ಧಾರ್ಮಿಕ ಹಿಂಸೆಗೆ ಪ್ರಚೋದನೆ ನೀಡುವ ಹುನ್ನಾರವೂ ಪಹಲ್ಗಾಮ್ ಕೃತ್ಯದ ಹಿಂದೆ ಇತ್ತು’ ಎಂದು ಹೇಳಿದರು.
ಅತಿಯಾದ ಸರಳೀಕರಣ:
‘ಚೀನಾ ಕುರಿತಂತೆ ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯವನ್ನು ಕೆಲವೊಮ್ಮೆ ಅತಿಯಾಗಿ ಸರಳೀಕರಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ಇದು ದಾರಿ ತಪ್ಪಿಸುವಂತಿದೆ’ ಎಂದು ಜೈಶಂಕರ್ ಅಭಿಪ್ರಾಯಪಟ್ಟರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯದಲ್ಲಿ ಹಲವು ಸಂಗತಿಗಳು ಮಿಳಿತಗೊಂಡಿವೆ. ಭಾರತದ ಅತಿದೊಡ್ಡ ಸಮುದಾಯವು ಅಮೆರಿಕಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ’ ಎಂದು ಹೇಳಿದರು.
ಆರ್ಥಿಕ ವಹಿವಾಟಿನ ವಿಷಯದಲ್ಲಿ ಭಾರತ ಮತ್ತು ಅಮೆರಿಕ ಉತ್ತಮ ಬಾಂಧವ್ಯವನ್ನು ಹೊಂದಿವೆ ಎಂದು ಪ್ರತಿಪಾದಿಸಿದರು.
ಚೀನಾದ ಜೊತೆಗಿನ ಬಾಂಧವ್ಯವನ್ನು ಚುರುಕುಗೊಳಿಸುವ ದಾರಿಗಳನ್ನು ಹುಡುಕುವುದು ಈಗ ನಮ್ಮ ಆದ್ಯತೆ. ನಮಗೆ ಅನುಕೂಲ ಆಗುವ ವಾತಾವರಣ ನಿರ್ಮಿಸಬೇಕಿದೆ ಎಂದು ಹೇಳಿದರು.
‘ಭಯೋತ್ಪಾದನೆ ವಿರುದ್ಧ ಒಗ್ಗಟ್ಟು ಅಗತ್ಯ’
ವಿಶ್ವಸಂಸ್ಥೆ: ‘ಅಣ್ವಸ್ತ್ರ ಬಳಕೆ ಬ್ಲ್ಯಾಕ್‌ಮೇಲ್’ಗೆ ಜಗ್ಗಬಾರದು ಮತ್ತು ಭಯೋತ್ಪಾದಕರು ನಿರ್ಭೀತರಾಗಿ ಇರಲು ಅವಕಾಶ ನೀಡದಂತೆ ವಿಶ್ವ ಸಮುದಾಯ ಒಗ್ಗಟ್ಟು ಕಾಯ್ದುಕೊಳ್ಳಬೇಕು ಎಂದು ಭಾರತ ಕೋರಿದೆ. ‘ಪಹಲ್ಗಾಮ್ ಕೃತ್ಯಕ್ಕೆ ಪ್ರತಿಯಾಗಿ ಭಾರತ ನಡೆಸಿದ ದಾಳಿಯು ಭಯೋತ್ಪಾದನೆಯನ್ನ ನಾವು ಸಹಿಸುವುದಿಲ್ಲ ಎಂಬುದರ ಸ್ಪಷ್ಟ ಸಂದೇಶವಾಗಿತ್ತು’ ಎಂದು ವಿದೇಶಾಂಗ ವ್ಯವಹಾರ ಸಚಿವ ಎಸ್.ಜೈಶಂಕರ್ ಇಲ್ಲಿ ಹೇಳಿದರು.
ಅಮೆರಿಕ ಪ್ರವಾಸದಲ್ಲಿರುವ ಅವರು ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ‘ಭಯೋತ್ಪಾದನೆಗೆ ಮನುಕುಲ ತೆತ್ತ ಬೆಲೆ’ ಕುರಿತ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಪಾಕಿಸ್ತಾನ ಜುಲೈ ತಿಂಗಳಿನಿಂದ ನಿಭಾಯಿಸಲಿದ್ದು ಇದೇ ವೇಳೆ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಪ್ರದರ್ಶನ ಆಯೋಜನೆಗೊಂಡಿದೆ.
‘ಪಹಲ್ಗಾಮ್‌ನಲ್ಲಿ ಏನಾಯಿತು ಎಂದು ನೋಡಿದ್ದೇವೆ. ಭಯೋತ್ಪಾದನೆ ಸಹಿಸಬಾರದು. ಅದರ ವಿರುದ್ಧ ಜಗತ್ತು ಒಂದುಗೂಡಬೇಕು ಎಂಬುದು ಈಗಿನ ಅಗತ್ಯವಾಗಿದೆ’ ಎಂದು ಜೈಶಂಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.