
ನೂರ್ ಖಾನ್ ವಾಯುನೆಲೆ
(ಸಂಗ್ರಹ ಚಿತ್ರ)
ಕರಾಚಿ: ಕಳೆದ ಮೇ ತಿಂಗಳಲ್ಲಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ.
26 ಮಂದಿಯ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು.
'ಪಾಕಿಸ್ತಾನದ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ದಾಳಿಯಲ್ಲಿ ನೂರ್ ಖಾನ್ ವಾಯುನೆಲೆಯಲ್ಲಿ ಸಣ್ಣ ಪ್ರಮಾಣದ ಹಾನಿ ಉಂಟಾಗಿತ್ತು' ಎಂದು ಪಾಕಿಸ್ತಾನದ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್, ಹೇಳಿದ್ದಾರೆ.
ವರ್ಷಾಂತ್ಯದ ಸುದ್ದಿಗೋಷ್ಠಿಯಲ್ಲಿ ಇಶಾಕ್ ದಾರ್ ಈ ಕುರಿತು ಮಾತನಾಡಿದ್ದು, 'ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಲಾಗಿದ್ದು, ತಕ್ಕ ತಿರುಗೇಟು ನೀಡಲಾಗಿತ್ತು' ಎಂದಿದ್ದಾರೆ.
'ಪಾಕಿಸ್ತಾನದ ಕಡೆಗೆ ಭಾರತ ನಿರಂತರವಾಗಿ ಡ್ರೋನ್ ದಾಳಿಯನ್ನು ನಡೆಸಿತ್ತು. 36 ತಾಸಿನಲ್ಲಿ ಕನಿಷ್ಠ 80 ಡ್ರೋನ್‌ಗಳನ್ನು ರವಾನಿಸಿತ್ತು. ಇವುಗಳ ಪೈಕಿ 79 ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದೆವು. ಆದರೆ ಒಂದು ಡ್ರೋನ್ ಮಿಲಿಟರಿ ನೆಲೆಯ ಮೇಲೆ ಸಣ್ಣ ಪ್ರಮಾಣದಲ್ಲಿ ಹಾನಿಗೊಳಿಸಿತು. ದಾಳಿಯಲ್ಲಿ ಸಿಬ್ಬಂದಿ ಗಾಯಗೊಂಡರು' ಎಂದು ಅವರು ಹೇಳಿದ್ದಾರೆ.
'ನೂರ್ ಖಾನ್ ವಾಯುನೆಲೆಗೆ ದಾಳಿ ನಡೆಸುವ ಮೂಲಕ ಭಾರತ ತಪ್ಪು ಮಾಡಿತ್ತು' ಎಂದು ಇಶಾಕ್ ದಾರ್ ಹೇಳಿದ್ದಾರೆ.
ರಾವಲ್ಪಿಂಡಿಯ ನೂರ್ ಖಾನ್ ಪಾಕಿಸ್ತಾನದ ಪ್ರಮುಖ ವಾಯುನೆಲೆಯಾಗಿದೆ. ನೂರ್ ಖಾನ್ ಸೇರಿದಂತೆ ಹಲವು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಭಾರತ ದಾಳಿ ನಡೆಸಿತ್ತು. ದಾಳಿಯನ್ನು ಪುಷ್ಠೀಕರಿಸುವ ಉಪಗ್ರಹ ಚಿತ್ರಗಳನ್ನು ಭಾರತೀಯ ಸೇನೆ ಬಿಡುಗಡೆಗೊಳಿಸಿತ್ತು.