ADVERTISEMENT

ನೆರವಿಗೆ ಬನ್ನಿ ಎಂದು ಚೀನಾಕ್ಕೆ ಮನವಿ ಮಾಡಿಕೊಂಡ ರಷ್ಯಾ: ಅಮೆರಿಕ ಮಾಧ್ಯಮ ವರದಿ

ಏಜೆನ್ಸೀಸ್
Published 14 ಮಾರ್ಚ್ 2022, 2:39 IST
Last Updated 14 ಮಾರ್ಚ್ 2022, 2:39 IST
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ – ಸಂಗ್ರಹ ಚಿತ್ರ
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ – ಸಂಗ್ರಹ ಚಿತ್ರ   

ವಾಷಿಂಗ್ಟನ್: ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಸೇನೆ ಮತ್ತು ಆರ್ಥಿಕ ನೆರವು ನೀಡುವಂತೆ ಚೀನಾವನ್ನು ರಷ್ಯಾ ಕೋರಿದೆ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ.

ನಿರ್ಬಂಧಗಳಿಂದ ರಷ್ಯಾ ನುಣಿಚಿಕೊಳ್ಳಲು ಸಹಕಾರ ನೀಡಿದರೆ ತೀಕ್ಷ್ಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಚೀನಾಗೆ ಅಮೆರಿಕ ಭಾನುವಾರ ಎಚ್ಚರಿಕೆ ನೀಡಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ವರದಿ ಪ್ರಕಟವಾಗಿದೆ.

ಸೇನಾ ಸಲಕರಣೆಗಳನ್ನು ಒದಗಿಸುವಂತೆ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳಿಂದಾಗಿ ಎದುರಾಗಿರುವ ಸಮಸ್ಯೆಯಿಂದ ಪಾರಾಗಲು ಆರ್ಥಿಕ ನೆರವು ನೀಡುವಂತೆ ಚೀನಾವನ್ನು ರಷ್ಯಾ ಕೋರಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ರಷ್ಯಾವು ನಿರ್ದಿಷ್ಟವಾಗಿ ಯಾವುದಕ್ಕೆ ಬೇಡಿಕೆ ಇಟ್ಟಿದೆ, ಚೀನಾ ಅದಕ್ಕೆ ಪ್ರತಿಕ್ರಿಯೆ ನೀಡಿದೆಯೇ ಎಂಬ ಕುರಿತು ಹೆಚ್ಚಿನ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಈ ವಿಚಾರವಾಗಿ ನಮಗೇನೂ ಮಾಹಿತಿ ಇಲ್ಲ ಎಂದು ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.