ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ರಾಯಿಟರ್ಸ್ ಚಿತ್ರ
ಕೀವ್: ರಷ್ಯಾದ ಕುರ್ಸ್ಕ್ ಪ್ರಾಂತ್ಯದಲ್ಲಿ ಉತ್ತರ ಕೊರಿಯಾದ ಇಬ್ಬರು ಯೋಧರನ್ನು ಉಕ್ರೇನ್ ಸೇನೆ ಸೆರೆ ಹಿಡಿದಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಶನಿವಾರ ಈ ವಿಚಾರ ಬಹಿರಂಗಪಡಿಸಿದ್ದಾರೆ.
ಎಕ್ಸ್/ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಝೆಲೆನ್‌ಸ್ಕಿ, 'ನಮ್ಮ ಯೋಧರು ಉತ್ತರ ಕೊರಿಯಾದ ಇಬ್ಬರು ಸೈನಿಕರನ್ನು ಕುರ್ಸ್ಕ್ ಪ್ರಾಂತ್ಯದಲ್ಲಿ ಸೆರೆ ಹಿಡಿದಿದ್ದಾರೆ. ಬಂಧಿತ ಇಬ್ಬರೂ ಗಾಯಗೊಂಡಿದ್ದು, ಬದುಕುಳಿದಿದ್ದಾರೆ. ಅವರನ್ನು ಕೀವ್‌ಗೆ ಕರೆತರಲಾಗಿದ್ದು, ಭದ್ರತಾ ಪಡೆ ವಿಚಾರಣೆ ನಡೆಸುತ್ತಿದೆ' ಎಂದಿದ್ದಾರೆ.
'ಇದು (ಬಂಧನವು) ಸುಲಭದ ಕಾರ್ಯವಾಗಿರಲಿಲ್ಲ. ಯುದ್ಧದಲ್ಲಿ ಉತ್ತರ ಕೊರಿಯಾ ಪಾಲ್ಗೊಂಡಿದೆ ಎಂಬುದಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ನಾಶಪಡಿಸುವುದಕ್ಕಾಗಿ, ಗಾಯಾಳು ಸೈನಿಕರನ್ನು ರಷ್ಯಾ ಹಾಗೂ ಉತ್ತರ ಕೊರಿಯಾ ಸೇನಾ ಪಡೆಗಳು ಈವರೆಗೆ ಗಲ್ಲಿಗೇರಿಸಿವೆ. ಅದೃಷ್ಟವಶಾತ್, ನಮ್ಮ ಸೇನಾಪಡೆ ವಿಶೇಷ ಕಾರ್ಯಾಚರಣೆ ಮೂಲಕ ಉತ್ತರ ಕೊರಿಯಾದ ಗಾಯಾಳು ಯೋಧರನ್ನು ಸೆರೆ ಹಿಡಿದಿದೆ' ಎಂದು ತಿಳಿಸಿದ್ದಾರೆ.
ಮುಂದುವರಿದು, 'ಬಂಧಿತ ಎಲ್ಲ ಯುದ್ಧ ಕೈದಿಗಳಂತೆ ಉತ್ತರ ಕೊರಿಯಾ ಯೋಧರಿಗೂ ಅಗತ್ಯ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಬಂಧಿತರೊಂದಿಗೆ ಮಾತುಕತೆ ನಡೆಸಲು ಪತ್ರಕರ್ತರಿಗೆ ಅವಕಾಶ ಕಲ್ಪಿಸುವಂತೆ ಭದ್ರತಾ ಪಡೆಗೆ ಸೂಚಿಸಿದ್ದೇನೆ. ಏನೆಲ್ಲಾ ಆಗುತ್ತಿದೆ ಎಂಬ ಸತ್ಯವನ್ನು ಜಗತ್ತು ತಿಳಿಯಬೇಕಿದೆ' ಎಂದು ಹೇಳಿದ್ದಾರೆ.
ರಷ್ಯಾ ಸೇನೆಯು 2022ರ ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿತು. ಆಗಿನಿಂದ ಉಭಯ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.