
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಮಾಸ್ಕೊ: ಸಂಘರ್ಷವನ್ನು ಶಾಂತಿಯುತವಾಗಿ ಕೊನೆಗೊಳಿಸಬೇಕು ಎಂಬ ತವಕ ಉಕ್ರೇನ್ ಸರ್ಕಾರಕ್ಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿರುವುದಾಗಿ ʼಇಂಟರ್‌ಫ್ಯಾಕ್ಸ್ʼ ಸುದ್ದಿ ಸಂಸ್ಥೆ ಶನಿವಾರ ವರದಿಯಾಗಿದೆ.
ಒಂದು ವೇಳೆ ಸಮರವನು ಮಾತುಕತೆ ಮೂಲಕ ಅಂತ್ಯಗೊಳಿಸುವುದನ್ನು ಉಕ್ರೇನ್ ಬಯಸದೇ ಇದ್ದರೆ, ರಷ್ಯಾ ಸೇನೆಯು ತನ್ನ ʼವಿಶೇಷ ಕಾರ್ಯಾಚರಣೆʼಯ ಎಲ್ಲ ಗುರಿಗಳನ್ನು ಬಲ ಪ್ರಯೋಗದ ಮೂಲಕವೇ ಸಾಧಿಸಲಿದೆ ಎಂದು ಪುಟಿನ್ ಎಚ್ಚರಿಸಿರುವುದಾಗಿ ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ 'ಟಾಸ್' (TASS) ಸುದ್ದಿ ಪ್ರಕಟಿಸಿದೆ.
ಪುಟಿನ್ ಹೇಳಿಕೆಗೆ ಸಂಬಂಧ ವರದಿಗಳು ಪ್ರಕಟವಾಗುವುದಕ್ಕೂ ಮೊದಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ರಷ್ಯಾ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಉಕ್ರೇನ್ ಮೇಲೆ ರಾತ್ರೋರಾತ್ರಿ ನಡೆದಿದ್ದ ಡ್ರೋನ್, ಕ್ಷಿಪಣಿ ದಾಳಿಗಳನ್ನು ಉಲ್ಲೇಖಿಸಿ, ಕೀವ್ (ಉಕ್ರೇನ್) ಶಾಂತಿ ಬಯಸುತ್ತಿದ್ದರೆ, ರಷ್ಯಾ ಯುದ್ಧವನ್ನು ಮುಂದುವರಿಸುವ ಹಠಕ್ಕೆ ಬಿದ್ದಿದೆ ಎಂದು ದೂರಿದ್ದರು.
ಪುಟಿನ್ ಅವರು ರಷ್ಯಾದ ಸಶಸ್ತ್ರ ಪಡೆಗಳ ಶಿಬಿರದ ಸೇನಾಧಿಕಾರಿಗಳಿಂದ ಸಂಘರ್ಷಕ್ಕೆ ಸಂಬಂಧಿಸಿದ ಮಾಹಿತಿ ಪಡೆದಿದ್ದಾರೆ. ಈ ವೇಳೆ, ಉಕ್ರೇನ್‌ನ ಡೊನೆಟ್ಸ್ಕ್ ಪ್ರಾಂತ್ಯದಲ್ಲಿರುವ ಮಿರ್ನೋಗ್ರಾಡ್, ರೋಡಿನ್ಸ್‌ಕೆ, ಆರ್ಟೆಮಿವ್ಕಾ ಪಟ್ಟಣಗಳನ್ನು ಮತ್ತು ಝಪೊರಿಝಿಯಾ ಪ್ರಾಂತ್ಯದ ಹುಲೈಪೋಲ್, ಸ್ಟೆಪ್ನೋಗಿರ್ಸ್ಕ್ ಪ್ರದೇಶಗಳನ್ನು ವಶಕ್ಕೆ ಪಡೆದಿರುವುದಾಗಿ ಕಮಾಂಡರ್‌ಗಳು ತಿಳಿಸಿದ್ದಾರೆ ಎಂದು ಕ್ರೆಮ್ಲಿನ್ (ರಷ್ಯಾ ಅಧ್ಯಕ್ಷರ ಕಚೇರಿ) ಮಾಹಿತಿ ನೀಡಿದೆ.
ಆದರೆ, ಮಿರ್ನೋಗ್ರಾಡ್, ಹುಲೈಪೋಲ್ ಸುತ್ತಲು ರಷ್ಯಾ ನಡೆಸಿದ ದಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.