ADVERTISEMENT

ಮಾನವೀಯ ನೆರವಿನೊಂದಿಗೆ ಗಾಜಾಕ್ಕೆ ಹೊರಟ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌

ಏಜೆನ್ಸೀಸ್
Published 5 ಜೂನ್ 2025, 11:12 IST
Last Updated 5 ಜೂನ್ 2025, 11:12 IST
<div class="paragraphs"><p>ಗ್ರೆಟಾ ಥನ್‌ಬರ್ಗ್‌</p></div>

ಗ್ರೆಟಾ ಥನ್‌ಬರ್ಗ್‌

   

ರಾಯಿಟರ್ಸ್‌

ರೋಮ್‌: ಮಾನವೀಯ ನೆರವು ಸಾಮಾಗ್ರಿಗಳನ್ನು ಹೊತ್ತ ಹಡಗಿನಲ್ಲಿ ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌ ಸೇರಿದಂತೆ 12 ಜನ ಕಾರ್ಯಕರ್ತರು ಗಾಜಾದ ಕಡೆಗೆ ಪ್ರಯಾಣಿಸಿ‌ದ್ದಾರೆ. ಜೂನ್‌ 7ರಂದು ಗಾಜಾ ಕರಾವಳಿ ತೀರವನ್ನು ತಲುಪಲಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಗ್ರೆಟಾ ಅವರ ಜೊತೆಗೆ ‘ಗೇಮ್ ಆಫ್ ಥ್ರೋನ್ಸ್’ ನಟ ಲಿಯಾಮ್ ಕನ್ನಿಂಗ್ಹ್ಯಾಮ್ ಮತ್ತು ಯುರೋಪಿಯನ್ ಪಾರ್ಲಿಮೆಂಟ್‌ನ ಫ್ರೆಂಚ್ ಸದಸ್ಯೆ ರಿಮಾ ಹಸನ್ ಸಹ ಇದ್ದಾರೆ.

ಕಾರ್ಯಕರ್ತರ ಈ ಪಡೆ ‘ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ’ದಿಂದ ನಿರ್ವಹಿಸಲ್ಪಡುವ ‘ಮ್ಯಾಡ್ಲೀನ್‘ ಹೆಸರಿನ ಹಡಗಿನಲ್ಲಿ ಪ್ರಯಾಣ ಬೆಳಸಿದೆ. ಭಾನುವಾರ ದಕ್ಷಿಣ ಇಟಲಿಯ ಕ್ಯಾಟಾನಿಯಾ ಬಂದರಿನಿಂದ ಈ ಹಡಗು ಗಾಜಾದ ಕಡೆಗೆ ಹೊರಟಿತ್ತು.

ಪ್ರಯಾಣದ ಆರಂಭದ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಗ್ರೆಟಾ, ‘ಏನೇ ಸಮಸ್ಯೆ ಬಂದರೂ ನಾವು ಗಾಜಾಕ್ಕೆ ತೆರಳುವುದನ್ನು ನಿಲ್ಲಿಸುವುದಿಲ್ಲ. ನಮ್ಮ ಪ್ರಯತ್ನ ನಿರಂತರ. ಪ್ರಯತ್ನವನ್ನು ನಿಲ್ಲಿಸಿದ ಕ್ಷಣದಲ್ಲಿಯೇ ನಾವು ಮಾನವೀಯತೆ ಕಳೆದುಕೊಂಡಂತೆ. ನರಮೇಧವನ್ನು ಕಂಡು ಜಗತ್ತು ಮೌನ ವಹಿಸಿದಂತೆ ನಾವು ಸುಮ್ಮನಿರಲು ಸಾಧ್ಯವಿಲ್ಲ’ ಎಂದು ಕಂಬನಿ ಮಿಡಿದಿದ್ದಾರೆ.

ಸುಮಾರು ಮೂರು ತಿಂಗಳಿನಿಂದ ಗಾಜಾದ ಮೇಲೆ ದಿಗ್ಬಂಧನ ವಿಧಿಸಿದ್ದ ಇಸ್ರೇಲ್‌, ಮೇ ತಿಂಗಳ ಮಧ್ಯದಲ್ಲಿ ಸೀಮಿತ ಪ್ರಮಾಣದ ಮಾನವೀಯ ನೆರವು ಪೂರೈಸಲು ಅನುಮತಿಸಿತ್ತು. ಯುದ್ಧದಿಂದ ನಲುಗಿರುವ ಗಾಜಾಕ್ಕೆ ತುರ್ತು ಮಾನವೀಯ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಇತ್ತೀಚೆಗೆ ಹೇಳಿತ್ತು.

ಏನತ್ಮಧ್ಯೆ, ‘ಇದಕ್ಕೆ ನಾವು ಸಿದ್ಧರಾಗಿದ್ದೇವೆ’ ಎಂದು ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ಬ್ರಿಗೇಡಿಯರ್ ಜನರಲ್ ಎಫೀ ಡೆಫ್ರಿನ್ ಹೇಳಿರುವುದಾಗಿ ಟೈಮ್ಸ್‌ ಆಫ್‌ ಲಂಡನ್‌ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.