ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಕೃಪೆ: ಪಿಟಿಐ
ಗಾಜಾಪಟ್ಟಿ: ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಸ್ತಾಪಿಸಿರುವ 20 ಅಂಶಗಳ ಯೋಜನೆಯನ್ನು ಅಧ್ಯಯನ ನಡೆಸಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ಹಮಾಸ್ ಸಂಘಟನೆ ಹೇಳಿದೆ.
ಗಾಜಾದಲ್ಲಿನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವುದು ಮತ್ತು ಹಮಾಸ್ ಹಿಡಿತದಲ್ಲಿರುವ ಎಲ್ಲ ಒತ್ತೆಯಾಳುಗಳನ್ನು 72 ಗಂಟೆ ಒಳಗಾಗಿ ಬಿಡುಗಡೆ ಮಾಡುವುದನ್ನು ಈ ಶಾಂತಿ ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಗೆ ಸೂಚಿಸಿದ್ದರು.
‘ಟ್ರಂಪ್ ಅವರ ಯೋಜನೆ ಬಗ್ಗೆ ಹಮಾಸ್ ಸಮಾಲೋಚನೆ ನಡೆಸುತ್ತಿದೆ. ಇದಕ್ಕಾಗಿ ಸ್ವಲ್ಪ ಕಾಲಾವಕಾಶ ಅಗತ್ಯವಿರುವ ಬಗ್ಗೆ ಸಂಧಾನಕಾರರಿಗೆ ಮಾಹಿತಿ ನೀಡಲಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ, ಹಮಾಸ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಈ ಯೋಜನೆಯು ಕಳವಳಕಾರಿ ಅಂಶಗಳನ್ನು ಒಳಗೊಂಡಿದೆ. ಇದರ ಬಗ್ಗೆ ನಮ್ಮ ನಿಲುವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು’ ಎಂದು ಹಮಾಸ್‌ನ ರಾಜಕೀಯ ಬ್ಯೂರೊ ಸದಸ್ಯ ಮೊಹಮ್ಮದ್ ಸಜ್ಜಲ್ ಹೇಳಿದ್ದಾರೆ.
ಈ ಯೋಜನೆಯನ್ನು ಒಪ್ಪಿಕೊಳ್ಳಲು ಹಮಾಸ್‌ಗೆ ಮೂರು ಅಥವಾ ನಾಲ್ಕು ದಿನಗಳ ಕಾಲಾವಕಾಶವನ್ನು ಟ್ರಂಪ್ ಅವರು ಕಳೆದ ಮಂಗಳವಾರ ನೀಡಿದ್ದರು. ಈ ಯೋಜನೆಯನ್ನು ಅರಬ್ ಹಾಗೂ ಇಸ್ಲಾಂ ರಾಷ್ಟ್ರಗಳು ಸ್ವಾಗತಿಸಿದ್ದವು.
‘ಮುಸ್ಲಿಂ ರಾಷ್ಟ್ರಗಳ ಪ್ರಸ್ತಾವಕ್ಕೆ ಅನುಗುಣವಾಗಿಲ್ಲ’
ಇಸ್ಲಾಮಾಬಾದ್: ‘ಡೊನಾಲ್ಡ್ ಟ್ರಂಪ್ ಮಂಡಿಸಿದ 20 ಅಂಶಗಳ ಯೋಜನೆಯು ಮುಸ್ಲಿಂ ರಾಷ್ಟ್ರಗಳ ಗುಂಪು ಸಲ್ಲಿಸಿದ್ದ ಕರಡು ಪ್ರತಿಯಲ್ಲಿನ ಅಂಶಗಳಿಗೆ ಅನುಗುಣವಾಗಿಲ್ಲ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ಡಾರ್ ಶುಕ್ರವಾರ ಹೇಳಿದ್ದಾರೆ.
‘ಗಾಜಾದಿಂದ ಇಸ್ರೇಲ್ ಪಡೆಗಳನ್ನು ಸಂಪೂರ್ಣವಾಗಿ ವಾಪಸ್ ಪಡೆಯುವುದು ವೆಸ್ಟ್ ಬ್ಯಾಂಕ್‌ಅನ್ನು ಇಸ್ರೇಲ್ ಸ್ವಾಧೀನಪಡಿಸಿಕೊಳ್ಳಬಾರದು ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡ ಪ್ರಸ್ತಾವವನ್ನು ಮುಸ್ಲಿಂ ರಾಷ್ಟ್ರಗಳು ಸಲ್ಲಿಸಿದ್ದವು. ಆದರೆ ಟ್ರಂಪ್ ಪ್ರಕಟಿಸಿರುವ ಯೋಜನೆ ಈ ಅಂಶಗಳನ್ನು ಒಳಗೊಂಡಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.