ADVERTISEMENT

ಔಷಧಕ್ಕೂ ಶೇ 100 ಸುಂಕ ಹೇರಿದ ಟ್ರಂಪ್‌: ಆರ್ಥಿಕ ಅನಿಶ್ಚಿತತೆಯ ಸೂಚನೆ

ಪಿಟಿಐ
Published 26 ಸೆಪ್ಟೆಂಬರ್ 2025, 20:34 IST
Last Updated 26 ಸೆಪ್ಟೆಂಬರ್ 2025, 20:34 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ವಾಷಿಂಗ್ಟನ್‌: ಅಮೆರಿಕವು  ಆಮದು ಮಾಡಿಕೊಳ್ಳುವ ಔಷಧಗಳ ಮೇಲೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶೇ 100ರಷ್ಟು ಸುಂಕ ವಿಧಿಸಿದ್ದಾರೆ.

ಪರಿಷ್ಕೃತ ತೆರಿಗೆ ದರವು ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ. 

ADVERTISEMENT

ಔಷಧದ ಜತೆಗೆ, ಕಿಚನ್‌ ಕ್ಯಾಬಿನೆಟ್‌ ಮತ್ತು ಸ್ನಾನಗೃಹ ಉಪಕರಣಗಳ ಮೇಲೆ ಶೇ 50, ಮೆತ್ತನೆಯ ಹಾಸಿಗೆ, ಸೋಫಾಸೆಟ್‌, ಪೀಠೋಪಕರಣಗಳ ಮೇಲೆ ಶೇ 30 ಮತ್ತು ಭಾರಿ ಟ್ರಕ್‌ಗಳ ಮೇಲೆ ಶೇ 25ರಷ್ಟು ಆಮದು ಸುಂಕ ಹೇರುವುದಾಗಿ ಟ್ರಂಪ್‌ ಹೇಳಿದ್ದಾರೆ. 

ಆಮದು ತೆರಿಗೆ ಹೆಚ್ಚಳವು ಸರ್ಕಾರದ ಬಜೆಟ್‌ ಹೊರೆಯನ್ನು ತಗ್ಗಿಸಲಿದೆ ಮತ್ತು ದೇಶೀಯ ತಯಾರಿಕೆಯನ್ನು ಹೆಚ್ಚಿಸಲಿದೆ ಎಂದು ಟ್ರಂಪ್‌ ತಮ್ಮ ಸಾಮಾಜಿಕ ಜಾಲತಾಣ ‘ಟ್ರೂಥ್‌’ನಲ್ಲಿ ಹೇಳಿದ್ದಾರೆ. 

ಸುಂಕ ಏರಿಕೆಗೆ ಟ್ರಂಪ್‌ ಕಾನೂನು ಸಮರ್ಥನೆಯನ್ನು ನೀಡಿಲ್ಲ. ಆದರೆ, ರಾಷ್ಟ್ರೀಯ ಭದ್ರತೆ ಮತ್ತಿತರ ಕಾರಣಗಳಿಗಾಗಿ ಸುಂಕ ಏರಿಕೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

1962ರ ವ್ಯಾಪಾರ ವಿಸ್ತರಣಾ ಕಾಯ್ದೆಯಡಿ ಅಮೆರಿಕವು, ಔಷಧ, ಭಾರಿ ಟ್ರಕ್‌, ಮರದ ದಿಮ್ಮಿಗಳು ಸೇರಿದಂತೆ ವಿವಿಧ ವಸ್ತುಗಳ ಆಮದಿನಿಂದ ರಾಷ್ಟ್ರೀಯ ಭದ್ರತೆ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಇತ್ತೀಚೆಗೆ ತನಿಖೆ ನಡೆಸಿತ್ತು. ಈಗ  ಔಷಧ, ಪೀಠೋಪಕರಣಗಳ ಮೇಲೆ  ಆಮದು ಸುಂಕ ಹೆಚ್ಚಿಸಿರುವುದು ಇದೇ ಕಾರಣಕ್ಕಾಗಿಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಶೇ 100ರಷ್ಟು ತೆರಿಗೆಯು ಅಮೆರಿಕದಲ್ಲಿ ಹೊಸದಾಗಿ ನಿರ್ಮಣವಾಗುವ ಮತ್ತು ನಿರ್ಮಾಣ ಹಂತದಲ್ಲಿರುವ ಔಷಧ ತಯಾರಿಕಾ ಘಟಕಗಳಿಗೆ ಅನ್ವಯಿಸುವುದಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ, ಈಗಾಗಲೇ ಅಲ್ಲಿ ಔಷಧ ತಯಾರಿಸುತ್ತಿರುವ ಘಟಕಗಳಿಗೆ ಈ ತೆರಿಗೆ ಅನ್ವಯಿಸಲಿ ದೆಯೇ ಎನ್ನುವುದು ಸಷ್ಟಗೊಂಡಿಲ್ಲ. 

ಸುಂಕ ಬೆದರಿಕೆ ಬೆನ್ನಲ್ಲೇ, ಜಾನ್ಸನ್ ಆ್ಯಂಡ್‌ ಜಾನ್ಸನ್‌, ಅಸ್ಟ್ರಾ ಜೆನೆಕಾ, ರೋಚ್, ಬ್ರಿಸ್ಟೊಲ್‌, ಎಲಿ ಲಿಲ್ಲಿ ಸೇರಿದಂತೆ ಹಲವು ಔಷಧ ತಯಾರಿಕಾ ಕಂಪನಿಗಳು ಅಮೆರಿದಲ್ಲಿ ಹೂಡಿಕೆ ಮಾಡುವುದಾಗಿ ಹೇಳಿವೆ.

ಆರ್ಥಿಕ ಅನಿಶ್ಚಿತತೆಯ ಸೂಚನೆ

ಆಮದು ಸುಂಕ ಏರಿಕೆಯು ಅಮೆರಿಕದ ಆರ್ಥಿಕ ಅನಿಶ್ಚಿತತೆಯ ಮತ್ತೊಂದು ಸೂಚನೆಯಾಗಿದೆ. ಸುಭದ್ರವಾದ ಷೇರು ಮಾರುಕಟ್ಟೆ ಇದ್ದರೂ ಉದ್ಯೋಗ ಕಡಿತ ಮತ್ತು ಹಣದುಬ್ಬರ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಆಮದು ಸುಂಕದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

‘ಸುಂಕ ಮತ್ತು ಸರಕುಗಳ ಬೆಲೆ ಏರಿಕೆಯಿಂದ ಇತ್ತೀಚಿನ ವರ್ಷಗಳಲ್ಲಿ ಹಣದುಬ್ಬರ ಹೆಚ್ಚುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ’ ಎಂದು ಫೆಡರಲ್‌ ರಿಸರ್ವ್‌ನ ಅಧ್ಯಕ್ಷ ಜೆರೊಮ್‌ ಪೊವೆಲ್‌ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಆದರೆ, ಟ್ರಂಪ್‌ ಅವರು ಪೊವೆಲ್ ಅವರ ರಾಜೀನಾಮೆಗೆ ಒತ್ತಡ ಹೇರಿದ್ದರು. 

‘ಅಮೆರಿಕದಲ್ಲಿ ಯಾವುದೇ ಹಣದುಬ್ಬರ ಇಲ್ಲ. ನಾವು ನಂಬಲಾಗದ ಯಶಸ್ಸನ್ನು ಕಂಡಿದ್ದೇವೆ’ ಎಂದು ಟ್ರಂಪ್‌  ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.