
ಅಮೆರಿಕದ ಸಂಸತ್ತಿನಲ್ಲಿ ಮಸೂದೆಗಳಿಗೆ ಸಹಿ ಹಾಕಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಎಕ್ಸ್ ಚಿತ್ರ
ವಾಷಿಂಗ್ಟನ್: ‘ಅಲ್ಪಾವಧಿಗೆ ಅಗತ್ಯವಿದ್ದ ವೆಚ್ಚ ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದರಿಂದಾಗಿ, ಕಳೆದ 43 ದಿನಗಳಿಂದ ಅಮೆರಿಕದಲ್ಲಿ ತಲೆದೋರಿದ್ದ ಆಡಳಿತ ಬಿಕ್ಕಟ್ಟು ಅಂತ್ಯಗೊಂಡಿದೆ.
ಇದರೊಂದಿಗೆ, ವಿವಿಧ ಇಲಾಖೆಗಳು ಅಲ್ಪಾವಧಿಗೆ ಕಾರ್ಯ ನಿರ್ವಹಿಸಲು ಅಗತ್ಯವಿರುವ ಅನುದಾನ ಲಭ್ಯವಾಗಿದೆ.
ಆರೋಗ್ಯ ವಿಮೆ ಸಬ್ಸಿಡಿ ಮುಂದುವರಿಸುವ ವಿಷಯದಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ನಡುವೆ ಹಗ್ಗ ಜಗ್ಗಾಟ ನಡೆದಿತ್ತು. ಇದಕ್ಕಾಗಿ ಹಾಕಲಾದ ಮತದಲ್ಲಿ 222–209 ಮತಗಳಿಂದ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಹಿಡಿತ ಸಾಧಿಸಿತು.
ಮಸೂದೆಗೆ ಅಧ್ಯಕ್ಷ ಟ್ರಂಪ್ ಸಹಿ ಬೀಳುತ್ತಿದ್ದಂತೆ 43 ದಿನಗಳ ಬಿಕ್ಕಟ್ಟು ಅಂತ್ಯಗೊಂಡಿತು. ಇಷ್ಟು ದಿನಗಳ ಕಾಲ ನೌಕರಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಮಿಕರು, ಗುರುವಾರದಿಂದ ಮತ್ತೆ ತಮ್ಮ ಕಚೇರಿಗಳತ್ತ ಹೆಜ್ಜೆ ಹಾಕಿದರು. ಆದರೆ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ್ದರ ಮಾಹಿತಿ ಲಭ್ಯವಾಗಿಲ್ಲ.
ಅನುದಾನವನ್ನು ಸರ್ಕಾರವು ಜ. 30ರವರೆಗೆ ವಿಸ್ತರಿಸಿದೆ. ಇದರಿಂದ ಅಲ್ಲಿನ ಸರ್ಕಾರದ ಒಟ್ಟು 38 ಟ್ರಿಲಿಯನ್ ಅಮೆರಿಕನ್ ಡಾಲರ್ ಸಾಲಕ್ಕೆ 1.8 ಟ್ರಿಲಿಯನ್ ಡಾಲರ್ ಸೇರಿಕೊಂಡಿದೆ.
‘ಆರೋಗ್ಯ ಸೇವೆಗಳಿಗೆ ಅಮೆರಿಕ ಕುಟುಂಬಗಳು ದುಪ್ಪಟ್ಟು ವೆಚ್ಚ ಮಾಡಬೇಕಾಗುತ್ತದೆ. ಜನರು ಇಂತಹ ಪರಿಸ್ಥಿತಿಯನ್ನು ಎಂದಿಗೂ ಎದುರಿಸಿರಲಿಲ್ಲ’ ಎಂದು ಸೆನೆಟ್‌ನಲ್ಲಿ ಡೆಮಾಕ್ರಟಿಕ್ ನಾಯಕ ಚಕ್ ಶುಮರ್ ಪ್ರತಿಕ್ರಿಯಿಸಿದ್ದಾರೆ.
ಆಡಳಿತದಲ್ಲಿ ತಲೆದೋರಿರುವ ಬಿಕ್ಕಟ್ಟು ಶಮನಕ್ಕಾಗಿ ಮಾತುಕತೆಗೆ ಬರುವಂತೆ ಡೆಮಾಕ್ರಟಿಕ್ ಪಕ್ಷದ ಸಂಸದರು ನೀಡಿದ ಆಹ್ವಾನವನ್ನು ತಿರಸ್ಕರಿಸಿದ ರಿಪಬ್ಲಿಕನ್ನರು, ವೆಚ್ಚ ಮಸೂದೆಗೆ ಮೊದಲು ಅನುಮೋದನೆ ಸಿಗಬೇಕು ಎಂದು ಪಟ್ಟು ಹಿಡಿದಿದ್ದರು.
ಅಮೆರಿಕದ 43 ದಿನಗಳ ಬಿಕ್ಕಟ್ಟು ಶಮನದ ಶ್ರೇಯ ಯಾವ ಪಕ್ಷಕ್ಕೂ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮಗಳು ನಡೆಸಿದ ಸಮೀಕ್ಷೆಯಲ್ಲಿ ಅಮೆರಿಕದ ಶೇ 50ರಷ್ಟು ಜನರು ಈ ಬಿಕ್ಕಟ್ಟಿಗೆ ರಿಪಬ್ಲಿಕನ್ ಪಕ್ಷದವರೇ ಕಾರಣ ಎಂದು ಆರೋಪಿಸಿದ್ದಾರೆ. ಶೇ 47ರಷ್ಟು ಜನ ಡೆಮಾಕ್ರೆಟ್ಸ್‌ಗಳನ್ನು ತೆಗಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.