
ಬ್ರಿಟನ್‌ನಲ್ಲಿ ವಲಸೆ ವಿರೋಧಿ ಪ್ರತಿಭಟನೆ
(ರಾಯಿಟರ್ಸ್)
ಲಂಡನ್: ವಲಸೆ ನೀತಿಯ ವಿರುದ್ಧ ಬಲಪಂಥೀಯ ನಾಯಕ ಟಾಮಿ ರಾಬಿನ್‌ಸನ್ ನೇತೃತ್ವದಲ್ಲಿ ಶನಿವಾರ ಲಂಡನ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಸರ್ಕಾರವು ವಲಸೆ ನೀತಿಗಳನ್ನು ಕಠಿಣಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನಕಾರರು ‘ಯುನೈಟ್ ದಿ ಕಿಂಗ್‌ಡಮ್’ ಹೆಸರಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಿ, ಬ್ರಿಟಿಷ್ ಧ್ವಜಗಳನ್ನು ಪ್ರದರ್ಶಿಸಿದರು. ಉದ್ಯಮಿ ಎಲಾನ್ ಮಸ್ಕ್ ಕೂಡ ವಿಡಿಯೊ ಕರೆ ಮಾಡಿ ಪ್ರತಿಭಟನಕಾರರಿಗೆ ಸಂದೇಶ ನೀಡಿದರು.
ಬ್ರಿಟನ್‌ನಲ್ಲಿ ನಡೆದ ಇದುವರೆಗಿನ ಬಲಪಂಥೀಯ ಪ್ರತಿಭಟನೆಯಲ್ಲಿ ಅತೀ ದೊಡ್ಡದಾಗಿದ್ದು, 1.50 ಲಕ್ಷ ಮಂದಿ ಭಾಗವಹಿಸಿದ್ದರು. ಈ ವೇಳೆ, ಪೊಲೀಸರ ಜೊತೆಗೆ ಸಂಘರ್ಷಕ್ಕಿಳಿದ 25 ಮಂದಿಯನ್ನು ಬಂಧಿಸಲಾಗಿದೆ. ಜನಸಂದಣಿಯನ್ನು ನಿಯಂತ್ರಿಸುವ ವೇಳೆ 26 ಮಂದಿ ಪೊಲೀಸ್ ಅಧಿಕಾರಿ ಗಳು ಗಾಯಗೊಂಡಿದ್ದು, ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಅಂದಾಜಿನ ಪ್ರಕಾರ, 1.10 ಲಕ್ಷ ದಿಂದ 1.50 ಲಕ್ಷ ಮಂದಿ ಪ್ರತಿಭಟನೆ ಯಲ್ಲಿ ಭಾಗಿಯಾಗಿದ್ದರು ಎಂದು ಮೆಟ್ರೊಪಾಲಿಟಿನ್ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಅಂದಾಜಿ ಗಿಂತಲೂ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂದು ಆಯೋಜಕರು ತಿಳಿಸಿದ್ದಾರೆ. ರಾಬಿನ್‌ಸನ್ ಪ್ರತಿಭಟನೆಗೆ ಪ್ರತಿಯಾಗಿ ‘ಸ್ಟ್ಯಾಂಡ್ ಅಪ್ ಟು ರೇಸಿಸಂ’ ಹೆಸರಿನಲ್ಲಿ ನಡೆದ ಪ್ರತಿಭಟನೆಯಲ್ಲಿ 5 ಸಾವಿರ ಮಂದಿ ಭಾಗಿಯಾಗಿದ್ದರು. ರಾಬಿನ್‌ಸನ್ ಕಡೆಯವರು ಮತ್ತೊಂದು ಕಡೆಯಲ್ಲಿ ನಡೆಯುತ್ತಿದ್ದ ಪ್ರತಿಭಟನ ಕಾರರ ಮೇಲೆ ನುಗ್ಗಲು ಪ್ರಯತ್ನಿಸಿದ ವೇಳೆ ಹಿಂಸಾಚಾರ ಸಂಭವಿಸಿತು.
ಸ್ಥಳದಲ್ಲಿ 1 ಸಾವಿರ ಪೊಲೀಸರನ್ನು ನಿಯೋಜಿಸಿದರೂ, ಗುಂಪು ಚದುರಿಸಲು ಸಾಧ್ಯವಾಗಲಿಲ್ಲ. ಕೆಲವರು ಪೊಲೀಸರತ್ತ ಬಾಟಲಿ ತೂರಿ, ದೈಹಿಕ ಹಲ್ಲೆ ನಡೆಸಿದರು.
‘ಸಾಕಷ್ಟು ಮಂದಿ ಕಾನೂನು ಪ್ರಕಾರವೇ ಪ್ರತಿಭಟನೆ ದಾಖಲಿಸಲು ಬಂದಿದ್ದರು. ಕೆಲವರು ಉದ್ದೇಶ ಪೂರ್ವಕವಾಗಿ ಹಿಂಸಾಚಾರ ನಡೆಸಲು ಅಲ್ಲಿಗೆ ಬಂದಿದ್ದರು’ ಎಂದು ಲಂಡನ್ ಮೆಟ್ರೊಪಾಲಿಟಿನ್ ಪೊಲೀಸ್ ವಿಭಾಗದ ಸಹಾಯಕ ಆಯುಕ್ತ ಮ್ಯಾಟ್ ಟ್ವಿಸ್ಟ್ ತಿಳಿಸಿದ್ದಾರೆ.
ಹಿಂಸಾತ್ಮಕ ಕೃತ್ಯ, ಹಲ್ಲೆ ಹಾಗೂ ಇತರೆ ಅಪರಾಧ ಎಸಗಿದವರನ್ನು ಬಂಧಿಸ ಲಾಗಿದೆ. ಸಂಘರ್ಷದ ವೇಳೆ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಲಾಗಿದೆ.
ಪೊಲೀಸ್ ಅಧಿಕಾರಿಗಳ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಬ್ರಿಟನ್‌ನ ಆಂತರಿಕ ಸಚಿವ ಶಬಾನಾ ಮೊಹಮ್ಮದ್, ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾದವರನ್ನು ಕಾನೂನು ಪ್ರಕಾರ ಶಿಕ್ಷಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.