ADVERTISEMENT

ರಷ್ಯಾ–ಉಕ್ರೇನ್ ಸಂಘರ್ಷ: ಸೋತಿರುವ ನಗರಗಳನ್ನು ಮರಳಿ ಗೆಲ್ಲುತ್ತೇವೆ –ಝೆಲೆನ್‌ಸ್ಕಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 1:19 IST
Last Updated 26 ಜೂನ್ 2022, 1:19 IST
ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ
ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ   

ಕೀವ್‌: ರಷ್ಯಾ ಎದುರು ಸೋತಿರುವ ಎಲ್ಲ ನಗರಗಳನ್ನು ಮರಳಿ ಗೆಲ್ಲುತ್ತೇವೆ ಎಂದಿರುವಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು, ಯುದ್ಧವನ್ನು ಸಹಿಸಿಕೊಳ್ಳುವುದು ಭಾವನಾತ್ಮಕವಾಗಿ ಕಷ್ಟವಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.

ಶನಿವಾರ ರಾತ್ರಿ ವಿಡಿಯೊ ಬಿಡುಗಡೆ ಮಾಡಿರುವ ಝೆಲೆನ್‌ಸ್ಕಿ ಅವರು,ಕಳೆದ 24 ಗಂಟೆಗಳಲ್ಲಿ ರಷ್ಯಾದ 45 ಕ್ಷಿಪಣಿಗಳು ಮತ್ತು ರಾಕೆಟ್‌ಗಳು ಉಕ್ರೇನ್‌ ಮೇಲೆ ಅಪ್ಪಳಿಸಿವೆ. ಇದು ಜನರ ಉತ್ಸಾಹಗುಂದಿಸುವ ವಿನಾಶಕಾರಿ ಪ್ರಯತ್ನ ಎಂದು ದೂರಿದ್ದಾರೆ.

'ನಮ್ಮ ನಗರಗಳಾದ ಸೆವೆಯೆರೊಡೊನೆಟ್‌ಸ್ಕ್, ಡೊನೆಟ್‌ಸ್ಕ್‌, ಲುಹಾನ್‌ಸ್ಕ್‌ಗಳನ್ನು ಮರಳಿ ವಶಪಡಿಸಿಕೊಳ್ಳಲಿದ್ದೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಸೆವೆಯೆರೊಡೊನೆಟ್‌ಸ್ಕ್ ನಗರ ರಷ್ಯಾ ವಶವಾಗಿರುವ ಬಗ್ಗೆ ಝೆಲೆನ್‌ಸ್ಕಿ ಇದೇ ಮೊದಲ ಬಾರಿಗೆ ಉಲ್ಲೇಖಿಸಿದ್ದಾರೆ.ರಷ್ಯಾ ಪಡೆಗಳು ಈ ನಗರವನ್ನುಕ್ರೂರ ಹೋರಾಟದ ಬಳಿಕ ಶನಿವಾರ ಹಿಡಿತಕ್ಕೆ ಪಡೆದಿವೆ.

'ಈ ಹಂತದಲ್ಲಿ ಯುದ್ಧವು ಆಧ್ಯಾತ್ಮಿಕ ಮತ್ತು ಭಾವನಾತ್ಮಕವಾಗಿ ತುಂಬಾ ಕಠಿಣವಾಗಿದೆ. ಯುದ್ಧವು ಯಾವಾಗ ಕೊನೆಯಾಗುತ್ತದೆ, ಇನ್ನೆಷ್ಟು ಹೊಡೆತ ನೀಡುತ್ತದೆ, ಇನ್ನೆಷ್ಟು ನಷ್ಟ ಉಂಟು ಮಾಡುತ್ತದೆ ಮತ್ತು ನಾವು ವಿಜಯ ಸಾಧಿಸಲು ಇನ್ನೂ ಎಷ್ಟು ಪ್ರಯತ್ನ ಬೇಕಾಗಬಹುದುಎಂಬುದರ ಅರಿವಿಲ್ಲ' ಎಂದು ನೋವಿನಿಂದ ನುಡಿದಿದ್ದಾರೆ.

ಉಕ್ರೇನ್‌ಗೆ ಹೆಚ್ಚಿನ ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ಹೇಳಿರುವ ಝೆಲೆನ್‌ಸ್ಕಿ,ರಷ್ಯಾದ ವಿರುದ್ಧದ ನಿರ್ಬಂಧಗಳು ನಮ್ಮ ಮೇಲಿನ ಆಕ್ರಮಣ ತಡೆಯಲು ಸಾಕಾಗುತ್ತಿಲ್ಲ ಎಂದುಅಭಿಪ್ರಾಯಪಟ್ಟಿದ್ದಾರೆ.

ಪೂರ್ವ ಉಕ್ರೇನ್‌ನಲ್ಲಿರುವ ಮತ್ತೊಂದು ನಗರ 'ಲೈಸಿಚಾನ್‌ಸ್ಕ್‌' ವಶಪಡಿಸಿಕೊಳ್ಳಲು ರಷ್ಯಾ ಪಡೆಗಳು ಪ್ರಯತ್ನಿಸುತ್ತಿವೆ ಎಂದೂ ವರದಿಯಾಗಿದೆ. ಕೆಲವುವಾರಗಳಿಂದ ಹೋರಾಟ ನಡೆಸುತ್ತಿರುವ ಉಕ್ರೇನ್ ಪಡೆಗಳು ಇಲ್ಲಿಂದ ತೆರಳಲು ಪ್ರಾರಂಭಿಸಿವೆ ಎಂದು ಉಕ್ರೇನ್‌ನ ಪ್ರಾದೇಶಿಕ ಸೇನಾ ಗವರ್ನರ್ ಸೆರ್‌ಹಿಯ್‌ ಹೈಡೇ ಶನಿವಾರ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.