ಜೊಹ್ರಾನ್ ಮಮ್ದಾನಿ
ಚಿತ್ರ ಕೃಪೆ: ಎಕ್ಸ್
ನ್ಯೂಯಾರ್ಕ್: ವೆನಿಜುವೆಲಾದ ಮೇಲೆ ಅಮೆರಿಕ ನಡೆಸಿರುವ ಮಿಲಿಟರಿ ಕಾರ್ಯಾಚರಣೆ ಹಾಗೂ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಸೆರೆ ಹಿಡಿದಿರುವ ಕ್ರಮವನ್ನು ನ್ಯೂಯಾರ್ಕ್‌ನ ನೂತನ ಮೇಯರ್ ಜೊಹ್ರಾನ್ ಮಮ್ದಾನಿ ತೀವ್ರವಾಗಿ ಖಂಡಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿರುವ ಮಮ್ದಾನಿ, 'ಸಾರ್ವಭೌಮ ರಾಷ್ಟ್ರದ ಮೇಲೆ ಏಕಪಕ್ಷೀಯ ದಾಳಿ ನಡೆಸಿರುವುದು ’ಯುದ್ಧಕ್ಕೆ ಸಮನಾದ ಕೃತ್ಯ’ ಎಂದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮ್ದಾನಿ, 'ಅಮೆರಿಕ ಅಧ್ಯಕ್ಷರಿಗೆ ನೇರವಾಗಿ ಕರೆ ಮಾಡಿ ನನ್ನ ವಿರೋಧವನ್ನು ದಾಖಲಿಸಿದ್ದೇನೆ. ಇದು ಫೆಡರಲ್ ಹಾಗೂ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ' ಎಂದು ಹೇಳಿದ್ದಾರೆ.
ನ್ಯೂಯಾರ್ಕ್‌ನ 112ನೇ ಮೇಯರ್ ಆಗಿ ಮಮ್ದಾನಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ವೆನಿಜುವೆಲಾದ ಮೇಲೆ ಅಮೆರಿಕದ ಮಿಲಿಟರಿ ಕಾರ್ಯಾರಣೆ ನಡೆದಿದೆ.
'ಈ ಕ್ರಮದಿಂದ ನಗರದಲ್ಲಿ ನೆಲೆಸಿರುವ ವೆನಿಜುವೆಲಾ ಸೇರಿದಂತೆ ನ್ಯೂಯಾರ್ಕ್‌ನ ಎಲ್ಲರ ಮೇಲೆ ಪರಿಣಾಮ ಬೀರಲಿದೆ. ನ್ಯೂಯಾರ್ಕ್‌ನ ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ನನ್ನ ಜವಾಬ್ದಾರಿಯಾಗಿದೆ. ಅವರಿಗೆ ಅಗತ್ಯ ಮಾರ್ಗದರ್ಶನಗಳನ್ನು ನೀಡಲಿದ್ದೇನೆ' ಎಂದಿದ್ದಾರೆ.
ಅಮೆರಿಕ ಸೇನೆ ಶುಕ್ರವಾರ ತಡರಾತ್ರಿ ವೆನಿಜುವೆಲಾದ ರಾಜಧಾನಿ ಕರಾಕಸ್ ಮೇಲೆ ಭಾರಿ ಪ್ರಮಾಣದಲ್ಲಿ ವಾಯುದಾಳಿ ನಡೆಸಿದ್ದು, ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಸೆರೆ ಹಿಡಿದಿದೆ.
ನಿಕೊಲಸ್ ಮಡೂರೊ ಅಂತರರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲದ ಪ್ರಮುಖ ಸೂತ್ರಧಾರ ಎಂದು ಆರೋಪಿಸಿ ಅಮೆರಿಕ ಈ ದಾಳಿ ನಡೆಸಿದೆ. ಮಡೂರೊ ಮತ್ತು ಅವರ ಪತ್ನಿಯನ್ನು ನ್ಯೂಯಾರ್ಕ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು.
ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯಲ್ಲಿ ದೋಷಾರೋಪ ನಿಗದಿ ಮಾಡಲಾಗಿದೆ ಎಂದು ಅಮೆರಿಕದ ಅಟಾರ್ನಿ ಜನರಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.