ಕ್ಯಾಲ್ಗರಿ: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ 51ನೇ ‘ಜಿ7’ ರಾಷ್ಟ್ರಗಳ ಶೃಂಗಸಭೆಯಿಂದ ಅರ್ಧದಲ್ಲೇ ಹೊರಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕವು ಪ್ರಸ್ತುತ ಅನೇಕ ಮಿತ್ರರಾಷ್ಟ್ರಗಳ ಮೇಲೆ ಸುಂಕಗಳನ್ನು ವಿಧಿಸಿದೆ. ಜತೆಗೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಟ್ರಂಪ್ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದರಿಂದ ಉಕ್ರೇನ್, ಇಸ್ರೇಲ್ ಮತ್ತು ಇರಾನ್ ನಡುವಿನ ಘರ್ಷಣೆಗಳಿಗೆ ಸಂಬಂಧಿಸಿ ಒಗ್ಗಟ್ಟು ಪ್ರದರ್ಶಿಸಲು ಜಿ7 ರಾಷ್ಟ್ರಗಳ ಒಕ್ಕೂಟ ಹೆಣಗಾಡುತ್ತಿದೆ.
ಇರಾನ್-ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸುವ ಸಲುವಾಗಿ ಟ್ರಂಪ್ ಅವರು ಶೃಂಗಸಭೆಯಿಂದ ಮುಂಚಿತವಾಗಿ ಹೊರಡಲಿದ್ದಾರೆ ಎಂದು ಶ್ವೇತಭವನ ಸೋಮವಾರ ಹೇಳಿತ್ತು.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್‌ನ ಸರಣಿ ಪೋಸ್ಟ್‌ಗಳಲ್ಲಿ ಟ್ರಂಪ್, ಇರಾನ್‌ನ ಪರಮಾಣು ಮಹತ್ವಾಕಾಂಕ್ಷೆಗಳ ಬಗ್ಗೆ ತಮ್ಮ ದೀರ್ಘಕಾಲದ ನಿಲುವನ್ನು ಬಲವಾಗಿ ಪುನರುಚ್ಚರಿಸಿದ್ದಾರೆ. ಇರಾನ್‌ಗೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
‘ನಾನು ಸಹಿ ಮಾಡಲು ಹೇಳಿದ್ದ ಅಣ್ವಸ್ತ್ರ ಒಪ್ಪಂದ'ಕ್ಕೆ ಇರಾನ್ ಸಹಿ ಹಾಕಬೇಕಿತ್ತು. ಎಂತಹ ನಾಚಿಕೆಗೇಡಿನ ಸಂಗತಿ. ಹಲವು ಜನರ ಜೀವಹಾನಿ ಆಗುತ್ತಿದೆ. ಸರಳವಾಗಿ ಹೇಳುವುದಾದರೆ, ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ. ನಾನು ಅದನ್ನು ಮತ್ತೆ ಮತ್ತೆ ಹೇಳಿದ್ದೇನೆ! ಉದ್ವಿಗ್ನತೆ ಹೆಚ್ಚಾದ ತಕ್ಷಣ ಒಪ್ಪಂದಕ್ಕೆ ಸಹಿ ಹಾಕುವ ಕ್ರಮ ಕೈಗೊಳ್ಳಬೇಕಿತ್ತು. ಟೆಹರಾನ್‌ನ ಎಲ್ಲ ನಾಗರಿಕರು ತಕ್ಷಣವೇ ನಗರ ತೊರೆಯಿರಿ’ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.