ADVERTISEMENT

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ: ಪೋಲೆಂಡ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿ

ಏಜೆನ್ಸೀಸ್
Published 21 ಮಾರ್ಚ್ 2022, 3:09 IST
Last Updated 21 ಮಾರ್ಚ್ 2022, 3:09 IST
ಅಮೆರಿಕ ಅಧ್ಯಕ್ಷ ಜೋ ಬೈಡನ್‌
ಅಮೆರಿಕ ಅಧ್ಯಕ್ಷ ಜೋ ಬೈಡನ್‌   

ವಾಷಿಂಗ್ಟನ್‌: ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದ ಸಂಬಂಧ ಚರ್ಚಿಸಲು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಶುಕ್ರವಾರ ಪೋಲೆಂಡ್‌ಗೆ ಪ್ರಯಾಣಿಸಲಿದ್ದಾರೆ ಎಂದು ಶ್ವೇತ ಭವನ ಭಾನುವಾರ ಪ್ರಕಟಿಸಿದೆ.

ಪೋಲೆಂಡ್‌ ಜೊತೆಗೆ ರಷ್ಯಾ–ಉಕ್ರೇನ್‌ ಸಂಘರ್ಷದ ಕುರಿತು ಚರ್ಚೆ ನಡೆಯಲಿದೆ. ಪೋಲೆಂಡ್‌ ಅಧ್ಯಕ್ಷ ಆಂಡ್ರೇ ಡೂಡ ಮತ್ತು ಜೋ ಬೈಡನ್‌ ಶುಕ್ರವಾರ (ಮಾ.25) ಭೇಟಿಯಾಗಲಿದ್ದಾರೆ.

'ಉಕ್ರೇನ್‌ ಮೇಲೆ ರಷ್ಯಾ ನಡೆಸಿರುವ ಅಪ್ರಚೋದಿತ ದಾಳಿಯಿಂದಾಗಿ ಸೃಷ್ಟಿಯಾಗಿರುವ ಮಾನವ ಹಕ್ಕುಗಳು ಹಾಗೂ ಮಾನವೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಹೇಗೆ ಪ್ರತಿಕ್ರಿಯಿಸುತ್ತಿವೆ ಎಂಬುದರ ಚರ್ಚೆ ನಡೆಯಲಿದೆ' ಎಂದು ಶ್ವೇತ ಭವನದ ಪ್ರಕಟಣೆ ತಿಳಿಸಿದೆ.

ADVERTISEMENT

ಮಾರ್ಚ್‌ 24ರಂದು ನ್ಯಾಟೊ ರಾಷ್ಟ್ರಗಳ ಸಭೆಯಲ್ಲಿ ಭಾಗಿಯಾಗಲು ಬೈಡನ್‌ ಬೆಲ್ಜಿಯಂಗೆ ಭೇಟಿ ನೀಡಲಿದ್ದಾರೆ. ಅದರೊಂದಿಗೆ ಜಿ7 ಮತ್ತು ಐರೋಪ್ಯ ಒಕ್ಕೂಟದ ಸಭೆಗಳು ನಿಗದಿಯಾಗಿವೆ.

ರಷ್ಯಾ ನಾಶಪಡಿಸಲು ಪಶ್ಚಿಮದ ರಾಷ್ಟ್ರಗಳು ಬಯಸುತ್ತಿವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಗಂಭೀರ ಆರೋಪ ಮಾಡಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ‘ಯುದ್ಧಾ‍ಪರಾಧಿ’ ಎಂದು ಜೋ ಬೈಡನ್‌ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.