
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಪಿಟಿಐ ಚಿತ್ರ
ವಾಷಿಂಗ್ಟನ್: ಪ್ರತಿಭಟನಾಕಾರರ ವಿರುದ್ಧ ದಾಳಿ ಮಾಡಿದರೆ ಸೇನಾ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶಿಸುವುದಾಗಿ ಬೆದರಿಕೆ ಒಡ್ಡಿದ ನಂತರ, ಇರಾನ್ ನಾಯಕತ್ವವು ಮಾತುಕತೆಗೆ ಮನವಿ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್‌ನಲ್ಲಿ ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಯು ಹತ್ಯಾಕಾಂಡವಾಗಿ ಮಾರ್ಪಟ್ಟಿದೆ ಎಂದು ಮಾನವ ಹಕ್ಕು ಸಂಘಟನೆಗಳು ಎಚ್ಚರಿಸಿವೆ. ಆದಾಗ್ಯೂ, ಪ್ರತಿಭಟನೆಗಳು ತೀವ್ರಗೊಂಡಿವೆ.
ಹಣದುಬ್ಬರ, ಏರುತ್ತಿರುವ ಜೀವನ ವೆಚ್ಚದ ವಿರುದ್ಧ ಆರಂಭವಾದ ಪ್ರತಿಭಟನೆಗಳು, ಹಿಂಸಾಚಾರಕ್ಕೆ ತಿರುಗಿವೆ. ಇದರ ಪರಿಣಾಮಗಳು, 1979ರ ಕ್ರಾಂತಿಯ ನಂತರ ಜಾರಿಗೊಂಡಿರುವ 'ದೇವ ಪ್ರಭುತ್ವ' ವ್ಯವಸ್ಥೆಗೆ ಗಂಭೀರ ಸವಾಲಾಗುವ ಮಟ್ಟಿಗೆ ವ್ಯಾಪಿಸಿವೆ.
ಪ್ರತಿಭಟನೆಯನ್ನು ಹತ್ತಿಕ್ಕಲು ಅಂತರ್ಜಾಲ ಹಾಗೂ ವಿದ್ಯುತ್ ಕಡಿತ ಸೇರಿದಂತೆ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ಆಡಳಿತ ಮಾಡಿದೆ. ಆದಾಗ್ಯೂ, ಪ್ರತಿಭಟನೆಯ ಕಾವು ಏರುತ್ತಲೇ ಇದೆ. ರಾಜಧಾನಿ ಟೆಹರಾನ್ ಹಾಗೂ ಇತರ ನಗರಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಿಂಸಾಚಾರದ ವೇಳೆ, 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದರಲ್ಲಿ, 40 ಮಂದಿ ಭದ್ರತಾ ಸಿಬ್ಬಂದಿ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಭಾನುವಾರ ಮಾತನಾಡಿರುವ ಟ್ರಂಪ್, ಮಧ್ಯಪ್ರವೇಶ ಮಾಡುವುದಾಗಿ ಪದೇ ಪದೆ ಬೆದರಿಕೆ ಹಾಕಿದ ಕಾರಣ, ಇರಾನ್ ಮಾತುಕತೆ ಮುಂದಾಗಿದೆ ಎಂದಿದ್ದಾರೆ.
ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಇರಾನ್ ನಾಯಕರು ಕರೆ ಮಾಡಿದ್ದರು. ಸಭೆಗೆ ಸಿದ್ಧತೆ ನಡೆಯುತ್ತಿದೆ' ಎಂದು ತಿಳಿಸಿದ್ದಾರೆ.
'ಇಂಟರ್‌ನೆಟ್ ಸ್ಥಗಿತದ ವೇಳೆ ಭುಗಿಲೆದ್ದ ಹಿಂಸಾಚಾರದ ವೇಳೆ ನೂರಾರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಪ್ರಕಟವಾಗಿವೆ' ಎಂದು ಅಮೆರಿಕ ಮೂಲದ ಇರಾನ್‌ನ ಮಾನವ ಹಕ್ಕುಗಳ ಕೇಂದ್ರ ಹೇಳಿದೆ. 'ಹತ್ಯಾಕಾಂಡವೇ ನಡೆಯುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದೆ.
ಕನಿಷ್ಠ 192 ಪ್ರತಿಭಟನಾಕಾರರು ಹತ್ಯೆಯಾಗಿರುವುದು ದೃಢವಾಗಿದೆ. ಆದರೆ ಅದಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟಿರಬಹುದು ಎಂದು ನಾರ್ವೆ ಮೂಲದ ಎನ್‌ಜಿಒ ಇರಾನ್ ಹ್ಯೂಮನ್ ರೈಟ್ಸ್ (ಐಎಚ್‌ಆರ್) ಹೇಳಿದೆ.
ಪ್ರತೀಕಾರದ ಎಚ್ಚರಿಕೆ ನೀಡಿದ್ದ ಇರಾನ್!
ಟ್ರಂಪ್ ಹೇಳಿಕೆಗಳಿಗೆ ವ್ಯತಿರಿಕ್ತವಾದ ಹೇಳಿಕೆ ಇರಾನ್ ಕಡೆಯಿಂದ ಭಾನುವಾರ ವ್ಯಕ್ತವಾಗಿತ್ತು.
ಅಮೆರಿಕ ಸೇನಾ ಪಡೆಗಳು ಇರಾನ್ ಮೇಲೆ ದಾಳಿ ಮಾಡಿದರೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ ಎಂದು ವರದಿಗಳು ಪ್ರಕಟವಾಗಿವೆ. ಹೀಗಾಗಿ, ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.