ಕ್ಯಾರೋಲಿನ್ ಲೀವಿಟ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧವನ್ನು ಕೊನೆಗಾಣಿಸಲು ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಬಂಧ ವಿಧಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿಕೆ ನೀಡಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕ್ಯಾರೋಲಿನ್, 'ಈ ಯುದ್ಧವನ್ನು ಕೊನೆಗಾಣಿಸಲು ಸಾರ್ವಜನಿಕರಿಂದ ಭಾರಿ ಒತ್ತಡವಿತ್ತು. ನೀವು ನೋಡಿರುವಂತೆಯೇ ಭಾರತದ ಮೇಲಿನ ನಿರ್ಬಂಧ ಹಾಗೂ ಇತರೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಯುದ್ಧವನ್ನು ಕೊನೆಗಾಣಿಸಲು ಬಯಸುತ್ತೇವೆ ಎಂದು ಸ್ವತಃ ಟ್ರಂಪ್ ಅವರೇ ನುಡಿದಿದ್ದಾರೆ' ಎಂದು ಹೇಳಿದ್ದಾರೆ.
'ಯಾವುದೇ ಸಭೆ ನಡೆಯುವುದಕ್ಕೂ ಮುನ್ನ ಇನ್ನೊಂದು ತಿಂಗಳು ಕಾಯಬೇಕು ಎಂಬ ಇತರರ ಸಲಹೆಗಳನ್ನು ಅಧ್ಯಕ್ಷರು ತಿರಸ್ಕರಿಸಿದ್ದಾರೆ. ಆದಷ್ಟು ಬೇಗ ಈ ಯುದ್ಧವನ್ನು ಕೊನೆಗಾಣಿಸಲು ಬಯಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ಭಾರತ-ಪಾಕ್ ಕದನ ವಿರಾಮಕ್ಕೆ ಟ್ರಂಪ್ ಮಧ್ಯಸ್ಥಿಕೆ...
ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದೂ ಕ್ಯಾರೋಲಿನ್ ಮಗದೊಮ್ಮೆ ಪುನರುಚ್ಚರಿಸಿದ್ದಾರೆ.
'ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಘರ್ಷದ ಅಂತ್ಯಗೊಳಿಸಿರುವುದನ್ನು ನಾವು ನೋಡಿದ್ದೇವೆ. ಇಲ್ಲದಿದ್ದರೆ ಪರಮಾಣು ಯುದ್ಧಕ್ಕೆ ಕಾರಣವಾಗುತ್ತಿತ್ತು' ಎಂದು ಹೇಳಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಲೀವಿಟ್, 'ವ್ಯಾಪಾರ ವಿಷಯವನ್ನು ಮುಂದಿಟ್ಟುಕೊಂಡು ಭಾರತ-ಪಾಕ್ ಮಿಲಿಟರಿ ಸಂಘರ್ಷವನ್ನು ಟ್ರಂಪ್ ಕೊನೆಗೊಳಿಸಿದ್ದಾರೆ' ಎಂದು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್, ಭಾರತದಿಂದ ರಫ್ತು ಮಾಡುವ ಉತ್ಫನ್ನಗಳಿಗೆ ಶೇಕಡ 25ರಷ್ಟು ಸುಂಕ ವಿಧಿಸಿದ್ದರು. ಇದರ ಬೆನ್ನಲ್ಲೇ ರಷ್ಯಾದಿಂದ ತೈಲ ಖರೀದಿಗೆ ಪ್ರತಿಯಾಗಿ ಹೆಚ್ಚುವರಿಯಾಗಿ ಶೇ 25ರಷ್ಟು ತೆರಿಗೆ ಹೇರಿದ್ದರು. ಆ ಮೂಲಕ ಭಾರತದ ಮೇಲೆ ತೆರಿಗೆ ಹೇರಿಕೆಯನ್ನು ಶೇ 50ಕ್ಕೆ ದ್ವಿಗುಣಗೊಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.