ADVERTISEMENT

US ಸುಂಕ ಟೀಕಿಸಿ ಕೆನಡಾದಲ್ಲಿ ಜಾಹೀರಾತು: ಟ್ರಂಪ್ ಸಿಟ್ಟು; ವ್ಯಾಪಾರ ಸಂಬಂಧ ಕಡಿತ

ಏಜೆನ್ಸೀಸ್
Published 24 ಅಕ್ಟೋಬರ್ 2025, 8:52 IST
Last Updated 24 ಅಕ್ಟೋಬರ್ 2025, 8:52 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್‌: ತನ್ನ ದೇಶ ಪ್ರವೇಶಿಸುವ ಉತ್ಪನ್ನಗಳ ಮೇಲೆ ಹೆಚ್ಚಿನ ಆಮದು ಸುಂಕ ಹೇರುತ್ತಿರುವ ಅಮೆರಿಕ ಸರ್ಕಾರದ ನೀತಿಗಳ ವಿರುದ್ಧ ಜಾಹೀರಾತು ಪ್ರಕಟಿಸಿದ್ದಕ್ಕೆ, ಕುಪಿತರಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕೆನಡಾದೊಂದಿಗಿನ ಎಲ್ಲಾ ವ್ಯಾಪಾರ ಒಪ್ಪಂದಗಳನ್ನು ರದ್ದುಪಡಿಸಿ ಆದೇಶಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ‘ಕೆನಡಾ ಸರ್ಕಾರವು ಸತತವಾಗಿ ತಪ್ಪು ಜಾಹೀರಾತನ್ನು ಪ್ರಸಾರ ಮಾಡುತ್ತಿದೆ ಎಂದು ರೊನಾಲ್ಡ್ ರೇಗನ್‌ ಪ್ರತಿಷ್ಠಾನ ಹೇಳಿದೆ. ಪ್ರಸಾರ ಮಾಡುತ್ತಿರುವ ವಿಷಯ ಸುಳ್ಳು. ಸುಂಕ ಕುರಿತ ರೊನಾಲ್ಡ್ ರೇಗನ್ ಹೇಳಿಕೆಯನ್ನೇ ನಕಾರಾತ್ಮಕ ಭಾವನೆ ಮೂಡುವಂತೆ ಪ್ರಸಾರ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಸುಂಕ ಹೇರಿಕೆಯು ಅಮೆರಿಕದ ಸುಪ್ರೀಂ ಕೋರ್ಟ್‌ನ ಆದೇಶವಾಗಿದೆ. ಅದನ್ನು ನಾನು ಪಾಲಿಸುತ್ತಿದ್ದೇನೆ. ದೇಶದ ಭದ್ರತೆ, ಆರ್ಥಿಕತೆಗೆ ಸುಂಕವು ಅತ್ಯಂತ ಪ್ರಮುಖವಾಗಿದೆ. ಆದರೆ ಜಾಹೀರಾತು ಪ್ರಸಾರ ಮಾಡಿ ಉದ್ಧಟತನ ಮೆರೆದಿರುವ ಕೆನಡಾದೊಂದಿಗೆ ಎಲ್ಲಾ ವ್ಯಾಪಾರ ಒಪ್ಪಂದ ರದ್ದು ಮಾಡಲು ಆದೇಶಿಸಲಾಗಿದೆ’ ಎಂದಿದ್ದಾರೆ.

ADVERTISEMENT

ಟ್ರಂಪ್‌ ಆದೇಶಕ್ಕೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಲೇಷ್ಯಾದಲ್ಲಿ ಆಯೋಜನೆಗೊಂಡಿರುವ ಆಸಿಯಾನ್ ಶೃಂಗದಲ್ಲಿ ಪಾಲ್ಗೊಳ್ಳಲು ಕಾರ್ನೆ ಅವರು ಶುಕ್ರವಾರ ಬೆಳಿಗ್ಗೆ ಪ್ರಯಾಣಿಸಿದ್ದಾರೆ. ಇದೇ ಸಭೆಯಲ್ಲಿ ಪಾಲ್ಗೊಳ್ಳಲು ಟ್ರಂಪ್ ಶುಕ್ರವಾರ ಸಂಜೆ ಪ್ರಯಾಣಿಸಲಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ಬೆಳಿಗ್ಗೆ ರೊನಾಲ್ಡ್ ರೇಗನ್ ಪ್ರಸಿಡೆನ್ಶಿಯಲ್ ಫೌಂಡೇಷನ್‌ ಮತ್ತು ಸಂಸ್ಥೆಯು ಎಕ್ಸ್‌ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿತ್ತು. ಇದನ್ನು ಅಂಟಾರಿಯೊ ಸರ್ಕಾರ ರಚಿಸಿತ್ತು. ಇದರಲ್ಲಿ 1987ರ ಏ. 25ರಂದು ದೇಶವನ್ನು ಉದ್ದೇಶಿಸಿ ಅಧ್ಯಕ್ಷ ರೊನಾಲ್ಡ್ ರೇಗನ್‌ ಅವರ ರೇಡಿಯೊ ಭಾಷಣದ ತುಣುಕು ಇತ್ತು. ಅದು ಮುಕ್ತ ಮತ್ತು ನ್ಯಾಯ ಸಮ್ಮತ ವ್ಯಾಪಾರದ ಕುರಿತಾಗಿತ್ತು. ಆದರೆ ಈ ಭಾಷಣವನ್ನು ಬಳಸಿಕೊಳ್ಳಲು ಮತ್ತು ಸಂಪಾದಿಸಲು ಅನ್‌ಟಾರಿಯೊ ಅನುಮತಿ ಪಡೆದಿಲ್ಲ ಎಂದು ಆರೋಪಿಸಲಾಗಿದೆ.

ಯಾವುದೇ ಕತ್ತರಿ ಪ್ರಯೋಗ ನಡೆಸದ ರೇಗನ್ ಅವರ ಮೂಲ ಭಾಷಣವನ್ನು ವೀಕ್ಷಿಸುವಂತೆ ಪ್ರತಿಷ್ಠಾನವು ಸಾರ್ವಜನಿಕರನ್ನು ಆಹ್ವಾನಿಸಿದೆ.

ಕೆನಡಾದ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತಗೊಳಿಸುವಂತೆ ಕಾರ್ನೆ ಅವರು ಅಕ್ಟೋಬರ್‌ನ ಆರಂಭದಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಅಮೆರಿಕ–ಮೆಕ್ಸಿಕೊ–ಕೆನಡಾ ಒಪ್ಪಂದ ಮರುಪರಿಶೀಲಿಸಲು ಮೆಕ್ಸಿಕೊ ಕೂಡಾ ಒಪ್ಪಿಕೊಂಡಿತ್ತು. ಅಮೆರಿಕಕ್ಕೆ ಕೆನಡಾದಿಂದ ಸುಮಾರು ₹25 ಸಾವಿರ ಕೋಟಿ ಮೌಲ್ಯದ ವಸ್ತುಗಳು ರಫ್ತಾಗುತ್ತವೆ.

ಅಂಟಾರಿಯೊದ ಪ್ರಧಾನಿ ಡೌಗ್‌ ಫೋರ್ಡ್ ಅವರು ಕಳೆದ ವಾರ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ‘ಅಮೆರಿಕದ ಅತಾರ್ಕಿಕ ಸುಂಕದ ವಿರುದ್ಧದ ಜನಜಾಗೃತಿ ಅಭಿಯಾನ ನಿಲ್ಲದು. ಕೆನಡಾ ಮೇಲಿನ ಅಮೆರಿಕದ ಸುಂಕ ಹೇರಿಕೆಯನ್ನು ಖಂಡಿಸಿ ಎಲ್ಲಾ ಮಾಧ್ಯಮಗಳ ಮೂಲಕವೂ ಜನರಿಗೆ ವಿಷಯ ತಲುಪಿಸಲಾಗುವುದು. ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸಮೃದ್ಧಿ ಸಾಧ್ಯ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.