ADVERTISEMENT

ತೈವಾನ್ ಪ್ರತ್ಯೇಕಿಸಲು ಬಿಡೆವು: ಚೀನಾ ಉದ್ದೇಶಿಸಿ ನ್ಯಾನ್ಸಿ ಪೆಲೊಸಿ ಹೇಳಿಕೆ

ಏಜೆನ್ಸೀಸ್
Published 5 ಆಗಸ್ಟ್ 2022, 4:43 IST
Last Updated 5 ಆಗಸ್ಟ್ 2022, 4:43 IST
ನ್ಯಾನ್ಸಿ ಪೆಲೊಸಿ
ನ್ಯಾನ್ಸಿ ಪೆಲೊಸಿ   

ಟೋಕಿಯೊ: ತೈವಾನ್ ಅನ್ನು ಜಾಗತಿಕ ಸಮುದಾಯದಿಂದ ಪ್ರತ್ಯೇಕಿಸಲು ನಾವು ಬಿಡುವುದಿಲ್ಲ ಎಂದು ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರು ಚೀನಾವನ್ನು ಉದ್ದೇಶಿಸಿ ಹೇಳಿದ್ದಾರೆ.

ತೈವಾನ್‌ಗೆ ಭೇಟಿ ನೀಡಿ ಜಪಾನ್‌ಗೆ ತೆರಳಿರುವ ಅವರು, ಚೀನಾದ ಆಕ್ರಮಣಕಾರಿ ಧೋರಣೆಯನ್ನು ಖಂಡಿಸಿದ್ದಾರೆ.

ನ್ಯಾನ್ಸಿ ಪೆಲೊಸಿ ತೈವಾನ್ ಭೇಟಿ ಬೆನ್ನಲ್ಲೇ ವ್ಯಗ್ರಗೊಂಡಿರುವ ಚೀನಾ ಗುರುವಾರ ತೈವಾನ್‌ ದ್ವೀಪ ಗುರಿಯಾಗಿಸಿ ಸರಣಿ ಕ್ಷಿಪಣಿಗಳನ್ನು ಉಡಾಯಿಸಿತ್ತು.

ADVERTISEMENT

‘ಅವರು (ಚೀನಾ) ತೈವಾನ್‌ನವರು ಇತರ ಪ್ರದೇಶಗಳಿಗೆ ತೆರಳದಂತೆ ಅಥವಾ ಇತರ ದೇಶಗಳ ಜತೆ ಬಾಂಧವ್ಯ ಹೊಂದದಂತೆ ತಡೆಯಲು ಯತ್ನಿಸಬಹುದು. ಆದರೆ, ಅವರು ತೈವಾನ್ ಅನ್ನು ವಿಶ್ವ ಸಮುದಾಯದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ನಾವು ಅಲ್ಲಿಗೆ ಹಲವು ಬಾರಿ ಭೇಟಿ ನೀಡಿದ್ದೇವೆ. ಇದು ಮುಂದುವರಿಯಲಿದೆ. ತೈವಾನ್ ಅನ್ನು ಪ್ರತ್ಯೇಕಿಸಲು ಬಿಡುವುದಿಲ್ಲ’ ಎಂದು ನ್ಯಾನ್ಸಿ ಪೆಲೊಸಿ ಹೇಳಿದ್ದಾರೆ.

ನ್ಯಾನ್ಸಿ ಪೆಲೊಸಿ ತೈವಾನ್‌ಗೆ ಭೇಟಿ ನೀಡಿರುವುದನ್ನು ಖಂಡಿಸಿದ್ದ ಚೀನಾ ಬುಧವಾರವೇ ಆ ದೇಶದ ಮೇಲೆ ವ್ಯಾಪಾರ ನಿರ್ಬಂಧಗಳನ್ನು ಹೇರಲು ಆರಂಭಿಸಿತ್ತು. ಪೆಲೊಸಿ ತೈವಾನ್ ಭೇಟಿ ಬೆನ್ನಲ್ಲೇ ಚೀನಾದ ಫೈಟರ್ ಜೆಟ್‌ಗಳು ತೈವಾನ್ ಜಲಸಂಧಿಯನ್ನು ದಾಟಿ ಹಾರಾಟ ನಡೆಸಿದ್ದವು.

‘ಪ್ರಚೋದನೆ ನೀಡುವ ದೇಶ ಅಮೆರಿಕ ತಕ್ಕಬೆಲೆ ತೆರಲಿದೆ’ ಎಂದು ಎಚ್ಚರಿಸಿದ್ದ ಚೀನಾ, ತೈವಾನ್‌ ಸುತ್ತಲೂ ಸೇನಾ ತಾಲೀಮು ಮತ್ತು ಕ್ಷಿಪಣಿ ಪ್ರಯೋಗ ನಡೆಸುವುದಾಗಿ ಗುರುವಾರ ಘೋಷಿಸಿತ್ತು. ತೈವಾನ್‌ ಮತ್ತು ಅದರ ನೆರವಿಗೆ ಬರುವ ಮಿತ್ರ ದೇಶವನ್ನು ನೇರ ಗುರಿಯಾಗಿಸಿ ಡಾಂಗ್‌ ಫೆಂಗ್‌ ದರ್ಜೆಯ 11 ಖಂಡಾಂತರ ಕ್ಷಿಪಣಿಗಳನ್ನು ಗುರುವಾರ ಮಧ್ಯಾಹ್ನ 1.56ರಿಂದ ಸಂಜೆ 4ರ ನಡುವೆ ಪ್ರಯೋಗಿಸಿತ್ತು.

‘ಚೀನಾ 11 ಕ್ಷಿಪಣಿಗಳನ್ನು ಉಡಾಯಿಸಿದೆ. ಇದು ಪ್ರಾದೇಶಿಕ ಶಾಂತಿ– ಸ್ಥಿರತೆಗೆ ಧಕ್ಕೆ ತರಲಿದೆ. ಇದು ಖಂಡನೀಯ’ ಎಂದು ತೈವಾನ್‌ ಪ್ರತಿಕ್ರಿಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.