ವೊಲೊಡಿಮಿರ್ ಝೆಲೆನ್‌ಸ್ಕಿ ಹಾಗೂ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ.
ಓವಲ್ ಕಚೇರಿಯಲ್ಲಿ ನಡೆದ 45 ನಿಮಿಷಗಳ ಸಭೆಯಲ್ಲಿ ಉಭಯ ನಾಯಕರು ಅಮೆರಿಕದ ನೆರವು, ಖನಿಜ ಒಪ್ಪಂದ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಝೆಲೆನ್‌ಸ್ಕಿ ನಡುವೆ ತೀವ್ರ ವಾಗ್ವಾದವೂ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಭೆಯ ಬಳಿಕ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮ 'ಟ್ರೂತ್ ಸೋಶಿಯಲ್‌ನಲ್ಲಿ (Truth Social) ಪೋಸ್ಟ್ ಮಾಡಿದ್ದು, ಝೆಲೆನ್‌ಸ್ಕಿ ಅವರು ನಿಯಮಗಳನ್ನು ಪಾಲಿಸದೆ ಓವಲ್ ಕಚೇರಿಯಲ್ಲಿ ಅಮೆರಿಕವನ್ನು ಅಗೌರವಿಸಿದ್ದಾರೆ. ಅವರು ಶಾಂತಿ ಪಾಲನೆಗಾಗಿ ಸಿದ್ಧರಿದ್ದರೆ ಮತ್ತೆ ಚರ್ಚೆಗೆ ಹಿಂತಿರುಗಬಹುದು’ ಎಂದು ಹೇಳಿದ್ದಾರೆ.
ರಷ್ಯಾ, ಉಕ್ರೇನ್ ಯುದ್ಧ ವಿಚಾರವಾಗಿ ಟ್ರಂಪ್ ಮತ್ತು ಝೆಲೆನ್‌ಸ್ಕಿ ನಡುವೆ ವಾಗ್ವಾದ ನಡೆದಿದೆ. ಖನಿಜ ಒಪ್ಪಂದ ವಿಚಾರದ ವೇಳೆ ಯುದ್ಧದ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ವೇಳೆ ಉಭಯ ನಾಯಕರ ನಡುವೆ ಜಟಾಪಟಿ ನಡೆದಿದೆ.
ರಷ್ಯಾ, ಉಕ್ರೇನ್ ಯುದ್ಧದಲ್ಲಿ ಝೆಲೆನ್‌ಸ್ಕಿ ಚೆಲ್ಲಾಟ ಆಡುತ್ತಿದ್ದಾರೆ. ಉಕ್ರೇನ್ ಜನರ ಜೀವದ ಜೊತೆ ಆಟವಾಡುತ್ತಿದ್ದೀರಿ... 3ನೇ ಮಹಾಯುದ್ಧದ ಜೊತೆಯೂ ಆಟವಾಡುತ್ತಿದ್ದೀರಿ ಎಂದು ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಕಿಡಿಕಾರಿದ್ದಾರೆ.
ಇಷ್ಟು ವರ್ಷಗಳ ಕಾಲ ನಿಮ್ಮ (ಉಕ್ರೇನ್) ಜೊತೆಗೆ ಅಮೆರಿಕ ಬೆಂಬಲವಾಗಿ ನಿಂತಿದೆ. ಯಾರು ಏನೇ ಹೇಳಿದರೂ ನಿಮಗೆ ಅಮೆರಿಕ ಸಹಾಯ ಮಾಡಿದೆ. ಆದರೆ, ನೀವು ಅಮೆರಿಕ ಜನರಿಗೆ ಅವಮಾನ ಮಾಡುವ ಕೆಲಸ ಮಾಡ್ತಿದ್ದೀರಿ. ನಾವು ಯುದ್ಧವನ್ನು ನಿಲ್ಲಿಸಲು ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ನೀವು ಕದನ ವಿರಾಮಕ್ಕೆ ಒಪ್ಪದೆ ವಿತಂಡವಾದ ಮಾಡಿದ್ದೀರಿ. ನಾವು ಸಾವು ತಡೆಗೆ ಯತ್ನಿಸಿದರೆ ನೀವು ಹೆಣ ನೋಡಲು ಹೋಗುತ್ತೀರಿ ಎಂದು ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಬೇಸರ ಹೊರಹಾಕಿದ್ದಾರೆ.
ಟ್ರಂಪ್ ಹೇಳಿಕೆಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಕೂಡ ಕೆಂಡಾಮಂಡಲರಾಗಿದ್ದಾರೆ. ‘ನಾವು ಯಾವುದೇ ದೇಶದ ವ್ಯಾಪ್ತಿಗೆ ಒಳಪಟ್ಟಿಲ್ಲ. ನಾವು ಯಾರ ಮೇಲೂ ದಾಳಿ ಮಾಡಲಿಲ್ಲ. ರಷ್ಯಾದವರೇ ನಮ್ಮ ಮೇಲೆ ದಾಳಿ ಮಾಡಿದ್ದು ಎಂದು ಗುಡುಗಿದ್ದಾರೆ.
ಖನಿಜ ಒಪ್ಪಂದಕ್ಕೆ ಸಹಿ ಹಾಕಿಲ್ಲ: ಶ್ವೇತಭವನ ಸ್ಪಷ್ಟನೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಖನಿಜ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಖನಿಜ ಒಪ್ಪಂದವನ್ನು ಟ್ರಂಪ್ ಅವರು ತಳ್ಳಿಹಾಕಿಲ್ಲ. ಆದರೆ, ಉಕ್ರೇನ್ ರಚನಾತ್ಮಕ ಮಾತುಕತೆಗೆ ಸಿದ್ಧವಾಗುವವರೆಗೆ ಇದು ಸಾಧ್ಯವಾಗುವುದಿಲ್ಲ. ಟ್ರಂಪ್-ಝೆಲೆನ್‌ಸ್ಕಿ ನಡುವೆ ರದ್ದುಗೊಂಡ ಜಂಟಿ ಸುದ್ದಿಗೋಷ್ಠಿಯನ್ನು ಮರುಹೊಂದಿಸಬಹುದೇ ಎಂಬುದು ಉಕ್ರೇನಿಯನ್ನರಿಗೆ ಬಿಟ್ಟದ್ದು ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.