ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುತ್ತಿಗೆಯ ಮೇಲಿರುವ ಕೆಂಪು ಕಲೆಗೆ ಅವರು ಬಳಸುತ್ತಿರುವ ‘ಸ್ಕಿನ್ ಕ್ರೀಮ್’ ಕಾರಣ ಎಂದು ಶ್ವೇತಭವನ ಸೋಮವಾರ ತಿಳಿಸಿದೆ. ಆದರೆ, ಯಾವ ಸಮಸ್ಯೆಯ ಚಿಕಿತ್ಸೆಗಾಗಿ ಈ ಕ್ರೀಮ್ ಬಳಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಶ್ವೇತಭವನದ ಈಸ್ಟ್ ರೂಮ್‌ನಲ್ಲಿ ನಡೆದ 'ಮೆಡಲ್ ಆಫ್ ಆನರ್' ಪ್ರದಾನ ಸಮಾರಂಭದ ವೇಳೆ ಛಾಯಾಗ್ರಾಹಕರು ಟ್ರಂಪ್ ಅವರ ಕ್ಲೋಸ್–ಅಪ್ ಫೋಟೊಗಳನ್ನು ಸೆರೆಹಿಡಿದಿದ್ದರು. ಈ ಫೋಟೊಗಳಲ್ಲಿ ಟ್ರಂಪ್ ಅವರ ಕುತ್ತಿಗೆ ಮೇಲಿದ್ದ ಕೆಂಪು ಕಲೆ ಸ್ಪಷ್ಟವಾಗಿ ಗೋಚರಿಸಿದ್ದು, ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಹರಿದಾಡಿದ್ದವು.
‘ಶ್ವೇತಭವನದ ವೈದ್ಯರು ಸೂಚಿಸಿದ ಸ್ಕೀನ್ ಕ್ರೀಮ್ ಅನ್ನು ಟ್ರಂಪ್ ಅವರು ಬಳಸುತ್ತಿದ್ದು, ಅದು ಕುತ್ತಿಗೆಯ ಮೇಲೆ ಕೆಂಪು ಕಲೆ ಮೂಡಲು ಕಾರಣವಾಗಿದೆ. ಒಂದು ವಾರದವರೆಗೆ ಈ ಚಿಕಿತ್ಸೆ ಮುಂದುವರಿಯಲಿದ್ದು, ಕೆಲ ವಾರಗಳವರೆಗೆ ಕೆಂಪು ಕಲೆ ಇರುವ ಸಾಧ್ಯತೆಯಿದೆ’ ಎಂದು ವೈದ್ಯ ಸೀನ್ ಬಾರ್ಬಬೆಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ, ಈ ಕ್ರೀಮ್ ಯಾವುದು, ಚಿಕಿತ್ಸೆ ಯಾವಾಗ ಆರಂಭವಾಯಿತು ಮತ್ತು ಯಾವ ಕಾಯಿಲೆಯನ್ನು ತಡೆಗಟ್ಟಲು ಇದನ್ನು ಬಳಸಲಾಗುತ್ತಿದೆ ಎಂಬ ಮುಂದಿನ ಪ್ರಶ್ನೆಗಳಿಗೆ ಶ್ವೇತಭವನ ತಕ್ಷಣವೇ ಪ್ರತಿಕ್ರಿಯಿಸಿಲ್ಲ.
ಫೆ. 19 ರಂದು ನಡೆದ ಶಾಂತಿ ಮಂಡಳಿಯ ಸಭೆಯಲ್ಲಿ ತೆಗೆದ ಫೋಟೊಗಳಲ್ಲಿಯೂ ಟ್ರಂಪ್ ಕುತ್ತಿಗೆಯ ಮೇಲೆ ಇಂತಹ ಕೆಂಪು ಕಲೆಗಳು ಕಂಡುಬಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.