ADVERTISEMENT

ಗಾಜಾ ಶಾಂತಿ ಮಂಡಳಿಯಲ್ಲಿ ಚೀನಾ, ರಷ್ಯಾ ಇರಬೇಕಿತ್ತು: ಡೊನಾಲ್ಡ್‌ ಟ್ರಂಪ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2026, 7:19 IST
Last Updated 20 ಫೆಬ್ರುವರಿ 2026, 7:19 IST
   

ವಾಷಿಂಗ್ಟನ್‌: ‘ಗಾಜಾ ಶಾಂತಿ ಮಂಡಳಿಯಲ್ಲಿ ಚೀನಾ ಮತ್ತು ರಷ್ಯಾ ಇರಬೇಕೆಂದು ನಾನು ಬಯಸುತ್ತೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.

ಗುರುವಾರ ನಡೆದ ಮಂಡಳಿಯ ಮೊದಲ ಸಭೆಯಲ್ಲಿ ಮಾತನಾಡಿದ ಟ್ರಂಪ್‌, ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

‘ಜಗತ್ತಿನಲ್ಲಿರುವ ಹಲವು ದೇಶಗಳು ಮಂಡಳಿಗೆ ಸೇರಲು ಇಚ್ಛಿಸುತ್ತಿವೆ. ಮಂಡಳಿಯಲ್ಲಿ ಚೀನಾ ಮತ್ತು ರಷ್ಯಾ ಇರಬೇಕಿತ್ತು. ಆ ದೇಶಗಳನ್ನು ಆಹ್ವಾನಿಸಲಾಗಿತ್ತು’ ಎಂದಿದ್ದಾರೆ.

ADVERTISEMENT

ಇದೇ ವೇಳೇ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವುದಾಗಿ ಟ್ರಂಪ್‌ ಹೇಳಿದ್ದಾರೆ. ‘ಏಪ್ರಿಲ್‌ನಲ್ಲಿ ನಾನು ಚೀನಾಕ್ಕೆ ಭೇಟಿ ನೀಡುತ್ತಿದ್ದೇನೆ. ಕಳೆದ ಬಾರಿ ಅಲ್ಲಿಗೆ ಹೋದಾಗ, ಅಧ್ಯಕ್ಷ ಷಿ ನನ್ನನ್ನು ತುಂಬಾ ಚೆನ್ನಾಗಿ ನಡೆಸಿಕೊಂಡಿದ್ದರು’ ಎಂದಿದ್ದಾರೆ.

ಮುಂದುವರಿದು, ವಿಶ್ವಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಶಾಂತಿ ಮಂಡಳಿಯ ಕೆಲಸಗಳು ನಡೆಯಲಿವೆ. ಜಾಗತಿಕ ಸಂಘರ್ಷಗಳನ್ನು ಪರಿಹರಿಸುವ ತನ್ನ ಧ್ಯೇಯವನ್ನು ಬೆಂಬಲಿಸಲು ಅಮೆರಿಕವು ಶಾಂತಿ ಮಂಡಳಿಗೆ 10 ಬಿಲಿಯನ್ ಅಮೆರಿಕನ್ ಡಾಲರ್‌ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.

ವಾಷಿಂಗ್ಟನ್‌ನ ‘ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್‌’ನಲ್ಲಿ ಮಂಡಳಿಯ ಮೊದಲ ಸಭೆ ನಡೆದಿದ್ದು, ಸುಮಾರು 50 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ವೀಕ್ಷಕ ರಾಷ್ಟ್ರವಾಗಿ ಭಾರತ ಭಾಗವಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.