ADVERTISEMENT

'ನೊ-ಫ್ಲೈ ಜೋನ್' ಮನವಿ ತಿರಸ್ಕಾರ; ನ್ಯಾಟೊ ನಿಲುವು ಖಂಡಿಸಿದ ಝೆಲೆನ್‌ಸ್ಕಿ

ಏಜೆನ್ಸೀಸ್
Published 5 ಮಾರ್ಚ್ 2022, 2:04 IST
Last Updated 5 ಮಾರ್ಚ್ 2022, 2:04 IST
ವೊಲೊಡಿಮಿರ್‌ ಝೆಲೆನ್‌ಸ್ಕಿ
ವೊಲೊಡಿಮಿರ್‌ ಝೆಲೆನ್‌ಸ್ಕಿ   

ಕೀವ್: ರಷ್ಯಾದ ಬಾಂಬ್ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ 'ನೊ-ಫ್ಲೈ ಜೋನ್' (ಯುದ್ಧ ವಿಮಾನ ಹಾರಾಟ ನಿಷೇಧ ವಲಯ) ಹೇರುವ ಉಕ್ರೇನ್ ಮನವಿಯನ್ನು ನ್ಯಾಟೊ ತಿರಸ್ಕರಿಸಿದೆ.

ನ್ಯಾಟೊ ನಿಲುವನ್ನು ತೀವ್ರವಾಗಿ ಖಂಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ಉಕ್ರೇನ್ ನಗರಗಳಲ್ಲಿ ರಷ್ಯಾ ಮತ್ತಷ್ಟು ಬಾಂಬ್ ದಾಳಿ ನಡೆಸಲು ನ್ಯಾಟೊ ಹಸಿರು ನಿಶಾನೆ ತೋರಿದೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ದಾಳಿ ಹಾಗೂ ಸಾವು-ನೋವನ್ನು ತಪ್ಪಿಸಲಾಗದು ಎಂದು ಅರಿತುಕೊಂಡಿರುವ ನ್ಯಾಟೊ, ಉದ್ದೇಶಪೂರ್ವಕವಾಗಿ ವಾಯುಪ್ರದೇಶವನ್ನು ಮುಚ್ಚದಿರಲು ನಿರ್ಧರಿಸಿದೆ ಎಂದು ವಿಡಿಯೊ ಸಂದೇಶದಲ್ಲಿ ಝೆಲೆನ್‌ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ನಲ್ಲಿ ವಿಮಾನ ಹಾರಾಟವನ್ನು ನಿಷೇಧಿಸುವುದರಿಂದರಷ್ಯಾದ ನೇರ ಆಕ್ರಮಣವನ್ನು ಪ್ರಚೋದಿಸಲಿದೆ ಎಂದು ನ್ಯಾಟೊ ಆತಂಕಪಟ್ಟುಕೊಳ್ಳುತ್ತಿದೆ. ಈ ಸಾವಿಗೆ ನ್ಯಾಟೊ ಕೂಡ ಹೊಣೆಯಾಗಲಿದೆ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿರುವ ನ್ಯಾಟೊ ಮುಖ್ಯಸ್ಥ ಜೆನ್ಸ್‌ ಸ್ಟಾಲ್ಟನ್‌ಬರ್ಗ್ , 'ನೊ-ಫ್ಲೈ ಜೋನ್' ಹೇರಲು ನ್ಯಾಟೊ ಯುದ್ಧ ವಿಮಾನಗಳನ್ನು ಉಕ್ರೇನ್‌ ವಾಯುಪ್ರದೇಶಕ್ಕೆ ರವಾನಿಸುವುದೊಂದೇ ಏಕೈಕ ಮಾರ್ಗವಾಗಿದೆ. ಬಳಿಕ ಇದನ್ನು ಕಾರ್ಯಗತಗೊಳಿಸಲು ರಷ್ಯಾದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಬೇಕಾಗುತ್ತದೆ. ನಾವದನ್ನು ಮಾಡಿದ್ದಲ್ಲಿ ಯುರೋಪ್‌ನಲ್ಲಿ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾಗಲಿದೆ. ಯುದ್ಧದಲ್ಲಿ ಮತ್ತಷ್ಟು ರಾಷ್ಟ್ರಗಳು ಭಾಗಿಯಾಗಿ ಹೆಚ್ಚಿನ ಪ್ರಾಣ ಹಾನಿ ಸಂಭವಿಸಲಿದೆ' ಎಂದು ಹೇಳಿದ್ದಾರೆ.

ಏನಿದು 'ನೊ-ಫ್ಲೈ ಜೋನ್'?
'ನೊ-ಫ್ಲೈ ಜೋನ್' ವಿಮಾನ ಹಾರಾಟ ನಿಷೇಧ ವಲಯವಾಗಿದ್ದು, ಯುದ್ಧದ ಸಮಯದಲ್ಲಿ ವೈಮಾನಿಕ ದಾಳಿಯಿಂದ ರಕ್ಷಿಸಲು ನೊ-ಫ್ಲೈ ಜೋನ್ ಹೇರಿದ ವಾಯುಪ್ರದೇಶದಲ್ಲಿ ಮಿಲಿಟರಿ ವಿಮಾನಗಳ ಹಾರಾಟದ ಮೇಲೆ ನಿಷೇಧವನ್ನು ಹೇರಲಾಗುತ್ತದೆ. ನಿರ್ದಿಷ್ಟ ವಾಯಪ್ರದೇಶವನ್ನು ಪ್ರವೇಶಿಸಿದ ಶತ್ರು ರಾಷ್ಟ್ರದ ಯುದ್ಧವಿಮಾನಗಳನ್ನು ಹೊಡೆದುರಳಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.