ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನಿರ್ಗಮಿಸುತ್ತಿದ್ದಂತೆಯೇ ವಿಧಾನಪರಿಷತ್ ಕಾಂಗ್ರೆಸ್ ಸದಸ್ಯರಾದ ಎಸ್. ರವಿ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕೆಲವು ಶಾಸಕರು ತಡೆಯಲು ಮುಂದಾದರು
ಬೆಂಗಳೂರು: ಕೇಂದ್ರ ಸರ್ಕಾರದ ಕುರಿತು ಆಕ್ಷೇಪಾರ್ಹ ಸಾಲುಗಳಿವೆ ಎಂಬ ಕಾರಣ ಮುಂದಿಟ್ಟು ಪೂರ್ಣ ಭಾಷಣ ಓದದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ನಡೆಯ ವಿರುದ್ಧ ಸಿಡಿದ ಕಾಂಗ್ರೆಸ್ ಸದಸ್ಯರು ಅವರ ವಿರುದ್ಧ ಸದನದಲ್ಲೇ ಧಿಕ್ಕಾರ ಕೂಗಿದರು. ರಾಜ್ಯಪಾಲರ ಧೋರಣೆಯನ್ನು ಬಿಜೆಪಿ ಸದಸ್ಯರು ಬಲವಾಗಿ ಸಮರ್ಥಿಸಿಕೊಂಡರು.
ವರ್ಷದ ಆರಂಭದಲ್ಲಿ ನಡೆಯುವ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ರೂಢಿ. ಮೊದಲ ದಿನವೇ ಸದನ ಕೋಲಾಹಲಕ್ಕೆ ಸಾಕ್ಷಿಯಾಯಿತು.
ಭಾಷಣ ಮಾಡಲು ಮೊದಲು ನಿರಾಕರಿಸಿದ್ದ ರಾಜ್ಯಪಾಲರು, ನಿಗದಿತ ಸಮಯಕ್ಕೆ ವಿಧಾನಸೌಧಕ್ಕೆ ಆಗಮಿಸಿದರು. ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿದ್ದ ಮೊದಲ ಹಾಗೂ ಕೊನೆಯ ಎರಡು ಸಾಲುಗಳನ್ನು 37 ಸೆಕೆಂಡ್‌ನಲ್ಲಿ ಓದಿ ಮುಗಿಸಿದ ಗೆಹಲೋತ್ ಅವರು ಸಭಾಧ್ಯಕ್ಷರ ಪೀಠದಿಂದ ಇಳಿದು, ಹೊರ ನಡೆಯಲು ಅನುವಾದರು. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಸದಸ್ಯರು ಅವರನ್ನು ಅಡ್ಡಗಟ್ಟಿ, ಪೂರ್ಣ ಭಾಷಣ ಮಾಡುವಂತೆ ಒತ್ತಡ ಹೇರಲು ಯತ್ನಿಸಿದರು.
ಮಾರ್ಷಲ್‌ಗಳ ಬಂದೋಬಸ್ತ್ ನಡುವೆಯೇ ರಾಜ್ಯಪಾಲರು ಮುಂದೆ ಹೋಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. ಇದಕ್ಕೆ ವಿರುದ್ಧವಾಗಿ ಬಿಜೆಪಿ ಸದಸ್ಯರು ಜೈಕಾರವನ್ನು ಮೊಳಗಿಸಿದರು.
ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ 11 ಅಂಶಗಳನ್ನು ಕೈಬಿಡಬೇಕು ಎಂದು ಪಟ್ಟು ಹಿಡಿದಿದ್ದ ರಾಜ್ಯಪಾಲರು, ಇದನ್ನು ಸರಿಪಡಿಸದೇ ಇದ್ದರೆ ಭಾಷಣ ಮಾಡಲು ನಿರಾಕರಿಸಿದ್ದರು. ಬುಧವಾರ ಬೆಳಿಗ್ಗೆಯೇ ಈ ಬಗ್ಗೆ ಸಂದೇಶ ರವಾನಿಸಿದ್ದರು. ಸಾಂವಿಧಾನಿಕ ಬಿಕ್ಕಟ್ಟು ತಪ್ಪಿಸುವ ಉದ್ದೇಶದಿಂದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಒಂದು ವೇಳೆ ರಾಜ್ಯಪಾಲರು ಬರದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲು ಸರ್ಕಾರ ತೀರ್ಮಾನಿಸಿತ್ತು.
ರಾಜ್ಯಪಾಲರು ಬರುತ್ತಾರೋ ಇಲ್ಲವೊ ಎಂಬ ಸ್ಪಷ್ಟತೆ ಇರಲಿಲ್ಲ. ನಿಗದಿತ ಸಮಯಕ್ಕೆ ಬಂದರು. ಅವರು ಏನು ಓದುತ್ತಾರೆ, ಏನು ಬಿಡುತ್ತಾರೆ... ಎಂದು ಸದಸ್ಯರು ಲೆಕ್ಕಾಚಾರದಲ್ಲಿರುವಾಗಲೇ ಗೆಹಲೋತ್ ಅವರು ಭಾಷಣದ ಶಾಸ್ತ್ರ ಮುಗಿಸಿದ್ದರು.
46 ಪುಟಗಳ ಭಾಷಣದ ಪ್ರತಿಯ ಎರಡು ಸಾಲುಗಳನ್ನು ಓದಿ ‘ಜೈ ಹಿಂದ್, ಜೈ ಕರ್ನಾಟಕ’ ಎಂದು ಹೇಳಿ ಭಾಷಣ ಮುಗಿಸಿದರು. ಕೂಡಲೇ ಸದನದಲ್ಲಿ ಗುಜುಗುಜು ಗದ್ದಲ ಆರಂಭವಾಯಿತು.
ಭಾಷಣ ಮೊಟಕುಗೊಳಿಸಿದ್ದರಿಂದ ಸಿಟ್ಟಿಗೆದ್ದ ಆಡಳಿತ ಪಕ್ಷದ ಸದಸ್ಯರು ಮತ್ತು ಸಚಿವರಾದ ಎಚ್.ಕೆ.ಪಾಟೀಲ, ಪ್ರಿಯಾಂಕ್ ಖರ್ಗೆ ಮತ್ತು ಇತರ ಸಚಿವರು ಏರಿದ ಧ್ವನಿಯಲ್ಲಿ ರಾಜ್ಯಪಾಲರನ್ನು ಆಕ್ಷೇಪಿಸಿದರು. ‘ಪೂರ್ಣ ಭಾಷಣ ಓದದೇ ಸಂವಿಧಾನ ಉಲ್ಲಂಘನೆ ಮಾಡಿದ್ದೀರಿ, ಕನ್ನಡಿಗರಿಗೆ ಅನ್ಯಾಯ ಮಾಡಿದ್ದೀರಿ’ ಎಂದು ರಾಜ್ಯಪಾಲರತ್ತ ಕೈತೋರಿಸಿ ಬೊಬ್ಬಿಟ್ಟರು. ಆ ಮಾತು ಕೇಳಿಸಿಕೊಂಡ ರಾಜ್ಯಪಾಲರು ಕೈಮುಗಿದು ಪೀಠದಿಂದ ಕೆಳಗಿಳಿದರು. ಆಗ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು.
ರಾಜ್ಯಪಾಲರು ನಿರ್ಗಮಿಸುವುದಕ್ಕೆ ಮುನ್ನ ಸದನದಲ್ಲಿ ರಾಷ್ಟ್ರಗೀತೆ ನುಡಿಸುವುದು ಪದ್ಧತಿ. ಆದರೆ, ರಾಷ್ಟ್ರಗೀತೆ ನುಡಿಸಲಿಲ್ಲ. ರಾಜ್ಯಪಾಲರು ಹೊರಟೇ ಬಿಟ್ಟರು.
‘ಕೇಂದ್ರ ವಿರುದ್ಧ ವಿನಾ ಕಾರಣ ದ್ವೇಷ ಕಾರುವ, ರಾಜಕೀಯ ಮಾಡುವ ಉದ್ದೇಶದ ಭಾಷಣವನ್ನು ಓದದೇ ನಿರ್ಗಮಿಸಿದ್ದು ಸರಿಯಾದ ಕ್ರಮ’ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದರು. ಬಿಜೆಪಿ ಸದಸ್ಯರು ರಾಜ್ಯಪಾಲರಿಗೆ ಜೈಕಾರ ಹಾಕಿ, ಕಾಂಗ್ರೆಸ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಲಾರಂಭಿಸಿದರು. ಆಗ ವಿರೋಧ ಪಕ್ಷಗಳ ಸದಸ್ಯರತ್ತ ಕೈಮುಗಿದು ರಾಜ್ಯಪಾಲರು ಹೊರ ನಡೆದರು.
ಹೊರ ನಡೆಯುತ್ತಿದ್ದ ರಾಜ್ಯಪಾಲರನ್ನು ಹಿಂಬಾಲಿಸಿದ ಕಾಂಗ್ರೆಸ್‌ನ ಎಚ್.ಸಿ. ಬಾಲಕೃಷ್ಣ, ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್ ಮತ್ತಿತರರು ಅಡ್ಡಹಾಕಿದರೆ, ವಿಧಾನಪರಿಷತ್ ಸದಸ್ಯ ಎಸ್.ರವಿ ಮತ್ತು ಇತರರು ಹಿಂದಿನಿಂದ ರಾಜ್ಯಪಾಲರಿಗೆ ಧಿಕ್ಕಾರ ಕೂಗುತ್ತಾ ನಡೆದರು. ಬಾಗಿಲಿನ ಬಳಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ರಾಜ್ಯಪಾಲರಿಗೆ ಅಡ್ಡ ನಿಂತು ವಾಗ್ವಾದಕ್ಕೆ ಮುಂದಾದಾಗ ಮಾರ್ಷಲ್‌ಗಳು ಅವರನ್ನು ಬದಿಗೆ ತಳ್ಳಿ ರಾಜ್ಯಪಾಲರಿಗೆ ದಾರಿ ಮಾಡಿಕೊಟ್ಟರು.
ಈ ತಳ್ಳಾಟ– ನೂಕಾಟದಲ್ಲೂ ರಾಜ್ಯಪಾಲರು ಎಲ್ಲರಿಗೂ ನಮಸ್ಕರಿಸುತ್ತಲೇ ಮುಂದೆ ನಡೆದರು. ಶಿಷ್ಟಾಚಾರದಂತೆ ರಾಜ್ಯಪಾಲರ ಅಕ್ಕಪಕ್ಕದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮಾರ್ಷಲ್‌ಗಳು ಜಾಗ ಮಾಡಿಕೊಟ್ಟರು. ಅವರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಏದುಸಿರು ಬಿಡುತ್ತಾ ಸಾಗಿದರು. ವಿಧಾನಸೌಧದ ಮೆಟ್ಟಿಲುವರೆಗೆಹೋಗಿ ರಾಜ್ಯಪಾಲರನ್ನು ಬೀಳ್ಕೊಟ್ಟರು.
‘ಸಭಾಪತಿಯವರೆ, ಸಭಾಧ್ಯಕ್ಷರೆ, ಮುಖ್ಯಮಂತ್ರಿಗಳೆ. . . ಪ್ರತಿಪಕ್ಷದ ನಾಯಕರೇ. . . ಸದಸ್ಯರೇ ಜಂಟಿ ಅಧಿವೇಶನಕ್ಕೆ ಎಲ್ಲರಿಗೂ ಸ್ವಾಗತ’.
‘ಎಲ್ಲರಿಗೂ ನಮಸ್ಕಾರ (ಕನ್ನಡದಲ್ಲಿ)... ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನದ ಮತ್ತೊಂದು ಭಾಷಣ ಓದಲು ಹರ್ಷವಾಗುತ್ತದೆ...’
‘ರಾಜ್ಯದ ಆರ್ಥಿಕ, ಸಾಮಾಜಿಕ, ಬೌದ್ಧಿಕ ವಿಕಾಸವನ್ನು ನನ್ನ ಸರ್ಕಾರ ಎರಡು ಪಟ್ಟು ಹೆಚ್ಚಿಸಲು ಕಟಿಬದ್ಧವಾಗಿದೆ. ಜೈ ಹಿಂದ್, ಜೈ ಕರ್ನಾಟಕ’
ರಾಜ್ಯಪಾಲರು ರಾಷ್ಟ್ರಗೀತೆಗೆ ‘ಅವಮಾನ’ ಮಾಡಿದ್ದಾರೆ ಎಂಬ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ರಾಜ್ಯಪಾಲರಿಂದ ರಾಷ್ಟ್ರಗೀತೆಗೆ ‘ಅವಮಾನ’ ಆಗಿದೆ ಎಂದು ವಿಷಯವನ್ನು ಸದನದಲ್ಲಿ ಎತ್ತಿದ್ದರು. ‘ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ನಿರ್ಧರಿಸುವ ಮೊದಲು ಸಭಾಧ್ಯಕ್ಷರ ರೂಲಿಂಗ್‌ಗೆ ನಾವು ಕಾಯುತ್ತೇವೆ. ಈ ವಿಷಯ ಹೇಗೆ ಬಗೆಹರಿಯುತ್ತದೆ ಎಂದು ನೋಡೋಣ’ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.
‘ಕೇಂದ್ರ ವಿರುದ್ಧ ವಿನಾ ಕಾರಣ ದ್ವೇಷ ಕಾರುವ, ರಾಜಕೀಯ ಮಾಡುವ ಉದ್ದೇಶದ ಭಾಷಣವನ್ನು ಓದದೇ ನಿರ್ಗಮಿಸಿದ್ದು ಸರಿಯಾದ ಕ್ರಮ’ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದರು. ಬಿಜೆಪಿ ಸದಸ್ಯರು ರಾಜ್ಯಪಾಲರಿಗೆ ಜೈಕಾರ ಹಾಕಿ, ಕಾಂಗ್ರೆಸ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಲಾರಂಭಿಸಿದರು. ಆಗ ವಿರೋಧ ಪಕ್ಷಗಳ ಸದಸ್ಯರತ್ತ ಕೈಮುಗಿದು ರಾಜ್ಯಪಾಲರು ಹೊರ ನಡೆದರು.
ಹೊರ ನಡೆಯುತ್ತಿದ್ದ ರಾಜ್ಯಪಾಲರನ್ನು ಹಿಂಬಾಲಿಸಿದ ಕಾಂಗ್ರೆಸ್‌ನ ಎಚ್.ಸಿ. ಬಾಲಕೃಷ್ಣ, ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್ ಮತ್ತಿತರರು ಅಡ್ಡಹಾಕಿದರೆ, ವಿಧಾನಪರಿಷತ್ ಸದಸ್ಯ ಎಸ್.ರವಿ ಮತ್ತು ಇತರರು ಹಿಂದಿನಿಂದ ರಾಜ್ಯಪಾಲರಿಗೆ ಧಿಕ್ಕಾರ ಕೂಗುತ್ತಾ ನಡೆದರು. ಬಾಗಿಲಿನ ಬಳಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ರಾಜ್ಯಪಾಲರಿಗೆ ಅಡ್ಡ ನಿಂತು ವಾಗ್ವಾದಕ್ಕೆ ಮುಂದಾದಾಗ ಮಾರ್ಷಲ್‌ಗಳು ಅವರನ್ನು ಬದಿಗೆ ತಳ್ಳಿ ರಾಜ್ಯಪಾಲರಿಗೆ ದಾರಿ ಮಾಡಿಕೊಟ್ಟರು.
ಈ ತಳ್ಳಾಟ– ನೂಕಾಟದಲ್ಲೂ ರಾಜ್ಯಪಾಲರು ಎಲ್ಲರಿಗೂ ನಮಸ್ಕರಿಸುತ್ತಲೇ ಮುಂದೆ ನಡೆದರು. ಶಿಷ್ಟಾಚಾರದಂತೆ ರಾಜ್ಯಪಾಲರ ಅಕ್ಕಪಕ್ಕದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮಾರ್ಷಲ್‌ಗಳು ಜಾಗ ಮಾಡಿಕೊಟ್ಟರು. ಅವರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಏದುಸಿರು ಬಿಡುತ್ತಾ ಸಾಗಿದರು. ವಿಧಾನಸೌಧದ ಮೆಟ್ಟಿಲುವರೆಗೆಹೋಗಿ ರಾಜ್ಯಪಾಲರನ್ನು ಬೀಳ್ಕೊಟ್ಟರು.
ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ರಾಜ್ಯಪಾಲರು ಉಲ್ಲಂಘಿಸಿದ್ದಾರೆ. ಇದು ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ.-ಸಿದ್ದರಾಮಯ್ಯ, ಮುಖ್ಯಮಂತ್ರಿ
ರಾಜ್ಯಪಾಲರು ತಮ್ಮ ಭಾಷಣವನ್ನು ಮಂಡಿಸುವ ಮೂಲಕ ಸಾಂವಿಧಾನಿಕ ಕರ್ತವ್ಯವನ್ನು ಪಾಲಿಸಿದ್ದಾರೆ. ಕಾಂಗ್ರೆಸ್ ಶಾಸಕರು ಬೀದಿ ರೌಡಿಗಳಂತೆ ವರ್ತಿಸಿದ್ದಾರೆ.-ಆರ್. ಅಶೋಕ, ವಿರೋಧ ಪಕ್ಷದ ನಾಯಕ