ADVERTISEMENT

ವಿಶ್ಲೇಷಣೆ | ಹೂಡಿಕೆ ವಂಚನೆ ತಡೆಗಿದೆ ಮಾರ್ಗ

ಅತ್ಯಧಿಕ ಲಾಭದ ಆಮಿಷ ಒಡ್ಡುವ ಯೋಜನೆ ವಂಚನೆಯ ಮೂಲವಾಗಿರಬಹುದು

ಡಾ.ಎಂ.ಎ.ಸಲೀಂ
Published 6 ಏಪ್ರಿಲ್ 2025, 23:30 IST
Last Updated 6 ಏಪ್ರಿಲ್ 2025, 23:30 IST
   

ಕಾನೂನು ಜಾರಿ ಸಂಸ್ಥೆಗಳಿಗೆ ಜಗತ್ತಿನ ಎಲ್ಲೆಡೆ ಎದುರಾಗುತ್ತಿರುವ, ಅತ್ಯಂತ ವೇಗವಾಗಿ ಹೆಚ್ಚಳ ಕಾಣುತ್ತಿರುವ ಅಪರಾಧಗಳ ಪೈಕಿ ಸೈಬರ್‌ ಅಪರಾಧ ಒಂದು. ಕಳೆದ ದಶಕದಲ್ಲಿ ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾದುದು ಇದಕ್ಕೆ ಕಾರಣ. ಬಹಳ ಕಡಿಮೆ ಸಮಯ ಮತ್ತು ಖರ್ಚಿನಲ್ಲಿ ಸೈಬರ್ ಅಪರಾಧ ಎಸಗಬಹುದು, ಈ ಅಪರಾಧ ಎಸಗಲು ಭೌತಿಕ ಗಡಿಗಳು ಅಡ್ಡಿಯಾಗುವುದಿಲ್ಲ, ಅದರಿಂದ ಸಿಗುವ ಲಾಭ ಭಾರಿ ಪ್ರಮಾಣದ್ದು. ಹೀಗಾಗಿ, ಇಂತಹ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ.

ಇತ್ತೀಚಿನ ದಿನಗಳಲ್ಲಿ ಹೂಡಿಕೆಯ ಹೆಸರಿನಲ್ಲಿ ನಡೆಯುವ ಮೋಸಗಳು ಆನ್‌ಲೈನ್‌ ವಂಚನೆಗಳಲ್ಲಿ ದೊಡ್ಡ ಪಾಲು ಹೊಂದಿವೆ. ಇಂತಹ ಪ್ರಕರಣಗಳಲ್ಲಿ ವಂಚಕರು ಹೂಡಿಕೆ ಮಾಡುವ ಬಯಕೆ ಹೊಂದಿ ರುವವರನ್ನು ಅಸ್ತಿತ್ವದಲ್ಲೇ ಇಲ್ಲದ ಹೂಡಿಕೆ ಉತ್ಪನ್ನ ಗಳಲ್ಲಿ ಹಣ ತೊಡಗಿಸುವಂತೆ ಮಾಡುತ್ತಾರೆ ಅಥವಾ ತಪ್ಪು ಮಾಹಿತಿ ನೀಡಿ ಅವರು ಹಣ ತೊಡಗಿಸುವಂತೆ ಮಾಡುತ್ತಾರೆ. ವಂಚಕರು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣ ವೇದಿಕೆಗಳ ಮೂಲಕ ಜಾಹೀರಾತು ನೀಡಿ ಅಥವಾ ಇಂಟರ್ನೆಟ್‌ನ ಇತರ ಮಾಧ್ಯಮಗಳ ಮೂಲಕ ಅಮಾಯಕ ಜನರನ್ನು ಸಂಪರ್ಕಿಸುತ್ತಾರೆ. ಸಾಮಾಜಿಕ ಜಾಲತಾಣದ ಮೂಲಕ ನೀಡುವ ಜಾಹೀರಾತುಗಳಲ್ಲಿ ಒಂದಿಷ್ಟು ಪರಿಚಯಾತ್ಮಕ ವಿಡಿಯೊಗಳು ಇರುತ್ತವೆ, ಅಲ್ಪಾವಧಿಯಲ್ಲಿ ಭಾರಿ ಪ್ರಮಾಣದ ಲಾಭ ಗಳಿಸುವ ಬಗ್ಗೆ ವಿವರಣೆ ಇರುತ್ತದೆ. ತೀರಾ ಬಡತನದಲ್ಲಿ ಇದ್ದವರು ಶ್ರೀಮಂತಿಕೆ ಪಡೆದು, ವಿಲಾಸಿ ಜೀವನ ನಡೆಸುತ್ತಿರುವ ಬಗ್ಗೆ ಒಂದಿಷ್ಟು ಕಥೆಗಳೂ ಅವುಗಳಲ್ಲಿ ಇರಬಹುದು. ಹೂಡಿಕೆದಾರರಿಗೆ ಆರಂಭದಲ್ಲಿ ಸಣ್ಣ ಮೊತ್ತವನ್ನು ಲಾಭದ ರೂಪದಲ್ಲಿ ನೀಡಿ, ಅವರು ಹೆಚ್ಚಿನ ಮೊತ್ತವನ್ನು ತೊಡಗಿಸುವಂತೆ ಪ್ರೇರೇಪಿಸುವುದೂ ಇರುತ್ತದೆ. ಇಲ್ಲಿ ಎರಡು ಉದಾಹರಣೆಗಳನ್ನು ನೀಡಲಾಗಿದೆ.

ಮೊದಲ ಪ್ರಕರಣದಲ್ಲಿ, ತಾವು ಹೂಡಿಕೆ ಸಂಸ್ಥೆಯ ಪ್ರತಿನಿಧಿಗಳು ಎಂದು ಹೇಳಿಕೊಂಡು ವಂಚಕರು ಸಂತ್ರಸ್ತ ರನ್ನು ಸಂಪರ್ಕಿಸಿದರು. ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಸಂದರ್ಭದಲ್ಲಿ ಕಂಪನಿಯ ಪ್ರವರ್ತಕರಿಂದ ರಿಯಾಯಿತಿ ದರಕ್ಕೆ ಕೊಡಿಸಲಾಗುವುದು ಎಂದು ಹೇಳಿದರು. ಸಂತ್ರಸ್ತ ವ್ಯಕ್ತಿಯು ಆರಂಭದಲ್ಲಿ ಹಲವು ವರ್ಗಾವಣೆಗಳ ಮೂಲಕ ₹3 ಕೋಟಿಗಿಂತ ಹೆಚ್ಚು ಹಣ ನೀಡಿದರು. ನಂತರ, ಐಪಿಒ ವಹಿವಾಟು ಪೂರ್ಣಗೊಳಿಸಲು ಹೆಚ್ಚುವರಿಯಾಗಿ ₹5 ಕೋಟಿಯನ್ನು ಕೇಳಿದಾಗ ಸಂತ್ರಸ್ತ ವ್ಯಕ್ತಿಗೆ ಅನುಮಾನ ಬಂತು. ವಂಚಕರ ಹೂಡಿಕೆ ಆ್ಯಪ್‌ ಬಗ್ಗೆ ಪರಿಶೀಲನೆ ನಡೆಸಿದಾಗ, ಪ್ರಮುಖ ಹೂಡಿಕೆ ಸಂಸ್ಥೆಯ ಹೆಸರಿನಲ್ಲಿ ಅವರು ತಮಗೆ ಮೋಸ ಮಾಡಿರುವುದು ಸಂತ್ರಸ್ತ ವ್ಯಕ್ತಿಗೆ ಗೊತ್ತಾಯಿತು.

ADVERTISEMENT

ಇನ್ನೊಂದು ಪ್ರಕರಣದಲ್ಲಿ, ಜಾಗತಿಕ ಮಟ್ಟದ ಪ್ರತಿಷ್ಠಿತ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ನ ಹೆಸರು ಹೇಳಿಕೊಂಡ ವಂಚಕರು, ಅಮಾಯಕ ಹೂಡಿಕೆದಾರರನ್ನು ವಂಚಿಸಲು, ಹೂಡಿಕೆ ಮಾಡಲು ಮನಸ್ಸು ಹೊಂದಿರುವವರ ಖಾಸಗಿ ಗುಂಪೊಂದನ್ನು ರಚಿಸಿದ್ದರು. ವಂಚಕರ ಬಲೆಗೆ ಬಿದ್ದ ವ್ಯಕ್ತಿಯೊಬ್ಬರು ಟ್ರೇಡಿಂಗ್ ಉದ್ದೇಶಕ್ಕಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಒಟ್ಟು ₹3.2 ಕೋಟಿ ವರ್ಗಾವಣೆ ಮಾಡಿದರು. ಕೆಲವು ಸಮಯದ ನಂತರ ಸಂತ್ರಸ್ತ ವ್ಯಕ್ತಿಯು ಷೇರು ಮತ್ತು ಬಾಂಡ್‌ಗಳ ಬಗ್ಗೆ ವಿವರ ಕೋರಿದಾಗ ತೃಪ್ತಿಕರ ಉತ್ತರ ಸಿಗಲಿಲ್ಲ. ಎಲ್ಲ ವಹಿವಾಟುಗಳನ್ನೂ ನಕಲಿ ಆ್ಯಪ್‌ ಲಿಂಕ್‌ ಮೂಲಕ ನಡೆಸಲಾಗಿದೆ ಎಂಬುದು ಆಗ ಗೊತ್ತಾಯಿತು. ಸಂತ್ರಸ್ತರು ತೊಡಗಿಸಿದ ಅಷ್ಟೂ ಹಣವು ವಂಚಕರ ಬ್ಯಾಂಕ್‌ ಖಾತೆಗೆ ಹೋಗಿರುವುದು ತನಿಖೆಯಿಂದ ಗೊತ್ತಾಯಿತು.

ವಂಚಕರಲ್ಲಿ ಹೆಚ್ಚಿನವರು ಬೇರೆ ಬೇರೆ ದೇಶಗಳಲ್ಲಿ ಇದ್ದುಕೊಂಡು ತಮ್ಮ ಕೆಲಸ ಮಾಡುತ್ತಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ಅವರನ್ನು ಪತ್ತೆ ಮಾಡುವುದು ಬಹಳ ಸವಾಲಿನ ಕೆಲಸ ಆಗುತ್ತದೆ. ಸಂತ್ರಸ್ತರಲ್ಲಿ ಹೆಚ್ಚಿನವರು ಸುಶಿಕ್ಷಿತರಾಗಿರುತ್ತಾರೆ, ಅವರಿಗೆ ವೃತ್ತಿಯ ಹಿನ್ನೆಲೆ ಇರುತ್ತದೆ ಎಂಬುದು ಕೂಡ ತನಿಖೆಯ ಸಂದರ್ಭದಲ್ಲಿ
ಗೊತ್ತಾಗಿದೆ. ಆದರೂ ತಮ್ಮ ಉಳಿತಾಯದ ದೊಡ್ಡ ಮೊತ್ತವನ್ನು ಬೇರೆ ಬೇರೆ ಕಡೆ ತೊಡಗಿಸಲು ಬಯಸುವ ಅವರು, ಇಂತಹ ವಂಚನೆಯ ಜಾಲಗಳಿಗೆ ಅರಿವಿಲ್ಲದೆ ಸಿಲುಕುತ್ತಾರೆ.

ಹೂಡಿಕೆ ವಂಚನೆಯನ್ನು ತಡೆಯಲು ತನಿಖಾ ಸಂಸ್ಥೆಗಳ ಸಾಮರ್ಥ್ಯ ವೃದ್ಧಿಯ ಜೊತೆಯಲ್ಲೇ ನಾಗರಿಕರಲ್ಲಿ ಅರಿವು ಮೂಡಿಸುವ ತುರ್ತು ಅಗತ್ಯ ಇದೆ. ಆನ್‌ಲೈನ್‌ ಹೂಡಿಕೆ ಸಂದರ್ಭದಲ್ಲಿ, ವಂಚನೆಯ ಸಾಧ್ಯತೆಗಳನ್ನು ಅರಿಯಲು ಕೆಳಗಿನ ಕೆಲವು ಅಂಶಗಳ ಮೇಲೆ ಗಮನ ಇರಿಸಬೇಕು.

ಹೂಡಿಕೆ ಮಾಡಲಿರುವ ಷೇರು ಅಥವಾ ಬಾಂಡ್‌ಗಳ ಪೂರ್ತಿ ವಿವರವನ್ನು ವಂಚಕರು ನೀಡುವುದಿಲ್ಲ. ಷೇರುಪೇಟೆಯಲ್ಲಿ, ಮ್ಯೂಚುವಲ್‌ ಫಂಡ್‌ಗಳಲ್ಲಿ ಮಾಡುವ ಹೂಡಿಕೆಯಲ್ಲಿ ಒಂದಿಷ್ಟು ರಿಸ್ಕ್‌ ಇದ್ದೇ ಇರುತ್ತದೆ. ಆದರೆ ವಂಚಕರು ಮಾತ್ರ ತಮ್ಮ ಮೂಲಕ ಹೂಡಿಕೆ ಮಾಡಿದರೆ ಯಾವುದೇ ರಿಸ್ಕ್ ಇರುವುದಿಲ್ಲ ಎನ್ನುತ್ತಾರೆ. ನೈಜ ಕಂಪನಿಗಳು ಭಾರಿ ಪ್ರಮಾಣದ ಲಾಭದ ಖಾತರಿ ಒದಗಿಸುವುದಿಲ್ಲ. ಯಾವುದೇ ಆ್ಯಪ್‌ ಭಾರಿ ಪ್ರಮಾಣದ ಲಾಭದ ಭರವಸೆ ಇತ್ತರೆ ಅದು ವಂಚನೆಯ ಸಾಧ್ಯತೆಯನ್ನು ಹೇಳುತ್ತಿರುತ್ತದೆ. ವಂಚಕರು ಒತ್ತಡದ ತಂತ್ರವನ್ನು ಅನುಸರಿಸಿ, ಸಂತ್ರಸ್ತರು ಅವಸರದಲ್ಲಿ ತೀರ್ಮಾನ ಕೈಗೊಳ್ಳುವಂತೆ ಮಾಡುತ್ತಾರೆ.

ಸಾರ್ವಜನಿಕರು ಆನ್‌ಲೈನ್‌ ಹೂಡಿಕೆಯ ಹೆಸರಿನಲ್ಲಿ ವಂಚನೆಗೆ ತುತ್ತಾಗದಂತೆ ಮಾಡಲು ಕೆಲವು ಕ್ರಮಗಳನ್ನು ವಹಿಸಬೇಕಿದೆ. ಹೂಡಿಕೆಯ ಆಮಿಷ ಒಡ್ಡುವ ವ್ಯಕ್ತಿಗಳು ಹಾಗೂ ಕಂಪನಿಗಳ ಬಗ್ಗೆ ಆಮೂಲಾಗ್ರವಾಗಿ ಪರಿಶೀಲನೆ ನಡೆಸಬೇಕು. ಅವರ ವಿಳಾಸ, ವೆಬ್‌ಸೈಟ್‌ ವಿಳಾಸ, ದೂರವಾಣಿ ಸಂಖ್ಯೆಯನ್ನು ಪರಿಶೀಲಿಸಿ, ಅವರು ನಿಜವಾದ ಹೂಡಿಕೆ ಸಂಸ್ಥೆಯವರೋ ವಂಚಕರೋ ಎಂಬುದನ್ನು ತಿಳಿದುಕೊಳ್ಳಬೇಕು. ಹೂಡಿಕೆ ಮಾಡಬೇಕಿರುವ ಮೊತ್ತವು ದೊಡ್ಡದಾಗಿದ್ದರೆ, ಅವರ ಕಚೇರಿಗೆ ನೇರವಾಗಿ ಭೇಟಿ ನೀಡಿ, ಅವರ ಜೊತೆ ವೈಯಕ್ತಿಕವಾಗಿ ಮುಖಾಮುಖಿ ಮಾತುಕತೆ ನಡೆಸುವುದು ಸೂಕ್ತ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಥವಾ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಯಂತ್ರಣಕ್ಕೆ ಒಳಪಟ್ಟಿರುವ ಆನ್‌ಲೈನ್‌ ವೇದಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಷೇರುಗಳಲ್ಲಿ ಅಥವಾ ಬಂಡವಾಳ ಮಾರುಕಟ್ಟೆಯ ಇತರ ಉತ್ಪನ್ನಗಳಲ್ಲಿ ಮಾಡುವ ಹೂಡಿಕೆಗಳಲ್ಲಿ ಒಂದಿಷ್ಟು ರಿಸ್ಕ್‌ ಇದ್ದೇ ಇರುತ್ತದೆ. ಅಲ್ಲಿ ನಿಶ್ಚಿತ ಪ್ರಮಾಣದ ಲಾಭ ಇರುವುದಿಲ್ಲ. ಆದರೆ ತೀರಾ ಕಡಿಮೆ ರಿಸ್ಕ್‌ಗೆ ಅಸಾಮಾನ್ಯ ಪ್ರಮಾಣದ ಲಾಭ ತಂದುಕೊಡುವುದಾಗಿ ಹೇಳಿಕೊಳ್ಳುವ ಹೂಡಿಕೆಗಳ ಬಗ್ಗೆ ಎಚ್ಚರಿಕೆ ವಹಿಸಿರಿ. ಎಸ್‌ಎಂಎಸ್‌, ವಾಟ್ಸ್‌ಆ್ಯಪ್‌ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಆ್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವುದು ಬೇಡ. ಆ್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡುವಾಗ ಅಧಿಕೃತವಾದ ಆ್ಯಪ್‌ ಸ್ಟೋರ್‌ ಬಳಸಿ. ಹಣವನ್ನು ಬಹಳ ತ್ವರಿತವಾಗಿ ತೊಡಗಿಸಬೇಕಾದ ಕೊಡುಗೆಗಳ ವಿಚಾರವಾಗಿ ಎಚ್ಚರಿಕೆಯಿಂದ ಇರಿ.

ನಿಮ್ಮ ಹೂಡಿಕೆಗಳು ನಿಮ್ಮ ಪ್ರಧಾನ ಬ್ಯಾಂಕ್‌ ಖಾತೆಯಿಂದ ಆಗದಿರಲಿ. ಹೂಡಿಕೆಗಳನ್ನು ಮಾಡುವುದಕ್ಕಾಗಿ ಪ್ರತ್ಯೇಕವಾದ ಬ್ಯಾಂಕ್‌ ಖಾತೆಯೊಂದನ್ನು ಹೊಂದಿದ್ದರೆ ಸೂಕ್ತ. ಆ ಖಾತೆಯಲ್ಲಿ ಸೀಮಿತ ಮೊತ್ತ ಮಾತ್ರ ಇರಿಸಿಕೊಳ್ಳಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಾಪಾಡಿಕೊಳ್ಳಿ. ಇಲ್ಲದಿದ್ದರೆ ಅವು ಬಹಿರಂಗವಾಗಿ, ಅವುಗಳನ್ನು ಅಪರಾಧಿಗಳು ದುರ್ಬಳಕೆ ಮಾಡಿಕೊಳ್ಳಬಹುದು. ಈ ಎಚ್ಚರಿಕೆಯ ಕ್ರಮಗಳು ಮಾತ್ರವೇ ಸಾಕಾಗುತ್ತವೆ ಎನ್ನಲು ಆಗದು. ಏಕೆಂದರೆ ವಂಚಕರು ಅಪರಾಧ ಎಸಗಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು. ವಂಚನೆಗೆ ಈಡಾಗಿದ್ದೇವೆ ಎಂಬುದು ಗೊತ್ತಾದ ತಕ್ಷಣ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ ಅಥವಾ https://cybercrime.gov. in/ ಮೂಲಕ ದೂರು ದಾಖಲಿಸಿ.

ಅನುಮಾನ ಮೂಡಿಸುವಂತೆ ಇರುವ, ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಹೂಡಿಕೆ ಕೊಡುಗೆಗಳ ಬಗ್ಗೆ ಕಾನೂನು ಜಾರಿ ಸಂಸ್ಥೆಗಳಿಗೆ ಅಥವಾ ದೂರಸಂಪರ್ಕ ಇಲಾಖೆಯ ‘ಡಿಒಟಿ ಚಕ್ಷು’ ಮೂಲಕ ಅಥವಾ ಎನ್‌ಸಿಆರ್‌ಪಿ ಪೋರ್ಟಲ್‌ ಮೂಲಕ ದೂರು ನೀಡಿ. ನಾಗರಿಕರು ಎಚ್ಚರಿಕೆಯಿಂದ ಇದ್ದರೆ, ಹೂಡಿಕೆ ಯೋಜನೆಗಳ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸಿದರೆ ಇಂತಹ ವಂಚನೆಗಳನ್ನು ತಡೆಯಬಹುದು. ಅಷ್ಟೇ ಅಲ್ಲ, ಇತರ ಸೈಬರ್‌ ಅಪರಾಧಗಳನ್ನೂ ತಡೆಯಬಹುದು.

ಲೇಖಕ: ಪೊಲೀಸ್‌ ಮಹಾನಿರ್ದೇಶಕ, ಸಿ.ಐ.ಡಿ. ಮತ್ತು ಆರ್ಥಿಕ ಅಪರಾಧಗಳು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.