
ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರಣದಿಂದ ಆಗಿರುವ ಮತದಾರರ ಪಟ್ಟಿಯಲ್ಲಿನ ಗೊಂದಲ, ಆಡಳಿತದಲ್ಲಿರುವ ‘ಎನ್‌ಡಿಎ’ ಮತ್ತು ‘ಮಹಾಘಟ ಬಂಧನ್’ನಲ್ಲಿರುವ ಪಕ್ಷಗಳಲ್ಲಿನ ಸೀಟು ಹಂಚಿಕೆ ಜಟಾಪಟಿ, ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅವರ ನೇತೃತ್ವದ ‘ಜನ ಸುರಾಜ್’ ಪಾರ್ಟಿ ನೀಡಬಹುದಾದ ಸ್ಪರ್ಧೆ – ಇವೆಲ್ಲದರ ಮಧ್ಯೆ ಉತ್ತರ ಭಾರತದ ಹಿಂದುಳಿದ ರಾಜ್ಯ ಬಿಹಾರ, ನವೆಂಬರ್ 6 ಹಾಗೂ 11ರಂದು ವಿಧಾನಸಭೆ ಚುನಾವಣೆ ಎದುರಿಸಲಿದೆ. ನವೆಂಬರ್ 14ರಂದು ಮತಗಳ ಎಣಿಕೆ ನಡೆಯಲಿದೆ. ಈ ಕದನ, ಬಿಹಾರ ಇದುವರೆಗೆ ಎದುರಿಸಿದ ಅತ್ಯಂತ ತೀವ್ರ ಸ್ಪರ್ಧೆಯ ಚುನಾವಣೆ ಎನ್ನಲಾಗಿದೆ.
ಭಾವನಾತ್ಮಕ ವಿಷಯಗಳ ಬಗ್ಗೆ ಬೇರಾವುದೇ ರಾಜ್ಯದ ಮತದಾರನಷ್ಟು ಪ್ರಭಾವಿತ ಆಗದಿರುವುದು ಬಿಹಾರದ ಮತದಾರನ ವಿಶೇಷ. ಉತ್ತರದ ಇತರ ರಾಜ್ಯಗಳಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿ, ಬಿಹಾರದಲ್ಲಿ ಇಲ್ಲಿಯವರೆಗೆ ಬಹುಮತ ಗಳಿಸಲು ಸಾಧ್ಯವಾಗದೇ ಇರುವುದು ಬಹುಶಃ ಇದೇ ಕಾರಣಕ್ಕಿರಬಹುದು. ಅಧಿಕಾರದ ಗದ್ದುಗೆ ಹಿಡಿಯಲು ಇಲ್ಲಿ ಬಿಜೆಪಿಗೆ ಜನತಾ ದಳ (ಯುನೈಟೆಡ್) ಮತ್ತು ಇತರ ಪುಟ್ಟ ಪಕ್ಷಗಳ ಸಖ್ಯ ಅನಿವಾರ್ಯ. ಇದೇ ಕಾರಣಕ್ಕೆ ಎನ್‌ಡಿಎ ಅಥವಾ ಮಹಾಘಟಬಂಧನ್ ಮೈತ್ರಿಕೂಟದಲ್ಲಿ, ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ– ಕಾಂಗ್ರೆಸ್‌ನ ಯಜಮಾನಿಕೆ ನಡೆಯುವುದಿಲ್ಲ. ಎರಡೂ ಬಣಗಳಲ್ಲಿ ಪ್ರಾದೇಶಿಕ ಪಕ್ಷಗಳದೇ ಪ್ರಾಬಲ್ಯ. ಈ ರಾಜ್ಯದಲ್ಲಿ ಪಕ್ಷವೊಂದು ಖರ್ಚು ಮಾಡುವ ಹಣದ ಪ್ರಮಾಣಕ್ಕಿಂತಲೂ ಮತದಾರನ ಸಂಪರ್ಕ ಹೊಂದಿರುವುದೇ ಹೆಚ್ಚು ಮುಖ್ಯವಾಗುತ್ತದೆ.
ಬರುವ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಪ್ರಥಮ ಬಾರಿಗೆ ಸೀಟು ಹಂಚಿಕೆಯಲ್ಲಿ ಜೆಡಿಯುನಷ್ಟೇ ಬಿಜೆಪಿ ಸಮಪಾಲು ದೊರಕಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ, 2020ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುಗಿಂತ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿರುವುದು. ಸ್ಪರ್ಧಿಸಿದ್ದ 110 ಕ್ಷೇತ್ರಗಳಲ್ಲಿ ಬಿಜೆಪಿ 74 ಸೀಟು ಗೆದ್ದರೆ, ಜೆಡಿಯು 115 ಕ್ಷೇತ್ರಗಳಲ್ಲಿ 43ರಲ್ಲಷ್ಟೇ ಜಯಗಳಿಸಿತ್ತು. ಈ ಬಾರಿ ಎರಡೂ ಪಕ್ಷಗಳು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಕಳೆದ ಎರಡು ದಶಕಗಳಿಗೆ ಹೋಲಿಸಿದರೆ ಬಿಜೆಪಿ ಎಷ್ಟರಮಟ್ಟಿಗೆ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ ಎನ್ನುವುದನ್ನು ಈ ಹಂಚಿಕೆ ತಿಳಿಸುತ್ತದೆ. ಹಾಗೆಯೇ, ಜೆಡಿಯು ಕೂಡ ಬಿಜೆಪಿ ತನ್ನಷ್ಟೇ ಸಮ ಪಾಲುದಾರ ಎಂದು ಒಪ್ಪಿಕೊಂಡಿದೆ ಎಂದರ್ಥ. ಮೈತ್ರಿಕೂಟದ ಇತರ ಪಕ್ಷಗಳಾದ ಲೋಕಜನಶಕ್ತಿ ಪಾರ್ಟಿಗೆ 29, ಹಿಂದುಸ್ತಾನಿ ಆವಾಮ್ ಮೋರ್ಚಾ ಹಾಗೂ ರಾಷ್ಟ್ರೀಯ ಲೋಕ ಮೋರ್ಚಾಕ್ಕೆ ತಲಾ 6 ಸ್ಥಾನ ಕೊಡಲಾಗಿದೆ.
ಮಹಾಘಟಬಂಧನ್ ಗೊಂದಲದ ಗೂಡಾಗಿದೆ. ಮೊದಲನೇ ಹಂತದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನಂತರವೂ ಸೀಟು ಹಂಚಿಕೆಯ ತೀರ್ಮಾನವಾಗಿರಲಿಲ್ಲ. ಕೆಲವು ಕ್ಷೇತ್ರಗಳಲ್ಲಿ ‘ಫ್ರೆಂಡ್ಲಿ ಫೈಟ್’ ಇದೆ. ಆರ್‌ಜೆಡಿ 143, ಕಾಂಗ್ರೆಸ್ 61, ವಿಕಾಸಶೀಲ ಇನ್ಸಾನ್ ಪಾರ್ಟಿ 15 ಹಾಗೂ ಎಡ ಪಕ್ಷಗಳು 30 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.
ಬಿಜೆಪಿ ನಾಯಕ ಅಮಿತ್ ಶಾ ತಮ್ಮ ಪಟ್ನಾ ಪ್ರವಾಸದಲ್ಲಿ, ‘ಜೆಡಿಯುನ ನಿತೀಶ್ ಕುಮಾರ್ ಎನ್‌ಡಿಎ ಬಣದ ನಾಯಕತ್ವ ವಹಿಸುತ್ತಾರೆ’ ಎಂದರೂ, ನಿತೀಶ್ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಲಿಲ್ಲ. ‘ಈ ಬಗ್ಗೆ ನಾನು ಹೇಗೆ ಮಾತನಾಡಲು ಆಗುತ್ತದೆ? ಮುಖ್ಯಮಂತ್ರಿಯನ್ನು ಶಾಸಕರು ಚುನಾಯಿಸಬೇಕಲ್ಲವೆ?’ ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಈ ಉತ್ತರ ನಿತೀಶ್ ಅವರನ್ನು 5ನೇ ಬಾರಿಗೆ ಮುಖ್ಯಮಂತ್ರಿ ಮಾಡುವ ಬಗ್ಗೆ ಎನ್‌ಡಿಎ ಮೈತ್ರಿಕೂಟದಲ್ಲಿ ಒಮ್ಮತವಿಲ್ಲ ಎಂಬುವುದನ್ನು ಸೂಚಿಸುತ್ತದೆ. ಅವರ ಆರೋಗ್ಯ ಸರಿಯಿಲ್ಲವೆಂದೂ, ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆಂದೂ ಹೇಳಲಾಗುತ್ತಿದೆ. ವಿರೋಧಿ ಬಣ ಮೊದಮೊದಲು ಇದನ್ನು ಅಪಹಾಸ್ಯ ಮಾಡಿದರೂ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಕಾಂಗ್ರೆಸ್ ಮತ್ತು ಸಿಪಿಐ (ಎಂ–ಎಲ್) ಹಿಂದೇಟು ಹಾಕುತ್ತಿದ್ದವು. ಕೊನೆಗೂ, ಮಿತ್ರಪಕ್ಷಗಳು ಆರ್‌ಜೆಡಿಗೆ ಮಣಿದು, ತೇಜಸ್ವಿ ನಾಯಕತ್ವಕ್ಕೆ ಮಣೆ ಹಾಕಿವೆ. ಅಕಸ್ಮಾತ್ ತೇಜಸ್ವಿ ಅವರನ್ನು ನಾಯಕನೆಂದು ಘೋಷಿಸಿದರೆ, ಅವರ ತಂದೆ–ತಾಯಿಯರಾದ ಲಾಲು ಪ್ರಸಾದ್–ರಾಬ್ರಿ ದೇವಿಯವರ 15 ವರ್ಷದ ಸರ್ಕಾರದಲ್ಲಿ ನಡೆದಂತಹ ಯಾದವ ಸಮುದಾಯದ ದರ್ಪ, ಯಾದವೇತರರ ಮೇಲಿನ ದಬ್ಬಾಳಿಕೆ, ಭ್ರಷ್ಟಾಚಾರ ಇವೆಲ್ಲಾ ಕಾರಣಗಳಿಂದಾಗಿ ಮುಂದುವರಿದ ಜಾತಿಗಳು, ಯಾದವೇತರ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿಗಳು ಮಹಾಘಟಬಂಧನ್ ಮೈತ್ರಿಯನ್ನು ಬೆಂಬಲಿಸದಿರಬಹುದು ಎಂಬ ಭಯ ಮೈತ್ರಿಕೂಟಕ್ಕಿತ್ತು.
ಇನ್ನೊಂದೆಡೆ, ಎನ್‌ಡಿಎ ಗೆದ್ದು ನಿತೀಶ್‌ರನ್ನು ಮುಖ್ಯಮಂತ್ರಿ ಮಾಡದಿದ್ದರೆ ಅವರು ಮೈತ್ರಿಕೂಟ ಬಿಟ್ಟು, ಕಳೆದ ನಾಲ್ಕು ಬಾರಿ ಮಾಡಿದ ಹಾಗೆ ವಿರೋಧಿ ಬಣ ಸೇರಬಹುದೆಂಬ ಭಯವಿದೆ. ಎಲ್ಲಾ ನಕಾರಾತ್ಮಕ ಅಂಶಗಳ ಹೊರತಾಗಿಯೂ ನಿತೀಶ್ ಇನ್ನೂ ಜನಪ್ರಿಯತೆ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಳೆದ 19 ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಮಾಡಿದ ಕೆಲವು ಒಳ್ಳೆಯ ಕಾರ್ಯಗಳು, ಯಾದವೇತರ ಹಿಂದುಳಿದ ವರ್ಗ (ಕುರ್ಮಿ–ಕೇವರಿ), ಅತಿ ಹಿಂದುಳಿದ ದಲಿತರು ಸೇರಿದಂತೆ ಮಹಿಳೆಯರ ಬೆಂಬಲ ನಿತೀಶ್ ಅವರಿಗಿದೆ. ಬಿಜೆಪಿಗೆ ದೊಡ್ಡ ಮೈನಸ್ ಪಾಯಿಂಟ್ ಎಂದರೆ, ಅದಕ್ಕೆ ರಾಜ್ಯದಲ್ಲಿ ಜನಪ್ರಿಯ ನಾಯಕರಿಲ್ಲದಿರುವುದು.
ಮಹಿಳೆಯರನ್ನು ಓಲೈಸಲು ಎನ್‌ಡಿಎ ಹಲವು ಯೋಜನೆಗಳನ್ನು ಘೋಷಿಸಿದೆ. ಕಳೆದೊಂದು ತಿಂಗಳಲ್ಲಿ ಮಹಿಳೆಯರಿಗೋಸ್ಕರ ಘೋಷಿಸಿದ ಯೋಜನೆಗಳು: ‘ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ’ಯಡಿ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ತಲಾ ₹10 ಸಾವಿರ ವರ್ಗಾವಣೆ, ಸಾಮಾಜಿಕ ಭದ್ರತಾ ಯೋಜನೆ ಅಡಿ ಕೊಡುವ ಭತ್ಯೆ ₹400ರಿಂದ 1,000ಕ್ಕೆ ಹೆಚ್ಚಳ, ಅಂಗನವಾಡಿ ನೌಕರರಿಗೆ ಭತ್ಯೆ ಏರಿಕೆ, ನಿರುದ್ಯೋಗಿ ಯುವಜನರಿಗೆ ಮಾಸಿಕ ₹1,000, ಇವೆಲ್ಲವೂ ಮಹಿಳೆಯರನ್ನು ನಿತೀಶ್ ಕುಮಾರ್ ಕಡೆಗೆ ಸೆಳೆಯಲು ಸಹಾಯ ಮಾಡಲಿವೆ ಎಂದು ಹೇಳಲಾಗುತ್ತಿದೆ.
ಕಳೆದ ಎರಡು ದಶಕಗಳಿಂದ ಚಾಲ್ತಿಯಲ್ಲಿರುವ ‘ಜೀವಿಕಾ’ ಮಹಿಳಾ ಸ್ವಸಹಾಯ ಸಂಘಗಳು 1.5 ಕೋಟಿ ಕುಟುಂಬಗಳಿಗೆ ಸಹಾಯ ಮಾಡಿವೆಯೆಂದು ಹೇಳಲಾಗಿದೆ. ಕೆಲವು ವರ್ಷಗಳ ಹಿಂದೆ ಸೈಕಲ್ ಫಲಾನುಭವಿಗಳಾದ ಶಾಲಾ ಬಾಲಕಿಯರು ಈಗ ಮಹಿಳೆಯರಾಗಿ, ಅನೇಕ ಕುಟುಂಬಗಳಲ್ಲಿ ತೀರ್ಮಾನ ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತಾರೆ. ಪಂಚಾಯಿತಿಗಳಲ್ಲಿ ಶೇ 50 ಸ್ಥಾನ, ಪೊಲೀಸ್ ಸೇರಿ ಸರ್ಕಾರಿ ಹುದ್ದೆಗಳಲ್ಲಿ ಶೇ 35 ಹುದ್ದೆಗಳನ್ನು ನಿತೀಶ್ ಮಹಿಳೆಯರಿಗೆ ಮೀಸಲಿಟ್ಟಿದ್ದಾರೆ. ಇವೆಲ್ಲವನ್ನೂ ನೋಡಿದ ವಿರೋಧಿ ಬಣ ತಾನೂ ಜನಸಾಮಾನ್ಯರಿಗೆ ಯೋಜನೆಗಳನ್ನು ಘೋಷಿಸುವುದರಲ್ಲಿ ಪೈಪೋಟಿ ನಡೆಸಿದೆ.
ಚುನಾವಣಾ ಪ್ರಚಾರದಲ್ಲಿ ಜಾತಿ, ಅದರಲ್ಲೂ ಹಿಂದುಳಿದ ವರ್ಗಗಳು ಮತ್ತು ವಿಶೇಷ ಸಮಗ್ರ ಪರಿಷ್ಕರಣೆ, ಮಹಿಳೆಯರಿಗೆ ಕೊಟ್ಟ ಸವಲತ್ತು, ‘ನುಸುಳುಕೋರರು’ ಮುಖ್ಯ ವಿಷಯಗಳಾಗಿವೆ. ಪ್ರಶಾಂತ್ ಕಿಶೋರ್ ಅವರ ಪಕ್ಷದ ಸ್ಪರ್ಧೆ, ಅವರ ಪ್ರಚಾರದ ವಿಷಯಗಳು ಜನರ ಮಧ್ಯೆ ಚರ್ಚೆಗೆ ಬಂದಿವೆ. ಅವರು ಯಾವುದೇ ಬಣದ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಆಮ್ ಆದ್ಮಿ ಪಕ್ಷ ಪಂಜಾಬನ್ನು ಗೆದ್ದಂತೆ ಬಿಹಾರದಲ್ಲಿ ತಾನು ಜಯಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಬಿಹಾರ, ಪಂಜಾಬ್‌ಗಿಂಥ ಭಿನ್ನವಾದರೂ, ಕಿಶೋರ್ ಮತ್ತು ಎಸ್‌ಐಆರ್ ಯಾವ ರೀತಿ ಪರಿಣಾಮ ಬೀರುತ್ತದೆಂದು ಹೇಳಲಾಗುವುದಿಲ್ಲ. ಎಸ್‌ಐಆರ್‌ನಿಂದ ಬಿಹಾರದ 7.4 ಕೋಟಿ ಮತದಾರರಲ್ಲಿ 65 ಲಕ್ಷ ಮತದಾರರನ್ನು ತೆಗೆಯಲಾಗುವುದೆಂದು ಚುನಾವಣಾ ಆಯೋಗ ಹೇಳಿತ್ತು; ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ, ಆಯೋಗ 21.5 ಲಕ್ಷ ಮತದಾರರನ್ನು ಸೇರಿಸಿದೆ ಮತ್ತು 3.7 ಲಕ್ಷ ಜನರನ್ನು ತೆಗೆದುಹಾಕಲಾಗಿದೆಯೆಂದು ಹೇಳಿದೆ.
2000 ಇಸವಿಯಿಂದ ಬಿಹಾರದಲ್ಲಿ ಯಾವುದೇ ಪಕ್ಷ ಶೇ 25ರಷ್ಟೂ ಮತ ಪಡೆದಿಲ್ಲ. ಕಳೆದ ಚುನಾವಣೆ ಯಲ್ಲಿ, ವಿಧಾನಸಭೆಯ ಒಟ್ಟು 243 ಸ್ಥಾನಗಳಲ್ಲಿ 75 ಸ್ಥಾನಗಳನ್ನು ಗೆದ್ದ ಆರ್‌ಜೆಡಿ ಶೇ 23.11ರಷ್ಟು ಮತ ಗಳಿಸಿತ್ತು. 70 ಸೀಟು ಗೆದ್ದ ಬಿಜೆಪಿ ಶೇ 19.46ರಷ್ಟು ಹಾಗೂ 43 ಸ್ಥಾನಗಳನ್ನು ಗೆದ್ದ ಜೆಡಿಯು ಶೇ 15.39ರಷ್ಟು ಮತ ಗಳಿಸಿತ್ತು. 19 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ನ ಮತಗಳಿಕೆಯ ಪ್ರಮಾಣ ಶೇ 9.48. ಉಳಿದ ಮತ–ಸ್ಥಾನಗಳು ಕಮ್ಯುನಿಸ್ಟರು ಸೇರಿದಂತೆ ಚಿಕ್ಕ ಪಕ್ಷಗಳ ಪಾಲಾಗಿದ್ದವು. ಈ ಕಾರಣದಿಂದಾಗಿ, ಚಿಕ್ಕ ಪಕ್ಷಗಳೂ ಇಲ್ಲಿ ಮುಖ್ಯವಾಗುತ್ತವೆ. ಜಾತಿ ಆಧಾರಿತ ಚಿಕ್ಕ ಪಕ್ಷಗಳು ಸಣ್ಣ ಸಣ್ಣ ಜಾತಿಗಳ ಮೇಲೆ ಸಂಪೂರ್ಣ ಹಿಡಿತ ಹೊಂದಿವೆ. ಇದೇ ಕಾರಣಕ್ಕೆ ಮೀನುಗಾರರ ಸಮುದಾಯಕ್ಕೆ ಸೇರಿದ ಮಖೇಶ್ ಸಹಾನಿಯವರನ್ನು ಉಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ‘ಇಂಡಿಯಾ’ ಘೋಷಿಸಿದೆ.
ಬಿಹಾರದಲ್ಲಿ ಮತದಾರ ಚಲಾಯಿಸುವ ಪ್ರತಿ ಮತಕ್ಕೂ ಮಹತ್ವವಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ವಿಜಯದ ಹೊಸ್ತಿಲಲ್ಲಿ ಎಡವಿತ್ತು. ಎರಡು ಬಣಗಳ ನಡುವಿನ ಅಂತರ 12 ಸೀಟುಗಳಾಗಿತ್ತು ಮತ್ತು ಕೇವಲ 11,150 ಮತಗಳಾಗಿದ್ದವು. 2020ರಲ್ಲಿ 52 ಸ್ಥಾನಗಳಲ್ಲಿ ಮತಗಳ ಅಂತರ 5,000ಕ್ಕೂ ಕಡಿಮೆ ಇತ್ತು. ಇದರಲ್ಲಿ ವಿರೋಧಿ ಬಣ 27 ಹಾಗೂ ಎನ್‌ಡಿಎ 24 ಗೆದ್ದಿತ್ತು. ಈ ಬಾರಿಯೂ ಇದೇ ಸ್ಥಾನಗಳಲ್ಲಿ ತೀವ್ರ ಹಣಾಹಣಿ ಇದ್ದು, ಎರಡೂ ಬಣಗಳ ಹಣೆಬರಹ ನಿರ್ಧರಿಸಬಹುದು.
(ಲೇಖಕ: ಹಿರಿಯ ಪತ್ರಕರ್ತ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.