
ಭಾರತದ ಪರಿಸರದ ಕುರಿತಂತೆ 2025ರ ಹಿನ್ನೋಟದ ಅವಲೋಕನಕ್ಕೆ ಇಳಿದರೆ ಮೊಟ್ಟ ಮೊದಲು ಕೇಳಬೇಕಾದ ಒಂದು ತೀಕ್ಷ್ಣ ಪ್ರಶ್ನೆ ಇದೆ:
ಈ ದೇಶವು ತನ್ನ ಪರಿಸರವನ್ನು ಉಳಿಸಿಕೊಳ್ಳಲು ನಿಜವಾಗಿ ಬಯಸುತ್ತದೆಯೇ? ಅಥವಾ ಕೇವಲ 'ಸ್ಥಿರತೆ' ಎಂಬ ಪದವನ್ನು ತನ್ನ ಮೂಗಿನ ನೇರಕ್ಕೆ ಬಳಸಿಕೊಳ್ಳುತ್ತ ಹೊಸ ಅಭಿವೃದ್ಧಿ ಮಾದರಿಯನ್ನೇ ಕಟ್ಟುತ್ತಿದೆಯೇ?
ಅದಿಲ್ಲದಿದ್ದರೆ ಅತ್ತ ಅರ್ಕ್ಟಿಕ್ ಪ್ರದೇಶವು ದಾಖಲೆ ಮಟ್ಟದ ತಾಪಮಾನವನ್ನು ತಲುಪಿರುವಾಗಲೇ ನಮ್ಮ ಹಿಮಾಲಯದ ನೆತ್ತಿಯ ಮೇಲೆ ಭರದ ಅಭಿವೃದ್ಧಿ ಚಟುವಟಿಕೆಗಳು ಸಾಗುತ್ತ ಹಿಮಾಲಯ ಶ್ರೇಣಿಯ ನದಿಗಳ ಬಣ್ಣವೂ ಬದಲಾಗತೊಡಗಿದೆ. ಸರಾಸರಿ ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಏರಿಕೆಯಾಗಿ, ಜಾಗತಿಕ ತಾಪಮಾನದ ಪರಿಣಾಮಗಳು ಸ್ಪಷ್ಟವಾಗಿ ಭಾರತದಲ್ಲೂ ಅನುಭವಕ್ಕೆ ಬರುತ್ತಿರುವಾಗಲೇ ದೇಶದ ಅತ್ಯಪರೂಪದ ಅರಣ್ಯ ಸಂಪತ್ತುಗಳಲ್ಲಿ ಒಂದಾದ ಅರಾವಳಿಯನ್ನು ನುಂಗಿ ನೀರು ಕುಡಿಯಲು ಕಾದು ಕುಳಿತ ಹಸಿದ ತೋಳಗಳಾದ ಗಣಿ ಮಾಲೀಕರಿಗೆ ಮಣೆ ಹಾಕಲಾಗುತ್ತಿದೆ. ರಾಜಸ್ಥಾನದಂಥ ಬೃಹತ್ ಮರುಭೂಮಿ ರಾಜ್ಯದ ಜೀವದಾಯಿನಿಯಾಗಿ ನಿಂತಿರುವ ಅರಾವಳಿ ಶ್ರೇಣಿಯ ಅರಣ್ಯ ಆಳುವವರ ಕಣ್ಣಿಗೆ ‘ಅಡ್ಡಿ’ಯಾಗಿ ಗೋಚರಿಸುತ್ತಿದೆ. ಚೀನಾ ಸೇರಿ ಕೆಲವು ದೇಶಗಳು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಹಸಿರು ಶಕ್ತಿಯ ಸಮರ್ಥ ನಿರ್ವಹಣೆಗೆ ಅನ್ವಯಿಸಿ ’ಆಧುನಿಕ ಗ್ರೀನ್ ತಂತ್ರಜ್ಞಾನ‘ಗಳ ಅಭಿವೃದ್ಧಿಗೆ ತೊಡಗಿರುವಾಗಲೇ ನಾವು ನಮ್ಮ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಶುದ್ಧ ಗಾಳಿಯ ಮೂಲವಾದ ಹೆಮ್ಮೆಯ ಕವಚ ಅರಾವಳಿಯ ಮೇಲೆ ತಥಾಕಥಿತ ಯೋಜನೆಗಳನ್ನು ಹೇರುತ್ತಿದ್ದೇವೆ. ಹೇಗೆ ನೋಡಿದರೂ 2025ರ ಹಿನ್ನೋಟವನ್ನು ವರ್ಷದ ಕೊನೆಯಿಂದಲೇ ಆರಂಭಿಸಬೇಕು; ಅದೂ ಅರಾವಳಿಯಿಂದಲೇ. ಅರಾವಳಿಯೆಂದರೆ ಪ್ರಕೃತಿಯು ದೇಶದ ಉತ್ತರ ಭಾಗಕ್ಕೆ ವರವಾಗಿ ನೀಡಿದ ‘air purifier’. ಒಂದೊಮ್ಮೆ ಅರಾವಳಿಯೂ ಇಲ್ಲದಿದ್ದರೆ ದೆಹಲಿ–NCR ಪ್ರದೇಶದ ವಾಯು ಗುಣಮಟ್ಟವನ್ನು ಕಲ್ಪಿಸಿಕೊಳ್ಳುವುದೂ ಕಷ್ಟವೇ. ಅಂಥ ಅರಾವಳಿ ಭಾಗದಲ್ಲಿ ನೂರು ಮೀಟರ್ ಅಲ್ಲ, ಹತ್ತು ಮೀಟರ್‌ನ ಎತ್ತರದ ಕುರುಚಲು ಭಾಗವೂ ಅಮೂಲ್ಯವೇ.
ಅರಾವಳಿ ಬೆಟ್ಟ ಸಾಲಿನಲ್ಲಿನ ನೂರು ಮೀಟರ್ ಎತ್ತರದ ಗುಡ್ಡಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದ್ದೂ ಸೇರಿದಂತೆ 2025ರಲ್ಲಿ ಪರಿಸರಕ್ಕೆ ಸಂಬಂಧಿಸಿದ ಬೆಳವಣಿಗೆಗಳಲ್ಲಿ ಬಹುತೇಕ ಸಮಾಧಾನವನ್ನೇನೂ ನೀಡಿಲ್ಲ.
ನೀವು ಹೊಸ Draft Notifications ಮತ್ತು ‘ಪುನರ್ವರ್ಗೀಕರಣ’ ಚಳವಳಿಯನ್ನೇ ಗಮನಿಸಿ. ಕೆಲವು ರಾಜ್ಯಗಳಲ್ಲಿ ಅರಾವಳಿ ಗಣಿಯ ಮಾದರಿಯನ್ನೇ ತುಸು ಮಾರ್ಪಡಿಸಿ ಅಮೂಲ್ಯ ಅರಣ್ಯ ಪ್ರದೇಶಗಳನ್ನೂ ‘ಕೃಷಿಭೂಮಿ’ ಅಥವಾ ‘ಅಭಿವೃದ್ಧಿಗೆ ಯೋಗ್ಯ ಭೂಮಿ’ ಎಂದು ವರ್ಗೀಕರಿಸುವ ಪ್ರಯತ್ನ ನಡೆದಿವೆ. ಸರ್ಕಾರಗಳ ಇಂಥ ನೀತಿ ಪರಿಸರದ ಮೌಲ್ಯಗಳನ್ನೇ ಬುಡಮೇಲು ಮಾಡುತ್ತಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಾಜ್ಯಗಳಲ್ಲಿ ಗಣಿಗಾರಿಕೆಗೆ ಮರು ಅನುಮತಿ ನೀಡುವ ಒತ್ತಡಗಳು ಹೆಚ್ಚಿವೆ. ಹಿಂದಿನ ಹಲವು ದಶಕಗಳಲ್ಲಿ ನಿಷೇಧಿಸಿದ ಪ್ರದೇಶಗಳಲ್ಲೇ ಮರುಗಣಿಗಾರಿಕೆ ಯೋಜನೆಗಳು ಪುನಃ ಚರ್ಚೆಯ ಮುನ್ನೆಲೆಗೆ ಬಂದಿವೆ. ಕೆಲವೆಡೆಗಳಲ್ಲಂತೂ ಶೇ 90ರವರೆಗಿನ ಅರಣ್ಯ ಭಾಗವನ್ನು ‘ಸಂರಕ್ಷಣೆಯಿಂದ ಹೊರಗಿಡುವ’ ಯತ್ನಗಳೂ ನಡೆದಿವೆ.
ಇದನ್ನು ಗಮನಿಸಿದಾಗ ಈ ದೇಶ ಆಳುವವರ ಪರಿಸರ ಧೋರಣೆಯ ಬಗೆಗೆ ಗಂಭೀರ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಸದ್ಯದ ಸನ್ನಿವೇಶದಲ್ಲಿ ವಾಯುಮಾಲಿನ್ಯಕ್ಕೆ ಪರಿಹಾರ ಹುಡುಕಬೇಕೋ ಅಥವಾ ಅರಾವಳಿಯಂಥ ಸಂಪತ್ತನ್ನು ನಾಶಗೊಳಿಸಿ ‘ಅಭಿವೃದ್ಧಿ’ಗೆ ಜಾಗ ಮಾಡಿಕೊಡಬೇಕೋ? ಉತ್ತರಿಸುವವರು ಬಹುತೇಕ ಮೌನಕ್ಕೆ ಶರಣಾಗಿದ್ದಾರೆ.
ಮಾಲಿನ್ಯದ ಮನೋಹರ ವರದಿ V/S ನೆಲದ ಸತ್ಯ
NCAP ವರದಿಗಳು ಸಾರುವ ಪ್ರಕಾರ PM2.5 ಸಾಂಧ್ರತೆಯ ದೂಳಿನ ಪ್ರಮಾಣವು ಶೇ 30–35ರಷ್ಟು ತಗ್ಗಿದೆ. ಇದನ್ನು ನಂಬಬಹುದಾದರೆ, ಇದು ಶ್ಲಾಘನೀಯ ಬೆಳವಣಿಗೆಯೇ ಸರಿ. ಆದರೆ ಅದೇ ಕ್ಷಣದಲ್ಲಿ ತಾಪವಿದ್ಯುತ್ ಕೇಂದ್ರಗಳು ನಿಯಮ ಉಲ್ಲಂಘಿಸುತ್ತಿರುವುದನ್ನೂ ನಾವು ಗಮನಿಸಬೇಕು. ಇನ್ನೊಂದೆಡೆ ದೇಶದ ಬಹುತೇಕ ಮಹಾನಗರಗಳಲ್ಲಿನ ರಸ್ತೆಯ ಧೂಳಿನ ಮಟ್ಟ ವಿಪರೀತ ಎನ್ನುವಷ್ಟು ಹೆಚ್ಚಿದೆ. ಕೈಗಾರಿಕೆಗಳು ಮಾಲಿನ್ಯ ಪರಿಶೀಲನೆಯಿಂದ ನುಣುಚಿಕೊಳ್ಳುತ್ತಿವೆ.
ಒಂದನ್ನು ನಾವು ನೆನಪಿಡಬೇಕು. ದೇಶದಲ್ಲಿ ವೃಕ್ಷಾರೋಪಣದ ಹೆಸರಿನಲ್ಲಿ ಮಳೆ ಬಿದ್ದಾಕ್ಷಣ ಒಂದಷ್ಟು ಸಸಿಗಳನ್ನು ನೆಲಕ್ಕೆ ಊರಿಬಿಟ್ಟರೆ ಪರಿಸರವನ್ನು ಸಂರಕ್ಷಿಸಿಬಿಟ್ಟಂತಾಗುವುದಿಲ್ಲ. ಗಿಡ ನೆಡುವುದು ಒಂದು ಯೋಜನೆಯಷ್ಟೇ; ಆದರೆ, ವಾಯುಮಾಲಿನ್ಯ ನಿವಾರಣೆ ಎಂಬುದು ರಾಜಕೀಯ ಇಚ್ಛಾಶಕ್ತಿ. ಹೀಗಾಗಿ ಮಾಲಿನ್ಯದಲ್ಲಿನ ಇಳಿಕೆ ಎಂಬುದನ್ನು ವಿಜ್ಞಾನಕ್ಕೆ ಅಳವಡಿಸಬೇಕೇ ಹೊರತು ಆಡಳಿತ ಪಕ್ಷಗಳ ಬ್ಯಾನರ್‌ಗಳಿಗಲ್ಲ.
ಇ-ತ್ಯಾಜ್ಯಕ್ಕೆ ಡಿಜಿಟಲ್ ನಿಯಮ, ನೆಲದಲ್ಲಿ ಕಸದ ಪರ್ವತ
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ EPR (Extended Producer Responsibility) ನಿಯಮಗಳನ್ನು ಬಲಪಡಿಸಲಾಗಿದೆ ಎಂಬುದೇನೋ ಸರಿ. ಆದರೆ ಅವು ‘ದೆಹಲಿಯ ವರದಿ‘ ಎಂಬಂತಾಗಿದೆ. ಕಾಗದದಲ್ಲಿ ಅದು ಪರಿಪೂರ್ಣ. ನೆಲದ ವಿಚಾರದಲ್ಲಿ ಮಾತ್ರ ನಾಪತ್ತೆ! ಬೆಂಗಳೂರು ಸೇರಿದಂತೆ ದೇಶದ ನಗರಗಳ ಕಸದ ಗುಡ್ಡಗಳು 2025ರಲ್ಲಿ ಹಿಂದೆಂದಿಗಿಂತಲೂ ಬೃಹದಾಕಾರವಾಗಿ ಬೆಳೆದು ನಿಂತಿವೆ. ಪ್ಲಾಸ್ಟಿಕ್ ತ್ಯಾಜ್ಯ ಶೇ 15ರಿಂ 20ಕ್ಕೆ ಏರಿಕೆಯಾಗಿದೆ. e-waste ಮರುಶೋಧನೆ ಇನ್ನೂ ಶೇ 20ರಿಂದ 25ರ ಮಟ್ಟದಲ್ಲೇ ಕುಳಿತಿದೆ. ಸರ್ಕಾರಗಳು ಹೇಳುವ ಪ್ರಕಾರ ‘EPR ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳುತ್ತಿವೆ’. ಹಾಗಾದರೆ ನಗರಗಳಲ್ಲಿ ಜನರು ನೋಡುತ್ತಿರುವ ವಾಸ್ತವ ಯಾವುದು? ಅದಕ್ಕೆ ಹೊಣೆ ಯಾರು?
ಗಂಗೆಗೇನೋ ನಮನ; ಉಳಿದವುಗಳದ್ದು ಯಾವ ಜಮಾನ?
ಇನ್ನು ಜಲದ ಪ್ರಶ್ನೆ ಬಂದರೆ ಕೇಂದ್ರ ಸರ್ಕಾರವು ಗಂಗಾ ನದಿ ಶುದ್ಧೀಕರಣಕ್ಕೆ ಸಂಬಂಧಿಸಿದ 'ನಮಾಮಿ ಗಂಗೆ 2.0' ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇದರಿಂದ ಗಂಗೆಯ ಕೆಲವು ಭಾಗಗಳಲ್ಲಿ ನೀರಿನ ಗುಣಮಟ್ಟ ಉತ್ತಮಗೊಂಡಿದೆ. ಸಂತಸವೇ. ಆದರೆ ಸೂರ್ಯನ ಬೆಳಕಲ್ಲಿ ಮಂಕಾದ ನಕ್ಷತ್ರಗಳಂತೆ ದೇಶದಲ್ಲಿನ ಇತರ ನದಿಗಳ ನೈಜ ಸಮಸ್ಯೆಗಳು ಗಂಗೆಯ ಹರಿವಿನ ಅಬ್ಬರದಲ್ಲಿ ಕಂದಿಹೋಗಿರುವುದು ಸತ್ಯ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಅನ್ವಯ ಗಂಗೆಯಂತೆ ಅಥವಾ ಅದಕ್ಕೂ ಹೆಚ್ಚು ಪ್ರಮಾಣದಲ್ಲಿ ದೇಶದ 350ಕ್ಕೂ ಹೆಚ್ಚು ನದಿಗಳ ನೀರು ‘ಅತಿದೂಷಿತ’ ವರ್ಗೀಕರಣಕ್ಕೆ ಒಳಪಟ್ಟಿವೆ. ರಾಷ್ಟ್ರದ ಶೇ 70ರಷ್ಟು ನಗರಗಳ ಒಳಚರಂಡಿ ಶುದ್ಧೀಕರಣ ಘಟಕಗಳು ಸಾಮರ್ಥ್ಯಕ್ಕಿಂತ ಕೆಳಮಟ್ಟದಲ್ಲಿವೆ. ಕರ್ನಾಟಕದ ಹಲವು ಜಿಲ್ಲೆಗಳೂ ಸೇರಿ ಭೂಗರ್ಭದ ನೀರು ವಂದೇ ಭಾರತ್ ರೈಲಿಗಿಂತ ವೇಗವಾಗಿ ಕುಸಿಯುತ್ತಿದೆ. ದೇಶವಿಂದು ಎದುರಿಸುತ್ತಿರುವುದು ನೀರಿನ ಕೊರತೆಯ ಸಮಸ್ಯೆ ಅಲ್ಲ; ವ್ಯವಸ್ಥೆಯ ನಿರ್ಲಕ್ಷ್ಯ.
ಅರಣ್ಯ, ಜೀವವೈವಿಧ್ಯ: ವರದಿ ಬೆಳೆದಿದೆ, ಕಾಡಲ್ಲ!
ಹಾಗಂತ ಅರಣ್ಯದ ವಿಷಯದಲ್ಲಿ ಏನೇನೂ ಆಗೇ ಇಲ್ಲ ಎಂದಲ್ಲ. ದೇಶದ ನೆಲದ ಮೇಲೆ ಒಂದಷ್ಟು ಹಸಿರು ಹಚ್ಚಡ ಹೆಚ್ಚಳವಾಗಿದ್ದು ಸತ್ಯ. Project Tiger, Big Cat Alliance ನಂಥ ದೀರ್ಘಕಾಲೀನ ಯೋಜನೆಗಳಲ್ಲಿ ಗಮನಾರ್ಹ ಸಾಧನೆ ಇದೆ. ಆದರೆ ವಾಸ್ತವದ ನೆಲೆಗಟ್ಟಿನಲ್ಲಿ ನೋಡಿದಾಗ, ನೆಲಮೂಲದ ಮೂಲಭೂತ ಸಮಸ್ಯೆಗಳು ಇನ್ನಷ್ಟು ಗಂಭೀರ ಸ್ವರೂಪವನ್ನು ಪಡೆದುಕೊಂಡಿವೆ.
ಮಾನವ–ವನ್ಯ ಜೀವಿಗಳ ನಡುವಿನ ಸಂಘರ್ಷಗಳು ಈ ವರ್ಷ ದ್ವಿಗುಣಗೊಂಡಿವೆ. ಇದಕ್ಕೆ ಕಾರಣ ಮತ್ತದೆ; ದೇಶದಲ್ಲಿ ಜೀವವೈವಿಧ್ಯ ಪ್ರದೇಶಗಳ ಪ್ರಮಾಣ ಕುಸಿಯುತ್ತಲೇ ಸಾಗಿದೆ. ಸಂರಕ್ಷಿತ ಅರಣ್ಯ, ಉದ್ಯಾನ ಪ್ರದೇಶಗಳ ಪಕ್ಕದಲ್ಲಿಯೇ ಎಗ್ಗು ಸಿಗ್ಗಿಲ್ಲದೇ ಅಭಿವೃದ್ಧಿ ಯೋಜನೆಗಳು ಹೆಚ್ಚಳಗೊಂಡು ಅಬ್ಬರಿಸುತ್ತಿವೆ. ಬಫರ್ ಝೋನ್ ಅತಿಕ್ರಮಣಕ್ಕೆ ಒಳಗಾಗುತ್ತಿದೆ. ಈ ನಿಟ್ಟಿನಲ್ಲಿ ಆಳುವವರ ಔದಾಸಿನ್ಯ ಬೇಸರದ ಸಂಗತಿ. ಉದಾಹರಣೆಗೆ, ಕರ್ನಾಟಕದಲ್ಲಿ ಹುಲಿಯ ಆವಾಸ ತಾಣಗಳು ಮತ್ತು ಕಾಡಿನ ಹಕ್ಕುಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ಧಾರಗಳವರೆಗೆ ಕಾಯಬೇಕಾಗಿ ಬಂದಿದ್ದು, Conservation ಹೋರಾಟಕ್ಕೆ ಒಂದು ರೀತಿಯಲ್ಲಿ ಹಿನ್ನಡೆಯೆಂದೇ ಪರಿಗಣಿಸಬೇಕು. ಹೀಗಾಗಿ ದಾಖಲೆಗಳಲ್ಲಿ, ಭಾಷಣಗಳಲ್ಲಿ ‘ಸಂರಕ್ಷಣೆ’ ಪದವನ್ನು ಯಥೇಚ್ಛ ಬಳಸುವುದರಿಂದ ಸಂರಕ್ಷಣೆ ಆಗುವುದಿಲ್ಲ ಎಂಬುದು ಮಕ್ಕಳಿಗೂ ತಿಳಿಯುವ ಸತ್ಯ.
ಅಭಿವೃದ್ಧಿ VS ಪರಿಸರ ಎಂಬ ಬಹು ಚರ್ಚಿತ ವಿಷಯದಲ್ಲಿ ಇಂದಿಗೂ ಸ್ಪಷ್ಟತೆ ಸಿಗುತ್ತಿಲ್ಲ. ಭಾರತದ ನಿಜವಾದ ಪರಿಸರದ ಭವಿಷ್ಯ ನಿಂತಿರುವುದು ಈ ರಾಷ್ಟ್ರದ ಅಭಿವೃದ್ಧಿ ನೀತಿಯ ಮೇಲೆ. ಬೇರೆ ಬೇರೆ ಕಾರಣಗಳಿಗಾಗಿ ಅರಣ್ಯ ಭೂಮಿ ಪರಿವರ್ತನೆಯಾಗುತ್ತಲೇ ಇದೆ. ಹಲವು ಯೋಜನೆಗಳ ವಿರುದ್ಧ ಹಸಿರು ನ್ಯಾಯಾಧಿಕರಣದ ಮೆಟ್ಟಿಲು ಹತ್ತಿದರೂ ಸೋಲು ಎದುರಾಗುತ್ತಿದೆ. ಅದಕ್ಕೆ ಕಾರಣ ಸಮರ್ಥ ದಾಖಲೆಗಳ ಸಲ್ಲಿಕೆಯ ಹಾಗೂ ದಾಖಲೆಗಳ ಕೊರತೆ. ಎಷ್ಟೋ ಬಾರಿ ಯೋಜನೆಗಳು ಸುದ್ದಿಯಾಗುವ ಮೊದಲೇ ಪರಿಸರ ಇಲಾಖೆಯ ನಿರಾಕ್ಷೇಪಣೆಯನ್ನು ಪಡೆದುಬಿಡುತ್ತಿರುವುದು ಸೋಜಿಗ. ಇನ್ನು ಸಂರಕ್ಷಿತ ಪ್ರದೇಶಗಳ ಮರುವರ್ಗೀಕರಣಕ್ಕೂ ಹೊಸ ಬಾಗಿಲು ತೆರೆದು ಕೊಡಲಾಗುತ್ತಿದೆ.
ಹೀಗಾಗಿ 2025ರ ಪರಿಸರದ ಅವಲೋಕನಕ್ಕೆ ಇಳಿದಾಗ ಧುತ್ತನೆ ಎದುರಾಗುವ ಪ್ರಶ್ನೆಗಳು– ಯಾವ ಸ್ವರೂಪದ ಅಭಿವೃದ್ಧಿ? ಯಾವ ದರದಲ್ಲಿ? ಮತ್ತು ಯಾರಿಗಾಗಿ? ಹೀಗಾಗಿ 2025ರ ಪರಿಸರ ಬೆಳವಣಿಗೆಗಳು ಎರಡು ಮುಖಗಳನ್ನು ಹೊಂದಿವೆ. ಮೊದಲನೆಯದ್ದು ಸರ್ಕಾರಿ ಪ್ರಕಟಣೆಗಳಲ್ಲಿ, ದಾಖಲೆಗಳಲ್ಲಿ ಹೊಳೆಯುವ ಹಸಿರು ಬಣ್ಣ. ಮತ್ತೊಂದು, ನಗರಗಳ ಮೇಲೆ ಕವಿದಿರುವ ಧೂಳು, ನದಿಗಳ ಒಡಲು ಸೇರಿರುವ ಕಸ ಮತ್ತು ಅರಾವಳಿಯಂಥ ಪಾರಂಪರಿಕ ಸಂಪತ್ತಿನ ಮೇಲೆ ತೂಗುತ್ತಿರುವ ಕತ್ತಿ.
ಹಾಗಾಗಿ ನಾವು ಕೇಳಿಕೊಳ್ಳಬೇಕಾದ ನಿಜವಾದ ಪ್ರಶ್ನೆ; ಪರಿಸರ ರಕ್ಷಿಸುವುದೇ ಈ ದೇಶದ ಮೊದಲ ಗುರಿಯೇ ಅಥವಾ ಅದರ ಪರವಾದ ಧ್ವನಿಯನ್ನು ‘ಮ್ಯಾನೇಜ್‘ ಮಾಡಲು ಬೇಕಾದ ‘ಪ್ರತಿಭೆ‘ಗಳನ್ನು ಹುಡುಕುವುದೇ?
ಏನೇ ಆದರೂ 2026ರಲ್ಲಾದರೂ ನಾವು ಆಯ್ಕೆ ಮಾಡಿಕೊಳ್ಳಲೇ ಬೇಕಾದ ದಾರಿ ಸ್ಪಷ್ಟವಾಗಿರಲಿ:
• ದೆಹಲಿ ಹಾಗೂ NCRನ ಏಕೈಕ ಶುದ್ಧ ಗಾಳಿಯ ಆಕರವಾದ ಅರಾವಳಿಯಂಥ ಪ್ರದೇಶವನ್ನಾದರೂ ಅಭಿವೃದ್ಧಿ, ಗಣಿ ಚಟುವಟಿಕೆಗಳಿಂದ ಮುಕ್ತವಾಗಿಡೋಣ.
• ಪರಿಸರಕ್ಕೆ ಮಾರಕವಾಗುವಂಥ ಯೋಜನೆಗಳಿಗೆ ಸಲೀಸಾಗಿ ಅನುಮತಿ ನೀಡುವಷ್ಟು ಸಂಬಂಧಿಸಿದ ಸಾಂಸ್ಥಿಕ ಸ್ವರೂಪಗಳನ್ನು ‘ರಾಜಕೀಯ ನೇಮಕ’ದ ಮೂಲಕ ದುರ್ಬಲಗೊಳಿಸುವುದನ್ನು ನಿಲ್ಲಿಸೋಣ.
• ನಗರಗಳ ಹಸಿರು ಪ್ರದೇಶಗಳನ್ನು ಇನ್ನಾದರೂ ಸಬಲ ಕಾನೂನಾತ್ಮಕ ಕ್ರಮಗಳಿಂದ ರಕ್ಷಿಸೋಣ.
• ನೀರು–ನೆಲ– ಗಾಳಿಯ ವಿಚಾರಗಳನ್ನು ಕ್ಷುಲ್ಲಕ ರಾಜಕೀಯ ಹಸ್ತಕ್ಷೇಪದಿಂದ ಹೊರಗಿಟ್ಟು, ವೈಜ್ಞಾನಿಕ ಕ್ರಮಗಳಿಂದ ಬಿಗು ಆಡಳಿತಕ್ಕೆ ಒಳಪಡಿಸೋಣ.
ಏಕೆಂದರೆ ಪರಿಸರ ತನ್ನ ಜೀವಕ್ಕಾಗಿ ಎಂದೂ ತಾನೇ ಹೋರಾಡುವುದಿಲ್ಲ. ನಾವು, ನಮ್ಮದೇ ವ್ಯವಸ್ಥೆ, ನಮ್ಮದೇ ನೀತಿಯ ಹೋರಾಡಬೇಕಾಗಿ ಬಂದಿರುವುದು ದುರಂತ. ಈ ನಿಟ್ಟಿನಲ್ಲಿ 2025ರ ವರ್ಷ ನಮ್ಮನ್ನು ಎಚ್ಚರಿಸಿದೆ. ಇನ್ನೂ ಕಾಲ ಮಿಂಚಿಲ್ಲ. ಕಾರ್ಯಕ್ಕಿಳಿಯೋಣ. ಆದರೆ ಎಂದಿನಂತೆ ಅಲ್ಲ: ಈ ಬಾರಿ ಕೈಗೊಳ್ಳುವ ಕ್ರಮಗಳು ಘೋಷಣೆಗಳಿಗಿಂತ ಬಲವಾಗಿ ಅನುಷ್ಠಾನಗೊಳ್ಳಲಿ. ಅದಿಲ್ಲದಿದ್ದರೆ 2070ರೊಳಗೆ Net Zero ವಾಯುಮಾಲಿನ್ಯದ ಸರ್ಕಾರದ ಗುರಿ ಬೆನ್ನಟ್ಟುವುದು ಅಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.