ಒಳ ಮೀಸಲಾತಿಗೆ ಸಂಬಂಧಿಸಿದ ‘ನ್ಯಾಯಮೂರ್ತಿ ನಾಗಮೋಹನದಾಸ್ ವರದಿ’ ಅಪಾರ ಶ್ರಮ ಹಾಗೂ ಕಾಳಜಿಯಿಂದ ಸಿದ್ಧಗೊಂಡಿದೆ. ಆದರೆ, ದೇಶದ ಕೆಲವು ರಾಜ್ಯಗಳಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳು ಎದುರಿಸುತ್ತಿರುವ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಸಮಿತಿ ಯೋಚಿಸಿದಂತಿಲ್ಲ. ತೆಲಂಗಾಣ ಮಾದರಿಯನ್ನು ಅನುಸರಿಸಿದ್ದರೂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದಾಗಿತ್ತು.
ಒಳಮೀಸಲಾತಿಗೆ ಸಂಬಂಧಿಸಿದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ಬಹು
ನಿರೀಕ್ಷಿತ ವರದಿ ರಾಜ್ಯ ಸರ್ಕಾರದ ಕೈ ಸೇರಿದೆ. ಕೆಲವರು ಹೇಳುವಂತೆ, ಈ ವರದಿ ಮೇಲ್ನೋಟಕ್ಕೆ ನ್ಯಾಯಮೂರ್ತಿ ಸದಾಶಿವ ವರದಿಯ ನಕಲಿನಂತೆ ಕಾಣಿಸಿದರೂ, ನಾಗಮೋಹನದಾಸ್ ಅವರು ಸಾಕಷ್ಟು ಶ್ರಮವಹಿಸಿ ಸೀಮಿತ ಸಮಯದಲ್ಲಿ ಪರಿಶಿಷ್ಟ ಜಾತಿಯಲ್ಲಿನ ಒಳಪಂಗಡಗಳನ್ನು ವಿಭಜಿಸಿ ಒಳಮೀಸಲಾತಿಯ ಶಿಫಾರಸುಗಳನ್ನು ಮಾಡಿದ್ದಾರೆ. ಈ ಪ್ರಕ್ರಿಯೆಗೆ ಭಾರತದ ಮೀಸಲಾತಿಯ ಇತಿಹಾಸದಿಂದ ಆರಂಭಿಸಿ, ಕರ್ನಾಟಕದ ಜಸ್ಟೀಸ್ ಲೆಸ್ಲಿ ಮಿಲ್ಲರ್ ವರದಿಯಿಂದ ಹಿಡಿದು, ನಂತರದ ಹಿಂದು
ಳಿದ ವರ್ಗಗಳ ಆಯೋಗಗಳ ವರದಿಗಳನ್ನು ಸಂಕ್ಷಿಪ್ತ ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ. ಅಂತೆಯೇ ಒಳಮೀಸಲಾತಿಗೆ ಸಂಬಂಧಿಸಿದಂತೆ ಸದಾಶಿವ ವರದಿ, ಮಾಜಿ ಸಚಿವ ಮಾಧುಸ್ವಾಮಿ ಸಮಿತಿಯ ವರದಿಯನ್ನೂ ಗಂಭೀರವಾಗಿ ಪರಿಶೀಲಿಸಲಾಗಿದೆ.
ನಾಗಮೋಹನದಾಸ್ ವರದಿಯನ್ನು ವಿಸ್ತೃತ ಚರ್ಚೆಗೊಳಪಡಿಸಲು ಅನುಕೂಲ ಆಗಲೆಂದು ಈ ಬರಹದಲ್ಲಿ ಕೆಲವು ಪ್ರಶ್ನೆಗಳನ್ನೆತ್ತಲಾಗಿದೆ.
ವರದಿಯನ್ನು ಏಳು ಭಾಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಮೂರು ಭಾಗಗಳನ್ನು ಪ್ರಾಥಮಿಕ ಅಂಶಗಳೆಂದು ಕೈಬಿಟ್ಟರೂ, ಕಡೆಯ ನಾಲ್ಕು ಭಾಗಗಳು ಗಂಭೀರವಾಗಿ ಪರಿಗಣಿಸಬೇಕಾದವು. ಆ ಭಾಗಗಳಲ್ಲಿ, ಸಮಗ್ರ ಸಮೀಕ್ಷೆಯ ಮುಖ್ಯಾಂಶಗಳಿಂದ ಹಿಡಿದು, ನಾಮನಿರ್ದೇಶನದಲ್ಲಿ ಪ್ರಾತಿನಿಧ್ಯದ ಅವಶ್ಯಕತೆ, ಹಿಂದುಳಿದಿರುವಿಕೆಯ ಮಾನದಂಡಗಳು, ಪರಿಶಿಷ್ಟ ಜಾತಿಗಳ ವರ್ಗೀಕರಣ, ಮೀಸಲಾತಿ– ಆದ್ಯತೆಯ ಮೇಲೆ ಹಂಚಿಕೆ ಮತ್ತು ಸಮಿತಿಯ ಶಿಫಾರಸುಗಳಿವೆ.
ಒಳಮೀಸಲಾತಿ ಕುರಿತು ಜಾತಿ, ಉಪಜಾತಿಗಳ ಒಳವರ್ಗೀಕರಣದ ಪಟ್ಟಿಯನ್ನು ನೀಡುತ್ತಾ ವೈವಿಧ್ಯಮಯ (ಹೆಟರೊಜೀನಿಯಸ್) ಮತ್ತು ಏಕರೂಪದ (ಹೋಮೊಜೀನಿಯಸ್) ಜಾತಿಗಳ ಪಂಗಡಗಳನ್ನು ವಿಂಗಡಿಸಿ, ಅವುಗಳ ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಪ್ರಾತಿನಿಧ್ಯದ ಅಸಮಾನತೆಗಳನ್ನು ಬೇರೆ ಬೇರೆ ಮೂಲಗಳಿಂದ ಗುರುತಿಸಲು ವರದಿ ಪ್ರಯತ್ನಿಸಿದೆ. ಶಿಕ್ಷಣದಲ್ಲಿ ಹಿಂದುಳಿದಿರುವಿಕೆಯನ್ನು ಕೆಲವು ಕೋಷ್ಟಕಗಳ ಮೂಲಕ ಕಲೆ ಹಾಕಲಾಗಿದೆ. ಅಂತೆಯೇ ಉದ್ಯೋಗದ ಪ್ರಾತಿನಿಧ್ಯವನ್ನು ‘ರತ್ನಪ್ರಭ ಸಮಿತಿ’ಯ ವರದಿ ಆಧರಿಸಿ ಮಾಹಿತಿ ಕಲೆ ಹಾಕಲಾಗಿದೆ. ಆದರೆ, ಇಲ್ಲಿ ಅಗತ್ಯವಾಗಿ ಪಡೆಯಲೇಬೇಕಾದುದು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಹಿತಿ. ಅದನ್ನು ಪಡೆದಂತೆ ಎಲ್ಲಿಯೂ ಕಾಣುವುದಿಲ್ಲ.
ಕರ್ನಾಟಕ ಲೋಕಸೇವಾ ಆಯೋಗ ಆರಂಭವಾಗಿದ್ದು 1951ರಲ್ಲಿ. ಇಲ್ಲಿಯವರೆಗೂ ಗೆಜೆಟೆಡ್ (ಕೆಎಎಸ್) ಮತ್ತು ನಾನ್ ಗೆಜೆಟೆಡ್ ವಿಭಾಗಗಳಲ್ಲಿ ಅದೆಷ್ಟು ಲಕ್ಷ ಉದ್ಯೋಗಗಳ ನೇಮಕಾತಿ ಲೋಕಸೇವಾ ಆಯೋಗದಿಂದ ನಡೆದಿರಬಹುದು. ಆ ನೇಮಕಗಳಲ್ಲಿ ಮೀಸಲಾತಿಯ ಹುದ್ದೆಗಳೆಷ್ಟು? ಯಾವ ಯಾವ ಜಾತಿಗೆ ಎಷ್ಟೆಷ್ಟು ಹುದ್ದೆಗಳು ಸಿಕ್ಕಿವೆ? ಅದರಲ್ಲೂ, ಹೆಚ್ಚು ಪ್ರಾತಿನಿಧ್ಯ ಪಡೆದ ಜಾತಿಗಳೆಷ್ಟು ಮತ್ತು ಕಡಿಮೆ ಆದ್ಯತೆ ಪಡೆದ ಅಥವಾ ಪಡೆಯದೆಯೇ ಇರುವ ಜಾತಿಗಳೆಷ್ಟು ಎನ್ನುವುದು ಒಳಮೀಸಲಾತಿ ನಿರ್ಧರಿಸಲು ಇಟ್ಟುಕೊಳ್ಳಲೇಬೇಕಾದ ಅಗತ್ಯ ಮಾನದಂಡ ಅಲ್ಲವೇ? ಇಂತಹ ಅತ್ಯಗತ್ಯ ಅಂಕಿಅಂಶವನ್ನು ಕೈಬಿಟ್ಟು ಒಳಮೀಸಲಾತಿ ನೀಡಲು ಹೊರಟಿರುವುದು ಗಂಭೀರ ಲೋಪ ಹಾಗೂ ಅವೈಜ್ಞಾನಿಕವಾದ ಪ್ರಕ್ರಿಯೆ ಅಲ್ಲವೇ?
ಮತ್ತೊಂದು ಮೂಲದಿಂದ ಪಡೆಯುವ ಮಾಹಿತಿಯನ್ನು ಆಯೋಗಗಳ ವರದಿಗಳ ಪರಿಭಾಷೆಯಲ್ಲಿ ‘ದ್ವಿತೀಯ ಮೂಲದ ಮಾಹಿತಿ’ ಎನ್ನುತ್ತೇವೆ. ಪ್ರಾಥಮಿಕ ಮಾಹಿತಿ ಪಡೆದ ಅಂಕಿಅಂಶವನ್ನು ದ್ವಿತೀಯ ಮೂಲದ ಮಾಹಿತಿಯೊಂದಿಗೆ ಹೋಲಿಸಿದಾಗಷ್ಟೇ ನಿಖರವಾಗಿ ಯಾವ ಯಾವ ಜಾತಿಗಳಿಗೆ ಎಷ್ಟೆಷ್ಟು ಪ್ರಾತಿನಿಧ್ಯ ದೊರೆತಿದೆ ಎಂಬ ಸ್ಪಷ್ಟ ಮಾಹಿತಿ ಸಿಗುವುದು. ಈ ಲೋಪದ ಕಾರಣಕ್ಕೇ ಸದರಿ ವರದಿಯನ್ನು ಯಾರಾದರೂ ನ್ಯಾಯಾಲಯಗಳ ಮುಂದೆ ಪ್ರಶ್ನಿಸುವ ಅವಕಾಶ ಇದ್ದೇ ಇದೆ.
ಸಮಿತಿ ಮಾಡಿರುವ ಶಿಫಾರಸುಗಳನ್ನು ಗಮನಿಸುವುದಾದರೆ, ಆ ವಿಭಾಗದಲ್ಲಿ ಐದು ಪ್ರವರ್ಗಗಳನ್ನು
ಮಾಡಲಾಗಿದೆ. ‘ಎ’ ಪ್ರವರ್ಗದಲ್ಲಿ ಅಂದಾಜು 90 ಸಣ್ಣಪುಟ್ಟ ಅಲೆಮಾರಿ ಸಮುದಾಯಗಳನ್ನು ಸೇರಿಸಿ, ಅವರ ಸಂಖ್ಯೆ ಶೇ 4.97ರಷ್ಟು ಎಂದು ಪರಿಗಣಿಸಲಾಗಿದೆ ಹಾಗೂ ಶೇ 1ರಷ್ಟು ಮೀಸಲಾತಿ ನೀಡಲಾಗಿದೆ. ಪ್ರವರ್ಗ ‘ಬಿ’ ಅಡಿಯಲ್ಲಿ ಮಾದಿಗ ಮತ್ತಿತರ ಅಧೀನ ಜಾತಿಗಳನ್ನು ಸೇರಿಸಿ, ಅವರ ಶೇಕಡವಾರು ಪ್ರಮಾಣ 34.91ರಷ್ಟು ಎಂದು ಪರಿಗಣಿಸಲಾಗಿದೆ ಹಾಗೂ ಅವರಿಗೆ ಶೇ 6ರಷ್ಟು ಮೀಸಲಾತಿ ನೀಡಲಾಗಿದೆ. ಪ್ರವರ್ಗ ‘ಸಿ’ಯಲ್ಲಿ ಹೊಲೆಯ ಮತ್ತಿತರ ಸಮಾನಾಂತರ ಜಾತಿಗಳನ್ನು ಸೇರಿಸಿ, ಅವರ ಪ್ರಮಾಣವನ್ನು ಶೇ 28.53ರಷ್ಟು ಎಂದು ಗುರ್ತಿಸಿ, ಶೇ 5ರಷ್ಟು ಮೀಸಲಾತಿ ಒದಗಿಸಲಾಗಿದೆ.
‘ಡಿ’ ಪ್ರವರ್ಗದಲ್ಲಿ ಸ್ಪೃಶ್ಯ ಜಾತಿಗಳು ಶೇ 26.97ರಷ್ಟಿದ್ದು, ಅವುಗಳಿಗೆ ಶೇ 4ರಷ್ಟು ಮೀಸಲಾತಿ ಕಲ್ಪಿಸ
ಲಾಗಿದೆ. ಆಶ್ಚರ್ಯವೆಂದರೆ, ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರರ ಜನಸಂಖ್ಯೆ ಶೇ 4.52ರಷ್ಟು ಎಂದು ಪರಿಗಣಿಸಿ, ‘ಇ’ ಪ್ರವರ್ಗದಲ್ಲಿ ಗುರ್ತಿಸಲಾಗಿರುವ ಅವರಿಗೆ ಶೇ 1ರಷ್ಟು ಮೀಸಲಾತಿ ನೀಡಲಾಗಿದೆ. ಪ್ರವರ್ಗ ‘ಬಿ’ ಮತ್ತು ‘ಸಿ’ನಲ್ಲಿ ಇರುವ ಜಾತಿಗಳೇ ಇಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಆಗಿರುವುದರಿಂದ ಸದರಿ ಜಾತಿಗಳು ತಮ್ಮ ಮೂಲ ಜಾತಿ ಮತ್ತು ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ– ಎರಡೂ ಕಡೆ ಮೀಸಲಾತಿ ಪಡೆಯುವ ಸಾಧ್ಯತೆಯಿದೆ; ಅವುಗಳಿಗೆ ಮೀಸಲಾತಿ ಪ್ರಮಾಣವೂ ಹೆಚ್ಚಲಿದೆ.
ಪ್ರವರ್ಗ ‘ಇ’ ಅನ್ನು ಸೃಷ್ಟಿಸಿರುವುದು ಅಷ್ಟೇನೂ ಸಮರ್ಥನೀಯ ಎನಿಸುವುದಿಲ್ಲ. ಹಾಗೆ ನೋಡಿದರೆ, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರಗಳು ನಿರ್ದಿಷ್ಟವಾಗಿ ಜಾತಿಗಳೇ ಅಲ್ಲ. ಅವು ಗುಂಪುಗಳಷ್ಟೇ. ಇದಕ್ಕೆ ಬದಲಾಗಿ ಪ್ರವರ್ಗ ‘ಎ’ನಲ್ಲಿರುವ, ಈವರೆಗೂ ಪ್ರಾತಿನಿಧ್ಯವನ್ನೇ ಪಡೆಯದ ಅಲೆಮಾರಿ ಜಾತಿಗಳಿಗೆ ಶೇ 1ರಷ್ಟು ಮೀಸಲಾತಿ ಹೆಚ್ಚಿಸಬಹುದಿತ್ತು.
ಗಮನಿಸಲೇಬೇಕಾದ ಬಹುಮುಖ್ಯವಾದ ಮತ್ತೊಂದು ಸಂಗತಿ, ಬೇಡ ಜಂಗಮ/ ಬುಡ್ಗ ಜಂಗಮದ ಸಮಸ್ಯೆ. ವರದಿಯ 130ನೇ ಪುಟದಲ್ಲಿ ಇದನ್ನು ಚರ್ಚಿಸಲಾಗಿದೆ. ವೀರಶೈವರು ಬೇಡ/ ಬುಡ್ಗ ಜಂಗಮ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎನ್ನುವ ಕಾರಣಕ್ಕೆ ಬೇಡ/ ಬುಡ್ಗ ಜಂಗಮರ ಜನಸಂಖ್ಯೆ ಅತ್ಯಧಿಕವಾಗಿದೆ ಎಂದು, ಇವರ ಜನಸಂಖ್ಯೆಯನ್ನು 3,22,049 ಇದ್ದುದನ್ನು 1,44,387ಕ್ಕೆ ಮಾತ್ರ ಗಣನೆಗೆ ತೆಗೆದುಕೊಂಡಿದ್ದಾರೆ. ಯಾವ ಮಾನದಂಡ ಅನುಸರಿಸಿ ಈ ಬದಲಾವಣೆ ಮಾಡಲಾಗಿದೆಯೋ ಗೊತ್ತಿಲ್ಲ. ಆದರೆ, ಅಸಲಿ ಬೇಡ/ ಬುಡ್ಗ ಜಂಗಮರ ಜನಸಂಖ್ಯೆ ಇರುವುದು ಬರೀ ಕೆಲವು ಸಾವಿರಗಳಷ್ಟೇ. ಮಿಕ್ಕಂತೆ, ಇಲ್ಲಿ ಇರುವವರು ನಕಲಿ ಸರ್ಟಿಫಿಕೇಟ್ ಪಡೆದ ವೀರಶೈವರೇ. ಹಾಗಾಗಿ, ಇಷ್ಟು ದೊಡ್ಡ ಪ್ರಮಾಣದ ವೀರಶೈವರನ್ನು ಬೇರ್ಪಡಿಸದೆ ಬೇಡ/ ಬುಡ್ಗ ಜಂಗಮರನ್ನು ಪ್ರವರ್ಗ ‘ಎ’ಗೆ ಹಾಕಿದರೆ, ಅಲ್ಲಿರುವ ಬರೀ ನೂರು, ಸಾವಿರಗಳ ಪ್ರಮಾಣದ ಸೂಕ್ಷ್ಮ ಅತಿಸೂಕ್ಷ್ಮ ತಬ್ಬಲಿ ಸಮುದಾಯಗಳ ಗತಿ ಏನಾಗಬೇಕು? ಕೇವಲ ಸಾವಿರಗಳಷ್ಟಿರುವ ಅಸಲಿ ಬೇಡ/ ಬುಡ್ಗ ಜಂಗಮರನ್ನಷ್ಟೇ ಈ ಗುಂಪಿಗೆ ಹಾಕಿದ್ದರೆ ತೊಂದರೆ ಇರಲಿಲ್ಲ.
ಮೀಸಲಾತಿ ನೀಡುವಾಗ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ನೀಡಬಹುದೇನೊ. ಆದರೆ, ಒಳ ಮೀಸಲಾತಿ ನೀಡುವಾಗಲೂ ಜಾತಿ ಜನಸಂಖ್ಯೆಯನ್ನೇ ಪರಿಗಣಿಸಬೇಕೆ ಎನ್ನುವ ಬಹು ಮುಖ್ಯವಾದ ಪ್ರಶ್ನೆಯನ್ನೂ ನಾವಿಲ್ಲಿ ಕೇಳಿಕೊಳ್ಳಬೇಕು. ಒಳ ಮೀಸಲಾತಿ ಸಂದರ್ಭದಲ್ಲಿ ನಾವು ಪ್ರಮುಖವಾಗಿ ನೋಡ
ಬೇಕಾದುದು ಜಾತಿ ಪ್ರಾತಿನಿಧ್ಯವನ್ನು ಅಲ್ಲವೇ?
ಏನೆಲ್ಲ ಗೊಂದಲಗಳ ನಂತರ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ 15ರಿಂದ 17ಕ್ಕೆ ಏರಿಸ
ಲಾಗಿದೆ. ಬಿಹಾರದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾತಿಯನ್ನು 15ರಿಂದ 20ಕ್ಕೆ ಏರಿಸಿದ ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟಿನ ಮುಂದಿದೆ. ಅದೇ ರೀತಿ, ರಾಜಸ್ಥಾನ ಮತ್ತು ಮರಾಠ ಪ್ರಕರಣದಲ್ಲೂ
ಸುಪ್ರೀಂ ಕೋರ್ಟ್, ಶೇ 17ರಷ್ಟು ಮೀಸಲಾತಿ ಏರಿಸಲು ಇನ್ನೂ ಒಪ್ಪಿಲ್ಲ.
ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ– ಪರಿಶಿಷ್ಟ ಜಾತಿಗೆ ಶೇ 15ರಿಂದ 17ಕ್ಕೆ ಮೀಸಲಾತಿ ಹೆಚ್ಚಿಸಿದ್ದು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 3ರಿಂದ 7ಕ್ಕೆ ಏರಿಸಿದ್ದನ್ನು ಅವರದೇ ಪಕ್ಷದ ಕೇಂದ್ರ ಸರ್ಕಾರಕ್ಕೆ, ಸಂವಿಧಾನದ 9ನೇ ಶೆಡ್ಯೂಲ್ ಅನ್ವಯ ಪರಿಗಣಿಸಬೇಕೆಂದು 2023ರ ಮಾರ್ಚ್ 24ರಂದು ಕಳುಹಿಸಿದ ಪ್ರಸ್ತಾವ ಇನ್ನೂ ದೂಳು ತಿನ್ನುತ್ತಿದೆ. ಈಚೆಗೆ, ಇದೇ ಶೇ 15 ಮತ್ತು ಶೇ 17ರ ಗೊಂದಲದ ಕುರಿತ ಪ್ರಕರಣವೊಂದು ಕೆಎಟಿಯಿಂದ ಹೈಕೋರ್ಟ್‌ಗೆ ಅಪೀಲು ಹೋಗಿ ತಡೆಯಾಜ್ಞೆ ಪಡೆದು ಕುಂತಿದೆ! ಈ ಎಲ್ಲಾ ಕಾನೂನಿನ ತೊಡಕುಗಳ ಹಿನ್ನೆಲೆಯಲ್ಲಿ ಸದರಿ ವರದಿಯನ್ನು ಜಾರಿಗೆ ತರಲು ಸಾಧ್ಯವೆ? ಶೇ 17ಕ್ಕೆ ಮೀಸಲಾತಿಯನ್ನು ಏರಿಸುವಾಗ ನ್ಯಾಯಮೂರ್ತಿಗಳು
ಇಷ್ಟೆಲ್ಲ ಕಾನೂನಾತ್ಮಕ ಅಡ್ಡಿ ಆತಂಕಗಳ ಕುರಿತು ಅಗತ್ಯವಾಗಿ ಸಮಾಲೋಚನೆ ನಡೆಸಬೇಕಿತ್ತಲ್ಲವೆ?
ಶೇ 50ರಷ್ಟು ಮೀಸಲಾತಿ ಮಿತಿ ಮೀರಿದ ಅನೇಕ ರಾಜ್ಯಗಳು, ಸುಪ್ರೀಂ ಕೋರ್ಟಿನ ತೀರ್ಪಿಗಾಗಿ ಕಾಯುತ್ತಿವೆ. ಆದರೆ, ತೆಲಂಗಾಣದ ಒಳ ಮೀಸಲಾತಿ ವರದಿ ಮಾತ್ರ, ದೇಶದಲ್ಲೇ ಮೊಟ್ಟಮೊದಲು ಜಾರಿ
ಗೊಂಡ ಒಳ ಮೀಸಲಾತಿ ವರದಿಯಾಗಿ ಅನುಷ್ಠಾನಕ್ಕೆ ಬಂದಿದೆ. ಅದಕ್ಕೆ ಪ್ರಮುಖ ಕಾರಣ, ಅವರು ಕಾನೂನಾತ್ಮಕ ಅರಿವಿನಿಂದ ಶೇ 50ರ ಮಿತಿ ಮೀರದಿರುವುದು.
ನಮ್ಮಲ್ಲೂ ಸದರಿ ವರದಿಯನ್ನು ಶೇ 15ಕ್ಕೆ ಸೀಮಿತಗೊಳಿಸಿ ಒಳ ಮೀಸಲಾತಿ ನೀಡಿದ್ದರೆ ಅನುಷ್ಠಾನದ ಸಾಧ್ಯತೆ ಇತ್ತು. ಅಂತೆಯೇ, ಮುಂದೆಂದಾದರೂ ನ್ಯಾಯಾಲಯ ಶೇ 17ಕ್ಕೆ ಮೀಸಲಾತಿಯನ್ನು ಹೆಚ್ಚಿಸಿದ ಪಕ್ಷದಲ್ಲಿ, ನಾವೂ ಆ ಸಂದರ್ಭದಲ್ಲಿ ನಮ್ಮ ಆಶಯವನ್ನು ತಿದ್ದುಪಡಿ ಮಾಡಿಕೊಳ್ಳಬಹುದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.