
ಮಾಧವ ಗಾಡ್ಗೀಳ್ ಅವರೊಂದಿಗೆ ವಿದ್ಯಾರ್ಥಿಗಳ ಸಮಾಲೋಚನೆ
ಪಿವಿ ಆರ್ಕೈವ್ಸ್
ಮಾಧವ ಗಾಡ್ಗೀಳ್ ವೃತ್ತಿಜೀವನದಲ್ಲಿ ಕರ್ನಾಟಕದ ಭೂಪ್ರದೇಶವನ್ನು ಸುತ್ತಿದಷ್ಟು ಸಾದ್ಯಂತವಾಗಿ ಬೇರೆ ಭೌಗೋಳಿಕ ಪ್ರಾಂತಗಳನ್ನು ಸುತ್ತಿರಲಿಲ್ಲ. ಉತ್ತರ ಕನ್ನಡದ ಶಿರಸಿ, ಕುಮಟಾಗಳಲ್ಲಂತೂ ಅವರ ಗ್ರಾಮ ವಾಸ್ತವ್ಯದ ವೈಖರಿಯನ್ನು ಈಗಲೂ ಅನೇಕರು ನೆನಪಿಸಿಕೊಳ್ಳುತ್ತಾರೆ.
ʻಅವರು ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ ಹೌದನ್ರಾ? ನಮ್ಮೂರಿಗೆ ಬಂದಾಗ ಲುಂಗಿ ಸುತ್ತಿಕೊಂಡು, ಜಮಖಾನೆಯ ಮೇಲೆ ಮಲಗಿ ಎದ್ದು, ಹಂಡೆಮಸಿಯಲ್ಲಿ ಹಲ್ಲುಜ್ಜುತ್ತ, ಮುಖಕ್ಕೆ ಚೂರು ಸಾಬೂನನ್ನು ಒರೆಸಿಕೊಂಡು ಬಚ್ಚಲಕಲ್ಲಿನ ಗೋಡೆಗೆ ಅಂಟಿಸಿದ ಎರಡಿಂಚು ಅಗಲದ ಕನ್ನಡಿಯಲ್ಲಿ ಶೇವ್ ಮಾಡಿಕೊಳ್ಳುತ್ತ ನಮ್ಮಂತೆಯೇ ಓಡಾಡುತ್ತಿದ್ದ ಅವರು ವಿಜ್ಞಾನಿ ಅಂತ ಅನ್ನುಸ್ತಾನೇ ಇರಲಿಲ್ಲʼ ಎಂದು ಹೇಳಿದವರಿದ್ದಾರೆ.
ಕರ್ನಾಟಕದ ಜನರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವಲ್ಲಿ ಅವರ ಪಾತ್ರ ಪ್ರಖರವಾಗಿದೆ. 1980ರ ದಶಕದ ಆರಂಭದಲ್ಲಿ ಪರಿಸರ ಜಾಗೃತಿ ಆಗತಾನೇ ಮೂಡುತ್ತಿದ್ದಾಗ ದೊಡ್ಡ ಅಣೆಕಟ್ಟುಗಳ ಸಾಧಕ ಬಾಧಕಗಳ ಕುರಿತು ಶಿರಸಿಯಲ್ಲಿ ದೇಶದ ಮೊದಲ ರಾಷ್ಟ್ರಮಟ್ಟದ ಪರಿಸರ ಸಮ್ಮೇಳನವನ್ನು ಆಯೋಜಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ನಮ್ಮ ವನಸಿರಿಯ, ಗಿರಿತೊರೆಗಳ ಜೀವಜಾಲದ ವೈಜ್ಞಾನಿಕ ಮಹತ್ವವನ್ನು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸುವ ಮುನ್ನ ಇಲ್ಲಿನ ಮಾಲಿನ್ಯ ನಿಯಂತ್ರಣ ಮಂಡಳಿಯವರು ಹೊರ ತರುತ್ತಿದ್ದ ʻಕರ್ನಾಟಕ ಪರಿಸರ ಪರಿಸ್ಥಿತಿ ವರದಿʼಯ ಐದು ಸಂಪುಟಗಳಲ್ಲಿ ಅವರು ಪ್ರಕಟಿಸಿದ್ದಾರೆ.
ನವಜಾತ ಪರಿಸರ ಸಂಸ್ಥೆಗಳು ಗಾಂಧೀಭವನದಲ್ಲಿ ಸಭೆ ಸೇರಿ ಹೊಸ ಚಳವಳಿಗಳಿಗೆ ರೂಪು ಕೊಡುವಾಗಿನ ಚರ್ಚೆಗಳಲ್ಲಿ ಅವರು ಭಾಗವಹಿಸಿ ನಮಗೆ ಕನ್ನಡ ನಾಡಿನ ಇಕಾಲಜಿ ಕುರಿತ ಅನೇಕ ಬಗೆಯ ವೈಜ್ಞಾನಿಕ ಒಳಸುಳಿವುಗಳನ್ನು ನೀಡಿದ್ದಾರೆ. ಬೆಂಗಳೂರಿನ ಆಕಾಶವಾಣಿಗೆ ಗಾಡ್ಗೀಳ್ ಅವರು ಕಾಲಕಾಲಕ್ಕೆ ನೀಡುತ್ತಿದ್ದ ಸಂದರ್ಶನಗಳು ನಾಡಿನ ಎಲ್ಲ ಬಾನುಲಿ ಕೇಂದ್ರಗಳಲ್ಲೂ ಪ್ರಸಾರವಾಗುತ್ತಿದ್ದವು. ಕರ್ನಾಟಕದ ಅರಣ್ಯ, ಜಲಚರ, ಪಶುಪಕ್ಷಿಗಳ ಜೀವಿವೈವಿಧ್ಯ ಗಣನೀಯವಾಗಿ ಕಡಿಮೆ ಆಗುತ್ತಿರುವ ಬಗ್ಗೆ ಅವರ ಸರಣಿ ಲೇಖನಗಳು 90ರ ದಶಕದಲ್ಲಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿವೆ.
ಪ್ರೊಫೆಸರ್ ಮಾಧವ ಗಾಡ್ಗೀಳರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪಡೆದ ಅನೇಕ ಸಂಶೋಧಕರು ಕನ್ನಡ ನಾಡಿನ ಜೀವಜಾಲದ ವಿಧವಿಧದ ಕೊಂಡಿಗಳ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಕೊಂಡಾಡಿದ್ದಾರೆ. ಅವರಿಂದಾಗಿಯೇ ಬೆಳಕಿಗೆ ಬಂದ ಕುಮಟಾ ಪಟ್ಟಣದ ಹೊರವಲಯದ ‘ಹಳಕಾರ್ ಜನಪೋಷಿತ ಅರಣ್ಯ’ ಇದೇ ಕನ್ನಡ ಆವೃತ್ತಿಯ ಬಿಡುಗಡೆಯ ಸಂದರ್ಭದಲ್ಲಿ ನೂರನೆಯ ವರ್ಷವನ್ನು ಆಚರಿಸಿಕೊಳ್ಳುತ್ತಿದೆ. ಅವರು ಆಳವಾಗಿ ಅಧ್ಯಯನ ನಡೆಸಿದ ಅಘನಾಶಿನಿ ಅಳಿವೆಗೆ ಇದೇ ವರ್ಷ ʻರಾಮಸಾರ್ ತಾಣʼ ಎಂಬ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ.
ಇವೆಲ್ಲ ಸಂಭ್ರಮದ ಜೊತೆಜೊತೆಗೇ ಇನ್ನೊಂದು ತುಸು ವಿಷಾದದ ಸಂಗತಿಯನ್ನೂ ಇಲ್ಲಿ ದಾಖಲಿಸಬೇಕಾಗಿದೆ. ಪಶ್ಚಿಮ ಘಟ್ಟಗಳ ಅಪೂರ್ವ ಸಂಪತ್ತನ್ನು ಇನ್ನೂ ಅನೇಕ ಶತಮಾನಗಳವರೆಗೆ ಜೋಪಾನವಾಗಿ ಕಾಯ್ದಿರಿಸಕೊಳ್ಳಬೇಕೆಂಬ ಆಶಯದೊಂದಿಗೆ ಪ್ರೊ. ಮಾಧವ ಗಾಡ್ಗೀಳ್ ಅವರ ಅಧ್ಯಕ್ಷತೆಯಲ್ಲಿ ಪ್ರಕಟವಾದ ಶಿಫಾರಸುಗಳು ನಮ್ಮ ನಾಡಿನಲ್ಲೇ ತೀವ್ರ ಟೀಕೆಗೆ, ಆಕ್ಷೇಪಣೆಗೆ ಕಾರಣವಾಗಿದೆ. ಹಳ್ಳಿ ಹಳ್ಳಿಗಳಲ್ಲೂ ಗಾಡ್ಗೀಳರ ಹೆಸರು ಅನಪೇಕ್ಷಿತ ಕಾರಣಗಳಿಂದಾಗಿ ಪರಿಚಿತವಾಗಿದೆ. ತಪ್ಪು ಗ್ರಹಿಕೆ, ಸ್ವಾರ್ಥಾಧರಿತ ಅಪಪ್ರಚಾರ ಹಾಗೂ ರಾಜಕೀಯದ ಸುಳಿಗಳಿಂದಾಗಿ ಆ ವರದಿಯ ಪ್ರಾಮಾಣಿಕತೆ ಮತ್ತು ಅದರಲ್ಲಿನ ದೂರದರ್ಶಿತ್ವವನ್ನು ಹೊಸಕಿ ಹಾಕುವಷ್ಟರಮಟ್ಟಿಗೆ ಹೋಗಿದ್ದು ಕನ್ನಡದ ಅಸ್ಮಿತೆಗೆ ಹೆಮ್ಮೆ ತರುವಂಥದ್ದೇನಲ್ಲ. ಅಂಥ ಅವಮಾನಗಳನ್ನು ತಾವೊಬ್ಬರೇ ಅನುಭವಿಸಿದ್ದ ಪ್ರೊ. ಗಾಡ್ಗೀಳರು ತಮ್ಮ ‘ಏರುಘಟ್ಟದ ನಡಿಗೆ‘ ಆತ್ಮಕಥೆಯಲ್ಲಿ ಅಪ್ಪಿತಪ್ಪಿ ಕೂಡ ಕನ್ನಡ ನಾಡಿನ ಜನರ ಬಗ್ಗೆ ಕಹಿ ಭಾವನೆಯನ್ನು ವ್ಯಕ್ತಪಡಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.