
ಮೈಸೂರು ಮಹಾರಾಜ ಕಾಲೇಜು
ಕನ್ನಡ ಎಂ.ಎ ಎಂದರೆ ಮೈಸೂರಿನ ಹೆಮ್ಮೆ. ಏಕೆಂದರೆ ಮೊದಲಿಗೆ ಈ ಕೋರ್ಸ್ ಆರಂಭವಾಗಿದ್ದೇ ಮೈಸೂರಿನಲ್ಲಿ. ಒಂದು ಶತಮಾನ ಮುಗಿಸಿ, ಮತ್ತೆ ಅಮೃತ ಮಹೋತ್ಸವದತ್ತ ಕಾಲಿಟ್ಟಿರುವ ಮಹಾರಾಜ ಕಾಲೇಜಿನಲ್ಲಿ. ಈಗ ಈ ಕೋರ್ಸ್‌ಗೆ ಭರ್ತಿ 99 ವರ್ಷ. ಈ ವರ್ಷ ಕಳೆದರೆ ಎಂ.ಎ.ಶುರುವಾಗಿ ಒಂದು ಶತಮಾನವಾಗುತ್ತದೆ!
ನೂರು ವರ್ಷದಲ್ಲಿ ಅದೆಷ್ಟು ಮಂದಿ ಕನ್ನಡ ಎಂ.ಎ.ಪದವಿ ಪಡೆದಿರಬಹುದು? ಅದರ ಮೂಲಕವೇ ಬದುಕನ್ನು ಕಟ್ಟಿಕೊಂಡಿರಬಹುದು? ಕನ್ನಡ ಎಂ.ಎ. ಕೋರ್ಸ್ ಶುರುವಾಗಿದ್ದು ಯಾವಾಗ? ಹೇಗೆ? ಎಲ್ಲಿ ಆರಂಭವಾಯಿತು? ನಿಮ್ಮಲ್ಲಿ ಈಗಾಗಲೇ ಈ ಪ್ರಶ್ನೆಗಳು ಮೂಡಿರಬಹುದು.
ಮೊದಲಿಗೆ ಒಂದು ವಿಷಯವನ್ನು ಸ್ಪಷ್ಟಪಡಿಸಿಬಿಡುತ್ತೇನೆ. ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಒಂದು ದಶಕದ ಬಳಿಕ ಕನ್ನಡ ಎಂ.ಎ.ಕೋರ್ಸ್ ಆರಂಭವಾಯಿತು. ಅದು, ಕನ್ನಡದ ಏಳ್ಗೆಯ ವಿಷಯದಲ್ಲಿ ವಿಶ್ವವಿದ್ಯಾಲಯ ಆರಂಭಿಸಿದ ಮೇರು ನಡಿಗೆ.
ಅಂದ ಹಾಗೆ, ಮೇರು ನಡಿಗೆ (Meru Trek) ಎಂದರೆ, ಹಿಮಾಲಯದ ಗಢವಾಲ್ ಪ್ರದೇಶದಲ್ಲಿರುವ ಪವಿತ್ರ ಗೌಮುಖ ಮತ್ತು ತಪೋವನ ಮಾರ್ಗದಲ್ಲಿ ನಡೆಯುವ ಅತಿ ಕಷ್ಟಕರ ಹಾಗೂ ಮೋಹಕವಾದ ಚಾರಣವೂ ಹೌದು. ಅಂದೂ ಇಂದೂ ಕನ್ನಡದ ಏಳ್ಗೆಯು ಒಂದು ಸಾಹಸಮಯವಾದ ಚಾರಣದಂತೆಯೇ ಆಗಿದೆ.
ಮೈಸೂರಿನ, ಅಂದರೆ ಅಂದಿನ ಮೈಸೂರು ರಾಜ್ಯದ ಶಿಕ್ಷಣ ವ್ಯವಸ್ಥೆಗೂ ಎಂ.ಎ.ಕೋರ್ಸ್‌ಗೂ ಅವಿನಾಭಾವ ಸಂಬಂಧ. ವಯಸ್ಕರ ಶಿಕ್ಷಣದೊಂದಿಗೆ, ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳುವ ಹಂತದಲ್ಲೇ ಈ ಕೋರ್ಸ್ ಆರಂಭವಾಯಿತು ಎಂಬುದು ವಿಶೇಷ.
ಇಂಗ್ಲಿಷ್ ಮಾತನಾಡುವುದೇ ಪ್ರತಿಷ್ಠೆಯಾಗಿದ್ದ ಕಾಲದಲ್ಲೇ ಕನ್ನಡ ಸ್ನಾತಕೋತ್ತರ ಪದವಿಯ ಅಗತ್ಯದ ಕುರಿತ ಜಾಗೃತಿ ಮೂಡಿತ್ತು. ಅದು ಆ ಕಾಲಕ್ಕೇ ಬಂಡೆಗಳ ನಡುವಿನ ಚಿಗುರಿನಂತೆ. ಏಕೆಂದರೆ, ವಿಶ್ವವಿದ್ಯಾಲಯವು ನಾಲ್ವಡಿ ಕೃಷ್ಣರಾಜ ಒಡೆಯರ್ ನೇತೃತ್ವದಲ್ಲಿ 1916ರಲ್ಲಿ ಸ್ಥಾಪನೆಯಾದ ಎರಡೇ ವರ್ಷಕ್ಕೆ ಕೆಲವು ವಿಷಯಗಳ ಎಂ.ಎ ಕೋರ್ಸ್‌ಗಳು ಆರಂಭವಾಗಿದ್ದವು. ಆದರೆ, ಕನ್ನಡಕ್ಕೆ ಮಾತ್ರ ಅಂಥ ಮಹತ್ವದ ಸ್ಥಾನ ದೊರಕಿರಲಿಲ್ಲ.
1927ರಲ್ಲಿ ಕನ್ನಡ ವಿಭಾಗ ಮತ್ತು ಕನ್ನಡ ಎಂ.ಎ.ಕೋರ್ಸ್ ಅನ್ನು ಒಟ್ಟಿಗೇ ವಿಶ್ವವಿದ್ಯಾಲವು ಆರಂಭಿಸಿತು ಎಂಬುದನ್ನು ಗಮನಿಸಬೇಕು. ಅದಕ್ಕಾಗಿ ಪ್ರೊಫೆಸರ್ ಹುದ್ದೆಯನ್ನೂ ಸೃಜಿಸಲಾಯಿತು. ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದೇ ಖ್ಯಾತರಾಗಿದ್ದ ಟಿ.ಎಸ್.ವೆಂಕಣ್ಣಯ್ಯ ಅವರು ವಿಭಾಗದ ಮೊದಲ ಪ್ರೊಫೆಸರ್ ಆಗಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದ ಅವರನ್ನು ವಿಭಾಗದ ಸಲುವಾಗಿಯೇ ಮೈಸೂರಿಗೆ ವರ್ಗಾಯಿಸಲಾಯಿತು.
ಅವರಿಗೆ ಕುವೆಂಪು ‘ಹರಕೆಯ ಬಲದ ಶಿಷ್ಯ’ರಾಗಿದ್ದರು. ಹೀಗಾಗಿಯೇ ತಮ್ಮ ‘ಬೃಹದ್ ಗಾನ’ ಶ್ರೀ ರಾಮಾಯಣದರ್ಶನಂ ಮಹಾಕಾವ್ಯವನ್ನು ಅವರಿಗೇ ಅರ್ಪಿಸಿದರು. ಅವರಿಬ್ಬರ ನಡುವಿನ ಗುರು–ಶಿಷ್ಯ ಸಂಬಂಧವು ಇನ್ನೊಂದು ದೊಡ್ಡ ಅವಲೋಕನಕ್ಕೆ ದಾರಿ ಮಾಡುತ್ತದೆ.
ಮೊದಲ ಕನ್ನಡ ವಿಭಾಗದ ಗೌರವ ಪ್ರಾಧ್ಯಾಪಕರಾಗಿ ನೇಮಕವಾದವರು ಯಾರು ಗೊತ್ತೆ? ಬಿಎಂಶ್ರೀ ಎಂದೇ ಪ್ರಖ್ಯಾತರಾಗಿದ್ದ ಇಂಗ್ಲಿಷ್ ಪ್ರೊಫೆಸರ್ ಬಿ.ಎಂ.ಶ್ರೀಕಂಠಯ್ಯ ನವರು. ಅವರ ಅನನ್ಯ ಕನ್ನಡಪ್ರೇಮವೇ ಅವರಿಗೆ ಆ ಸ್ಥಾನವನ್ನು ತಂದುಕೊಟ್ಟಿತ್ತು. ಅವರು ಹಾಗೆ ನೇಮಕವಾಗುವ ಒಂದೂವರೆ ದಶಕಕ್ಕೆ ಮುಂಚೆಯೇ, 1911ರ ಡಿಸೆಂಬರ್‌ನಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ‘ಕನ್ನಡ ಮಾತು ತಲೆ ಎತ್ತುವ ಬಗೆ’ ಕುರಿತು ಐತಿಹಾಸಿಕ ಉಪನ್ಯಾಸವನ್ನು ಕೊಟ್ಟಿದ್ದರು! ಆಗ ಅವರಿಗೆ ಕೇವಲ 27 ವರ್ಷ ವಯಸ್ಸು.
ಅವರ ಉಪನ್ಯಾಸವು, ಇಂಗ್ಲಿಷ್ ಎದುರಿಗೆ ಕನ್ನಡದ ಏಳ್ಗೆಯ ದಾರಿಗಳ ಕುರಿತು ಚರ್ಚಿಸಿತ್ತು. ಈಗಲೂ ಅದೊಂದು ಪರಾಮರ್ಶನ ಭಾಷಣವಾಗಿಯೇ ಉಳಿದಿದೆ. ಕನ್ನಡದ ಏಳ್ಗೆಯ ಕುರಿತು ಚರ್ಚಿಸುವವರು ಅದನ್ನು ನಿರ್ಲಕ್ಷ್ಯಿಸಿ ಮುಂದೆ ಹೋಗುವಂತಿಲ್ಲ.
ಇಂಗ್ಲಿಷ್ ವಿಭಾಗದಲ್ಲಿ ತಮ್ಮ ಅಧ್ಯಾಪನದ ಆರಂಭದ ದಿನಗಳಲ್ಲಿ ಬಿಎಂಶ್ರೀ ಅವರು ಕನ್ನಡವನ್ನೇ ಬಳಸುತ್ತಿರಲಿಲ್ಲ. ವಿಭಾಗದ ಇನ್ನಿತರೆ ಇಂಗ್ಲಿಷ್ ಪ್ರೊಫೆಸರ್‌ಗಳಿಗಿಂತ ತಾವೇನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಲೆಂದೇ ಅವರು ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲೇ ವ್ಯವಹರಿಸುತ್ತಿದ್ದರು. ಇಂಗ್ಲಿಷ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ಬಳಿಕ ಅವರು ಮತ್ತೆ ಹಿಂತಿರುಗಿ ನೋಡದೆ ಕನ್ನಡದ ಏಳ್ಗೆಯತ್ತ ನಡೆದರು. ‘ಕನ್ನಡದ ಕಣ್ವ’ರಾದರು.
ಕನ್ನಡ ಎಂ.ಎ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಾಗಿದ್ದ ಎನ್,ಅನಂತರ ರಂಗಾಚಾರ್, ಕೆ.ವೆಂಕಟರಾಮಪ್ಪ, ಡಿ.ಕೆ.ಭೀಮಸೇನರಾವ್, ನಂಜುಂಡಯ್ಯ, ಅಳಸಿಂಗಾಚಾರ್, ಕೆ.ವಿ.ಪುಟ್ಟಪ್ಪ, ಡಿ.ಎಲ್.ನರಸಿಂಹಾಚಾರ್, ಎಂ.ನಾಗೇಶಾಚಾರ್, ಬಿ.ಎಸ್.ವೆಂಕಟರಾಮಯ್ಯ, ಕೆ.ರಾಘವಾಚಾರ್ಯ, ಡಿ.ಶ್ರೀನಿವಾಸಾಚಾರ್, ಸುಬ್ಬರಾಯಶಾಸ್ತ್ರಿ, ಸಿ.ಆರ್.ನರಸಿಂಹಶಾಸ್ತ್ರಿ, ಆರ್.ಅನಂತಕೃಷ್ಣಶರ್ಮ ಅವರೊಂದಿಗೆ ಬಿಎಂಶ್ರೀ ಮತ್ತು ವೆಂಕಣ್ಣಯ್ಯ ಅವರ ಗ್ರೂಪ್ ಫೋಟೋವನ್ನು ಈಗಲೂ ಮಹಾರಾಜ ಕಾಲೇಜಿನಲ್ಲಿ ನೋಡಬಹುದು. ಕನ್ನಡ ಸಾರಸ್ವತ ಲೋಕಕ್ಕೆ ಈ ಗುರು–ಶಿಷ್ಯ ತಲೆಮಾರಿನ ಕೊಡುಗೆಯಂತೂ ಅಪಾರ.
ಕನ್ನಡ ಎಂಎ ಎಂಬುದು ಶತಮಾನದ ಹೆಮ್ಮರ. ಅದರ ಬೇರಿಗೊಂದು ಪರಂಪರೆ ಇದೆ. ಹೀಗೆ ಹೆಮ್ಮೆ ಪಡುವಂಥ ಇತಿಹಾಸವಿದ್ದರೂ ನಿಜವಾಗಿಯೂ ಹೆಮ್ಮೆ ಪಡುವ ಸನ್ನಿವೇಶ ಈಗ ಇದೆಯೇ ಎಂದು ನೋಡಿದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಕನ್ನಡ ಎಂ,ಎ ಒಂದರಿಂದಲೇ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ಅಸಾಧ್ಯವೆಂಬ ಕಾಲಘಟ್ಟ ಎದುರಿಗೆ ಬಂದು ದಶಕಗಳಾಗಿವೆ. ಎಲ್ಲ ವೃತ್ತಿಕ್ಷೇತ್ರಗಳನ್ನು ಆವರಿಸಿರುವ ಎಐ ತಂತ್ರಜ್ಞಾನ ಭಾಷಾ ಕೌಶಲದ ಕ್ಷೇತ್ರದಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿದ್ದಾಗಿದೆ. ಸಾಹಿತ್ಯದ ಓದಿನ ಜೊತೆಗೆ ಈ ಕಾಲಕ್ಕೆ ಬೇಕಾದ ಎಲ್ಲ ಬಗೆಯ ವೃತ್ತಿ ಕೌಶಲಗಳ ಗಳಿಕೆಗೂ ಎಂಎ ಪಠ್ಯಕ್ರಮದಲ್ಲಿ ಅವಕಾಶವಿಲ್ಲದಿರುವುದೂ ಈ ಪರಿಸ್ಥಿತಿಗೆ ಕಾರಣ.
ಇಂಥ ಸನ್ನಿವೇಶದಲ್ಲೇ, ಕನ್ನಡ ಎಂ.ಎ ಪದವಿ ಪಡೆದವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಲೆಂದೇ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕೆಲವು ತಿಂಗಳ ಹಿಂದೆ ಚರ್ಚೆ ನಡೆದಿತ್ತು! ಕನ್ನಡವು ಅನ್ನದ ಭಾಷೆಯಾಗಬೇಕು ಎಂಬ ಪ್ರತಿಪಾದನೆ ಎಲ್ಲೆಡೆಯೂ ಯಾವಾಗಲೂ ಕೇಳಿ ಬರುತ್ತದೆ. ಆದರೆ ಅದನ್ನು ಅನ್ನದ ಭಾಷೆ ಮಾಡುವುದು ಹೇಗೆ ಎಂಬ ಪ್ರಯೋಗಶೀಲ ಚಿಂತನೆಗಳ ಕೊರತೆಯೂ ಹಾಗೇ ಉಳಿದಿದೆ.
ಅದಕ್ಕೇನು ಮಾಡಬೇಕು? ಕನ್ನಡ ಎಂಎ ತಲೆ ಎತ್ತುವ ಬಗೆಯ ಕುರಿತು ನಿಷ್ಠುರವಾಗಿ ಆಲೋಚಿಸಬೇಕು. ಕನ್ನಡ ಎಂಎ ಪದವಿ ಪಡೆದ ಬಳಿಕ ಉಪನ್ಯಾಸಕ ವೃತ್ತಿಯನ್ನಷ್ಟೇ ನೆಚ್ಚಿಕೊಳ್ಳದೇ ಬದುಕನ್ನು ಕಟ್ಟಿಕೊಂಡವರ ಕಥನಗಳನ್ನು ಕಟ್ಟಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸಮರ್ಥವಾಗಿ ವಿವಿಧ ಕ್ಷೇತ್ರಗಳಲ್ಲಿ ನೆಲೆಗೊಂಡವರಿದ್ದಾರೆ. ಸರ್ಕಾರಿ ಕೆಲಸಗಳನ್ನಷ್ಟೇ ನೆಚ್ಚಿಕೊಳ್ಳದೆ ತಮ್ಮದೇ ಜೀವನೋಪಾಯ ಮಾರ್ಗಗಳನ್ನು ಕಂಡುಕೊಂಡು, ಇತರರಿಗೂ ಕೆಲಸ ಕೊಟ್ಟು ಜೀವನದಲ್ಲಿ ಯಶಸ್ವಿಯಾದವರಿದ್ದಾರೆ. ಅಂಥವರ ಮಾತುಗಳಿಗೆ ಕಿವಿಯಾಗಬೇಕು. ಅನುವಾದ, ಆಡಳಿತ, ತಂತ್ರಜ್ಞಾನ, ಪತ್ರಿಕೋದ್ಯಮ, ರಂಗಭೂಮಿ..ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಭರವಸೆ ಮೂಡಿಸಿದವರು ತಲೆ ಎತ್ತಿದ ಬಗೆಯೇ ಕನ್ನಡ ಎಂಎ ತಲೆ ಎತ್ತುವ ಬಗೆ ಎನ್ನಿಸುತ್ತದೆ.
ಬಿ.ಎಂ.ಶ್ರೀಕಂಠಯ್ಯ
ವೆಂಕಣ್ಣಯ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.