ADVERTISEMENT

ವಿಶ್ಲೇಷಣೆ: ಕನ್ನಡವಾಗಿರುವುದು ಎಂದರೆ...

ಪ್ರೊ.ಬರಗೂರು ರಾಮಚಂದ್ರಪ್ಪ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
   
‘ಕನ್ನಡತನ’ ಮತ್ತು ‘ಕನ್ನಡವಾಗಿರುವುದು’ ಪದೇ ಪದೇ ಬಳಕೆಯಾಗುವ ಮಾತುಗಳು. ಏನು ಹೀಗೆಂದರೆ? ಈ ಮಾತುಗಳ ಅರ್ಥ ತಿಳಿಯಲು ಕನ್ನಡ ಸಾಂಸ್ಕೃತಿಕ ಪರಂಪರೆ ಪ್ರತಿಪಾದಿಸಿದ ವಿವೇಕವನ್ನು ಎದುರುಗೊಳ್ಳಬೇಕು. ಆ ವಿವೇಕ, ಕನ್ನಡದ ಏಳಿಗೆಯ ಜೊತೆಗೆ ತರತಮಗಳಿಲ್ಲದ ಸಮಾಜವನ್ನು ಹಂಬಲಿಸುವಂತಹದ್ದು.

ಎಲ್ಲ ಏಳುಬೀಳುಗಳ ನಡುವೆಯೂ ಇಂದಿಗೂ ನಮ್ಮ ಕನ್ನಡ ಜೀವಂತವಾಗಿದೆ. ನಿಜ, ಕನ್ನಡಕ್ಕೆ ಸವಾಲುಗಳಿವೆ, ಸಾವಿಲ್ಲ. ಸಾಯಲು ಕನ್ನಡ ಜನರು ಬಿಡುವುದಿಲ್ಲ. ಬಹಳ ವರ್ಷಗಳ ಹಿಂದೆಯೇ ರಾಷ್ಟ್ರಕವಿ ಕುವೆಂಪು ಅವರು ಒಂದು ಪದ್ಯದಲ್ಲಿ ಹೀಗೆ ಬರೆದರು: ‘ರಾಜನುಡಿಯೆಂದೊಂದು ರಾಷ್ಟ್ರನುಡಿಯೆಂದೊಂದು/ ದೇವನುಡಿ ಯೆಂದೊಂದು ಹತ್ತಿ ಜಗ್ಗಿ/ ನಿರಿನಿಟಿಲು ನಿಟಿಲೆಂದು ಮುದಿ ಮೂಳೆ ಮುರಿಯುತಿದೆ/ ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ’. ಈ ಸಾಲುಗಳು ಕನ್ನಡಕ್ಕೆ ಭಾಷಿಕವಾಗಿ ಎದುರಾದ ಇಂಗ್ಲಿಷ್, ಹಿಂದಿ ಮತ್ತು ಸಂಸ್ಕೃತಗಳ ಪರಿಣಾಮವನ್ನು ಪ್ರಸ್ತುತಪಡಿಸುತ್ತವೆ. ರಾಜನುಡಿ, ರಾಷ್ಟ್ರನುಡಿ, ದೇವನುಡಿ– ಎಂದು ಪ್ರಸ್ತಾಪ ಮಾಡುವಾಗ ಕುವೆಂಪು ಅವರು ಇಂಗ್ಲಿಷನ್ನು ರಾಜನುಡಿಯೆಂದೂ, ಹಿಂದಿಯನ್ನು ರಾಷ್ಟ್ರನುಡಿಯೆಂದೂ, ಸಂಸ್ಕೃತವನ್ನು ದೇವನುಡಿ ಯೆಂದೂ ಒಪ್ಪಿದ್ದಾರೆಂದು ಭಾವಿಸಬೇಕಿಲ್ಲ. ‘ಯೆಂದೊಂದು’ ಎಂದು ಹೇಳುವ ಮೂಲಕ ‘ಹಾಗೆಂದು ಭಾವಿಸಿರುವುದು’ ಎಂಬ ಅರ್ಥ ಹೊರಡುತ್ತದೆ. ಇರಲಿ; ಇಲ್ಲಿ ಮುಖ್ಯ ವಿಷಯವೆಂದರೆ, ಈ ಮೂರೂ ಭಾಷೆಗಳ ಹಿಡಿತದಿಂದ ವಿಮೋಚನೆ ಗೊಳ್ಳುತ್ತಲೇ ಕನ್ನಡ ಭಾಷೆ ಬದುಕಿದೆ. ಇದರರ್ಥ ಇಷ್ಟು: ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ.

ಎಲ್ಲ ಸಮಸ್ಯೆ ಮತ್ತು ಸವಾಲುಗಳ ನಡುವೆಯೂ ಕನ್ನಡವು ಜೀವಂತ ಭಾಷೆಯಾಗಿರುವುದಕ್ಕೆ ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಚಿಂತಕರು ಕಾರಣರಾಗಿರುವಂತೆಯೇ ಸಾಮಾನ್ಯ ಕನ್ನಡಿಗರ ಪಾತ್ರ ಬಹು ದೊಡ್ಡದು. ಜನ ಸಾಮಾನ್ಯರು ಕನ್ನಡವನ್ನು ಬಳಸುತ್ತ, ಬೆಳೆಸುತ್ತ, ಬಂದಿರುವುದರಿಂದಲೇ ಅದು ಜೀವಂತ ಭಾಷೆಯಾಗಿದೆ. ಇಲ್ಲಿ, ಕ್ರಿ.ಶ. 850ರಲ್ಲಿ ರಚಿತವಾದ ‘ಕವಿರಾಜಮಾರ್ಗ’ ಕೃತಿಯ ಕರ್ತೃ ಶ್ರೀವಿಜಯ, ಸಾಮಾನ್ಯ ಕನ್ನಡಿಗರ ಪ್ರತಿಭೆಯ ಬಗ್ಗೆ ನುಡಿದ ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಎಂಬ ಮಾತು ತುಂಬಾ ಪ್ರಸ್ತುತ ವಾಗುತ್ತದೆ. ಉದ್ದೇಶಪೂರ್ವಕವಾಗಿ ವಿದ್ಯಾಭ್ಯಾಸ ಮಾಡದೆ ಇದ್ದರೂ ಸಾಮಾನ್ಯ ಕನ್ನಡಿಗರು ಕಾವ್ಯಪ್ರಯೋಗದಲ್ಲಿ ನಿಷ್ಣಾತರೆಂದು ಹೇಳುವಾಗ, ಜನಪದ ಕವಿಗಳು ಮನಸ್ಸಿನಲ್ಲಿದ್ದಿರಬಹುದು. ಇದಿಷ್ಟೇ ಅಲ್ಲ, ‘ಕವಿರಾಜಮಾರ್ಗ’ದಲ್ಲಿ ಸಂದರ್ಭಾನುಸಾರ ಜನಸಾಮಾನ್ಯರ ಸೃಜನಶೀಲತೆಯನ್ನು ಗೌರವಿಸ ಲಾಗಿದೆ. ಅಂದಿನದು ಇರಲಿ, ಇಂದಿಗೆ ಬರೋಣ. ಜನಸಾಮಾನ್ಯರು ತಮ್ಮ ಬಳಕೆಯಲ್ಲಿ ಕನ್ನಡ ಪದಗಳಿಗೆ ವಿಶೇಷ ಅರ್ಥಜಿಗಿತವನ್ನೇ ತಂದುಕೊಡುವುದುಂಟು. ಅವರು ವಿಧಾನಸೌಧಕ್ಕೆ ಸೈಕಲ್ ತುಳಿದೂ ತುಳಿದು ಸಾಕಾಯ್ತು ಎಂದು ಹೇಳಿದಾಗ ಸೈಕಲ್ಲಿನ ಅರ್ಥವೂ ಬದಲಾಗುತ್ತದೆ, ಜಡಗೊಂಡ ಆಡಳಿತ ವ್ಯವಸ್ಥೆಯ ವ್ಯಾಖ್ಯಾನವೂ ಆಗುತ್ತದೆ. ಈ ಮನುಷ್ಯ ಬಾಳ ರೈಲು ಬಿಡ್ತಾನೆ ಎಂದಾಗ ರೈಲು ಎನ್ನುವುದಕ್ಕೆ ‘ಸುಳ್ಳು’ ಎಂಬ ಅರ್ಥ ಬರುತ್ತದೆ; ಸಂಬಂಧಿಸಿದ ವ್ಯಕ್ತಿಯ ಸ್ವಭಾವವೂ ತಿಳಿಯುತ್ತದೆ. ಹೀಗೆ ಸಾಂದರ್ಭಿಕ ಬಳಕೆಯಿಂದ ಭಾಷೆಯನ್ನು ಬೆಳೆಸುವುದು ಜನಸಾಮಾನ್ಯರ ಸೃಜನಶೀಲ ಶಕ್ತಿ.

ಹಾಗೆಂದು ಜನಸಾಮಾನ್ಯರಿಗೇ ಭಾಷೆಯ ಹೊಣೆ ಹೊರಿಸಿ ಸುಮ್ಮನಾಗುವಂತಿಲ್ಲ. ಕನ್ನಡವು ಶಿಕ್ಷಣ, ಉದ್ಯೋಗ ಮತ್ತು ಆಡಳಿತಗಳಲ್ಲಿ ಅನಿವಾರ್ಯವಾಗುವಂತಹ ನೀತಿ ನಿರೂಪಣೆಗಳು ಬೇಕು; ಹೋರಾಟಗಳು ಬೇಕು; ತಾತ್ವಿಕತೆ ಬೇಕು. ವಿಶೇಷವಾಗಿ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡವನ್ನು ಉಳಿಸದೆ ಇದ್ದರೆ ಅಪಾಯಗಳ ಕೂಪವೇ ಗತಿಯಾಗುತ್ತದೆ. ಇಂತಹ ಬಿಕ್ಕಟ್ಟುಗಳಿಂದ ಹೊರಬರಲು ಕನ್ನಡಕ್ಕೊಂದು ಸಾಮಾನ್ಯ ಕಾರ್ಯಸೂಚಿಯ ಅಗತ್ಯವಿದೆ. ಕನ್ನಡ ಭಾಷಾ ಕಲಿಕೆ, ಶಿಕ್ಷಣ ಮಾಧ್ಯಮ, ಉದ್ಯೋಗಕ್ಕೆ ಕನ್ನಡ ಮಾನದಂಡವಾಗುವುದು, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಆದ್ಯತೆ, ಇತ್ಯಾದಿಗಳನ್ನು ಕುರಿತಂತೆ ಒಮ್ಮತದ ಕಾರ್ಯಸೂಚಿಯೊಂದನ್ನು ರೂಪಿಸಿ, ಆ ನೆಲೆಯಲ್ಲಿ ಹಕ್ಕೊತ್ತಾಯ ಮಂಡಿಸುವ ಕೆಲಸ ಆಗಬೇಕಾಗಿದೆ. ತಂತಮ್ಮ ಸಂಘಟನೆಗಳ ಮೂಲಕ ಕನ್ನಡದ ಕೆಲಸ ಮಾಡುತ್ತಿರುವ ನೇತಾರರೂ ಚಿಂತಕರೂ ಸಾಹಿತಿಗಳೂ ಹೀಗೆ ಒಮ್ಮತದ ಕಾರ್ಯಸೂಚಿಯನ್ನು ರೂಪಿಸಲು ಸಾಧ್ಯವಾಗಬೇಕು. ಆದರೆ, ಇಂತಹ ಒಗ್ಗಟ್ಟಿನ ಚಿಂತನೆಗಳು ಸಾಧ್ಯವಾಗದಿರುವುದು ಕನ್ನಡಪರ ಚಿಂತನೆ ಮತ್ತು ಹೋರಾಟದ ಶಕ್ತಿ ಮತ್ತು ವ್ಯಾಪ್ತಿಯನ್ನು ಕುಗ್ಗಿಸುತ್ತಿದೆ. ಕನ್ನಡಕ್ಕಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಬೇಕಾಗಿದೆ.

ADVERTISEMENT

ಇಲ್ಲಿ ಇನ್ನೊಂದು ಪ್ರಶ್ನೆಯೂ ಇದೆ: ಕನ್ನಡ ಪರ ನಿಲುವೆಂದರೆ ಅದು ಭಾಷಿಕವಾದದ್ದು ಮಾತ್ರವೆ? ಖಂಡಿತ ಅಲ್ಲ. ‘ಕನ್ನಡ ಪರ’ ಎನ್ನುವುದಕ್ಕೆ ಭಾಷಿಕ ನೆಲೆಯನ್ನು ಒಳಗೊಂಡಂತೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯಾತ್ಮಕ ಆಯಾಮಗಳಿವೆ. ಕನ್ನಡ ಪರಂಪರೆಯನ್ನು ಗಮನಿಸಿದಾಗ ‘ಕನ್ನಡ ತಾತ್ವಿಕತೆ’ಯ ಆಳ ಆಗಲ ಅರ್ಥವಾಗುತ್ತದೆ. ಇಂದಿಗೂ ಈ ತಾತ್ವಿಕತೆ ಎಷ್ಟು ಪ್ರಸ್ತುತ ಎಂದು ಅರಿವಾಗುತ್ತದೆ.

ಹೆಚ್ಚು ದೂರ ಹೋಗುವುದು ಬೇಡ; ಕುವೆಂಪು ವಿರಚಿತ ನಮ್ಮ ನಾಡಗೀತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಾಕು, ಜೊತೆಗೆ ಕುವೆಂಪು ಅವರು, ‘ಎಲ್ಲಾದರೂ ಇರು/ ಎಂತಾದರು ಇರು/ ಎಂದೆಂದಿಗೂ ನೀ ಕನ್ನಡವಾಗಿರು’ ಎಂದದ್ದು ಮತ್ತು ‘ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು’ ಎಂದು ಪ್ರತಿಪಾದಿಸಿದ್ದನ್ನು ಗಮನಿಸಬೇಕು. ‘ಕನ್ನಡವಾಗಿರು’ ಮತ್ತು ‘ಕನ್ನಡತನವೊಂದಿದ್ದರೆ’ ಎಂಬ ಪದಗಳು ಕೇವಲ ಭಾಷೆಗೆ ಸಂಬಂಧಿಸಿದವಲ್ಲ. ಕನ್ನಡವಾಗುವುದು ಮತ್ತು ಕನ್ನಡತನ ಎಂಬ ಪ್ರಕ್ರಿಯೆಗಳು ಒಟ್ಟು ಕನ್ನಡ ಪರಂಪರೆಯನ್ನು ಪ್ರತಿನಿಧಿಸುತ್ತವೆ. ಹಾಗಾದರೆ, ಕನ್ನಡವಾಗುವುದು ಎಂದರೆ ಹೇಗೆ? ಕನ್ನಡತನವೆಂದರೆ ಯಾವುದು? ಉತ್ತರಕ್ಕಾಗಿ ನಾಡಗೀತೆಯನ್ನು ಅವಲೋಕಿಸಬಹುದು.

‘ಭಾರತ ಜನನಿಯ ತನುಜಾತೆ/ ಜಯಹೇ ಕರ್ನಾಟಕ ಮಾತೆ’ ಎಂಬ ಸಾಲಿನಲ್ಲೇ ರಾಜಕೀಯಾತ್ಮಕ ಒಕ್ಕೂಟ ಪದ್ಧತಿಯ ಅಂಶ ಅಂತರ್ಗತವಾಗಿದೆ. ಭಾರತವೆಂಬ ದೇಶದ ಒಂದು ರಾಜ್ಯವಾಗಿ ಕರ್ನಾಟಕವಿದೆ. ಇಲ್ಲಿ ದೇಶ ಮತ್ತು ರಾಜ್ಯಗಳ ಒಕ್ಕೂಟವನ್ನು ತಾಯಿ–ಮಗಳ ಕೌಟುಂಬಿಕ ಸಂಬಂಧದಲ್ಲಿ ಹೆಣೆಯಲಾಗಿದೆ. ಇದೇ ಸಂಬಂಧದ ಪರಿಭಾಷೆ ಬಳಸಿ ಕುವೆಂಪು ಅವರು ತಮ್ಮ ಒಂದು ಲೇಖನದಲ್ಲಿ ಹೀಗೆ ಬರೆದಿದ್ದಾರೆ: ಕರ್ನಾಟಕ, ಭಾರತ ಮಾತೆಯ ಒಬ್ಬ ಮಗಳು; ಆಂಧ್ರ, ತಮಿಳು, ಮಲಯಾಳ, ಮಹಾರಾಷ್ಟ್ರ, ಗುಜರಾತ್, ಬಂಗಾಳಿ ಮುಂತಾದವರು ಕರ್ನಾಟಕದ ಸೋದರಿಯರು; ಮಗಳು ಹಾಳಾಗಿ ತಾಯಿ ಬೆಳೆಯುವುದು ಸಾಧ್ಯವೇ ಇಲ್ಲ – ಕುವೆಂಪು ಒಕ್ಕೂಟ ಪದ್ಧತಿ ಮತ್ತು ರಾಜ್ಯಗಳ ಸ್ವಾಯತ್ತತೆಯನ್ನು ಎತ್ತಿ ಹಿಡಿದಿದ್ದಾರೆ. ಇದು ಕನ್ನಡತನದ ಒಂದು ಲಕ್ಷಣ.

ನಾಡಗೀತೆಯಲ್ಲಿರುವ ‘ಕೃಷ್ಣ ಶರಾವತಿ ತುಂಗಾ/ ಕಾವೇರಿಯ ವರ ರಂಗ/ ಚೈತನ್ಯ, ಪರಮಹಂಸ, ವಿವೇಕರ/ ಭಾರತ ಜನನಿಯ ತನುಜಾತೆ’ ಎಂಬ ಸಾಲುಗಳಲ್ಲಿ ರಾಜ್ಯದ ಪ್ರಾದೇಶಿಕ ಸಮತೋಲನ ಮತ್ತು ದೇಶಕ್ಕೆ ಬೇಕಾದ ಜಾತಿ ತಾರತಮ್ಯದಿಂದ ದೂರ ವಾದ ಅಧ್ಯಾತ್ಮ ಚಿಂತನೆಯ ಸಂಕೇತಗಳಿವೆ. ಇಲ್ಲಿ ಕಾವೇರಿ, ಕೃಷ್ಣ, ಶರಾವತಿ, ತುಂಗಾ ನದಿಗಳೆಲ್ಲವೂ ಮುಖ್ಯ. ಪ್ರಾದೇಶಿಕ ಸಮಾನತೆಯ ಚಲನಶೀಲ ಸಂಕೇತಗಳಾಗಿ ಈ ನದಿನಾಮಗಳು ಪ್ರಸ್ತುತ ವಾಗುತ್ತವೆ. ಇನ್ನು ಚೈತನ್ಯ, ಪರಮಹಂಸ, ವಿವೇಕಾನಂದರ ಪ್ರಸ್ತಾಪವು ಸಾಮಾಜಿಕ ಆಯಾಮದ ಅಧ್ಯಾತ್ಮಕ್ಕೆ ಸಂಕೇತವೆನ್ನಬಹುದು. ಇದು ಸಾಮಾಜಿಕ ಅಸಮಾನತೆಯ ವಿರೋಧಿಯೂ ಹೌದು. ವಿವೇಕಾನಂದರ ವಿಚಾರಧಾರೆಯಲ್ಲಿ ಜಾತಿ, ವರ್ಣ, ವರ್ಗ ವಿರೋಧಿ ನಿಲುವು ಕಾಣಬಹುದು.

‘ಸರ್ವ ಜನಾಂಗದ ಶಾಂತಿಯ ತೋಟ/ ರಸಿಕರ ಕಂಗಳ ಸೆಳೆಯುವ ನೋಟ/ ಹಿಂದೂ ಕ್ರೈಸ್ತ ಮುಸಲ್ಮಾನ/ ಪಾರಸಿಕ ಜೈನರುದ್ಯಾನ’ ಎಂಬ ಸಾಲುಗಳು ಇಂದಿಗೆ ತುಂಬಾ ಅಗತ್ಯವಾದ ಧಾರ್ಮಿಕ ಸೌಹಾರ್ದತೆಯ ಪ್ರತಿಪಾದನೆಯಾಗಿವೆ. ನಮ್ಮದು ಶಾಂತಿಯ ತೋಟ, ಉದ್ಯಾನ, ಎಂದು ಹೇಳುವಲ್ಲಿಯೇ ಸೌಹಾರ್ದತೆಯೆನ್ನುವುದು ನಿಸರ್ಗ ಸಹಜ ಅಸ್ತಿತ್ವವೆಂಬ ಪರಿಕಲ್ಪನೆಯಿದೆ. ಆದರೆ, ಇಂದು ಶಾಂತಿಯ ತೋಟದಲ್ಲಿ ಅರಳಿದ ಹೂವುಗಳನ್ನು ಹೊಸಕಿ ಹಾಕಲಾಗುತ್ತಿದೆ. ವಿವಿಧತೆಯ ಉದ್ಯಾನಕ್ಕೆ ಕಿಚ್ಚು ಹಚ್ಚಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ನಾಡಗೀತೆಯ ಈ ಸಾಲುಗಳು ಕನ್ನಡವಾಗಿರುವುದು ಹೇಗೆ, ಕನ್ನಡತನವೆಂದರೆ ಯಾವುದು, ಎಂಬುದಕ್ಕೆ ಉತ್ತರವಾಗಿವೆ.

ಅಷ್ಟೇಕೆ, ಕ್ರಿ.ಶ. 850ರಲ್ಲೇ ‘ಕವಿರಾಜಮಾರ್ಗ’ದಲ್ಲೇ ‘ಪರವಿಚಾರ ಮತ್ತು ಪರಧರ್ಮವನ್ನು ಸಹಿಸುವುದೇ ನಿಜವಾದ ಬಂಗಾರ’ ಎಂದು ಇಂದಿಗೂ ತುಂಬಾ ಪ್ರಸ್ತುತವಾದ ಪ್ರಜಾಸತ್ತಾತ್ಮಕ ಪ್ರತಿಪಾದನೆಯಿದೆ. ಹತ್ತನೇ ಶತಮಾನದ ಪಂಪ ಮಹಾಕವಿ ಮೊಟ್ಟಮೊದಲಿಗೆ ಜನ್ಮಮೂಲ ಜಾತಿಯನ್ನು ವಿರೋಧಿಸಿ, ಸ್ವಾಭಿಮಾನವೊಂದೇ ಕುಲವೆಂದೂ, ‘ಮನುಷ್ಯಜಾತಿ ತಾನೊಂದೆ ವಲಂ’ ಎಂದು ಸಾರಿದ್ದೂ ಸಾಮಾನ್ಯ ಸಂಗತಿಯಲ್ಲ. ಬಸವಣ್ಣನವರ ನೇತೃತ್ವದ ವಚನ ಚಳವಳಿಯ ಭಾಷಿಕ ಮತ್ತು ಸಾಮಾಜಿಕ ಕೊಡುಗೆ ಅನನ್ಯ. ‘ರಾಜರಿಗೆ ದಾಸರಲ್ಲ, ದೇವರಿಗೆ ದಾಸರು’ ಎಂದ ದಾಸ ಪರಂಪರೆಯೂ ಉಲ್ಲೇಖನೀಯ. ಸೂಫಿ ಸಂತರು, ತತ್ವಪದಕಾರರು, ಧಾರ್ಮಿಕ ಸಾಮರಸ್ಯದ ಶಾಂತಿಸೌಧ ಕಟ್ಟಿದ್ದು ವಿಶೇಷ ಅಧ್ಯಾಯ. ಕನ್ನಡವನ್ನು ಎಲ್ಲಾ ಜಾತಿ–ಧರ್ಮದವರೂ ಕಟ್ಟಿ ಬೆಳೆಸಿದ ಪರಂಪರೆ ನಮ್ಮದು. ಕರ್ನಾಟಕ ಏಕೀಕರಣ ಚಳವಳಿಯ ಏಕೈಕ ಹುತಾತ್ಮ ಬಳ್ಳಾರಿಯ ರಂಜಾನ್ ಸಾಬ್ ಎಂಬುದೂ ಇಲ್ಲಿ ಸ್ಮರಣೀಯ. ಅಂದರೆ, ಕರ್ನಾಟಕವೆನ್ನುವುದು ಸಮಾನತೆ, ಸೌಹಾರ್ದತೆಗಳ ಪರಂಪರೆಯುಳ್ಳ ನಾಡು. ‘ಕನ್ನಡವಾಗಿರುವುದು’ ಮತ್ತು ‘ಕನ್ನಡತನ’ ಹೊಂದಿರುವುದೆಂದರೆ, ಭಾಷೆಯ ಜೊತೆಗೆ ಈ ಪರಂಪರೆಯನ್ನು ಹೃದಯಸ್ಥ ಮಾಡಿಕೊಂಡು ಬೆಳೆಸಬೇಕು. ಇಲ್ಲದಿದ್ದರೆ, ಕನ್ನಡಪರ ಪ್ರತಿಪಾದನೆಯು ಅಪೂರ್ಣವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.