ADVERTISEMENT

ವಿಶ್ಲೇಷಣೆ | ದಂತಕಥೆ: ನಮ್ಮ ನಡುವೆ ಏಕಿವೆ?

ಜ್ಯೋತಿ
Published 4 ನವೆಂಬರ್ 2025, 1:01 IST
Last Updated 4 ನವೆಂಬರ್ 2025, 1:01 IST
.
.   

ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಪುರಾಣದ ಕುರಿತಂತೆ ಇರುವ ದಂತಕಥೆಗಳು ಯಾಕೆ ಜನರ ಮನಸ್ಸನ್ನು ಇಷ್ಟೊಂದು ಅದಮ್ಯವಾಗಿ ಸೆಳೆಯುತ್ತವೆ? ‘ಕಾಂತಾರ ಚಾಪ್ಟರ್‌–1’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿರುವ ಸಂದರ್ಭದಲ್ಲಿ ಈ ಪ್ರಶ್ನೆ ಮೂಡುವುದು ಸಹಜ.

ನಾವೆಲ್ಲರೂ ರೋಮಾಂಚಕ ಕಥೆಗಳನ್ನು ಕೇಳುತ್ತಾ ನಂಬುತ್ತಾ ಬೆಳೆಯುತ್ತೇವೆ. ಆ ಕಥೆಗಳು ನಮ್ಮ ಕಲ್ಪನೆಯನ್ನು ಗರಿಗೆದರಿಸುವುದು ಮಾತ್ರವಲ್ಲ, ಮನರಂಜನೆಯನ್ನೂ ನೀಡುತ್ತವೆ. ನಮ್ಮ ಸುತ್ತಲಿನ ಪರಿಸರದ ಬಗ್ಗೆ, ಇತಿಹಾಸದ ಬಗ್ಗೆ, ದೇವರುಗಳ ಬಗ್ಗೆ, ನಾವು ಕಟ್ಟಿಕೊಳ್ಳಬೇಕಾದ ಬದುಕು ಮತ್ತು ಬದುಕಿನ ಅರ್ಥದ ಬಗ್ಗೆ ಬಹಳ ಸೊಗಸಾದ ಆಕರ್ಷಣೀಯ ಕಥೆಗಳಿವೆ. ನಮ್ಮ ಪ್ರಾಪಂಚಿಕ ಅನುಭವ ಹಿಗ್ಗಿದಂತೆ, ನಮಗಿಷ್ಟವಾಗುವ ಮತ್ತು ಅನುಕೂಲವಾದಂತಹ ಕಥೆಗಳನ್ನು ಒಪ್ಪಿಕೊಳ್ಳುತ್ತೇವೆ, ಉಳಿದವುಗಳನ್ನು ತಿರಸ್ಕರಿಸುತ್ತೇವೆ, ಇಲ್ಲವಾದಲ್ಲಿ ಅವುಗಳ ಕುರಿತು ಮೌನ ವಹಿಸುತ್ತೇವೆ. ಈ ರೀತಿ, ಅಮೂರ್ತವಾಗಿರುವ ಸಂಗತಿಗಳನ್ನು ಮೂರ್ತ ರೂಪದಲ್ಲಿ ನಮಗೆ ಪ್ರಸ್ತುತ ಪಡಿಸುವ ಕೆಲಸವನ್ನು ಕಥೆಗಳು ಮಾಡಿ, ನಮಗೊಂದು ಬದುಕಿನ ಚೌಕಟ್ಟನ್ನು ನೀಡುತ್ತವೆ. ಈ ಮೂಲಕ, ಕಥೆಗಳು ಬದುಕಲು ಭರವಸೆ ನೀಡುತ್ತವೆ ಮತ್ತು ನಮ್ಮ ನಂಬಿಕೆಗಳನ್ನು ಇನ್ನಷ್ಟು ಬಲಗೊಳಿಸುತ್ತವೆ.

ಕಥೆಗಳಿಲ್ಲದ ನಿರ್ವಾತದಲ್ಲಿ ಮನುಷ್ಯನಿಗೆ ಬದುಕಲು ಸಾಧ್ಯವೇ? ಇದಕ್ಕೆ ಉತ್ತರ, ಇಲ್ಲವೆನ್ನಬಹುದು. ಜನರ ಮನಸ್ಸಲ್ಲಿ ಬೇರು ಬಿಟ್ಟಿರುವ ಕಥೆಗಳು ನಮ್ಮ ವೈಯಕ್ತಿಕ ಬದುಕನ್ನು, ಜಾತಿ, ಧರ್ಮ, ಲಿಂಗ, ವರ್ಗ, ಭಾಷೆ ಮತ್ತು ಪ್ರಾದೇಶಿಕತೆಯ ಹೆಸರಲ್ಲಿ ನಮ್ಮನ್ನು ಉಸಿರುಗಟ್ಟಿಸಿದಾಗ, ಅವುಗಳ ವ್ಯಾಪ್ತಿಯನ್ನು ಮೀರಲು ಕೂಡ, ನಾವು ಗಿಟ್ಟಿಸಿಕೊಂಡ ಅರಿವಿನಿಂದ ಹೊಸ ಕಥೆಗಳನ್ನು, ಅಸ್ತಿತ್ವದಲ್ಲಿರುವ ಕಥೆಗಳಿಗಿಂತ ಹೆಚ್ಚು ಸ್ವಾರಸ್ಯವಾಗಿ ಹೆಣೆದು ಜನರು ಅದನ್ನು ನಂಬುವಂತೆ ಮಾಡಬೇಕಾಗುತ್ತದೆ.   

ADVERTISEMENT

ಈ ಹಿನ್ನೆಲೆಯಲ್ಲಿ, ಕಥೆಗಳ ಇತಿಹಾಸವನ್ನು ಅರಸುತ್ತಾ ಹೋದರೆ ನಾಗರಿಕತೆಯ ಆರಂಭದಿಂದಲೂ, ಮನುಷ್ಯ ಕಥೆಗಳ ಮೂಲಕ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ ಮತ್ತು ಅವುಗಳ ಮೂಲಕ ಬದುಕನ್ನು ಕಟ್ಟಿಕೊಳ್ಳುತ್ತಾ ಬಂದಿದ್ದಾನೆ ಎನ್ನಬಹುದು. ಮನುಷ್ಯನಿಗೆ ತನ್ನ ಅಸ್ತಿತ್ವದ ನಿಗೂಢ ರಹಸ್ಯಗಳ ಮುಂದೆ ಮೌನವಾಗಿ ಬದುಕಲು ಸಾಧ್ಯವಿರಲಿಲ್ಲ. ಹೀಗೆ, ಕಥೆಗಳು ನಮ್ಮ ಬದುಕಿನ ಅವ್ಯವಸ್ಥೆಗೆ ಒಂದು ರೂಪ ಮತ್ತು ಅನಿಶ್ಚತತೆಗೆ ಒಂದು ಲಯವನ್ನು ನೀಡಿವೆ. ಅವು ನಮ್ಮನ್ನು ಕೇವಲ ಬದುಕಿ ಸಾಯುವ ಜೀವಿಗಳಾಗಿ ಇರಲು ಬಿಡದೆ, ನಿರಂತರವಾಗಿ ಹೊಸದನ್ನು ಅನ್ವೇಷಿಸುವ ಮತ್ತು ಆಶಿಸುವ ಮನುಷ್ಯರನ್ನಾಗಿ ಬದುಕಲು ಅವಕಾಶ ಮಾಡಿಕೊಡುತ್ತವೆ.

ಮನುಷ್ಯ ಲೋಕದ ಜ್ಞಾನ ವಿಸ್ತರಿಸಿದಂತೆ ಹೊಸ ಕಥೆಗಳು ಸೃಷ್ಟಿಯಾಗಿವೆ. ಆದರೆ, ಹಳೆ ಕಥೆಗಳನ್ನು ನಂಬಿ ಬದುಕುತ್ತಿರುವವರಿಗೆ, ಅವುಗಳ ಆಧಾರದ ಮೇಲೆಯೇ ತಮ್ಮ ಸುತ್ತಲಿನ ಪರಿಸರದ ನಿಯಂತ್ರಣವನ್ನು ತೆಗೆದುಕೊಂಡವರಿಗೆ ಮತ್ತು ಅಧಿಕಾರದ ರುಚಿ ಅನುಭವಿಸಿದವರಿಗೆ ಈ ಹೊಸ ಕಥೆಗಳು ಅಭದ್ರತೆ ಸೃಷ್ಟಿಸಿ ಪಥ್ಯವಾಗದೆ, ಕಥೆಗಾರರನ್ನೇ ನಿಷೇಧ ಮಾಡಿರುವುದು ಅಥವಾ ಸಾಯಿಸಿರುವುದು ಈ ಜಗತ್ತಿನಲ್ಲಿ ನಡೆಯುತ್ತಾ ಬಂದಿದೆ. ನಿರ್ದಿಷ್ಟ ಉದಾಹರಣೆ ಕೊಡುವುದಾದರೆ, ತನ್ನ ಸುತ್ತಲಿನ ಜಗತ್ತು ಹೇಳುವ ಕಥೆಗಳನ್ನು ಪ್ರಶ್ನಿಸಿದ ಸಾಕ್ರಟಿಸ್ ಮತ್ತು ಕೊಪರ್ನಿಕಸ್ ತಮ್ಮ ಸ್ವಅರಿವಿನಿಂದ ಮಾಡಿದ ಹೊಸ ನಿರೂಪಣೆಗಾಗಿ ಜೀವ ತೆರಬೇಕಾಯಿತು. ಈ ನಿಷೇಧವು, ಧಾರ್ಮಿಕ ಮತ್ತು ಇತಿಹಾಸದ ಕಥೆಗಳನ್ನು ಪ್ರಶ್ನಿಸುವವರ ಮೇಲೆ, ಹೊಸ ಕಥೆಗಳನ್ನು ಹೇಳುವವರ ಮೇಲೆ ಇಂದಿಗೂ ನಡೆಯುತ್ತಿದೆ ಎನ್ನುವುದು ವಾಸ್ತವ. ಯಾಕೆಂದರೆ, ತಲೆಮಾರುಗಳಿಂದ ನಮ್ಮ ಮನಸ್ಸಿನಲ್ಲಿ ಬೇರೂರಿರುವ ಕಥೆಗಳನ್ನು ನಂಬುತ್ತೇವೆಯೇ ಹೊರತು, ನಮ್ಮ ಸಮಕಾಲೀನ ಸಹವರ್ತಿ ಜ್ಞಾನಿಗಳನ್ನಲ್ಲ.

ಮನುಷ್ಯನ ನಂಬಿಕೆಯ ಆಳದಲ್ಲಿ ಬೇರೂರಿರುವ ಕಥೆಗಳನ್ನು ಅಲುಗಾಡಿಸಬೇಕೆಂದರೆ, ಅಷ್ಟೇ ಗಟ್ಟಿಯಾಗಿ ಹೆಣೆದ ಹೊಸ ಕಥೆಗಳನ್ನು ಸೃಷ್ಟಿಸ
ಬೇಕಾಗುತ್ತದೆ. ಇದನ್ನು, ಜಗತ್ತಿನಾದ್ಯಂತ ರಾಜ ಸಂಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳು ಯಶಸ್ವಿಯಾಗಿ ಮಾಡಿವೆ. ಅವುಗಳು ತಮ್ಮ ಸುತ್ತ ಬಲ
ವಾದ ಕಥೆಗಳ ಪ್ರಭಾವಳಿಯನ್ನು ಹೆಣೆದಿವೆ. ಆದ್ದರಿಂದಲೇ, ವಿಜ್ಞಾನಕ್ಕೂ ತಾನು ಆವಿಷ್ಕರಿಸುವ ಸಿದ್ಧಾಂತಗಳಿಗೆ ಎಷ್ಟೇ ಪ್ರಬಲ ಸಾಕ್ಷ್ಯ ಒದಗಿಸಿದರೂ, ಹಳೆಯ ಕಥೆಗಳನ್ನು ಮತ್ತು ಅವುಗಳ ಮೇಲಿರುವ ನಂಬಿಕೆಯನ್ನು ಜನರ ಮನಸ್ಸಿನಿಂದ ಸಂಪೂರ್ಣವಾಗಿ ಅಳಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ, ವೈಜ್ಞಾನಿಕ ಮತ್ತು ವೈಚಾರಿಕ ಸಿದ್ಧಾಂತಗಳನ್ನು ಸುಂದರವಾಗಿ ಪೋಣಿಸಿರುವ ಕಥೆಗಳ ಮೂಲಕ ಹಂಚಿಕೊಂಡು ಜನರಿಗೆ ಮನದಟ್ಟು ಮಾಡುವ ಅಗತ್ಯವಿದೆ.

ವಿಸ್ಮಯವೆಂದರೆ, ನಮ್ಮನಾಳುವ ಜನಪ್ರಿಯ ಕಥೆಗಳಿಗೆ ಪರ್ಯಾಯ ಕಥೆಗಳನ್ನು ಸೃಷ್ಟಿಸುವ ಕೆಲಸವನ್ನು ಜನಪದರು ಮಾಡಿದ್ದಾರೆ. ಜನಪ್ರಿಯ ಕಥೆಗಳನ್ನು ಮರುವ್ಯಾಖ್ಯಾನಿಸುವ ಮೂಲಕ ಅವರು ಪ್ರಚಲಿತ ಕಥೆಗಳನ್ನು ತಮ್ಮದೇ ರೀತಿಯಲ್ಲಿ ಪ್ರಶ್ನಿಸಿದ್ದಾರೆ ಮತ್ತು ತಿದ್ದಿದ್ದಾರೆ. ಕಥೆಗಳು ಜನರ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರುವ ಅಂಶವನ್ನೇ ಆಧರಿಸಿ, ಜನರನ್ನು ನಿಯಂತ್ರಿಸಿ ಆಳಬೇಕೆನ್ನುವ ಸ್ಥಾಪಿತ ಹಿತಾಸಕ್ತಿಯವರು ತಾವು ಹೇಳಬೇಕಾದುದನ್ನು ಕಥೆಗಳ ಮೂಲಕವೇ ವಿಸ್ಮಯ ಹುಟ್ಟಿಸುವಂತೆ, ನಂಬುವಂತೆ ಹೆಣೆದು ಜನಸಾಮಾನ್ಯರನ್ನು ನಿಯಂತ್ರಿಸುತ್ತಾ ಬಂದಿದ್ದಾರೆ ಎನ್ನುವುದೂ ವಾಸ್ತವ. ಹಾಗಿದ್ದಲ್ಲಿ, ಕಥೆಗಳಿಂದ ನಮಗೆ ಬಿಡುಗಡೆ ಇಲ್ಲವೇ?

ಇಲ್ಲವೆನ್ನಬಹುದು. ಯಾಕೆಂದರೆ ಕಥೆಗಳು ಮನುಷ್ಯನ ಅಂತರಂಗದಿಂದ ಹುಟ್ಟುತ್ತವೆ. ಮೂಲತಃ ಪ್ರತಿಯೊಬ್ಬ ಮನುಷ್ಯನು ಕಥೆಗಾರನೇ. ತನ್ನ
ತಪ್ಪುಗಳನ್ನು ಮುಚ್ಚಿಹಾಕಬೇಕೆನ್ನುವಾಗ, ತನ್ನ ಸ್ವರಕ್ಷಣೆಗಾಗಿ ಮನುಷ್ಯ ಎಷ್ಟೊಂದು ಅದ್ಭುತ ಕಥೆಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದಾನೆ ಎನ್ನುವುದು ವಿಸ್ಮಯ ಹುಟ್ಟಿಸುತ್ತದೆ. ಇಂತಹ ಕಥೆಗಳು ಸತ್ಯದ ತಲೆಗೆ ಹೊಡೆದಂತೆ ನಮ್ಮ ತಲೆದೂಗಿಸುತ್ತವೆ. ಆದ್ದರಿಂದ, ಕಥೆಗಳು ಗೆಲ್ಲುತ್ತವೆಯೋ, ಸೋಲುತ್ತವೆಯೋ ಎನ್ನುವುದು ಕಥೆಗಾರನ ಕಥೆ ಹೆಣೆಯುವ ಸಾಮರ್ಥ್ಯದ ಮೇಲೆ ಅವಲಂಬಿಸಿದೆ. ಕಥೆ ಚೆನ್ನಾಗಿದ್ದರೆ ಜನರು ನಂಬಬಹುದು. ಉದಾಹರಣೆಗೆ, ಚುನಾವಣೆಯಲ್ಲಿ ಗೆಲ್ಲಲು ಪ್ರತಿ
ಅಭ್ಯರ್ಥಿಯು ತನ್ನ ಪರವಾಗಿ ಮತ್ತು ತನ್ನ ಪ್ರತಿಸ್ಪರ್ಧಿಯ ವಿರುದ್ಧವಾಗಿ ಕಥೆ ಹೆಣೆಯುವಂತೆ, ಪಕ್ಷಗಳು ತಮ್ಮ ವಿರೋಧ ಪಕ್ಷಗಳ ವಿರುದ್ಧ ಕಥೆ ಕಟ್ಟುವಂತೆ, ಅಧಿಕಾರದಲ್ಲಿರುವವರು ಇತಿಹಾಸವನ್ನು ತಮಗನುಕೂಲವಾಗುವಂತೆ ಕಾಲಕಾಲಕ್ಕೆ ಮರುಸೃಷ್ಟಿ ಮಾಡುವಂತೆ, ಕಥೆಗಳ ನೆರವು ಎಲ್ಲರಿಗೂ ಬೇಕು. ಇದು ಮನುಷ್ಯನ ಉಳಿವಿಗೂ ಬೇಕು, ಅಳಿಸಲೂ ಬೇಕು. ಕಥೆಗಳ ಮರುನಿರೂಪಣೆ ಅಗತ್ಯವೇ?  ಇದು ಕೂಡ ಇತಿಹಾಸದುದ್ದಕ್ಕೂ ನಡೆಯುತ್ತಾ ಬಂದಿದೆ. ತುಳಸಿದಾಸ, ಪಂಪ, ಕುಮಾರವ್ಯಾಸ, ಕುವೆಂಪು, ಭೈರಪ್ಪ... ಎಲ್ಲರೂ ಪುರಾಣಗಳನ್ನು ಮರುವ್ಯಾಖ್ಯಾನಿಸಿದ್ದಾರೆ. ಪ್ರತಿಯೊಂದು ಯುಗವೂ ತನ್ನದೇ ಆದ ಸತ್ಯವನ್ನು ಕಂಡುಕೊಳ್ಳಲು ಕಥೆಗಳನ್ನು ಮರುವ್ಯಾಖ್ಯಾನಿಸಿದೆ. ಇದನ್ನು ಪುನರಾವರ್ತನೆ ಅನ್ನುವುದಕ್ಕಿಂತ ಭೂತಕಾಲ ಮತ್ತು ವರ್ತಮಾನದ ನಡುವಿನ ಸಂಭಾಷಣೆಯೆನ್ನಬಹುದು. ಕಥೆಗಳ ಸತ್ಯ ಉಳಿಯುವುದು, ಅವು ಹರಿಯುವ ನದಿಯಾಗಿದ್ದರೆ ಮಾತ್ರ. ನಮ್ಮ ಕಾಲದ ಪ್ರಶ್ನೆಗಳಿಗೆ ಸ್ಪಂದಿಸಿದಾಗ ಅವು ಜೀವಂತಗೊಂಡು ನಮ್ಮೊಂದಿಗೆ ಸಂಭಾಷಣೆಗೆ ತೊಡಗುತ್ತವೆ.

ವಾಲ್ಮೀಕಿಯ ಸುತ್ತ ಹುತ್ತದಂತೆ ಕಟ್ಟಿರುವ ಸಾಕಷ್ಟು ದಂತಕಥೆಗಳು ಹೇಳುವಂತೆ, ಅವರೊಬ್ಬ ಬೇಟೆಗಾರ ಮತ್ತು ಕ್ರೌಂಚ ಹಕ್ಕಿ ಹೊಡೆದುರುಳಿಸಿದ್ದನ್ನು ನೋಡಿ ದುಃಖದಿಂದಾಗಿ ಬಾಯಿಯಿಂದ ಹೊರಬಂದ ಉಚ್ಚಾರವೇ ಮೊದಲ ಶ್ಲೋಕವಾಯಿತು; ಈ ಮೂಲಕ ಭಾರತದ ಸಾಹಿತ್ಯದ ಮೊದಲ ಮಹಾಕಾವ್ಯ ರಾಮಾಯಣದ ಜನನವಾಯಿತು. ಇಲ್ಲಿರುವ ಕೃತಿಕಾರನ ಹಿನ್ನೆಲೆಯ ಕುರಿತು ಇರುವಂತಹ ದಂತಕಥೆಗಳನ್ನು ನಾವಿಂದು ಪ್ರಶ್ನಿಸಬಹುದು. ವಿದ್ವತ್ತು ಮತ್ತು ಜ್ಞಾನ ಯಾವುದೇ ಜಾತಿಗೆ ಸೀಮಿತವಾದುದಲ್ಲ, ಸ್ವಕಲಿಕೆಯಿಂದ ಸಿದ್ಧಿಸಬಹುದು ಎನ್ನುವುದನ್ನು ನಿರೂಪಿಸಬಹುದು.

ಹೆಚ್ಚು ಜನರು ಸ್ವೀಕರಿಸುವ ಕಥೆಗಳು ದಂತಕಥೆಗಳೆನಿಸುತ್ತವೆ. ಕಾಲ ಬದಲಾದಂತೆ, ಹೊಸ ಅರಿವಿನಿಂದ ದಂತಕಥೆಗಳನ್ನೂ ಮರುನಿರ್ಮಿಸಿ ವಾಸ್ತವ ಜಗತ್ತಿನೊಂದಿಗೆ ಜೋಡಿಸುವ ಅಗತ್ಯವಿದೆ. ಇಂದು ‘ಕಾಂತಾರ’ವೆಂಬ ದಂತಕಥೆಯ ನಿರೂಪಣೆ ಜನರಿಗೆ ಇಷ್ಟವಾಗಿದೆ. ಮುಂದೊಂದು ದಿನ ಈ ದಂತಕಥೆಯನ್ನು ಕೂಡ ಮರು ನಿರೂಪಣೆ ಮಾಡಬಹುದು.

ಕೊನೆಯದಾಗಿ, ದಂತಕಥೆಗಳು ನಮಗೆ ನ್ಯಾಯ ಎಂದರೇನು? ಸತ್ಯ ಎಂದರೇನು? ಬದುಕಿನ ಅರ್ಥವೇನು? ಎನ್ನುವ ಕಾಲಾತೀತ ಪ್ರಶ್ನೆಗಳೊಂದಿಗೆ ಮುಖಾಮುಖಿಯಾಗುತ್ತವೆ. ನಾವು ಏನಾಗಿದ್ದೇವೆ ಮತ್ತು ಏನಾಗಲು ಬಯಸುತ್ತೇವೆ ಎನ್ನುವುದನ್ನು ತಿಳಿ ಹೇಳುತ್ತವೆ. ಆದ್ದರಿಂದ, ನಾವು ಕಥೆಗಳನ್ನು ನಮ್ಮ ಭರವಸೆಗಾಗಿ ಕೇಳುತ್ತೇವೆ. ಕಥೆಗಳನ್ನು ಆಲಿಸದ ಸಮಾಜಗಳು ಇಲ್ಲವೆನ್ನಬಹುದು. ಮಾನವ ಇತಿಹಾಸದಲ್ಲಿ ಕಥೆ ಹೆಣೆಯುವುದನ್ನು ಮನುಷ್ಯನ ಮೊದಲ ಬೌದ್ಧಿಕ ಚಟುವಟಿಕೆ ಎನ್ನಬಹುದು. ಕಥೆಗಳಿರುವುದು ನಮ್ಮನ್ನು ಆಲೋಚನೆಗೆ ಹಚ್ಚಲು, ಈ ಮೂಲಕ ಅವುಗಳನ್ನು ಮರು ವ್ಯಾಖ್ಯಾನಿಸುವಂತೆ ನಮ್ಮನ್ನು ಆಹ್ವಾನಿಸಲು. ಕಥೆಗಳನ್ನು ಅಂತಿಮ ಸತ್ಯದಂತೆ ಅಥವಾ ನಿಂತ ನೀರಿನಂತೆ ನಾವು ನೋಡಬಾರದು; ಹೊಸ ತೊರೆಗಳನ್ನು ಸೇರಿಸಿಕೊಳ್ಳುತ್ತಾ ನಿರಂತರವಾಗಿ ಹರಿಯುತ್ತಾ ಮುಂದುವರಿಯುವ ಜೀವನ್ಮುಖಿಯಂತೆ ಸ್ವೀಕರಿಸುವುದು ಹಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.