ADVERTISEMENT

ವಿಶ್ಲೇಷಣೆ: ಪುಸ್ತಕಗಳು ಉದ್ದೀಪಿಸಿದ ಆಶಾಭಾವ

ಸತ್ಯದ ಮಿಂಚು ದರ್ಶನ ಮಾಡಿಸಿದ ಹೆಚ್ಚಿನ ಪುಸ್ತಕಗಳು ಕೆಲವು ನಿಜ ಕತೆಗಳನ್ನು ಹೇಳಿವೆ

ಯೋಗೇಂದ್ರ ಯಾದವ್
Published 3 ಜನವರಿ 2025, 23:30 IST
Last Updated 3 ಜನವರಿ 2025, 23:30 IST
   

ನಮ್ಮ ಕಾಲದಲ್ಲಿ ಸತ್ಯವು ನಿರಾಶ್ರಿತ. ಭೂಮಿಯ ಮೇಲಿರುವ ತನ್ನ ಮನೆಯಿಂದ ಹೊರದಬ್ಬಲ್ಪಟ್ಟು, ದೇಶಭ್ರಷ್ಟವಾಗಿ, ಆಶ್ರಯಕ್ಕಾಗಿ ಅಲೆದಾಡುತ್ತಿದೆ. ನಮ್ಮ ಹಳ್ಳಿಯ ದೂರದ ಈ ನೆಂಟನಿಂದ ತೀರಾ ಮುಜುಗರಕ್ಕೆ ಒಳಗಾಗಿರುವ ನಾವು, ಡ್ರಾಯಿಂಗ್‌ ರೂಂನ ಸಂಭಾಷಣೆಗಳಿಂದಲೂ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಂದಲೂ ವಿನಯಪೂರ್ವಕವಾಗಿ ದೂರಕ್ಕೆ ತಳ್ಳಿದ್ದೇವೆ. ಗುಂಪು ಹಲ್ಲೆಗೊಳಗಾಗುವ ಭೀತಿಯಿಂದ ಸುದ್ದಿವಾಹಿನಿಯ ಸ್ಟುಡಿಯೊಗಳಿಂದ ಇದು ದೂರವೇ ಇದೆ. ಬೀದಿಯಲ್ಲಿರುವ ಭಿಕ್ಷುಕನಂತೆ ಇದು ಅಗೋಚರ; ಪತ್ರಿಕೆಗಳ ಮುಖಪುಟದಲ್ಲಿ ಹಾಕಲಾರದಷ್ಟು ಇದರ ಬಗ್ಗೆ ನಮಗೆ ಸದರ ಇದೆ, ಸುದ್ದಿಯಾಗಿ ಪರಿಗಣಿಸುವುದಕ್ಕೂ ಸಾಧ್ಯವಾಗದಷ್ಟು ಇದು ಹಳತಾಗಿಬಿಟ್ಟಿದೆ. 

2024ರಲ್ಲಿ, ಸತ್ಯವು ಕೆಲವು ಪುಸ್ತಕಗಳಲ್ಲಿ ತಾತ್ಕಾಲಿಕ ಆಶ್ರಯ ಪಡೆದುಕೊಂಡಿತ್ತು. ಇವು ಸಿದ್ಧಾಂತಗಳ ಹಲವು ಪದರಗಳಲ್ಲಿ ಸುತ್ತುವರಿದಿರುವ, ಸತ್ಯವನ್ನು ಗುರುತಿಸಲಾಗದ ಶೈಕ್ಷಣಿಕ ಗ್ರಂಥಗಳಲ್ಲ. ಈ ವರ್ಷ ಸತ್ಯದ ಮಿಂಚು ದರ್ಶನ ಮಾಡಿಸಿದ ಹೆಚ್ಚಿನ ಪುಸ್ತಕಗಳು ಕೆಲವು ನಿಜ ಕತೆಗಳನ್ನು ಹೇಳಿವೆ. ಈ ವರ್ಷದ ಕತೆಗಳಿಂದ ಹಿಡಿದು ಅರ್ಧ ಶತಮಾನದ ಹಿಂದಿನ ಕತೆಗಳವರೆಗೆ, ರಾಜಕೀಯ ಕತೆಗಳಿಂದ ಹಿಡಿದು ವೈಯಕ್ತಿಕ ಕಥನಗಳವರೆಗೆ, ಹತಾಶೆಯ ಕತೆಗಳಿಂದ ಭರವಸೆಯ ಕತೆಗಳವರೆಗೆ ಎಲ್ಲವೂ ಇದರಲ್ಲಿ ಒಳಗೊಂಡಿದ್ದವು. ಈ ಕತೆಗಳಿಂದ ಪಾಠಗಳನ್ನು ಕಲಿಯಲು ಈ ಪುಸ್ತಕಗಳು ನಮಗೆ ನೆರವಾಗುತ್ತವೆ. ಭಾರತದ ಕುರಿತು ಭಾರತದಲ್ಲಿ 2024ರಲ್ಲಿ ಪ್ರಕಟವಾದ ಕೆಲವು ಪುಸ್ತಕಗಳ ಕಡೆಗೆ ಗಮನಹರಿಸೋಣ (ನಾನು ಓದಬೇಕು ಎಂದು ಭಾವಿಸಿದ್ದ, ಓದಲೇ ಬೇಕಾಗಿದ್ದ ಆದರೆ ಓದಲು ಸಾಧ್ಯವಾಗದ ಪುಸ್ತಕಗಳನ್ನು ಇಲ್ಲಿ ಸೇರಿಸಿಲ್ಲ ಎಂಬ ಬಗ್ಗೆ ವಿಷಾದವಿದೆ). 

ವರ್ಷದ ಅತ್ಯಂತ ನೇರ ಮತ್ತು ಸ್ಪಷ್ಟ ಕಥನವನ್ನು ಕಟ್ಟಿಕೊಟ್ಟಿದ್ದು ರಾಜ್‌ದೀಪ್‌ ಸರ್ದೇಸಾಯಿ ಅವರ ‘2024: ದಿ ಎಲೆಕ್ಷನ್‌ ದಟ್‌ ಸರ್‌ಪ್ರೈಸ್ಡ್‌ ಇಂಡಿಯಾ’ (ಹಾರ್ಪರ್‌ ಕಾಲಿನ್ಸ್‌). ಲವಲವಿಕೆಯಿಂದ ನಮ್ಮನ್ನು ಆವರಿಸಿದರೂ ಸಮತೋಲನ ಕಾಯ್ದುಕೊಂಡಿರುವ ಗದ್ಯವು ಲೇಖಕನಲ್ಲಿನ ಅತ್ಯುತ್ತಮವಾದುದನ್ನು ಹೊರತಂದಿದೆ. ತಳಮಟ್ಟದ ಸ್ಪರ್ಶವನ್ನು ಉಳಿಸಿಕೊಂಡಿರುವ ಹಿರಿಯ ಸಂಪಾದಕ ಮತ್ತು ಸುದ್ದಿವಾಹಿನಿ ತಾರೆಯಾಗಿರುವ ಇವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಎಂದೂ ಹಿಂಜರಿದವರಲ್ಲ. ಈ ಬಾರಿಯ ಅಸಾಧಾರಣ ಚುನಾವಣೆಯನ್ನು ನೀವು ನಿಕಟವಾಗಿ ಗಮನಿಸದೇ ಇದ್ದರೆ, ಈ ಪುಸ್ತಕ ಓದುವ ಮೂಲಕ ಎಲ್ಲವನ್ನೂ ಮರುಸೃಷ್ಟಿಸಿಕೊಳ್ಳಬಹುದು. ಚುನಾವಣೆ ಮೇಲೆ ನಿಗಾ ಇರಿಸಿದ್ದರೂ ‘ಮೀಡಿಯಾ ಟೇಕ್‌ಓವರ್‌’ ಎಂಬ ಅಧ್ಯಾಯವನ್ನಂತೂ ಓದಲೇಬೇಕು. ಈ ಅಧ್ಯಾಯವನ್ನೇ ಒಂದು ಪೂರ್ಣ ಕೃತಿ ಎಂದೂ ಪರಿಗಣಿಸಬಹುದು.  

ADVERTISEMENT

ರಾಹುಲ್‌ ಭಾಟಿಯಾ ಅವರ ‘ದಿ ಐಡೆಂಟಿಟಿ ಪ್ರಾಜೆಕ್ಟ್‌: ದಿ ಅನ್‌ಮೇಕಿಂಗ್‌ ಆಫ್‌ ಎ ಡೆಮಾಕ್ರಸಿ’ (ಕಾಂಟೆಕ್ಸ್ಟ್/ವೆಸ್ಟ್‌ಲ್ಯಾಂಡ್‌) ಭಾರತದ ಪ್ರಜಾಪ್ರಭುತ್ವವನ್ನು ಹಿಂದಿನ ಒಂದು ದಶಕದಲ್ಲಿ ಹೇಗೆ ಕೆಡವಲಾಯಿತು ಎಂಬ ಕಥನವನ್ನು ಹೇಳುತ್ತದೆ. ಸಾಮಾನ್ಯರಾದ ಹಲವರು ಮತ್ತು ಅಷ್ಟೊಂದು ಸಾಮಾನ್ಯರಲ್ಲದ ಕೆಲವರ ಬದುಕಿನ ಮೂಲಕ ಅತ್ಯಂತ ಗಾಢವಾದ ಮತ್ತು ಎಳೆ ಎಳೆಯಾದ ಸಂಶೋಧನೆಯ ಮೂಲಕ ಈ ಕಥನವನ್ನು ಕಟ್ಟಲಾಗಿದೆ. ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದ ಗಲಭೆಯ ಸಂತ್ರಸ್ತ ಮತ್ತು ಸಾಕ್ಷಿಯಾದ ನಿಸಾರ್‌ನ ವಿಚಾರಣೆಗಳು ಮತ್ತು ಸಂಕಟಗಳನ್ನು ಇಲ್ಲಿ ಬಿಡಿಸಿಡಲಾಗಿದೆ. ಮನಸೂರೆಗೊಳ್ಳುವ ಈ ಪುಸ್ತಕವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಸಿಎಎ ವಿರೋಧಿ ಪ್ರತಿಭಟನೆಗಳು ಮತ್ತು ದೆಹಲಿ ಗಲಭೆಯ ಕತೆ ಹೇಳುತ್ತದೆ. ಜೊತೆಗೆ ಆರ್‌ಎಸ್‌ಎಸ್‌ನ ಉತ್ಕರ್ಷದತ್ತಲೂ ಬೆಳಕು ಚೆಲ್ಲುತ್ತದೆ. ಆಸಕ್ತಿಕರವೆಂದರೆ, ಭಾರಿ ದತ್ತಾಂಶ ಸಂಗ್ರಹದ ಆಧಾರ್‌ ಅನ್ನೂ ‘ಗುರುತಿನ ಯೋಜನೆ’ (ದಿ ಐಡೆಂಟಿಟಿ ಪ್ರಾಜೆಕ್ಟ್‌) ಮೂಲಕ ಒಳಗೊಳ್ಳುತ್ತದೆ. 

ಭಾಟಿಯಾ ಅವರ ಕತೆ ಕೊನೆಯಾಗುವಲ್ಲಿಂದ ನೇಹಾ ದೀಕ್ಷಿತ್‌ ಅವರ ‘ದಿ ಮೆನಿ ಲೈವ್ಸ್‌ ಆಫ್‌ ಸೈದಾ ಎಕ್ಸ್‌: ದಿ ಸ್ಟೋರಿ ಆ‍ಫ್‌ ಅನ್‌ನೋನ್‌ ಇಂಡಿಯನ್‌’ (ಜಗರ್‌ನಾಟ್‌) ಆರಂಭವಾಗುತ್ತದೆ. ಎರಡು ಕರಾಳ ಘಟನೆಗಳ ನಡುವಣ ಮೂರು ದಶಕಗಳ ಭಾರತದ ಕತೆಯನ್ನು ಈ ಪುಸ್ತಕ ಹೇಳುತ್ತದೆ. ಬಾಬರಿ ಮಸೀದಿ ಧ್ವಂಸ ಮತ್ತು ದೆಹಲಿಯಲ್ಲಿ 2020ರಲ್ಲಿ ನಡೆದ ಗಲಭೆ ಆ ಎರಡು ಘಟನೆಗಳು. ಸೈದಾ ಎಂಬ ಮಹಿಳೆಯ ದೃಷ್ಟಿಕೋನದಿಂದ ಎಲ್ಲ ಬೆಳವಣಿಗೆಗಳನ್ನು ನೋಡಲಾಗಿದೆ. ಕಾರ್ಮಿಕ ವರ್ಗದ ಈ ಮಹಿಳೆ ಎರಡೂ ಕರಾಳ ಘಟನೆಗಳ ಸಂತ್ರಸ್ತೆ. ಅಸಾಧಾರಣ ಸಹಾನುಭೂತಿ ಮತ್ತು ಬೆರಗುಗೊಳಿಸುವ ವಿವರಗಳೊಂದಿಗೆ ಕಥನವು ನಮ್ಮನ್ನು ಒಳಗೊಳ್ಳುತ್ತಾ ಹೋಗುತ್ತದೆ. ಸೈದಾ ಮತ್ತೆ ಮತ್ತೆ ಸ್ಥಳಾಂತರಗೊಳ್ಳುವ ಮತ್ತು ಕೆಲಸಗಳನ್ನು ಕಳೆದುಕೊಳ್ಳುವ ಕತೆಯು ಹೆಡ್‌ಲೈನ್‌ನ ಕೆಳಗೆ ಮತ್ತು ಆಚೆಗೆ ಇರುವ ಸತ್ಯವನ್ನು ಅನಾವರಣಗೊಳಿಸುತ್ತದೆ. ಪಾಂಡಿತ್ಯ ಪ್ರದರ್ಶನ ಇಲ್ಲದ ಈ ಬರಹವು ನಮ್ಮ ಕಾಲದ ತಲಸ್ಪರ್ಶಿ (ಸಬಾಲ್ಟರ್ನ್‌) ಅಧ್ಯಯನವಾಗಿದೆ. 

ಹಿಲಾಲ್‌ ಅಹ್ಮದ್‌ ಅವರ ‘ಬ್ರೀಫ್‌ ಹಿಸ್ಟರಿ ಆಫ್‌ ದಿ ಪ್ರಸೆಂಟ್‌: ಮುಸ್ಲಿಮ್ಸ್‌ ಇನ್‌ ನ್ಯೂ ಇಂಡಿಯಾ’ (ಪೆಂಗ್ವಿನ್‌/ವಿಕಿಂಗ್‌) ಕೃತಿಯು ಈ ಹಿಂದಿನ ಎರಡು ಕೃತಿಗಳಷ್ಟು ವಿಶದವಲ್ಲ (ಮತ್ತು ಭಾಟಿಯಾ ಅವರ ಕೃತಿಯಲ್ಲಿ ಇರುವಷ್ಟು ಅಂಧಕಾರ ಇಲ್ಲಿಲ್ಲ). ಆದರೆ, ‘ನವ ಭಾರತ’ದಲ್ಲಿ ಮುಸ್ಲಿಮರ ರಾಜಕೀಯ ಇಕ್ಕಟ್ಟು ಮತ್ತು ಭವಿಷ್ಯದ ಸಾಧ್ಯಾಸಾಧ್ಯತೆಗಳ ಕುರಿತು ಹೆಚ್ಚು ಸ್ಪಷ್ಟವಾದ ಚಿತ್ರಣವನ್ನು ನಿರ್ಭಾವುಕ ಗದ್ಯದಲ್ಲಿ ಬಿಡಿಸಿಡುತ್ತದೆ. 

‘ಥ್ಯಾಂಕ್‌ ಯೂ, ಗಾಂಧಿ’ (ಪೆಂಗ್ವಿನ್‌/ವಿಕಿಂಗ್‌) ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ವಿಶಿಷ್ಟವಾದ ಪುಸ್ತಕ. ಲೇಖಕ ಕೃಷ್ಣ ಕುಮಾರ್‌ ಅವರು ದೇಶದ ಪ್ರಮುಖ ಶಿಕ್ಷಣ ತಜ್ಞರಲ್ಲಿ ಒಬ್ಬರು. ಶಿಕ್ಷಣಶಾಸ್ತ್ರಕ್ಕೆ ಸಂಬಂಧಿಸಿ ಬರೆಯುತ್ತಾರೆ ಮತ್ತು ಹಿಂದಿಯ ಸೃಜನಶೀಲ ಲೇಖಕ. ಸಾಮಾನ್ಯವಾಗಿ ಅವರು ಸಮಕಾಲೀನ ರಾಜಕಾರಣದ ಕುರಿತು ಟೀಕೆ–ಟಿಪ್ಪಣಿಗಳನ್ನು ಮಾಡುವುದಿಲ್ಲ. ಆದರೆ, ಈ ಪುಸ್ತಕವನ್ನು ವರ್ಗೀಕರಿಸುವುದು ಕಷ್ಟಸಾಧ್ಯ. ಮೃತಪಟ್ಟ ಗೆಳೆಯನೊಬ್ಬನ ಅಪೂರ್ಣ ಹಸ್ತಪ್ರತಿಯ ಕಾಲ್ಪನಿಕ ಕತೆಯಲ್ಲಿ ಭಾರತವು ತನ್ನ ಮೂಲಭೂತ ಚಿಂತನೆಗಳಿಂದ ಎಷ್ಟು ದೂರ ಸಾಗಿದೆ ಎಂಬುದರ ಕುರಿತ ವಿಶ್ಲೇಷಣೆ ಇದೆ. ಇಲ್ಲಿ ಶೋಕ, ನಿಟ್ಟುಸಿರು ಮತ್ತು ತಪ್ಪು ಹೊರಿಸುವಿಕೆ ಇದೆ. ಆಶಾವಾದಕ್ಕೂ ಕಾರಣಗಳಿವೆ ಎಂಬುದೂ ಕೃತಿಯಲ್ಲಿ ಇದೆ. ಗಾಂಧಿ ಇಲ್ಲಿ ಮಸೂರ, ಮಧ್ಯಸ್ಥ ಮತ್ತು ಪ್ರಧಾನ ರೂಪಕ: ‘ಸಮಯವಾಯಿತು ಎಂದು ನಾನು ಗಾಂಧಿಗೆ ವಿದಾಯವನ್ನೂ ವಂದನೆಯನ್ನೂ ಹೇಳಿದೆ. ನನ್ನನ್ನು ಅನುಸರಿಸಿ ಎಂದು ಹೇಳಲು ಬಯಸಿದ್ದೆ. ಆದರೆ, ಅವರು ಆರಾಮವಾಗಿರಬಹುದಾದ ಯಾವ ಸ್ಥಳಕ್ಕೆ ಅವರನ್ನು ಕರೆದೊಯ್ಯಬೇಕು ಎಂಬುದು ನನಗೆ ತಿಳಿದಿಲ್ಲ’.

ಇತರ ಹಲವು ಪುಸ್ತಕಗಳು ವಿವಿಧ ರೀತಿಯಲ್ಲಿ ಆಶಾಭಾವ ಮೂಡಿಸಿವೆ. ಪ್ರಸಿದ್ಧ ಸಮಾಜಶಾಸ್ತ್ರಜ್ಞ ಮತ್ತು ತುರ್ತು ಪರಿಸ್ಥಿತಿ ವಿರೋಧಿ ಕಾರ್ಯಕರ್ತ ಆನಂದ್‌ ಕುಮಾರ್‌ ಅವರು ಭಾರತದ ಪಯಣದಲ್ಲಿನ ಕತ್ತಲ ಅವಧಿ ಮತ್ತು ಅದರಿಂದ ಹೇಗೆ ಹೊರಬರಲಾಯಿತು ಎಂಬುದರ ಸಾರವನ್ನು ಕಟ್ಟಿಕೊಟ್ಟಿದ್ದಾರೆ. ತುರ್ತುಪರಿಸ್ಥಿತಿಯ ಪ್ರಸಿದ್ಧ ಇತಿಹಾಸಗಳಲ್ಲಿ ಈತನಕ ಎಲ್ಲಿಯೂ ಬಳಕೆಯಾಗದ ಹಿಂದಿ ಮೂಲಗಳಿಂದ ಮಾಹಿತಿ ಪಡೆದು ‘ಎಮರ್ಜೆನ್ಸಿ ರಾಜ್‌ ಕಿ ಅಂತರಕತಾ’ (ಸೇತು ಪ್ರಕಾಶನ) ಕೃತಿಯನ್ನು ರೂಪಿಸಲಾಗಿದೆ. ವಿನೋಬಾ ಭಾವೆ ಅವರು ತುರ್ತುಪರಿಸ್ಥಿತಿಯನ್ನು ಬೆಂಬಲಿಸಿದ್ದರು ಮತ್ತು ಜಯಪ್ರಕಾಶ ನಾರಾಯಣ ಅವರು ಆರ್‌ಎಸ್‌ಎಸ್‌ ಮತ್ತು ಜನಸಂಘವನ್ನು ಒಪ್ಪಿಕೊಂಡಿದ್ದರು ಎಂಬ ಜನಪ್ರಿಯ ಕಥನವನ್ನು ಇಲ್ಲಿ ಪ್ರಶ್ನಿಸಲಾಗಿದೆ ಎಂಬುದು ಬಹಳ ಮುಖ್ಯವಾಗಿದೆ. 

‘ಜೆಂಟಲ್‌ ರೆಸಿಸ್ಟೆನ್ಸ್‌: ದಿ ಆಟೊಬಯಾಗ್ರಫಿ ಆಫ್‌ ಚಂಡಿ ಪ್ರಸಾದ್‌ ಭಟ್‌’ (ಪರ್ಮನೆಂಟ್‌ ಬ್ಲ್ಯಾಕ್‌) ಹಿಂದಿಯಿಂದ ಅತ್ಯುನ್ನತ ಗುಣಮಟ್ಟದಲ್ಲಿ ಅನುವಾದಗೊಂಡಿರುವ ಕೃತಿ. ಸರ್ವೋದಯ ಕಾರ್ಯಕರ್ತ, ಪರಿಸರ ಹೋರಾಟಗಾರ ಮತ್ತು ಚಿಪ್ಕೊ ಚಳವಳಿಯ ಸ್ಥಾಪಕನ ಬದುಕಿನ ಚಿತ್ರಣದ ಮೂಲಕ ಹಿಂದೆ ಇದ್ದ ‘ಆಂದೋಲನಜೀವಿ’ಗಳ ಸರಳ ಮತ್ತು ಕಠಿಣ ಬದುಕಿನ ಕುರಿತ ಒಳನೋಟಗಳನ್ನು ನೀಡಲಾಗಿದೆ. 

ಯುವ ರಾಜಕೀಯ ಚಿಂತಕಿ ವನ್ಯ ವೈದೇಹಿ ಭಾರ್ಗವ್‌ ಅವರು ತಮ್ಮ ಶೈಕ್ಷಣಿಕ ಸಂಶೋಧನೆಯನ್ನು ‘ಇನ್‌ ಬೀಯಿಂಗ್‌ ಹಿಂದೂ, ಬೀಯಿಂಗ್‌ ಇಂಡಿಯನ್‌: ಲಾಲಾ ಲಜಪತ್‌ ರಾಯ್ಸ್‌ ಐಡಿಯಾಸ್‌ ಆಫ್‌ ನೇಷನ್‌ಹುಡ್‌’ (ಪೆಂಗ್ವಿನ್‌/ವಿಕಿಂಗ್‌) ಎಂಬ ಸರಳ ಪುಸ್ತಕವಾಗಿ ಪರಿವರ್ತಿಸಿದ್ದಾರೆ. ಇಂದಿನ ಹಿಂದೂ ರಾಷ್ಟ್ರೀಯವಾದದ ಪೂರ್ವಜ ಎಂದು ವ್ಯಾಪಕವಾಗಿ ನಂಬಲಾಗಿರುವ ನಾಯಕ ಲಜಪತ್‌ ರಾಯ್‌ ಅವರನ್ನು ಭಿನ್ನವಾಗಿ ನೋಡುವ ಪ್ರಯತ್ನ ಇಲ್ಲಿದೆ. ಕಷ್ಟಕರವಾದ ಪ್ರಶ್ನೆಯೊಂದನ್ನು ಕೇಳಿಕೊಳ್ಳುವಂತೆಯೂ ಈ ಕೃತಿಯು ನಮ್ಮನ್ನು ಪ್ರೇರೇಪಿಸುತ್ತದೆ: ‘ನಾವು ಅನುಸರಿಸುತ್ತಿರುವ ಜಾತ್ಯತೀತ ರಾಜಕಾರಣವು ಹಿಂದೂ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಗಾಂಧೀಜಿಯಂಥವರ ಪರಂಪರೆ ಎಂದು ಹೇಳಲಾಗುತ್ತಿದೆ. ಆದರೆ, ಹಿಂದೂ ಸಮುದಾಯದ (ವಸಾಹತು ಕಾಲದ ಪಂಜಾಬ್‌ಗೆ ಸಂಬಂಧಿಸಿ, ಆಗ ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರು) ವಕ್ತಾರರೇ ಆಗಿದ್ದ ಲಜಪತ್‌ ರಾಯ್‌ ಅವರು ಮುಸ್ಲಿಂ ವಿರೋಧಿ ಕೋಮುವಾದಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ. ಹೀಗಾಗಿ, ಜಾತ್ಯತೀತ ಪರಂಪರೆಯು ಲಜಪತ್‌ ರಾಯ್‌ ಅವರದ್ದೂ ಅಲ್ಲವೇ?’

ಜಾತ್ಯತೀತ ರಾಜಕಾರಣವು ಈತನಕ ನಿರ್ಲಕ್ಷಿಸಲಾಗಿದ್ದ ಮತ್ತು ತಿರಸ್ಕರಿಸಲಾಗಿದ್ದ ಪರಂಪರೆಯಿಂದ ತನ್ನ ಸೈದ್ಧಾಂತಿಕ ಸಂಪನ್ಮೂಲವನ್ನು ಪಡೆದುಕೊಳ್ಳಬಹುದೇ? ನಿರ್ಮಲ್‌ ವರ್ಮಾ ಅವರ ಆಯ್ದ ಪ್ರಬಂಧಗಳ ನಾಲ್ಕು ಸಂಕಲನಗಳು ಮರುಮುದ್ರಣಗೊಂಡಿವೆ. ಶತಾಬ್ದಿ ಕೆ ಧಲ್ತೆ ವರ್ಷೊಂ ಮೆ ಮತ್ತು ದೂಸ್ರಾ ಶಬ್ದೊಂ ಮೆ ಹಾಗೂ ಸಂದರ್ಶನಗಳಾದ ಸಂಸಾರ್‌ ಮೆ ನಿರ್ಮಲ್‌ ವರ್ಮಾ: ಪೂರ್ವಾರ್ಧ್‌ ಮತ್ತು ಉತ್ತರಾರ್ಧ್‌ (ಸಂಪಾದನೆ ಗಗನ್‌ ಗಿಲ್‌ ಮತ್ತು ಪ್ರಕಟಣೆ ರಾಜ್‌ಕಮಲ್‌ ಪ್ರಕಾಶನ) ಕುರಿತು ನಾವೆಲ್ಲರೂ ಸಾಮೂಹಿಕವಾಗಿ ಚಿಂತನೆ ನಡೆಸಬೇಕಾಗಿದೆ. ವರ್ಮಾ ಅವರ ಸೃಜನಶೀಲ ಸಾಹಿತ್ಯಕ್ಕೆ ಅರ್ಹ ಮನ್ನಣೆ ಸಿಕ್ಕಿದೆ. ಆದರೆ, ಇತಿಹಾಸ, ಸ್ಮರಣೆ, ಸಂಸ್ಕೃತಿ, ಕಲೆ ಮತ್ತು ರಾಷ್ಟ್ರೀಯತೆ ಕುರಿತು ಅವರು ವ್ಯಾಪಕವಾಗಿ ಬರೆದಿರುವ ಪ್ರಬಂಧಗಳನ್ನು ‘ಬಲಪಂಥೀಯ’ ಎಂಬ ಹಣೆಪಟ್ಟಿ ಕಟ್ಟಿ ನಿರ್ಲಕ್ಷಿಸಲಾಗಿದೆ. ಅವರ ಪ್ರಬಂಧಗಳನ್ನು ಹೆಚ್ಚು ಎಚ್ಚರದಿಂದ ಓದಿದರೆ, ಅದರಲ್ಲೂ ವಿಶೇಷವಾಗಿ 1970ರ ದಶಕ ಮತ್ತು 1980ನೇ ದಶಕದ ಆರಂಭಿಕ ವರ್ಷಗಳ ಬರಹಗಳು, ಆಧುನಿಕ ಮತ್ತು ಜಾತ್ಯತೀತ ಮಾತ್ರವಲ್ಲ ಹಿಂದುತ್ವ ರಾಜಕಾರಣವನ್ನೂ ಭಾರತೀಯ ದೃಷ್ಟಿಕೋನದಿಂದ ಪ್ರಶ್ನಿಸಲು ಹೊಸದೊಂದು ಮಾರ್ಗ ತೆರೆದುಕೊಳ್ಳುತ್ತದೆ. 

ಗುಲ್ಜಾರ್‌ ಅವರ ‘ಬಾಲ್‌–ಒ–ಪರ್‌’ (ಹಾರ್ಪರ್‌ ಕಾಲಿನ್ಸ್‌, ಅನುವಾದ: ರಕ್ಷಾಂದ ಜಲೀಲ್‌) ಮತ್ತು ‘89 ಆಟಮ್ಸ್‌ ಆಫ್‌ ಪೋಯೆಮ್ಸ್‌’ (ಪೆಂಗ್ವಿನ್‌/ಹಮಿಶ್‌ ಹ್ಯಾಮಿಲ್ಟನ್‌, ಅನುವಾದ: ಪವನ್‌ ಕೆ. ವರ್ಮಾ) ನಮ್ಮ ಕಾಲದ ಸತ್ಯವನ್ನು ಇನ್ನಷ್ಟು ಭಿನ್ನವಾಗಿ ತೋರಿಸುತ್ತದೆ. ಗುಲ್ಜಾರ್‌ ಅವರು ರಾಜಕೀಯ ಅಥವಾ ಹೋರಾಟಗಾರ ಕವಿ ಅಲ್ಲ. ಆದರೆ, ಎಚ್ಚರದ ಓದು ನಾವು ಯಾವ ಕಾಲದಲ್ಲಿ ಬದುಕಿದ್ದೇವೆ ಎಂಬುದನ್ನು ತೋರಿಸುವ ಗಾಢವಾದ ಸುಳಿವುಗಳು ಸಿಗುತ್ತವೆ. ‘ಹವಾ ಬದ್ಲಿ ಹುಯಿ ಹೇ’ ಎಂಬ ಕವಿತೆಯ ನನ್ನ ನೆಚ್ಚಿನ ಸಾಲುಗಳು ಹೀಗಿವೆ: ಹವಾ ಕ ರುಖ್‌ ಬದಲ್ನೆ ಲಗಾ ಹೇ/ ನಯೆ ಝಂಡೆ ನಜರ್‌ ಆನೆ ಲಗೆ ಹೇ/ ಯಹಿ ಹೋತಾ ಹೇ ಝಂಡೆ ಫಡ್‌ಫಡ್‌ತೆ ಹೇ ಹವಾ ಮೇ ಜಬ್‌/ ಹವಾ ಭಿ ಫಡ್‌ಫಡಾನೆ ಲಗ್ತಿ ಹೇ ಝಂಡಾ ಪಕಡ್‌ ಕರ್‌ (ಗಾಳಿಯ ದಿಕ್ಕು ಬದಲಾಗಿದೆ: ಗಾಳಿಯು ಹೊಸ ದಿಕ್ಕಿನತ್ತ ಸಾಗುತ್ತಿದೆ/ ಹೊಸ ಬಾವುಟಗಳು ಕಾಣಿಸಲಾರಂಭಿಸಿವೆ/ ಬಾವುಟಗಳು ಗಾಳಿಯಲ್ಲಿ ಪಟಪಟಿಸುವಾಗ ಹಾಗೆಯೇ ಆಗುತ್ತದೆ/ ಗಾಳಿಯೂ ಕಂಪಿಸುತ್ತದೆ, ಬಾವುಟವ ಗಟ್ಟಿ ಹಿಡಿದು). 

ಗಾಳಿ ಮತ್ತು ಬಾವುಟದ ಜೊತೆಗೆ ಸತ್ಯವು ಕಂಪಿಸದು ಎಂಬುದನ್ನು ಖಾತರಿಪಡಿಸಿಕೊಳ್ಳುವುದು ನಮ್ಮ ಕಾಲದ ಸವಾಲು. 

ಮುಗಿಸುವ ಮುನ್ನ: ಇದು ಮೇಲೆ ಹೆಸರಿಸಿರುವ ಪುಸ್ತಕಗಳ ಯಾದಿಗೆ ಹೊಂದುವುದಿಲ್ಲ. ಆದರೆ, ಸೊಪನ್‌ ಜೋಶಿ ಅವರ ‘ಮ್ಯಾಂಗಿಫೆರಾ ಇಂಡಿಕಾ: ಎ ಬಯೊಗ್ರಫಿ ಆಫ್‌ ದಿ ಮ್ಯಾಂಗೊ’ ಪುಸ್ತಕವನ್ನು ಉಲ್ಲೇಖಿಸದೆ ಪುಸ್ತಕಗಳ ಪಟ್ಟಿಯನ್ನು ಪೂರ್ಣಗೊಳಿಸಲಾಗದು. ಮಾವಿನ ಹಣ್ಣುಗಳ ಬಗ್ಗೆ ನನಗೆ ಇರುವ ಗೀಳು ಕಂಡು ಹೆಂಡತಿ ಮತ್ತು ಮಕ್ಕಳು ನನಗೆ ಉಡುಗೊರೆಯಾಗಿ ಕೊಟ್ಟ ಪುಸ್ತಕ ಇದು. ಹಲವಾರು ಪುಟ್ಟ ಕತೆಗಳಿರುವ, ಸಂಶೋಧನೆ ಮತ್ತು ವಿವೇಕಪೂರ್ಣವಾದ ರಸವತ್ತಾದ ಕೃತಿ ಇದು. ನಮ್ಮ ಕಾಲದ ಯಾವುದೇ ಕಹಿ ನೆನಪುಗಳನ್ನು ಅಳಿಸಿ ಹಾಕುವಂತಹ ಸವಿ ಈ ಪುಸ್ತಕದಲ್ಲಿ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.