
ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ಬಿಡುಗಡೆ ಆಗಿರುವುದು, ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪಗಳನ್ನು ಬಲಪಡಿಸುತ್ತಿದೆ.
ತನಿಖಾ ಸಂಸ್ಥೆಗಳ ದುರುಪಯೋಗದ ಮೂಲಕ ವಿರೋಧ ಪಕ್ಷಗಳ ನಾಯಕರ ಮೇಲೆ ಕೇಂದ್ರ ಸರ್ಕಾರ ಹಿಂಸಾತ್ಮಕ ಅಭಿಯಾನ ನಡೆಸುತ್ತಿದೆ ಎನ್ನುವ ಆರೋಪಗಳಿಗೆ ಸಿಬಿಐ ವಿಶೇಷ ನ್ಯಾಯಾಲಯದ ಇತ್ತೀಚಿನ ತೀರ್ಪು ಪುಷ್ಟಿ ನೀಡುವಂತಿದೆ. ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಇತರ ಇಪ್ಪತ್ತೆರಡು ಜನರನ್ನು ನ್ಯಾಯಾಲಯ ಆರೋಪಗಳನ್ನು ನಿಗದಿಪಡಿಸದೆಯೇ ಬಿಡುಗಡೆ ಮಾಡಿದೆ. ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಮತ್ತು ಅವಲೋಕನವು, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ‘ತೆಲಂಗಾಣ ಜಾಗೃತಿ’ ಸಂಘಟನೆಯ ಅಧ್ಯಕ್ಷೆ ಕೆ. ಕವಿತಾ ಸೇರಿದಂತೆ ವಿಚಾರಣೆ ಎದುರಿಸದೆಯೇ ಬಿಡುಗಡೆಯಾದ ಎಲ್ಲರೂ ನೆಮ್ಮದಿಯ ಉಸಿರು ಬಿಡುವಂತೆ ಮಾಡಿದೆ; ಈ ತೀರ್ಪು, ತನಿಖೆ ನಡೆಸಿದ ಕೇಂದ್ರೀಯ ತನಿಖಾ ತಂಡದ (ಸಿಬಿಐ) ಕಾರ್ಯವೈಖರಿಯ ಬಗೆಗಿನ ಕಟುಟೀಕೆಯೂ ಆಗಿದೆ. ಆರೋಪಿಗಳು ಸಂಚು ರೂಪಿಸುವ ಅಥವಾ ಅಪರಾಧ ಎಸಗುವ ಉದ್ದೇಶ ಹೊಂದಿದ್ದರು ಎನ್ನುವುದನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿರುವ ತನಿಖಾ ಸಂಸ್ಥೆ, ಊಹೆಗಳ ಆಧಾರದಲ್ಲಿ ಸಂಚಿನ ಸಂಕಥನವೊಂದನ್ನು ಕಟ್ಟಲು ಪ್ರಯತ್ನಿಸಿದೆ ಎಂದು ಕಟು ಶಬ್ದಗಳಲ್ಲಿ ಟೀಕಿಸಿದೆ. ಪ್ರಕರಣದಲ್ಲಿನ ವಿರೋಧಾಭಾಸಗಳು ಮತ್ತು ಸಿಬಿಐ ತನಿಖಾ ವಿಧಾನದಲ್ಲಿನ ಲೋಪಗಳನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಗುರ್ತಿಸಿದೆ.
ನಿರ್ದಿಷ್ಟ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವುದಕ್ಕೆ ಪೂರಕವಾಗಿ ಅಬಕಾರಿ ನೀತಿಯನ್ನು ರೂಪಿಸಲು ₹100 ಕೋಟಿ ಪಡೆಯಲಾಗಿದೆ ಎಂದುಆರೋಪಿಸಿ, ವಿವಿಧ ಸೆಕ್ಷನ್‌ಗಳ ಅಡಿ ಯಲ್ಲಿ ಸಿಬಿಐ 2022ರ ಆಗಸ್ಟ್‌ನಲ್ಲಿ ಪ್ರಕರಣ ದಾಖಲಿಸಿತ್ತು. ಆ ಪ್ರಕರಣದಲ್ಲಿ, ಆಗ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಹಾಗೂ ಮತ್ತಿತರ ನಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಕೇಜ್ರಿವಾಲ್ ಅವರು ಆರು ತಿಂಗಳು ಹಾಗೂ ಸಿಸೋಡಿಯಾ ಅವರು ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದರು. ಜಾಮೀನು ಪಡೆಯುವು ದಕ್ಕಾಗಿ ಆರೋಪಿಗಳು ದೀರ್ಘಕಾಲದ ಕಾನೂನು ಹೋರಾಟ ನಡೆಸ ಬೇಕಾಯಿತು. ವಿಚಾರಣೆಯ ನಂತರ ನಿರ್ದೋಷಿಗಳ ಬಿಡುಗಡೆಯಾಗಿದೆ ಎಂದು ಈ ಪ್ರಕರಣವನ್ನು ಭಾವಿಸುವಂತಿಲ್ಲ. ಆರೋಪಗಳ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಗಳನ್ನು ರದ್ದುಪಡಿಸಿರುವ ಕೋರ್ಟ್, ಇದು ವಿಚಾರಣೆಗೆ ಅರ್ಹವಾದ ಪ್ರಕರಣವೇ ಅಲ್ಲ ಎಂದು ಹೇಳಿರುವುದನ್ನು ಗಮನಿಸಬೇಕು.
ತೀರ್ಪು ಪ್ರಕಟವಾದ ನಂತರ ಭಾವೋದ್ವೇಗದಿಂದ ಕಣ್ಣೀರು ಸುರಿಸಿರುವ ಕೇಜ್ರಿವಾಲ್ ಅವರು, ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣವು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಬಹುದೊಡ್ಡ ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ. ಅವರ ವಾದಕ್ಕೆ ನ್ಯಾಯಾಲಯದ ತೀರ್ಪು ಇಂಬು ನೀಡುವಂತಿದೆ. ಇಷ್ಟಾದರೂ, ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಸಿಬಿಐ ಪ್ರಶ್ನಿಸಿದೆ. ಈ ಪ್ರಕರಣ ಮಾತ್ರವಲ್ಲದೆ, ಕೇಜ್ರಿವಾಲ್ ಮತ್ತು ಇತರರು ಇದೇ ಬಗೆಯ ಆರೋಪಗಳನ್ನು ಜಾರಿ ನಿರ್ದೇಶನಾಲಯದಿಂದಲೂ (ಇಡಿ) ಎದುರಿಸುತ್ತಿದ್ದಾರೆ. ವಿಶೇಷ ನ್ಯಾಯಾಲಯದ ತೀರ್ಪು ಅತ್ಯಂತ ಸ್ಪಷ್ಟವಾಗಿದೆ; ನ್ಯಾಯಾಂಗ ಪರಿಶೀಲನೆಯಲ್ಲಿ ಪ್ರಕರಣವು ವಿಫಲವಾಗಿದೆ ಎನ್ನುವ ಅಭಿಪ್ರಾಯವು ಪ್ರಕರಣದ ಹಿಂದಿನ ರಾಜಕೀಯ ಪ್ರತೀಕಾರದ ಆರೋಪಗಳನ್ನು ದೃಢಗೊಳಿಸುವಂತಿದೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ, ‘ಅನ್ಯಾಯವು ಎಲ್ಲೆಡೆಯೂ ನ್ಯಾಯಕ್ಕೆ ಬೆದರಿಕೆಯಾಗಿದೆ’ ಎನ್ನುವ ಪ್ರಸಿದ್ಧ ಮಾತನ್ನು ನ್ಯಾಯಮೂರ್ತಿ ಜಿತೇಂದ್ರ ಸಿಂಗ್ ಅವರು ತಮ್ಮ ತೀರ್ಪಿನ ಕೊನೆಯಲ್ಲಿ ಉಲ್ಲೇಖಿಸಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಗಂಭೀರ ಹಿನ್ನಡೆ ಉಂಟಾಗುವಂತೆ ರಾಜಕೀಯ ಸಂಕಥನವನ್ನು ಬಿಜೆಪಿ ಹಾಗೂ ಕೇಂದ್ರ ಸರ್ಕಾರ ವಿನ್ಯಾಸಗೊಳಿಸಿದ್ದವು. ಅದರಿಂದಾಗಿ ಕೇಜ್ರಿವಾಲ್ ಅವರ ವರ್ಚಸ್ಸಿಗೆ ಧಕ್ಕೆಯಾಗಿತ್ತು ಹಾಗೂ ಅವರು ಅಧಿಕಾರ ಕಳೆದುಕೊಂಡರು. ಪ್ರಸಕ್ತ ತೀರ್ಪು ಮಾಜಿ ಮುಖ್ಯಮಂತ್ರಿಯ ರಾಜಕೀಯ ಭವಿಷ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದುನೋಡಬೇಕು. ಆದರೆ, ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎನ್ನುವ ವಿರೋಧ ಪಕ್ಷಗಳ ದೀರ್ಘಕಾಲದ ವಾದವನ್ನು ಪ್ರಸಕ್ತ ತೀರ್ಪು ದೃಢಪಡಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.