ADVERTISEMENT

ಬೆಂಗಳೂರಿನ ಆಡಳಿತಕ್ಕೆ ಹೊಸ ಮಸೂದೆ: ಜನರ ಅಗತ್ಯಕ್ಕೆ ಆದ್ಯತೆ ನೀಡಿದರೆ ಯಶಸ್ಸು

ಸಂಪಾದಕೀಯ
Published 13 ಮಾರ್ಚ್ 2025, 23:30 IST
Last Updated 13 ಮಾರ್ಚ್ 2025, 23:30 IST
   

ಬೆಂಗಳೂರು ಮಹಾನಗರದ ಆಡಳಿತದಲ್ಲಿ ಇರುವ ಸವಾಲುಗಳನ್ನು ನಿರ್ವಹಿಸುವ ಉದ್ದೇಶದಿಂದ ವಿಧಾನಮಂಡಲದ ಜಂಟಿ ಸಮಿತಿಯ ಪರಿಶೀಲನೆ ಬಳಿಕ ಅಂತಿಮಗೊಳಿಸಿರುವ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ಗೆ ವಿಧಾನ ಮಂಡಲದ ಉಭಯ ಸದನಗಳು ಅಂಗೀಕಾರ ನೀಡಿವೆ. ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವ ಪ್ರಸ್ತಾವ ಈ ಮಸೂದೆಯಲ್ಲಿ ಇದೆ. ಈಗ ಅಸ್ತಿತ್ವದಲ್ಲಿ ಇರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಪರ್ಯಾಯವಾಗಿ ಏಳಕ್ಕಿಂತ ಹೆಚ್ಚಿಲ್ಲದಂತೆ ನಗರಪಾಲಿಕೆಗಳನ್ನು ರಚಿಸಲು ಅವಕಾಶ ಕಲ್ಪಿಸುವ ಪ್ರಸ್ತಾವವೂ ಮಸೂದೆಯಲ್ಲಿ ಇದೆ. ಮಹಾನಗರದ ಆಡಳಿತ ವ್ಯವಸ್ಥೆಯನ್ನು ವಿಕೇಂದ್ರೀಕರಿಸಿ, ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಜನಸ್ನೇಹಿಯನ್ನಾಗಿ ಮಾಡಿ, ಆಡಳಿತವನ್ನು ಮತ್ತಷ್ಟು ಉತ್ತರದಾಯಿ ಆಗಿಸುವ ಉದ್ದೇಶವು ಮಸೂದೆಗೆ ಇದೆ. ಮಸೂದೆಯಲ್ಲಿ ಇರುವ ಈ ಅಂಶಗಳೆಲ್ಲ ಬಹಳ ಮುನ್ನೋಟ ಇರುವಂಥವು ಎಂದು ಅದರ ಸಮರ್ಥಕರು ಹೇಳುತ್ತಿದ್ದಾರೆ. ಆದರೆ, ಬೆಂಗಳೂರಿಗೆ ಅಗತ್ಯವಿರುವ ಆಮೂಲಾಗ್ರ ಬದಲಾವಣೆಗಳನ್ನು ಈ ಮಸೂದೆಯು ಕಾರ್ಯರೂಪಕ್ಕೆ ತರುವುದೇ ಎಂಬ ಪ್ರಶ್ನೆ ಇದೆ. ನಗರದಲ್ಲಿನ ನೀರು ಪೂರೈಕೆ, ಸಾರ್ವಜನಿಕ ಸಾರಿಗೆ, ವಿದ್ಯುತ್‌, ಮೂಲಸೌಕರ್ಯ ಮತ್ತು ಇತರ ನಾಗರಿಕ ಸೌಲಭ್ಯಗಳ ನಿರ್ವಹಣೆಗೆ ರಚನೆಯಾಗಿರುವ ಪ್ರಾಧಿಕಾರಗಳು, ಮಂಡಳಿಗಳು, ನಿಗಮಗಳು ಪರಸ್ಪರ ಸಮನ್ವಯ ಇಲ್ಲದೆ ಕೆಲಸ ಮಾಡುತ್ತಿವೆ ಎಂಬ ದೂರುಗಳು ದಶಕಗಳಿಂದಲೂ ಇವೆ. ಇವು ಸರ್ಕಾರದ ನಿಯಂತ್ರಣದಲ್ಲಿರುವ, ರಾಜಕೀಯ ಪ್ರಭಾವಕ್ಕೆ ಹೊರತಾಗಿಲ್ಲದ ಸಂಸ್ಥೆಗಳು ಎಂಬುದೂ ನಿಜ. ಸಮನ್ವಯವನ್ನು ಉತ್ತಮಪಡಿಸಲು ಹಾಗೂ ದಕ್ಷತೆಯನ್ನು ಹೆಚ್ಚು ಮಾಡಲು ಈ ಎಲ್ಲ ನಿಗಮ, ಮಂಡಳಿ, ಪ್ರಾಧಿಕಾರಗಳನ್ನು ಒಂದೇ ಚೌಕಟ್ಟಿನ ಒಳಗೆ ತರುವ ಪ್ರಸ್ತಾವವು ಮಸೂದೆಯಲ್ಲಿದೆ.

ಆದರೆ, ಹೊಸ ವ್ಯವಸ್ಥೆಯಲ್ಲಿ ಹೇಳಿರುವ ಆಡಳಿತದ ಸ್ವರೂಪವು ಹಲವು ಪ್ರಶ್ನೆಗಳನ್ನು ಮೂಡಿಸುತ್ತದೆ. ಮುಖ್ಯಮಂತ್ರಿಯವರು ಜಿಬಿಎ (ಗ್ರೇಟರ್‌ ಬೆಂಗಳೂರು ಪ್ರಾಧಿಕಾರ) ನೇತೃತ್ವ ಹೊಂದಿರುತ್ತಾರೆ. ಹೀಗಿರುವಾಗ, 30 ತಿಂಗಳ ಅಧಿಕಾರ ಅವಧಿಯ ಮೇಯರ್‌ಗಳು ಹೆಸರಿಗೆ ಮಾತ್ರ ಕೌನ್ಸಿಲ್‌ನಲ್ಲಿ ಮುಖ್ಯಸ್ಥರಾಗಿರುತ್ತಾರೆ ಎಂಬುದರಲ್ಲಿ ಅನುಮಾನ ಇಲ್ಲ. ಇದರಿಂದಾಗಿ ಸ್ಥಳೀಯ ಸ್ವಯಂ ಆಡಳಿತದ ಪರಿಕಲ್ಪನೆ ದುರ್ಬಲಗೊಳ್ಳುತ್ತದೆ, ಜಿಬಿಎ ವ್ಯವಸ್ಥೆಯಿಂದ ಪಾಲಿಕೆಗಳ ಸ್ವಾಯತ್ತೆಗೆ ಧಕ್ಕೆ ಉಂಟಾಗುತ್ತದೆ. ರಾಜ್ಯ ಸರ್ಕಾರವು ಮಹಾನಗರದ ಆಡಳಿತದ ಮೇಲೆ ಗಣನೀಯ ಪ್ರಮಾಣದಲ್ಲಿ ಪ್ರಭಾವ ಬೀರುತ್ತಿರುತ್ತದೆ. ಜಿಬಿಎ ಆಡಳಿತ ವ್ಯವಸ್ಥೆಯ ಸ್ವರೂಪದ ಬಗ್ಗೆ ಇನ್ನಷ್ಟು ಸ್ಪಷ್ಟತೆಯ ಅಗತ್ಯ ಇದೆ. ಮೇಯರ್‌ಗೆ ಐದು ವರ್ಷಗಳ ಅಧಿಕಾರ ಅವಧಿ ಇರಬೇಕು, ಮೇಯರ್‌ ಅವರನ್ನು ನೇರವಾಗಿ ಆಯ್ಕೆ ಮಾಡಬೇಕು ಎಂಬ ಬಹುಕಾಲದ ಬೇಡಿಕೆಗೆ ಮಸೂದೆಯು ಸ್ಪಂದಿಸಿಲ್ಲ. ಜಿಬಿಎಯಲ್ಲಿ ಸದಸ್ಯರಾಗಿರುವ ಸ್ಥಳೀಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಮತ್ತು ಸಂಸದರಿಗೆ ಕೌನ್ಸಿಲ್‌ನಲ್ಲಿ ಮತದಾನದ ಹಕ್ಕು ಕಲ್ಪಿಸುವ ಪ್ರಸ್ತಾವ ಕೂಡ ಒಂದು ಲೋಪ. ಈ ಬಗೆಯ ವ್ಯವಸ್ಥೆಯನ್ನು ಈ ಹಿಂದೆ ಬಳಸಿಕೊಂಡು, ಕೌನ್ಸಿಲ್‌ನಲ್ಲಿ ನಿರ್ದಿಷ್ಟ ಪಕ್ಷದ ಪರವಾಗಿ ಕೃತಕ ಬಹುಮತವನ್ನು ಸೃಷ್ಟಿಸಿ, ಜನರ ಆಯ್ಕೆಯಲ್ಲದ ವ್ಯಕ್ತಿಯನ್ನು ಮೇಯರ್‌ ಸ್ಥಾನಕ್ಕೆ ತಂದ ನಿದರ್ಶನಗಳು ಇವೆ. ಶಾಸನಸಭೆಗಳ ಸದಸ್ಯರ ಕರ್ತವ್ಯವು ಬೇರೆಯದೇ ಆಗಿರುತ್ತದೆ, ನಗರದ ಆಡಳಿತದಲ್ಲಿ ಅವರು ತೊಡಗಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಶಾಸನಸಭೆಗಳ ಸದಸ್ಯರನ್ನು ಕೌನ್ಸಿಲ್‌ ಸಭೆಗಳಿಗೆ ಆಹ್ವಾನಿಸಬಹುದು. ಆದರೆ ಅವರಿಗೆ ಕೌನ್ಸಿಲ್‌ನಲ್ಲಿ ಮತದಾನದ ಅಧಿಕಾರ ನೀಡುವುದು ಸ್ಥಳೀಯ ಆಡಳಿತದ ಪರಿಕಲ್ಪನೆಗೆ ವಿರುದ್ಧವಾದುದು.

ಈ ಮಸೂದೆಯಲ್ಲಿ ಒಳಿತೂ ಇದೆ ಕೆಡುಕೂ ಇದೆ. ವಿಧಾನ ಪರಿಷತ್ತು ಮತ್ತು ವಿಧಾನಸಭೆಯಲ್ಲಿ ಇದರ ಬಗ್ಗೆ ರಾಜಕೀಯ ಚೌಕಟ್ಟು ಮೀರಿದ ವಿಸ್ತೃತ ಚರ್ಚೆ ಆಗಬೇಕಿತ್ತು. ಬಿಬಿಎಂಪಿಗೆ ಚುನಾವಣೆ ನಡೆಯದೆ ನಾಲ್ಕು ವರ್ಷಗಳೇ ಕಳೆದಿವೆ. ಈಗ ಈ ಮಸೂದೆಯನ್ನು ನೆಪವಾಗಿ ಇರಿಸಿಕೊಂಡು ಚುನಾವಣೆಯನ್ನು ಇನ್ನಷ್ಟು ಮುಂದಕ್ಕೆ ಹಾಕುವ ಸಾಧ್ಯತೆಯೂ ಇಲ್ಲದಿಲ್ಲ. ಮಹಾನಗರದ ಆಡಳಿತವನ್ನು ಇನ್ನಷ್ಟು ಸುಗಮವಾಗಿಸುವುದು ಎಲ್ಲರ ಗುರಿಯಾಗಬೇಕೇ ವಿನಾ ಇಲ್ಲಿನ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಸಂಕೀರ್ಣವಾಗಿಸುವ ಕೆಲಸವನ್ನು ಯಾರೂ ಮಾಡಬಾರದು. ಮಹಾನಗರದ ಆಡಳಿತ ವ್ಯವಸ್ಥೆಯಲ್ಲಿ ಇರುವ ಲೋಪಗಳನ್ನು ಸರಿಪಡಿಸಲು ಈ ಮಸೂದೆಯು ಒಂದು ಅವಕಾಶ ಕಲ್ಪಿಸುತ್ತದೆ. ಆದರೆ, ತಮ್ಮ ರಾಜಕೀಯ ಲಾಭಕ್ಕಿಂತಲೂ ಬೆಂಗಳೂರಿನ ಜನರಿಗೆ ಆಗಬೇಕಿರುವ ಲಾಭಗಳಿಗೆ ಹೆಚ್ಚಿನ ಗಮನವನ್ನು ನೀಡಲು ಸಾಧ್ಯವಾದರೆ ಮಾತ್ರ ಈ ಮಸೂದೆಯು ಯಶಸ್ಸು ಕಾಣುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.