
ರಾಜ್ಯದಲ್ಲಿನ ಅಕ್ರಮ ಮರಳು ಗಣಿಗಾರಿಕೆ ದಂಧೆಯ ಬಗ್ಗೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿರುವ ಕರ್ನಾಟಕ ಹೈಕೋರ್ಟ್, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ಎಸ್‌ಐಟಿ ತನಿಖೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವುದು ಪ್ರಕರಣದ ಗಂಭೀರತೆ ಹಾಗೂ ಅದನ್ನು ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ಸೂಚಿಸುವಂತಿದೆ; ಆಡಳಿತ ವ್ಯವಸ್ಥೆ ವಿಫಲವಾಗಿರುವುದರಿಂದಲೇ ನ್ಯಾಯಾಂಗದ ಮಧ್ಯಪ್ರವೇಶ ಅನಿವಾರ್ಯವಾಗಿದೆ ಎಂದೂ ಹೇಳುವಂತಿದೆ. ಮರಳು ಗಣಿಗಾರಿಕೆಗೆ ಸಂಬಂಧಿಸಿದ ಅಪರಾಧದ ಪ್ರಮಾಣವಷ್ಟೇ ಕಳವಳ ಹುಟ್ಟಿಸುವಂತಿಲ್ಲ, ಅಕ್ರಮಗಳನ್ನು ಹತ್ತಿಕ್ಕುವಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಅವರು ವ್ಯಕ್ತಪಡಿಸಿರುವ ಅಸಹಾಯಕತೆ ಆತಂಕವನ್ನು ಮತ್ತಷ್ಟು ಹೆಚ್ಚಿಸುವಂತಿದೆ. ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯ ಹೊಣೆ ಹೊತ್ತಿರುವ ಸಚಿವರೇ ಮರಳು ಮಾಫಿಯಾ ಎದುರಿಸಲು ಅಸಹಾಯಕತೆ ವ್ಯಕ್ತಪಡಿಸಿರುವಾಗ, ಈ ವಿಷಯವು ಅಕ್ರಮ ಮರಳು ಗಣಿಗಾರಿಕೆಗಷ್ಟೇ ಸಂಬಂಧಿಸಿದ್ದಾಗಿ ಉಳಿಯುವುದಿಲ್ಲ. ಇದು, ರಾಜ್ಯವನ್ನು ನಿಜವಾಗಿ ಆಳುತ್ತಿರುವವರು ಯಾರು ಎನ್ನುವ ಪ್ರಶ್ನೆಗೂ ಕಾರಣವಾಗುವಂತಿದೆ. ಗೃಹ ಸಚಿವರು ತಮ್ಮನ್ನು ಶಕ್ತಿಹೀನರು ಎಂದು ಭಾವಿಸಿದಾಗ ಪೊಲೀಸ್ ಅಥವಾ ಜಿಲ್ಲಾಡಳಿತ ದಿಟ್ಟತನದಿಂದ ಕಾರ್ಯ ನಿರ್ವಹಿಸಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಕಾನೂನು ಅನುಷ್ಠಾನವು ಅಧಿಕಾರ, ಸಾಂಸ್ಥಿಕ ಬೆಂಬಲ ಹಾಗೂ ರಾಜಕೀಯ ಇಚ್ಛಾಶಕ್ತಿಯನ್ನು ಅವಲಂಬಿಸಿರುತ್ತದೆ. ಇದು ಸಾಧ್ಯವಾಗದೆ ಹೋದಾಗ, ಕಾಗದದ ಮೇಲಷ್ಟೇ ಉಳಿದಿರುವ ರಾಜ್ಯದ ಮರಳು ಗಣಿಗಾರಿಕೆಯ ವಿಶೇಷ ಕಾರ್ಯಪಡೆಯಂತೆ, ಕಾನೂನು ಮತ್ತು ಸುವ್ಯವಸ್ಥೆಯೂ ಆಲಂಕಾರಿಕವಾಗಿಯಷ್ಟೇ ಉಳಿಯುತ್ತದೆ. ಎಲ್ಲ ಪಕ್ಷಗಳಿಗೂ ಸಂಬಂಧಿಸಿದ ಪ್ರಭಾವಿ ವ್ಯಕ್ತಿಗಳು ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಪರಮೇಶ್ವರ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಕೇಳಲೇಬೇಕಾದ ಪ್ರಶ್ನೆಯೊಂದಿದೆ: ಅಕ್ರಮದಲ್ಲಿ ಭಾಗಿ ಆದವರ ಹೆಸರುಗಳನ್ನು ಬಹಿರಂಗಪಡಿಸುವುದು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸಾಧ್ಯವಿಲ್ಲದೆ ಹೋದರೆ, ಆ ದಂಧೆಗೆ ಉನ್ನತ ವಲಯದ ಶ್ರೀರಕ್ಷೆ ಇದೆಯೆಂದೇ ಅರ್ಥವಲ್ಲವೆ?
ಅಕ್ರಮ ಮರಳು ಗಣಿಗಾರಿಕೆ ಸಣ್ಣ ಅಪರಾಧವೇನಲ್ಲ. ಇದು, ಪರಿಸರ ಹಾಗೂ ಆರ್ಥಿಕತೆಗೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದ ಅಪರಾಧವಾಗಿದೆ. ಈ ದಂಧೆಯಿಂದ ಕೃಷ್ಣಾ, ಕಾವೇರಿ ಮತ್ತು ತುಂಗಭದ್ರಾ ನದಿಗಳಿಗೆ ಗಾಸಿಯಾಗುತ್ತಿದೆ, ಅಂತರ್ಜಲ ಮಟ್ಟ ಕುಸಿಯುತ್ತಿದೆ, ದೂಳಿನಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ, ಸೇತುವೆಗಳು ದುರ್ಬಲಗೊಳ್ಳುತ್ತಿವೆ ಹಾಗೂ ಮರಳು ಸಾಗಿಸುವ ಟ್ರಕ್‌ಗಳು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಇದೆಲ್ಲದರ ಪರಿಣಾಮವಾಗಿ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ; ಅದೇ ಕಾಲದಲ್ಲಿ ಮರಳು ದಂಧೆ ಸೃಷ್ಟಿಸಿರುವ ಸಮಾನಾಂತರ ಆರ್ಥಿಕತೆಯು ಹಿಂಸೆ, ಕಪ್ಪುಹಣ ಮತ್ತು ಭಯೋತ್ಪಾದನೆಯಿಂದ ಬಲಗೊಳ್ಳುತ್ತಿದೆ. ಮರಳು ಮಾಫಿಯಾದ ಭಯದಿಂದ ಶಾಸಕರೂ ಮುಕ್ತರಾಗಿ ಇರುವಂತೆ ಕಾಣಿಸುತ್ತಿಲ್ಲ. ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ಧ್ವನಿ ಎತ್ತಿರುವ ರಾಯಚೂರು ಜಿಲ್ಲೆಯ ಶಾಸಕಿಯೊಬ್ಬರು ಜೀವ ಬೆದರಿಕೆ ಎದುರಿಸುತ್ತಿರುವ ಬಗ್ಗೆ ದೂರು ದಾಖಲಾಗಿದೆ. ಜನಪ್ರತಿನಿಧಿಗಳೇ ಪ್ರತೀಕಾರದ ಆತಂಕವನ್ನು ಎದುರಿಸುತ್ತಿರಬೇಕಾದರೆ, ಜನಸಾಮಾನ್ಯರ ಸ್ಥಿತಿಯನ್ನು ಸುಲಭವಾಗಿ ಊಹಿಸಬಹುದು.
ರಾಜ್ಯದ ಸಂಪನ್ಮೂಲಗಳ ರಕ್ಷಣೆ, ಕಾನೂನು ಜಾರಿಗೊಳಿಸುವಿಕೆ ಹಾಗೂ ಮಾಹಿತಿದಾರರ ರಕ್ಷಣೆ ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುವ ಮೂಲಕ ಸಚಿವರು ತಮ್ಮ ಹುದ್ದೆಯ ಸಾಮರ್ಥ್ಯವನ್ನು ಕುಗ್ಗಿಸಿದ್ದಾರೆ. ಮರಳು ಮಾಫಿಯಾದ ಎದುರು ಗೃಹಸಚಿವರೇ ಬಹಿರಂಗವಾಗಿ ಶರಣಾಗಿರುವಾಗ, ಪೊಲೀಸರು ಇಲ್ಲವೇ ಜಿಲ್ಲೆಗಳ ಅಧಿಕಾರಿಗಳು ಧೈರ್ಯದಿಂದ ಕ್ರಮ ಜರುಗಿಸುತ್ತಾರೆಂದು ಹೇಗೆ ನಿರೀಕ್ಷಿಸುವುದು? ಕಾನೂನು ಮತ್ತು ಸುವ್ಯವಸ್ಥೆ ಜಾರಿಗೊಳಿಸಬೇಕಾದ ಸಂಸ್ಥೆಯನ್ನು ನಿರ್ವಹಿಸುವ ನಾಯಕ ಕೈಚೆಲ್ಲಿದಾಗಲೇ ರಾಜ್ಯವೂ ಅಸಹಾಯಕ ಆದಂತಾಗಿದೆ. ಹಾಗಾಗಿಯೇ ಹೈಕೋರ್ಟ್ ಮಧ್ಯಪ್ರವೇಶಿಸಿದೆ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ, ವಿಶೇಷ ತನಿಖಾ ತಂಡದಿಂದ ತನಿಖೆ ನಡೆಯುವುದು ಅನಿವಾರ್ಯವಾಗಿದೆ. ಇದು ಸಾಧ್ಯವಾಗದೆ ಹೋದಲ್ಲಿ, ಮರಳು ಮಾಫಿಯಾ ರಾಜ್ಯ ಸರ್ಕಾರಕ್ಕಿಂತಲೂ ಬಲಿಷ್ಠ ಎಂದು ಸಾಬೀತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.