
ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳು ವ್ಯವಸ್ಥೆಯಲ್ಲಿನ ಲೋಪಗಳಿಂದ ತೊಂದರೆಗೆ ಸಿಲುಕಿದ್ದಾರೆ. ಬಾಲನ್ಯಾಯ ವ್ಯವಸ್ಥೆಯ ವೈಫಲ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ದೇಶದಲ್ಲಿನ ಬಾಲನ್ಯಾಯ ವ್ಯವಸ್ಥೆಯು ಅವ್ಯವಸ್ಥೆಯ ಗೂಡಾಗಿದೆ ಎಂಬುದನ್ನು ಈಚೆಗೆ ಬಿಡುಗಡೆ ಆಗಿರುವ ‘ಇಂಡಿಯಾ ಜಸ್ಟೀಸ್ ರಿಪೋರ್ಟ್’ ಹೆಸರಿನ ವರದಿಯು ಹೇಳಿದೆ. ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಮಕ್ಕಳು ವ್ಯವಸ್ಥೆಯಲ್ಲಿನ ಲೋಪಗಳಿಂದಾಗಿ ಸಂತ್ರಸ್ತರಾಗಿದ್ದಾರೆ. ಅವರನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿಲ್ಲ, ಅವರ ಬಗ್ಗೆ ಉಪೇಕ್ಷೆ ವಹಿಸಲಾಗಿದೆ. 352 ಬಾಲನ್ಯಾಯ ಮಂಡಳಿಗಳಲ್ಲಿನ (ಜೆಜೆಬಿ) ಕಲಾಪಗಳು ವಿಳಂಬವಾಗುತ್ತಿವೆ. ಒಡಿಶಾದಲ್ಲಿನ ಜೆಜೆಬಿಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಪ್ರಮಾಣ ಶೇ 83ರಷ್ಟಿದೆ, ಕರ್ನಾಟಕದಲ್ಲಿ ಇದು ಶೇ 35ರಷ್ಟಿದೆ.
ಬಹುತೇಕ ಜಿಲ್ಲೆಗಳಲ್ಲಿ ಈ ಮಂಡಳಿ ಇದೆಯಾದರೂ, ಅವುಗಳ ಪೈಕಿ ಶೇ 25ರಷ್ಟು ಕಡೆಗಳಲ್ಲಿ ಪೂರ್ಣಪೀಠವು ಕಾರ್ಯನಿರ್ವಹಿಸುತ್ತಿಲ್ಲ. ಪೂರ್ಣಪೀಠದಲ್ಲಿ ಒಬ್ಬರು ಮ್ಯಾಜಿಸ್ಟ್ರೇಟರು ಹಾಗೂ ಇಬ್ಬರು ಸಾಮಾಜಿಕ ಕಾರ್ಯಕರ್ತರು ಇರಬೇಕು. ಮೂರನೆಯ ಒಂದರಷ್ಟು ಮಂಡಳಿಗಳಲ್ಲಿ ಕಾನೂನು ಸೇವೆ ಒದಗಿಸುವ ಘಟಕ ಇಲ್ಲ. ಅಂಥದ್ದೊಂದು ಘಟಕ ಇರಬೇಕು ಎಂಬ ಮಾತು ಕಾನೂನಿನಲ್ಲಿದೆ. ಪ್ರತಿ ಜೆಜೆಬಿಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸರಾಸರಿ ಸಂಖ್ಯೆ 151. ಹನ್ನೊಂದು ಮಂಡಳಿಗಳು ಮಾತ್ರ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ – 2015’ರಲ್ಲಿ ಹೇಳಿರುವ ಏಳು ಕನಿಷ್ಠ ಮಾನದಂಡಗಳಿಗೆ ಅನುಗುಣವಾಗಿವೆ.
ಬಾಲನ್ಯಾಯ ಕಾಯ್ದೆಯು ಯಾವ ಬಗೆಯಲ್ಲಿ ಕೆಲಸ ಮಾಡಿದೆ ಎಂಬುದನ್ನು ಅರಿಯುವ ಉದ್ದೇಶದಿಂದ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ವರದಿಯಲ್ಲಿನ ಅಂಶಗಳು ಗಂಭೀರ ಸ್ವರೂಪದ ಕಳವಳಗಳನ್ನು ಮೂಡಿಸಿವೆ. ದೇಶದಾದ್ಯಂತ ಒಟ್ಟು 50 ಸಾವಿರಕ್ಕೂ ಹೆಚ್ಚು ಮಕ್ಕಳು ಮಂಡಳಿಗಳಿಂದ ನ್ಯಾಯ ಸಿಗುವುದಕ್ಕಾಗಿ ಕಾಯುತ್ತಿದ್ದಾರೆ. 28 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯ ಮೂಲಕ ಸಂಗ್ರಹಿಸಿದ ಅಂಕಿ–ಅಂಶಗಳನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ. ವರದಿಯಲ್ಲಿನ ವಿವರಗಳು ಪೂರ್ಣವೇನೂ ಅಲ್ಲ; ದೇಶದಲ್ಲಿ ಬಾಲನ್ಯಾಯ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಕೇಂದ್ರೀಕೃತವಾದ ದತ್ತಾಂಶ ನಿರ್ವಹಣಾ ವ್ಯವಸ್ಥೆ ಇಲ್ಲ.
ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳು ಬಾಲನ್ಯಾಯ ಕಾಯ್ದೆಯ ಅಡಿಯಲ್ಲಿ ವಿಚಾರಣೆ ಎದುರಿಸುವ ಸಂದರ್ಭದಲ್ಲಿ ಅಥವಾ ಅವರು ತಪ್ಪು ಮಾಡಿರುವುದು ಸಾಬೀತಾದ ನಂತರದಲ್ಲಿ ಅವರನ್ನು ಮಕ್ಕಳ ಪರಿವೀಕ್ಷಣಾ ಗೃಹಕ್ಕೆ ಕಳುಹಿಸಲಾಗುತ್ತದೆ. ಇಂತಹ ಕೇಂದ್ರಗಳ ಪಾಲನೆಯು ಚೆನ್ನಾಗಿ ಆಗುತ್ತಿಲ್ಲ, ಇಂತಹ ಇನ್ನಷ್ಟು ಕೇಂದ್ರಗಳ ಅಗತ್ಯವೂ ಇದೆ. ಇವುಗಳಿಗೆ ಅಗತ್ಯ ಸಂಖ್ಯೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ನೇಮಕ ಆಗಿಲ್ಲ. ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಮಕ್ಕಳಿಗೆ ನ್ಯಾಯ ಕೊಡಿಸುವ, ತಪ್ಪು ಮಾಡಿದ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಹಾಗೂ ಅವರಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸುವ ಇಡೀ ವ್ಯವಸ್ಥೆಯು ಇನ್ನಷ್ಟು ಸೌಲಭ್ಯಗಳಿಗೆ ಕಾಯುತ್ತಿದೆ.
ದೇಶವು ತನ್ನ ಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ಗಮನಿಸಿ ಅಲ್ಲಿನ ಕಾನೂನು ವ್ಯವಸ್ಥೆ ಮತ್ತು ಸಂಸ್ಕೃತಿಯನ್ನು ತೀರ್ಮಾನಿಸಬಹುದು ಎಂಬ ಮಾತೊಂದು ಇದೆ. ಕಾನೂನು ಸಂಘರ್ಷಕ್ಕೆ ಗುರಿಯಾದ ಮಕ್ಕಳ ವಿಚಾರದಲ್ಲಿ ಪ್ರಭುತ್ವವು ಇನ್ನಷ್ಟು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಪರಿವೀಕ್ಷಣಾ ಕೇಂದ್ರಗಳಲ್ಲಿ ಇರುವ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ, ಅವರಿಗೆ ನ್ಯಾಯವು ಸಕಾಲದಲ್ಲಿ ಸಿಗುತ್ತಿದೆ ಎಂಬುದನ್ನು ಸರ್ಕಾರ ಖಾತರಿಪಡಿಸಬೇಕು. ಮಕ್ಕಳಿಗೆ ನ್ಯಾಯದಾನ ವಿಳಂಬವಾದರೆ, ಅವರನ್ನು ಪರಿವೀಕ್ಷಣಾ ಕೇಂದ್ರಗಳಲ್ಲಿ ಸರಿಯಾಗಿ ನೋಡಿಕೊಳ್ಳದೆ ಇದ್ದರೆ, ಅದರಿಂದ ಊಹೆಗೂ ನಿಲುಕದಂತಹ ಕೆಟ್ಟ ಪರಿಣಾಮಗಳು ಉಂಟಾಗಬಹುದು.
ಕಾನೂನು ಪಾಲನಾ ವ್ಯವಸ್ಥೆಯು ಮಕ್ಕಳನ್ನು ನೋಡಿಕೊಳ್ಳಬೇಕಿರುವ ವಿಧಾನವೇ ಬೇರೆ, ಆ ವ್ಯವಸ್ಥೆಯು ಮಕ್ಕಳು ಸಮಾಜದ ಜೊತೆ ಪುನಃ ಬೆರೆಯುವಂತೆ ಆಗಲು ನೆರವಾಗಬೇಕು ಎಂಬ ಕಾರಣದಿಂದಾಗಿ ಅವರಿಗಾಗಿ ಪ್ರತ್ಯೇಕ ಕಾನೂನು ರಚಿಸಲಾಯಿತು. ಆದರೆ ಈ ಉದ್ದೇಶ ಸಾಧನೆಯಲ್ಲಿ ಬಾಲನ್ಯಾಯ ವ್ಯವಸ್ಥೆಯು ಸೋಲುತ್ತಿರುವುದನ್ನು ವರದಿಯು ಹೇಳುತ್ತಿದೆ. ವರದಿಯಲ್ಲಿನ ಅಂಶಗಳು, ಸಮಸ್ಯೆಗಳು ಉಂಟು ಮಾಡಿರುವ ಸಾಮಾಜಿಕ ಪರಿಣಾಮಗಳನ್ನು ಅರ್ಥ ಮಾಡಿಕೊಂಡು ಪರಿಣಾಮಕಾರಿಯಾಗಿ ಸ್ಪಂದಿಸಬೇಕು ಎಂಬುದನ್ನು ಸೂಚಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.