ADVERTISEMENT

ಸಂಪಾದಕೀಯ | ಕಸಾಪಕ್ಕೆ ಆಡಳಿತಾಧಿಕಾರಿ ನೇಮಕ: ತನಿಖೆಯಿಂದ ಸತ್ಯ ಹೊರಬರಲಿ

ಸಂಪಾದಕೀಯ
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
   

ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಆಡಳಿತಾಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯಿತ್ರಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇದರೊಂದಿಗೆ, ಕಸಾಪ ತನ್ನ ಇತಿಹಾಸದಲ್ಲಿ ಎರಡನೇ ಬಾರಿ ಆಡಳಿತಾಧಿಕಾರಿಯನ್ನು ಕಂಡಂತಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ದೂರದೃಷ್ಟಿ ಮತ್ತು ಸದಾಶಯದೊಂದಿಗೆ ಆರಂಭಗೊಂಡ ಹಾಗೂ ನೂರಾ ಹತ್ತು ವರ್ಷಗಳನ್ನು ದಾಟಿ ಮುನ್ನಡೆದಿರುವ ಸಾಹಿತ್ಯ ಪರಿಷತ್ತಿನ ಘನತೆಗೆ ಆಡಳಿತಾಧಿಕಾರಿಯ ನೇಮಕ ಕಸಿವಿಸಿ ಉಂಟುಮಾಡುವಂತಹದ್ದು. ಆದರೆ, ಪರಿಷತ್ತಿನಲ್ಲಿ ನಡೆದಿದೆ ಎನ್ನಲಾದ ಹಣ ಮತ್ತು ಅಧಿಕಾರದ ದುರ್ಬಳಕೆಯ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರದ ಮಧ್ಯಪ್ರವೇಶ ಅನಿವಾರ್ಯವಾಗಿತ್ತು. ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹೇಶ ಜೋಶಿ ಅವರ ಮೇಲಿನ ಟೀಕೆ ಟಿಪ್ಪಣಿಗಳ ಹಿನ್ನೆಲೆಯಲ್ಲಿ, ಕಸಾಪ ಅಧ್ಯಕ್ಷರಿಗೆ ನೀಡಲಾಗಿದ್ದ ರಾಜ್ಯ ಸಚಿವ ಸ್ಥಾನಮಾನ ಮತ್ತು ಸವಲತ್ತುಗಳನ್ನು ಸರ್ಕಾರ ಹಿಂಪಡೆದಿತ್ತು. ‘ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960’ರ ಕಲಂ 25ರ ಅಡಿ, ಸಾಹಿತ್ಯ ಪರಿಷತ್ತಿನ ವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸಲು ವಿಚಾರಣಾ ಅಧಿಕಾರಿಯನ್ನು ಸಹಕಾರ ಇಲಾಖೆ ನೇಮಿಸಿತ್ತು. ವಿಚಾರಣೆಗೆ ಸಂಬಂಧಿಸಿದಂತೆ ಕಸಾಪ ಅಧ್ಯಕ್ಷರು ಸಹಕಾರ ನೀಡದ ಕಾರಣದಿಂದಾಗಿ ಆಡಳಿತಾಧಿಕಾರಿ ನೇಮಿಸುವಂತೆ ಸಹಕಾರ ಇಲಾಖೆಯು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಮಹೇಶ ಜೋಶಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಕೆಲವು ಸಾಹಿತಿಗಳು ಹಾಗೂ ‍ಪರಿಷತ್ತಿನ ಹಿತಚಿಂತಕರು ಸರ್ಕಾರವನ್ನು ಒತ್ತಾಯಿಸಿದ್ದರು. ಈ ಎಲ್ಲ ಬೆಳವಣಿಗೆಯ ಭಾಗವಾಗಿ  ಪರಿಷತ್ತಿಗೆ ಆಡಳಿತಾಧಿಕಾರಿ ನೇಮಕಗೊಂಡಿದ್ದಾರೆ. ಮೂರು ತಿಂಗಳ ಅವಧಿಗೆ ಅಥವಾ ವಿಚಾರಣೆ ಪೂರ್ಣಗೊಳ್ಳುವವರೆಗೆ ಆಡಳಿತಾಧಿಕಾರಿ ಕಾರ್ಯ ನಿರ್ವಹಿಸಲಿದ್ದಾರೆ.

ಮಹೇಶ ಜೋಶಿ ಅವರ ಮೇಲಿನ ಆರೋಪಗಳು ಗಂಭೀರವಾದವು ಹಾಗೂ ಪರಿಷತ್ತಿನ ವರ್ಚಸ್ಸಿಗೆ ಧಕ್ಕೆ ತರುವಂತಹವು. ಪರಿಷತ್ತಿನ ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಕೆಲವು ಲೇಖಕರು ಹಾಗೂ ಕಸಾಪದ ಕೆಲವು ಜಿಲ್ಲಾ ಘಟಕಗಳ ಅಧ್ಯಕ್ಷರು ಆರೋಪಿಸಿದ್ದಾರೆ. ಬೆಂಗಳೂರು, ಹಾಸನ, ಮಂಡ್ಯ ಸೇರಿದಂತೆ ನಾಡಿನ ವಿವಿಧೆಡೆಗಳಲ್ಲಿ ಜೋಶಿಯವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಪರಿಷತ್ತಿನಿಂದ ಹೊರಗೆ ಬಂದಿರುವ ಕಸಾಪದ ಇಬ್ಬರು ಗೌರವ ಕಾರ್ಯದರ್ಶಿಗಳು ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಪರಿಷತ್ತಿನ ಹಣವನ್ನು ಕಸಾಪ ಅಧ್ಯಕ್ಷರ ಕುಟುಂಬದ ಸದಸ್ಯರ ಕಾರ್ಯಕ್ರಮಗಳಿಗೆ ನಿಯಮಬಾಹಿರವಾಗಿ ಬಳಕೆ ಮಾಡಿಕೊಳ್ಳಲಾಗಿದೆ; ಕಂಪ್ಯೂಟರ್ ಖರೀದಿ, ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ, ಅಗ್ನಿಶಾಮಕ ಉಪಕರಣದ ಅಳವಡಿಕೆ‌ ಹಾಗೂ ಪುಸ್ತಕಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಹಣದ ದುರುಪಯೋಗ ಆಗಿದೆ ಎನ್ನುವ ಗುರುತರ ಆರೋಪಗಳು ಮಹೇಶ ಜೋಶಿ ಅವರ ಮೇಲಿವೆ. ಪರಿಷತ್ತಿನ ಆಡಳಿತ ಮಂಡಳಿಯ ನಿರ್ಣಯಗಳನ್ನು ಸಹಕಾರ ಸಂಘದ ನಿಯಮ ನಿಬಂಧನೆಗೆ ವಿರುದ್ಧವಾಗಿ ದಾಖಲಿಸಲಾಗಿದೆ ಎನ್ನುವ ಆರೋಪಗಳೂ ಇವೆ. ಕನ್ನಡ ನಾಡು–ನುಡಿಯ ಸಬಲೀಕರಣದ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಸಂಸ್ಥೆ ಭ್ರಷ್ಟಾಚಾರದ ಆರೋಪಗಳ ಕಾರಣದಿಂದ ನಿರಂತರವಾಗಿ ಸುದ್ದಿಯಲ್ಲಿರುವುದು ದುರದೃಷ್ಟಕರ.

ಆಡಳಿತಾಧಿಕಾರಿಯ ನೇಮಕದೊಂದಿಗೆ ಮಹೇಶ ಜೋಶಿ ಅವರ ಮೇಲಿನ ಆರೋಪಗಳ ತನಿಖೆಗೆ ಇದ್ದವೆನ್ನಲಾದ ಅಡಚಣೆಗಳು ದೂರವಾಗಿವೆ. ಮಹೇಶ ಜೋಶಿ ಅವರು ಕಸಾಪ ಅಧ್ಯಕ್ಷರಾದಾಗಿನಿಂದ ಒಂದಲ್ಲಾ ಒಂದು ವಿವಾದ ನಿರಂತರವಾಗಿ ಸೃಷ್ಟಿಯಾಗುತ್ತಿದ್ದು, ಆ ವಿವಾದಗಳ ಪರಿಣಾಮ ಪರಿಷತ್ತಿನ ಮೇಲಾಗಿದೆ. ಪರಿಷತ್ತಿನ ಹಿತಚಿಂತಕರೂ ಮುಜುಗರ ಅನುಭವಿಸುವಂತಾಗಿದೆ. ಪರಿಷತ್ತಿಗೆ ಅಂಟಿಕೊಂಡಿರುವ ಮಸಿಯನ್ನು ನಿವಾರಿಸುವ ನಿಟ್ಟಿನಲ್ಲಿ ತನಿಖೆಯಿಂದ ಹೊರಬರುವ ಸತ್ಯಾಂಶಗಳಿಗೆ ಮಹತ್ವದ ಪಾತ್ರವಿದೆ. ಹಾಗಾಗಿ, ತನಿಖೆಯನ್ನು ಪಾರದರ್ಶಕವಾಗಿ ನಡೆಸುವ ಹಾಗೂ ವಿಳಂಬಕ್ಕೆ ಆಸ್ಪದವಿಲ್ಲದೆ ಮುಗಿಸುವ ಜವಾಬ್ದಾರಿಯನ್ನು ಸಹಕಾರ ಇಲಾಖೆ ನಿರ್ವಹಿಸಬೇಕಾಗಿದೆ. ಪ್ರಜಾಪ್ರಭುತ್ವ ಸಂಸ್ಥೆಯೊಂದಕ್ಕೆ, ಅದರಲ್ಲೂ ಸಾಹಿತ್ಯ ಪರಿಷತ್ತಿನಂಥ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗೆ ಆಡಳಿತಾಧಿಕಾರಿಯ ನೇಮಕ ಇರುಸುಮುರುಸು ಮಾಡುವಂತಹದ್ದು. ಆದಷ್ಟು ಬೇಗ ವಿಶ್ವಾಸಾರ್ಹ ಪ್ರಜಾಪ್ರಭುತ್ವ ವ್ಯವಸ್ಥೆ ಕಸಾಪದಲ್ಲಿ ಮರಳುವಂತೆ ಸರ್ಕಾರ ನೋಡಿಕೊಳ್ಳಬೇಕಾಗಿದೆ. ಈ ಪ್ರಕರಣ ಕಸಾಪ ಸದಸ್ಯರ ಆತ್ಮಾವಲೋಕನಕ್ಕೂ ಅವಕಾಶ ಕಲ್ಪಿಸಬೇಕಾಗಿದೆ. ಪರಿಷತ್ತನ್ನು ಮುನ್ನಡೆಸಲು ಎಂಥ ವ್ಯಕ್ತಿಗಳು ಬೇಕು ಎನ್ನುವುದರ ಬಗ್ಗೆ ಹಾಗೂ ಪರಿಷತ್ತನ್ನು ನಿಜವಾದ ಅರ್ಥದಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಆಗಿಸುವ ನಿಟ್ಟಿನಲ್ಲಿ ಕಸಾಪ ಸದಸ್ಯರು ಹಾಗೂ ಪ್ರಾಜ್ಞರು ಚಿಂತನೆ ನಡೆಸಲು ಇದು ಸಕಾಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.