ADVERTISEMENT

ಸಂಪಾದಕೀಯ | ಗ್ರಂಥಾಲಯ ವ್ಯವಸ್ಥೆಗೆ ಸಂಕಷ್ಟ; ಸರ್ಕಾರದ ನಿರ್ಲಕ್ಷ್ಯ ಸರಿಯಲ್ಲ

ಪ್ರಜಾವಾಣಿ ವಿಶೇಷ
Published 1 ಜನವರಿ 2026, 23:30 IST
Last Updated 1 ಜನವರಿ 2026, 23:30 IST
ಸಂಪಾದಕೀಯ
ಸಂಪಾದಕೀಯ   

ಸಮಾಜದಲ್ಲಿ ಡಿಜಿಟಲ್‌ ಮಾಧ್ಯಮದ ಒಲವು ಹೆಚ್ಚುತ್ತಿರುವುದರಿಂದಾಗಿ ‘ಪುಸ್ತಕ ಸಂಸ್ಕೃತಿ’ ದುರ್ಬಲಗೊಳ್ಳುತ್ತಿದೆ ಎನ್ನುವ ಆತಂಕ ಸಾಂಸ್ಕೃತಿಕ ವಲಯದಲ್ಲಿದೆ. ಈ ದುಗುಡವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರ, ಗ್ರಂಥಾಲಯ ವ್ಯವಸ್ಥೆಯ ಬುನಾದಿ ಶಿಥಿಲಗೊಳಿಸುವಂತೆ ನಡೆದುಕೊಳ್ಳುತ್ತಿದೆ. 2022ರಿಂದ ಪುಸ್ತಕ ಖರೀದಿ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವುದರ ಜೊತೆಗೆ, 2021ರಲ್ಲಿ ಸಗಟು ಪುಸ್ತಕ ಖರೀದಿಯನ್ನು ನಿಲ್ಲಿಸಿರುವುದು ಪುಸ್ತಕ ಖರೀದಿಗೆ ಬಹು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಪುಸ್ತಕ ಖರೀದಿಗೆ ಸರ್ಕಾರ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಆಯಾ ವರ್ಷವೇ ಖರೀದಿ ನಡೆಯಬೇಕು ಎಂದು ‘ಕನ್ನಡ ಲೇಖಕರ ಮತ್ತು ಪ್ರಕಾಶಕರ ಒಕ್ಕೂಟ’ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದೆ. ಪುಸ್ತಕೋದ್ಯಮವನ್ನು ನಿರ್ಲಕ್ಷಿಸಿರುವುದು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನೆರವಿಗೆ ಸರ್ಕಾರ ಕಡಿವಾಣ ಹಾಕಿರುವುದರ ಬಗ್ಗೆ ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಗ್ರಂಥಾಲಯಗಳಿಗೆಂದು ಸಂಗ್ರಹಿಸಿದ ಕರವನ್ನು ಬಾಕಿ ಉಳಿಸಿಕೊಳ್ಳುವುದು ಅನ್ಯಾಯ ಎಂದವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಹೇಳಿದ್ದರು. ಆದರೆ, ಭರವಸೆಗಳಿಗೆ ಮಾತ್ರ ಸರ್ಕಾರದ ಪ್ರತಿಕ್ರಿಯೆ ಸೀಮಿತವಾಗಿದೆ. ಸಾರ್ವಜನಿಕ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕಗಳನ್ನು ಸಗಟು ಖರೀದಿ ಮಾಡಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪತ್ರ ಬರೆದಿರುವುದಕ್ಕೂ ಸರ್ಕಾರ ಸ್ಪಂದಿಸಿಲ್ಲ. 2020ರ ಸಾಲಿ ನಲ್ಲಿ ಆಯ್ಕೆಗೊಂಡ ಪುಸ್ತಕಗಳ ಸರಬರಾಜು ಆಗಿದ್ದರೂ, ಗ್ರಂಥಾಲಯ ಇಲಾಖೆಯಿಂದ ಪ್ರಕಾಶಕರಿಗೆ ಇದು ವರೆಗೂ ಪೂರ್ಣ ಹಣ ಪಾವತಿಯಾಗಿಲ್ಲ.

ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕ ಖರೀದಿ ಪ್ರಕ್ರಿಯೆಯನ್ನು ಪ್ರಕಾಶಕರಿಗೆ ಲಾಭ ಮಾಡಿಕೊಡುವ ದಂಧೆ ಎಂದು ನೋಡುವವರೂ ಇದ್ದಾರೆ. ಇದರಲ್ಲಿ ಸ್ವಲ್ಪ ಮಟ್ಟಿಗೆ ಸತ್ಯಾಂಶವೂ ಇದೆ. ಆದರೆ, ಗ್ರಂಥಾಲಯಗಳ ಸಬಲೀಕರಣವನ್ನು ಬಹು ದೊಡ್ಡ ಓದುಗ ವರ್ಗವನ್ನು, ವಿಶೇಷವಾಗಿ ಗ್ರಾಮೀಣ ಓದುಗರನ್ನು ಗಮನದಲ್ಲಿರಿಸಿಕೊಂಡು ನೋಡಬೇಕು. ಪುಸ್ತಕಗಳನ್ನು ನೇರವಾಗಿ ಖರೀದಿಸಲಾಗದ ಓದುಗರು ಹಾಗೂ ವಿದ್ಯಾರ್ಥಿಗಳು ಸಮಕಾಲೀನ ಕೃತಿಗಳ ಓದಿನಿಂದ ವಂಚಿತರಾಗಬಾರದು. ಆಹಾರ, ವಸತಿಯಂತೆಯೇ ಸಮಾಜದ ಸ್ವಾಸ್ಥ್ಯಕ್ಕೆ ಅಗತ್ಯವಾದ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸುವುದೂ ಸರ್ಕಾರದ ಹೊಣೆಗಾರಿಕೆಯಾಗಿದೆ. ಅಲ್ಲದೆ, ಸಾರ್ವಜನಿಕರಿಂದ ‘ಗ್ರಂಥಾಲಯ ಕರ’ ಸಂಗ್ರಹಿಸುವ ಸರ್ಕಾರ, ಪುಸ್ತಕೋದ್ಯಮವನ್ನು ಪೊರೆಯುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಹಾಗೂ ಗ್ರಂಥಾಲಯಗಳಿಗಾಗಿ ಸಂಗ್ರಹಿಸಿದ ಸಂಪನ್ಮೂಲವನ್ನು ಬೇರೆ ಉದ್ದೇಶಗಳಿಗೆ ಬಳಸುವುದು ಸರಿಯಲ್ಲ. ಕಳೆದ ಐದು ವರ್ಷಗಳ ಅವಧಿಯಲ್ಲಿ ಗ್ರಂಥಾಲಯ ಕರದ ಹೆಸರಿನಲ್ಲಿ ಸಂಗ್ರಹಿಸಿದ ₹700 ಕೋಟಿಗಿಂತಲೂ ಹೆಚ್ಚಿನ ಮೊತ್ತ ಸ್ಥಳೀಯ ಸಂಸ್ಥೆಗಳ ಬಳಿ ಉಳಿದಿದೆ. ಅದರಲ್ಲಿ ₹600 ಕೋಟಿಗಿಂತಲೂ ಹೆಚ್ಚು ಮೊತ್ತ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಬಳಿಯಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಅಭ್ಯಾಸವನ್ನು ಸ್ಥಳೀಯ ಸಂಸ್ಥೆಗಳು ರೂಢಿಸಿಕೊಂಡರೆ ಗ್ರಂಥಾಲಯಗಳು ಹಾಗೂ ಪುಸ್ತಕೋದ್ಯಮದ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ.

ಮುನ್ನೂರು ಪುಸ್ತಕಗಳ ಸಗಟು ಖರೀದಿ ಯೋಜನೆ 2021ರವರೆಗೂ ಜಾರಿಯಲ್ಲಿತ್ತು. ಆ ಯೋಜನೆ ತಮ್ಮ ‍ಪುಸ್ತಕಗಳನ್ನು ತಾವೇ ಪ್ರಕಟಿಸಿಕೊಳ್ಳುವ ಲೇಖಕರಿಗೆ ಬಹು ಉಪಯುಕ್ತವಾಗಿತ್ತು. 2021ರಲ್ಲಿ ಸಗಟು ಖರೀದಿ ಪ್ರಕ್ರಿಯೆ ನಿಲ್ಲಿಸಿ, ಪುಸ್ತಕ ಖರೀದಿಯ ಅಧಿಕಾರವನ್ನು ವಲಯ ಗ್ರಂಥಾಲಯಗಳಿಗೆ ಹಾಗೂ ಜಿಲ್ಲಾ ಗ್ರಂಥಾಲಯಗಳಿಗೆ ನೀಡಲಾಗಿದೆ. ಹೆಚ್ಚು ಶ್ರಮ ಹಾಗೂ ಸಮಯವನ್ನು ಬಯಸುವ ಹಾಗೂ ನಿರ್ದಿಷ್ಟ ಸಂಖ್ಯೆಯ ಪುಸ್ತಕಗಳ ಖರೀದಿಯ ಖಾತರಿಯೂ ಇಲ್ಲದ ಈ ಯೋಜನೆ ಲೇಖಕ–ಪ್ರಕಾಶಕರನ್ನು ನಿರುತ್ಸಾಹಗೊಳಿಸುವಂತಹದ್ದು. ಹಾಗೆಯೇ, ಕನ್ನಡ ಪುಸ್ತಕಗಳ ಪುಟವಾರು ದರ ಪರಿಷ್ಕರಣೆ ಆಗದಿರುವುದೂ ಪುಸ್ತಕೋದ್ಯಮಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಪರಿಷ್ಕರಣೆ ಕೊನೆಯ ಬಾರಿ ನಡೆದದ್ದು 2017ರಲ್ಲಿ. ಕಳೆದ ನಾಲ್ಕೈದು ವರ್ಷಗಳಲ್ಲಿ ಮುದ್ರಣ ಮತ್ತು ಕಚ್ಚಾವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ; ಜಿಎಸ್‌ಟಿ, ಸಾಗಣೆ ಖರ್ಚುಗಳೂ  ಸೇರಿ ಪುಸ್ತಕ ತಯಾರಿಕೆಯ ವೆಚ್ಚ ಹೆಚ್ಚಾಗಿದೆ. ಹಾಗಾಗಿ, ಪುಟವಾರು ದರ ಪರಿಷ್ಕರಣೆ ಜರೂರಾಗಿ ಆಗಬೇಕಾಗಿದೆ. ಬಾಕಿ ಉಳಿದಿರುವ ಮೂರು ವರ್ಷಗಳ ಪುಸ್ತಕ ಆಯ್ಕೆ ಮತ್ತು ಖರೀದಿಯನ್ನು 6 ತಿಂಗಳಲ್ಲಿ ಮುಗಿಸುವ ಭರವಸೆಯನ್ನು ಗ್ರಂಥಾಲಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೀಡಿದ್ದಾರೆ. ಹೊಸ ವರ್ಷದಲ್ಲಿ ನೀಡಿರುವ ಈ ಭರವಸೆ ಬಾಯಿಮಾತಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಲಿ. ಕನ್ನಡ ಶಾಲೆಗಳ ಸಂರಕ್ಷಣೆಯಂತೆಯೇ, ಸಾರ್ವಜನಿಕ ಗ್ರಂಥಾಲಯಗಳ ಸಬಲೀಕರಣವೂ ಕನ್ನಡ ಸಂಸ್ಕೃತಿಯನ್ನು ಬಲಗೊಳಿಸುವ ಕೆಲಸ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.