ADVERTISEMENT

ಉಗ್ರರ ಪಟ್ಟಿ: ಅಜರ್ ಸೇರ್ಪಡೆಗೆ ಚೀನಾ ತಡೆ ಖಂಡನೀಯ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 20:06 IST
Last Updated 15 ಮಾರ್ಚ್ 2019, 20:06 IST
   

ಪಾಕಿಸ್ತಾನದ ಕುಖ್ಯಾತ ಜಿಹಾದಿ ಸಂಘಟನೆ ಜೈಷ್‌- ಎ- ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂಬ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದಿರುವ ಪ್ರಸ್ತಾವಕ್ಕೆ ಚೀನಾ ಪುನಃ ಅಡ್ಡಗಾಲು ಹಾಕಿದೆ.

‘ಏಷ್ಯಾ ಖಂಡದ ಗೂಳಿ’ಯಂತೆ ನಡೆದುಕೊಳ್ಳುತ್ತಿರುವ ಚೀನಾದ ಈ ವಿರೋಧ ಅನಿರೀಕ್ಷಿತವೇನೂ ಅಲ್ಲ. ಅಜರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂಬ ಪ್ರಸ್ತಾವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದೆ ಬಂದು ಹತ್ತು ವರ್ಷಗಳೇ ಉರುಳಿವೆ.ನಾಲ್ಕು ಪ್ರಯತ್ನಗಳು ಜರುಗಿವೆ.ಪ್ರತಿಸಲವೂ ಅಜರ್‌ನನ್ನು ಚೀನಾ ರಕ್ಷಿಸಿದೆ.ಇತ್ತೀಚಿನ ಪ್ರಯತ್ನಕ್ಕೆ ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ರಾಷ್ಟ್ರಗಳ ಪೈಕಿ ಚೀನಾ ವಿನಾ ಅಮೆರಿಕ,ಬ್ರಿಟನ್ ಮತ್ತು ಫ್ರಾನ್ಸ್ ಬೆಂಬಲ ನೀಡಿವೆ.ಈ ನಾಲ್ಕೂ ಸದಸ್ಯ ದೇಶಗಳು ವಿಟೊ ಅಧಿಕಾರ ಹೊಂದಿವೆ. ಈ ಪೈಕಿ ಯಾವುದೇ ಒಂದು ದೇಶ ವಿರೋಧಿಸಿ ಮತ ಚಲಾಯಿಸಿದರೂ ಪ್ರಸ್ತಾವ-ನಿರ್ಣಯ ಅಂಗೀಕಾರ ಆಗುವುದಿಲ್ಲ.

2009, 2016ಹಾಗೂ2017ರ ಭಾರತದ ಪ್ರಯತ್ನಗಳು ನಿಷ್ಫಲ ಆದದ್ದು ಇದೇ ಕಾರಣದಿಂದ.ಜೈಷ್‌ ವಿರುದ್ಧ ಹೆಚ್ಚು ಪುರಾವೆ-ಪ್ರಮಾಣಗಳು ಬೇಕೆಂಬ ಕುಂಟು ನೆಪಗಳನ್ನು ಒಡ್ಡಿ ಚೀನಾ ಈ ನಿರ್ಣಯಗಳಿಗೆ ಅಡ್ಡಗಾಲು ಹಾಕಿತ್ತು. ಚೀನಾ ತನ್ನ ಝಿನ್-ಜಿಯಾಂಗ್ ಪ್ರಾಂತದಲ್ಲಿ15ಲಕ್ಷ ಮಂದಿ ಉಯ್ಗರ್ ಮುಸ್ಲಿಂ ಅಲ್ಪಸಂಖ್ಯಾತರನ್ನು ‘ಮರುಶಿಕ್ಷಣ ಶಿಬಿರ’ಗಳಲ್ಲಿ ಬಂಧಿಸಿ ಇಟ್ಟಿದೆ.ಚೀನಿ ಕಮ್ಯುನಿಸ್ಟ್ ಸಿದ್ಧಾಂತವನ್ನು ಅಂಗೀಕರಿಸುವಂತೆ ಅವರಿಗೆ ‘ಭಯೋತ್ಪಾದನೆ ದಮನ ಶಿಕ್ಷಣ’ ನೀಡತೊಡಗಿದೆ.

ADVERTISEMENT

‘ಸೈದ್ಧಾಂತಿಕ ಕಾಯಿಲೆ’ಗೆ ಚಿಕಿತ್ಸೆ ನೀಡುತ್ತಿರುವ ‘ಆಸ್ಪತ್ರೆಗಳು’ ಎಂದು ಈ ಶಿಬಿರಗಳನ್ನು ಬಣ್ಣಿಸಿದೆ.ಉದ್ದ ಗಡ್ಡ ಬಿಡುವುದನ್ನೂ,ಬುರ್ಖಾ ತೊಡುವುದನ್ನೂ, ಮೊಹಮ್ಮದ್ ಮತ್ತು ಫಾತಿಮಾ ಹೆಸರುಗಳನ್ನು ಇಟ್ಟುಕೊಳ್ಳುವುದನ್ನೂ ನಿಷೇಧಿಸಿದೆ.ಅದೇ ಸಮಯದಲ್ಲಿ ಇತ್ತ ಕುಖ್ಯಾತ ಜಿಹಾದಿ ಭಯೋತ್ಪಾದಕ ಮಸೂದ್ ಅಜರ್‌ನ ರಕ್ಷಣೆಗೆ ಇಳಿದಿದೆ. ಮುಸ್ಲಿಮರ ಹಕ್ಕುಗಳನ್ನು ಜಗತ್ತಿನ ಕೆಲವು ದೇಶಗಳಲ್ಲಿ ದಮನ ಮಾಡಲಾಗುತ್ತಿದೆ ಎಂದು ಹುಯಿಲೆಬ್ಬಿಸುವ ಪಾಕಿಸ್ತಾನ, ಉಯ್ಗರ್ ಮುಸ್ಲಿಮರಿಗೆ ನೀಡುತ್ತಿರುವ ಚಿತ್ರಹಿಂಸೆ ಕುರಿತು ತುಟಿ ಬಿಚ್ಚಿಲ್ಲ. ‘ಪ್ರಾಣಸ್ನೇಹಿತ’ರಾದ ಚೀನಾ-ಪಾಕಿಸ್ತಾನದ ಈ ನಡೆ-ನುಡಿ ಶುದ್ಧಾಂಗ ಆಷಾಢಭೂತಿತನವಲ್ಲದೆ ಮತ್ತೇನು?

2018ರಲ್ಲಿ ಮೋದಿ- ಷಿ ಜಿನ್‌ಪಿಂಗ್‌ ನಡುವೆ ಜರುಗಿದ ‘ವುಹಾನ್ ಅನಧಿಕೃತ ಶೃಂಗಸಭೆ’ಯ ಫಲಿತಾಂಶ ಶೂನ್ಯ ಎಂಬುದನ್ನು ಚೀನಾದ ಈ ನಡೆ ಸಾಬೀತು ಮಾಡಿದೆ.ಚೀನಾ ಜೊತೆಗಿನ ದೋಕಲಾ ಗಡಿ ವಿವಾದ ಇನ್ನೂ ಜೀವಂತ.ಅರುಣಾಚಲ ಪ್ರದೇಶದ ಕೆಲ ಭಾಗಗಳ ಮೇಲೆ ತನ್ನ ಹಕ್ಕು ಸಾಧಿಸುವ ಧೋರಣೆಯನ್ನೂ ಅದು ಮೆದುಗೊಳಿಸಿಲ್ಲ.ಪರಮಾಣು ಸರಬರಾಜುದಾರರ ಗುಂಪಿಗೆ(ಎನ್.ಎಸ್.ಜಿ.)ಭಾರತದ ಸೇರ್ಪಡೆಯನ್ನೂ ತಡೆಯುತ್ತ ಬಂದಿದೆ.

ಭಾರತದ ಗುರುತರ ನೆರೆಹೊರೆಯಾದ ನೇಪಾಳ,ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ನಲ್ಲಿ ತನ್ನ ಹಿಡಿತ ಬಿಗಿಗೊಳಿಸುವುದನ್ನೂ ಅದು ನಿಲ್ಲಿಸಿಲ್ಲ.ಜೈಷ್‌ ಕುರಿತ ಧೋರಣೆಯೂ ಬದಲಾಗಿಲ್ಲ. ತಾನು ನಿರ್ಮಿಸುತ್ತಿರುವ ‘ಚೀನಾ– ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್’ ಯೋಜನೆಯಲ್ಲಿ ಚೀನಾ ಭಾರಿ ಬಂಡವಾಳ ಹೂಡಿದೆ. ಭಾರತ ಇತ್ತೀಚೆಗೆ ವಾಯುದಾಳಿ ನಡೆಸಿದ ಜೈಷ್‌-ಎ- ಮೊಹಮ್ಮದ್ ತರಬೇತಿ ಶಿಬಿರ ಇರುವ ಪಾಕಿಸ್ತಾನದ ಬಾಲಾಕೋಟ್ ಮೂಲಕ ಈ ಕಾರಿಡಾರ್ ಹಾದು ಹೋಗಲಿದೆ.

ಹತ್ತಾರು ಸಾವಿರ ಚೀನಿ ಕಾರ್ಮಿಕರು ಈ ಕಾರಿಡಾರ್ ನಿರ್ಮಾಣದಲ್ಲಿ ತೊಡಗಿದ್ದಾರೆ.ತನ್ನ ಕಾರ್ಮಿಕರು ಮತ್ತು ಹೂಡಿಕೆಯನ್ನು ರಕ್ಷಿಸಿಕೊಳ್ಳುವ ಧಾವಂತದಲ್ಲಿ ಚೀನಾ ಅಜರ್‌ನ ರಕ್ಷಣೆಗೆ ಮುಂದಾಗಿದೆ ಎಂಬ ವ್ಯಾಖ್ಯಾನ ಇದೆ. ಭಯೋತ್ಪಾದಕರ ಪಟ್ಟಿಗೆ ಅಜರ್ ಸೇರ್ಪಡೆಯ ವಿಷಯ ಒಂಬತ್ತು ತಿಂಗಳ ನಂತರ ಪುನಃ ಭದ್ರತಾ ಮಂಡಳಿಯ ಮುಂದೆ ಬರಲಿದೆ.ಈ ಅವಧಿಯಲ್ಲಿ, ಭಯೋತ್ಪಾದನೆಯ ಕ್ರೌರ್ಯದ ವಸ್ತುಸ್ಥಿತಿ ಬಗ್ಗೆ ಚೀನಾದ ಕಣ್ಣು ತೆರೆಸುವ ಪ್ರಯತ್ನವನ್ನು ಭಾರತ ಹಲವು ಆಯಾಮಗಳಲ್ಲಿ ಮುಂದುವರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.