ADVERTISEMENT

ಸಂಪಾದಕೀಯ | ಮದುವೆಗಳಿಗೆ ಸರ್ಕಾರದ ಕಣ್ಗಾವಲು: ಪ್ರತಿಗಾಮಿ–ಕೋಮುವಾದಿ ಚಿಂತನೆ

ಸಂಪಾದಕೀಯ
Published 27 ಫೆಬ್ರುವರಿ 2026, 23:30 IST
Last Updated 27 ಫೆಬ್ರುವರಿ 2026, 23:30 IST
<div class="paragraphs"><p>editorial</p></div>

editorial

   
ಮದುವೆಗಳ ನೋಂದಣಿಗೆ ಪೋಷಕರ ಸಮ್ಮತಿಯನ್ನು ಕಡ್ಡಾಯಗೊಳಿಸಲು ಗುಜರಾತ್‌ ಸರ್ಕಾರ ಪ್ರಯತ್ನಿಸುತ್ತಿದೆ. ಇದು ಸಾಂವಿಧಾನಿಕ ತತ್ತ್ವಗಳಿಗೆ ವಿರುದ್ಧವಾಗಿದೆ ಹಾಗೂ ಪ್ರತಿಗಾಮಿ ಚಿಂತನೆಯಾಗಿದೆ.

ವಿವಾಹಗಳ ನೋಂದಣಿಗೆ ಪೋಷಕರ ಸಮ್ಮತಿಯನ್ನು ಕಡ್ಡಾಯಗೊಳಿಸುವ ಪ್ರಸ್ತಾವ ಗುಜರಾತ್‌ ಸರ್ಕಾರದ ಮುಂದಿದೆ. ಇದು, ಸಂಕುಚಿತ ಮನಃಸ್ಥಿತಿಯ ಹಾಗೂ ಸಾಂವಿಧಾನಿಕ ನಿಲುವುಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗುವಂತಹ ಪ್ರತಿಗಾಮಿ ಚಿಂತನೆಯಾಗಿದೆ. ಈ ಪ್ರಸ್ತಾವ, ಸ್ವಾಯತ್ತತೆ ಹಾಗೂ ಗೋಪ್ಯತೆಯ ಹಕ್ಕುಗಳನ್ನು ಉಲ್ಲಂಘಿಸುವಂತಹದ್ದೂ ಆಗಿದೆ. ರಾಜ್ಯದ ಅಮಾಯಕ ಹೆಣ್ಣುಮಕ್ಕಳನ್ನು ಸಮಾಜ ವಿರೋಧಿ ಶಕ್ತಿಗಳು ತಮ್ಮ ಬಲೆಗೆ ಬೀಳಿಸಿಕೊಂಡು ವಂಚಿಸುವುದನ್ನು ತಪ್ಪಿಸುವ ಉದ್ದೇಶದಿಂದ ‘ಗುಜರಾತ್‌ ವಿವಾಹ ನೋಂದಣಿಗಳ ಕಾಯ್ದೆ–2006’ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿರುವುದಾಗಿ ಆ ರಾಜ್ಯದ ಉಪ ಮುಖ್ಯಮಂತ್ರಿ ಹರ್ಷ್‌ ಸಂಘವಿ ಹೇಳಿದ್ದಾರೆ. ಪ್ರೇಮ ವಿವಾಹಗಳಿಗೆ ಸರ್ಕಾರ ವಿರೋಧವಾಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿರುವ ಅವರು, ಹೆಣ್ಣುಮಕ್ಕಳ ಘನತೆ ಹಾಗೂ ಸನಾತನ ಧರ್ಮದ ರಕ್ಷಣೆಯಷ್ಟೇ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಆದರೆ, ಅವರ ಹೇಳಿಕೆಯ ಹಿಂದೆ ಬಲಪಂಥೀಯ ಸಂಘಟನೆಗಳು ಬಿಂಬಿಸುತ್ತಿರುವ ‘ಲವ್‌ ಜಿಹಾದ್‌’ಗೆ ಪ್ರತಿರೋಧ ಇರುವುದನ್ನು ಗಮನಿಸಬಹುದು. ಕಾಯ್ದೆ ತಿದ್ದುಪಡಿಗೊಂಡಲ್ಲಿ, ವಧು–ವರರು ತಾವು ಮದುವೆಯಾಗುತ್ತಿರುವ ವಿಷಯವನ್ನು ಪೋಷಕರಿಗೆ ತಿಳಿಸಿದ್ದೇವೆ ಎಂದು ಘೋಷಿಸಬೇಕಾಗಿದೆ ಹಾಗೂ ಪೋಷಕರ ಗುರುತಿನ ವಿವರಗಳನ್ನು ಒದಗಿಸ ಬೇಕಾಗಿದೆ. ಈ ಕ್ರಮವು ಮಹಿಳೆಯರ ಸ್ವಂತಿಕೆ ಹಾಗೂ ಯೋಚನಾಕ್ರಮವನ್ನು ಅನುಮಾನಿಸುವಂತಹದ್ದಾಗಿದೆ; ರಕ್ಷಣೆ ಕೋರುವವರು ಎಂದು ಭಾವಿಸುವ ಮೂಲಕ ಅವರನ್ನು ದುರ್ಬಲ ಗೊಳಿಸುವಂತಿದೆ.

ವಿವಾಹ ನೋಂದಣಿ ಕಾಯ್ದೆಯ ತಿದ್ದುಪಡಿ ಪ್ರಸ್ತಾವವು ಸಾಂವಿಧಾನಿಕ ನಿಲುವುಗಳಿಗೂ ವಿರುದ್ಧವಾದುದು. ನ್ಯಾಯಾಲಯದ ಅನೇಕ ತೀರ್ಪುಗಳು, ಯಾರ ಒಪ್ಪಿಗೆಯ ಅಗತ್ಯವೂ ಇಲ್ಲದೆ ಇಬ್ಬರು ವಯಸ್ಕರು ಮದುವೆಯಾಗುವ ಹಕ್ಕು ಹೊಂದಿರುವುದನ್ನು ದೃಢಪಡಿ ಸಿವೆ. ಈ ಹಕ್ಕನ್ನು 21ನೇ ವಿಧಿ ಕಲ್ಪಿಸಿದೆ. ಲತಾ ಸಿಂಗ್‌ ವರ್ಸಸ್‌ ಉತ್ತರ ಪ್ರದೇಶ (2002), ಶಫಿನ್‌ ಜಹಾನ್‌ ವರ್ಸಸ್‌ ಅಶೋಕನ್‌ ಕೆ.ಎಂ. (2018) ಹಾಗೂ ಲಕ್ಷ್ಮೀಬಾಯಿ ಚಂದರಗಿ ಬಿ. ವರ್ಸಸ್‌ ಕರ್ನಾಟಕ (2021) ಪ್ರಕರಣಗಳಲ್ಲಿ, ‘ಬಾಹ್ಯ ಹಸ್ತಕ್ಷೇಪವಿಲ್ಲದೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಜೀವಿಸುವ ಹಕ್ಕು ನೀಡುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೈಕೋರ್ಟ್‌ ಗಳು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ವಿಶೇಷ ವಿವಾಹ ಕಾಯ್ದೆಯಡಿ ಮೂವತ್ತು ದಿನಗಳ ನೋಟಿಸ್‌ನ ಅಗತ್ಯವನ್ನೂ ನ್ಯಾಯಾಲಯಗಳು ರದ್ದುಗೊಳಿಸಿದ್ದು, ಅದು ಗೋಪ್ಯತೆಯ ಮೇಲಿನ ಆಕ್ರಮಣ ಎಂದು ವಿಶ್ಲೇಷಿಸಿವೆ. ಮದುವೆಯಾಗುವ ನಿರ್ಧಾರಕ್ಕೂ ಜಾತಿ, ಧರ್ಮ ಅಥವಾ ‍ಪೋಷಕರ ಸಮ್ಮತಿಗೂ ಸಂಬಂಧವನ್ನು ಕಲ್ಪಿಸುವುದು ಸರಿಯಲ್ಲ. ಬಾಹ್ಯ ವಿರೋಧದ ಸಂದರ್ಭದಲ್ಲಿ ವಯಸ್ಕ ಜೋಡಿಯ ಮದುವೆಯಾಗುವ ಹಕ್ಕನ್ನು ರಕ್ಷಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಈ ಹೊಣೆಗಾರಿಕೆಯನ್ನು ನಿರ್ವಹಿಸುವ ಬದಲಾಗಿ, ಉದ್ದೇಶಿತ ತಿದ್ದುಪಡಿಯು ಮದುವೆಗೆ ಸಾಮಾಜಿಕ ಕಣ್ಗಾವಲು ವಿಧಿಸುವ ಹಾಗೂ ಹೆಣ್ಣು–ಗಂಡಿನ ಮದುವೆಯ ನಿರ್ಧಾರದ ಮೇಲೆ ಕುಟುಂಬ ಹಾಗೂ ಸರ್ಕಾರದ ನಿಯಂತ್ರಣವನ್ನು ಹೆಚ್ಚಿಸುವ ಪ್ರಯತ್ನವಾಗಿದೆ.

ADVERTISEMENT

ಯಾವುದೇ ಪುರಾವೆಗಳಿಲ್ಲದೆ ಹರಡಲಾಗುತ್ತಿರುವ ‘ಲವ್‌ ಜಿಹಾದ್‌’ ಪರಿಕಲ್ಪನೆಯು, ಆಳವಾದ ಕೋಮುವಾದಿ ಅಜೆಂಡಾವನ್ನು ಹೊಂದಿದೆ. ಮುಸ್ಲಿಮರನ್ನು ರಾಕ್ಷಸರಂತೆ ಚಿತ್ರಿಸುವ ಮೂಲಕ ಕೋಮು ಧ್ರುವೀಕರಣದ ಉದ್ದೇಶವನ್ನು ಈ ಪರಿಕಲ್ಪನೆ ಹೊಂದಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲೂ ಇದೇ ರೂಪದ ನಿರ್ಬಂಧಗಳನ್ನು ಕೈಗೊಳ್ಳಲಾಗಿದೆ ಹಾಗೂ ಯುವಜನರು ತಮ್ಮಿಷ್ಟದ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಗುಜರಾತ್‌ ಸರ್ಕಾರದ ಪ್ರತಿಗಾಮಿ ಕ್ರಮವನ್ನು ಇತರ ಪಕ್ಷಗಳು ವಿರೋಧಿಸುತ್ತಿಲ್ಲ ಎನ್ನುವುದು ಆ ರಾಜ್ಯದ ರಾಜಕೀಯ ಮಿತಿಯನ್ನು ಸಂಕೇತಿಸುವಂತಿದೆ. ಕಾಂಗ್ರೆಸ್‌ ಸಂಸದ ಗೆನಿಬೆನ್‌ ಠಾಕೂರ್‌ ಹಾಗೂ ಎಎಪಿ ಶಾಸಕ ಹೇಮಂತ್‌ ಖಾವಾ ಅವರು ಸರ್ಕಾರದ ಪ್ರಸ್ತಾವವನ್ನು ಬೆಂಬಲಿಸಿದ್ದಾರೆಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ ಹಾಗೂ ಎಎಪಿ ರಾಷ್ಟ್ರೀಯ ನಾಯಕತ್ವವು ಗುಜರಾತ್‌ ಸರ್ಕಾರದ ಪ್ರತಿಗಾಮಿ ನಿಲುವಿನ ಬಗ್ಗೆ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.