ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ನಿರೀಕ್ಷೆಯಂತೆ ರೆಪೊ ದರವನ್ನು ಶೇಕಡ 0.25ರಷ್ಟು ಕಡಿತ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನಡೆದ ಎಂಪಿಸಿಯ ಮೊದಲ ಸಭೆಯಲ್ಲಿಯೇ ರೆಪೊ ದರ ಇಳಿಕೆಗೆ ಸರ್ವಾನುಮತದ ಒಪ್ಪಿಗೆ ನೀಡಲಾಗಿದೆ. ತಟಸ್ಥ ನಿಲುವನ್ನು ಬಿಟ್ಟುಕೊಟ್ಟಿರುವ ಆರ್‌ಬಿಐ, ಅದಕ್ಕೆ ಬದಲಾಗಿ ಹೊಂದಾಣಿಕೆಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳಲು ನಿರ್ಧರಿಸಿರುವುದು ಕೂಡ ಮಹತ್ವದ ವಿದ್ಯಮಾನ. ಸದ್ಯದ ಭವಿಷ್ಯದಲ್ಲಿ ರೆಪೊ ದರ ಮತ್ತೆ ಏರಿಕೆ ಆಗುವುದಿಲ್ಲ ಎಂಬುದರ ಸ್ಪಷ್ಟ ಸಂದೇಶವೂ ಇದಾಗಿದೆ. ಆರ್‌ಬಿಐ ನಿಲುವಿನಲ್ಲಿ ಆಗಿರುವ ಈ ಬದಲಾವಣೆಯು ಆರ್ಥಿಕ ಪ್ರಗತಿಯ ದಾರಿಗಳತ್ತ ಅದು ಕಣ್ಣು ನೆಟ್ಟಿರುವುದಕ್ಕೆ ದ್ಯೋತಕ. ಸತತ ಎರಡನೇ ಅವಧಿಗೆ ರೆಪೊ ದರವನ್ನು ಕಡಿತ ಮಾಡಲಾಗಿದೆ. ಈ ವರ್ಷದ ಫೆಬ್ರುವರಿಯಲ್ಲೂ ದರ ಕಡಿತ ಮಾಡಲಾಗಿತ್ತು. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಆಡಿರುವ ಮಾತು, ಮುಂದಿನ ದಿನಗಳಲ್ಲೂ ಕೇಂದ್ರೀಯ ಬ್ಯಾಂಕ್ ದರ ಕಡಿತ ಮಾಡಲು ಹಿಂಜರಿಯುವುದಿಲ್ಲ ಎಂಬ ಮುನ್ಸೂಚನೆಯನ್ನು ನೀಡುತ್ತದೆ. ರೆಪೊ ದರ ಕಡಿತದಿಂದ ಸಾಲ ಮರುಪಾವತಿ ಕಂತಿನ ಪ್ರಮಾಣವೂ ಕಡಿಮೆ ಆಗಲಿದ್ದು, ಹಣಕಾಸು ಸಂಸ್ಥೆಗಳು ಆರ್‌ಬಿಐನಿಂದ ಸಾಲ ಪಡೆಯುವ ಪ್ರಮಾಣವು ಹೆಚ್ಚಲಿದೆ. ಸಾಲದ ಮೇಲಿನ ಬಡ್ಡಿಯ ಹೊರೆ ಕಡಿಮೆ ಆಗುವುದರಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿದ್ದು, ಪ್ರಗತಿಯ ಚಕ್ರ ವೇಗ ಪಡೆದು ಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿರುವ ಪ್ರತಿಸುಂಕ ಸಮರದಿಂದಾಗಿ ಜಾಗತಿಕ ಅರ್ಥವ್ಯವಸ್ಥೆ ಹಾಗೂ ಭಾರತದ ಆರ್ಥಿಕತೆಯ ಬೆಳವಣಿಗೆ ಮೇಲೆ ಬೀರಬಹುದಾದ ಪರಿಣಾಮಗಳೇ ಆರ್‌ಬಿಐನ ಬದಲಾದ ನಿಲುವಿಗೆ ಕಾರಣ. 2025–26ನೇ ಸಾಲಿನ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರವನ್ನೂ ಎಂಪಿಸಿ ಪರಿಷ್ಕರಿಸಿದೆ. ಫೆಬ್ರುವರಿಯಲ್ಲಿ ನಡೆದ ಸಭೆಯಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 6.7ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು. ಈಗ ಅದರ ಪ್ರಮಾಣವನ್ನು ಶೇ 6.5ಕ್ಕೆ ಪರಿಷ್ಕರಿಸಲಾಗಿದೆ. ವ್ಯಾಪಾರ ಸಂಘರ್ಷ ಮತ್ತು ಅದು ಬಂಡವಾಳ ಹೂಡಿಕೆ ಹಾಗೂ ಹಣ ವ್ಯಯ ಮಾಡುವ ನಿರ್ಧಾರದ ಮೇಲೆ ಬೀರಬಹುದಾದ ಪ್ರಭಾವವೇ ಇದಕ್ಕೆ ಕಾರಣ. ಪರಿಷ್ಕೃತ ಬೆಳವಣಿಗೆ ದರ ಕೂಡ ಹೆಚ್ಚಿನ ಆಶಾವಾದದಿಂದ ಕೂಡಿದ್ದು, ಈ ಗುರಿಯನ್ನು ಮುಟ್ಟುವುದೂ ಸದ್ಯದ ಸನ್ನಿವೇಶದಲ್ಲಿ ಸವಾಲಾಗಿದೆ. ಅಮೆರಿಕದೊಂದಿಗೆ ನಡೆದಿರುವ ವ್ಯಾಪಾರ ವಹಿವಾಟಿನ ಸ್ವರೂಪದ ಚರ್ಚೆ, ಪ್ರತಿಸುಂಕದಿಂದ ರಫ್ತು ಕ್ಷೇತ್ರದಲ್ಲಾಗುವ ಬದಲಾವಣೆ ಮತ್ತು ಬೆಲೆ ಸಮರಕ್ಕೆ ಭಾರತೀಯ ರಫ್ತು ಉದ್ಯಮ ಕ್ಷೇತ್ರದ ಹೊಂದಿಕೊಳ್ಳುವ ಶಕ್ತಿ– ಈ ಅಂಶಗಳು ಭವಿಷ್ಯದ ಆರ್ಥಿಕ ಬೆಳವಣಿಗೆ ದರದ ಮೇಲೆ ದೊಡ್ಡ ಪ್ರಭಾವವನ್ನು ಬೀರಲಿವೆ ಎಂಬುದು ಆರ್‌ಬಿಐ ಗವರ್ನರ್ ಹೇಳಿಕೆಯಲ್ಲಿ ಢಾಳಾಗಿ ಪ್ರತಿಬಿಂಬಿತವಾಗಿದೆ. ಮೇಲಿನ ಮೂರೂ ಅಂಶಗಳು ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುದನ್ನು ಈಗಲೇ ಊಹಿಸುವುದು ಅವಸರದ ಕ್ರಮ ಆಗುತ್ತದೆ. ಮುಂದೆ ಎದುರಾಗಬಹುದಾದ ಕೆಟ್ಟ ಸನ್ನಿವೇಶಗಳ ಸವಾಲನ್ನು ಮೆಟ್ಟಿ ನಿಲ್ಲಬಲ್ಲ ಸುರಕ್ಷಿತ ನೀತಿಗಳು ಇಂದಿನ ಅಗತ್ಯವಾಗಿವೆ. ಚೀನಾ ಹೊರತುಪಡಿಸಿ ಉಳಿದ ದೇಶಗಳಿಂದ ಆಮದು ಆಗುವ ಸರಕುಗಳ ಮೇಲೆ ಪ್ರತಿಸುಂಕ ಆಕರಣೆಯನ್ನು ಟ್ರಂಪ್ ಅವರು 90 ದಿನಗಳವರೆಗೆ ತಡೆಹಿಡಿದಿರುವುದು ನಿಜವಾದರೂ ಪ್ರತಿಸುಂಕದ ಹಿಡಿತದಿಂದ ಜಗತ್ತು ಇನ್ನೂ ಹೊರಬಂದಿಲ್ಲ. ಎಲ್ಲ ರಾಷ್ಟ್ರಗಳ ಹಣಕಾಸು ನಿರ್ಧಾರಗಳ ಮೇಲೆ ಈ ಅನಿಶ್ಚಿತತೆ ಪ್ರಭಾವ ಬೀರಲಿದೆ. ಅಮೆರಿಕ–ಚೀನಾ ಪ್ರತಿಸುಂಕ ಸಮರ ಕೂಡ ಜಗತ್ತಿನ ಅರ್ಥವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಚಿಲ್ಲರೆ ಹಣದುಬ್ಬರ ಪ್ರಮಾಣವು ಈಗಾಗಲೇ ತಗ್ಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಅದು ಶೇ 4.2ರಿಂದ ಶೇ 4ಕ್ಕೆ ಇಳಿಯಲಿದೆ ಎಂದೂ ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ರೆಪೊ ದರವನ್ನು ಇನ್ನಷ್ಟು ಕಡಿತಗೊಳಿಸಲು ಇದರಿಂದ ಸಾಧ್ಯವಾಗಬಹುದು. ಆದರೆ, ಆರ್‌ಬಿಐನ ಭವಿಷ್ಯದ ನಿರ್ಧಾರಗಳು ಜಾಗತಿಕ ವಿದ್ಯಮಾನವನ್ನೇ ಅವಲಂಬಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.