
ವರ್ತಮಾನದ ಆರ್ಥಿಕ ಸವಾಲುಗಳು ಹಾಗೂ ಅನಿಶ್ಚಿತ ಪರಿಸ್ಥಿತಿ ನಿಭಾಯಿಸಲು ಅಗತ್ಯವಾದ ಸ್ಪಂದನಗಳನ್ನು ಬಜೆಟ್ ಹೊಂದಿಲ್ಲ. ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನು ಹೆಚ್ಚಿಸುವುದಕ್ಕೂ ಬಜೆಟ್ ಆಸಕ್ತಿ ವಹಿಸಿಲ್ಲ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026–27ನೇ ಸಾಲಿನ ಬಜೆಟ್ ವರ್ತಮಾನದ ಆರ್ಥಿಕ ಸವಾಲುಗಳಿಗೆ ದಿಟ್ಟ ಹಾಗೂ ಸೃಜನಶೀಲ ಯೋಜನೆಗಳಿಲ್ಲದ, ಹೊಸ ಕನಸುಗಳನ್ನು ಕಟ್ಟಿಕೊಡದ ಮುಂಗಡಪತ್ರವಾಗಿದೆ. ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು, ಉದ್ಯಮಗಳನ್ನು ಬಲಪಡಿಸುವುದು ಮತ್ತು ಸರ್ಕಾರಿ ಬಂಡವಾಳ ಹೂಡಿಕೆಯನ್ನು ಮುಂದುವರಿಸುವುದು ಬಜೆಟ್‌ನ ಧ್ಯೇಯಗಳಾಗಿದ್ದರೂ, ಅದರ ಒಟ್ಟಾರೆ ಚಿತ್ರಣವು ರಕ್ಷಣಾತ್ಮಕ ಮತ್ತು ಸಾಂಪ್ರದಾಯಿಕವಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎನ್ನುವ ಅಸಮಾಧಾನವನ್ನು ಹೋಗಲಾಡಿಸುವ ಪ್ರಯತ್ನಗಳೂ ಬಜೆಟ್‌ನಲ್ಲಿಲ್ಲ. ಯಾವುದೇ ಸ್ಪಷ್ಟ ತೆರಿಗೆ ಸಡಿಲಿಕೆ ಇಲ್ಲದ ಕಾರಣದಿಂದಾಗಿ ಮಧ್ಯಮ ವರ್ಗದ ಪಾಲಿಗೆ ಬಜೆಟ್‌ನಲ್ಲಿ ಆಶಾದಾಯಕ ಸಂಗತಿಗಳಿಲ್ಲ. ಆದಾಯ ತೆರಿಗೆಯಲ್ಲಿ ಯಾವುದೇ ಮುಖ್ಯವಾದ ಬದಲಾವಣೆ ಇಲ್ಲದೆ ಇರುವುದರಿಂದ, ಜನರ ಖರೀದಿ ಸಾಮರ್ಥ್ಯ ಹೆಚ್ಚಾಗುವ ಸಾಧ್ಯತೆ ಇಲ್ಲ. ಯುವಜನರ ನಿರುದ್ಯೋಗ ಸಮಸ್ಯೆ, ರೈತರ ಸಂಕಷ್ಟಗಳ ಬಗ್ಗೆಯೂ ಕೇಂದ್ರ ಸರ್ಕಾರ ಹೆಚ್ಚಿನ ತಲೆ ಕೆಡಿಸಿಕೊಂಡಂತಿಲ್ಲ. ಆ ಕಾರಣದಿಂದಾಗಿಯೇ ಈ ಬಜೆಟ್ ಅನ್ನು ವಿರೋಧ ಪಕ್ಷಗಳು ‘ನೈಜ ಸಮಸ್ಯೆಗಳಿಗೆ ಕುರುಡಾಗಿದೆ’ ಎಂದು ಟೀಕಿಸಿವೆ.
ಬಜೆಟ್‌ನಲ್ಲಿ ಕೆಲವು ಗಮನಾರ್ಹ ಸಂಗತಿಗಳೂ ಇವೆ. 2030-31ರ ವೇಳೆಗೆ ದೇಶದ ಸಾಲದ ಪ್ರಮಾಣವನ್ನು ಒಟ್ಟು ಜಿಡಿಪಿಯ ಶೇ 50ರಷ್ಟಕ್ಕಿಳಿಸುವ ಗುರಿ ಹೊಂದಲಾಗಿದೆ. ಜಾಗತಿಕ ಬಿಕ್ಕಟ್ಟಿನ ನಡುವೆಯೂ ವಿತ್ತೀಯ ಕೊರತೆಯನ್ನು ತಗ್ಗಿಸುವ ಭರವಸೆ ನೀಡಿದೆ. 2025-26ನೇ ಆರ್ಥಿಕ ವರ್ಷದಲ್ಲಿ ಬಂಡವಾಳ ವೆಚ್ಚವು ಜಿಡಿಪಿಯ ಶೇ 2.8ರಷ್ಟಿತ್ತು. 2026–27ನೇ ಆರ್ಥಿಕ ವರ್ಷದಲ್ಲಿ ಶೇ 3.1ಕ್ಕೆ ಹೆಚ್ಚಿಸಿರುವುದು ಸಕಾರಾತ್ಮಕ ಅಂಶ. ಬಜೆಟ್ ಅಭಿವೃದ್ಧಿ ಪರವಾಗಿದೆ ಎಂದು ನಿರ್ಮಲಾ ಅವರು ಪ್ರತಿಪಾದಿಸಿದರೂ ಷೇರುಪೇಟೆ ನಿರಾಶಾದಾಯಕವಾಗಿ ಪ್ರತಿಕ್ರಿಯಿಸಿದೆ. ಶೇ 2ರಷ್ಟು ಕುಸಿತ ಕಂಡಿದೆ. ಮೂಲಸೌಕರ್ಯ, ರೈಲ್ವೆ, ರಸ್ತೆಗಳು ಮತ್ತು ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದೆ. ಸೆಮಿಕಂಡಕ್ಟರ್‌ಗಳು, ಎಲೆಕ್ಟ್ರಾನಿಕ್ಸ್, ವಿರಳ ಖನಿಜಗಳು, ಮತ್ತು ಬಯೋಫಾರ್ಮಾ ಕ್ಷೇತ್ರಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳು ದೀರ್ಘಕಾಲೀನ ದೃಷ್ಟಿಕೋನವನ್ನು ಹೊಂದಿರುವಂತೆ ಕಾಣಿಸುತ್ತವೆ. ಇದರಿಂದ ಭವಿಷ್ಯದಲ್ಲಿ ಉದ್ಯೋಗ ಮತ್ತು ರಫ್ತು ಸಾಮರ್ಥ್ಯ ಹೆಚ್ಚಬಹುದು. ವಿತ್ತೀಯ ಕೊರತೆಯನ್ನು ಶೇ 4.3ಕ್ಕೆ ಇಳಿಸುವ ಗುರಿ, ಸಾಲ ಮತ್ತು ಜಿಡಿಪಿ ನಡುವಿನ ಅನುಪಾತವನ್ನು ಕಡಿಮೆ ಮಾಡುವ ಚಿಂತನೆಗಳೂ ಸ್ವಾಗತಾರ್ಹ. ಆದರೆ, ಈ ಪ್ರಯತ್ನಗಳು ಆರ್ಥಿಕ ಬೆಳವಣಿಗೆಗೆ ತಡೆಯಾಗದಂತೆ ನೋಡಿಕೊಳ್ಳಬೇಕಾದ ಸವಾಲು ಸರ್ಕಾರದ ಮುಂದಿದೆ. ಸ್ಥಿರತೆ ಮತ್ತು ದೀರ್ಘಾವಧಿ ಸುಧಾರಣೆಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ; ‘ವಿಕಸಿತ ಭಾರತ’ ಪರಿಕಲ್ಪನೆಗೆ ಪೂರಕವಾಗಿದೆ ಎಂದು ಬಜೆಟ್ ಅನ್ನು ಬಿಂಬಿಸಲಾಗುತ್ತಿದೆ. ಆದರೆ, ಮಂದಗತಿಯ ಆರ್ಥಿಕತೆ, ಜಾಗತಿಕ ಅನಿಶ್ಚಿತತೆ ಮತ್ತು ಜನರ ತಕ್ಷಣದ ಅಗತ್ಯಗಳಿಗೆ ಸ್ಪಂದಿಸುವಲ್ಲಿ ಬಜೆಟ್ ಯಶಸ್ವಿಯಾಗಿಲ್ಲ ಎಂದೇ ಹೇಳಬೇಕಾಗುತ್ತದೆ.
ರಾಜ್ಯಗಳ ಆರ್ಥಿಕ ಸ್ವಾಯತ್ತತೆಯ ಹಿತಾಸಕ್ತಿ ದೃಷ್ಟಿಯಿಂದಲೂ ಬಜೆಟ್‌ನಲ್ಲಿ ಆಶಾದಾಯಕ ಸಂಗತಿಗಳಿಲ್ಲ. ಸಂಗ್ರಹಗೊಳ್ಳುವ ತೆರಿಗೆಯಲ್ಲಿ ಹೆಚ್ಚಿನ ಪಾಲನ್ನು ಕೇಂದ್ರ ಸರ್ಕಾರವೇ ಉಳಿಸಿಕೊಳ್ಳುವ ಮನೋಭಾವ ಈ ಬಾರಿಯೂ ಮುಂದುವರಿದಿದೆ. ಜಿಎಸ್‌ಟಿ ಜಾರಿಯಿಂದ ರಾಜ್ಯಗಳ ಆದಾಯದಲ್ಲಿನ ಸಂಭಾವ್ಯ ನಷ್ಟ ತಪ್ಪಿಸಲು ಕೇಂದ್ರ ಸರ್ಕಾರ ಪರಿಚಯಿಸಿದ್ದ ವಿಶೇಷ ಪರಿಹಾರ ಯೋಜನೆಯು 2022ರಲ್ಲಿ ಕೊನೆಗೊಂಡಿದೆ. ಇದರಿಂದ ರಾಜ್ಯಗಳ ಮೇಲೆ ಉಂಟಾಗುತ್ತಿರುವ ಆರ್ಥಿಕ ಒತ್ತಡವನ್ನು ಪರಿಹರಿಸಲು ಬಜೆಟ್ ಯಾವುದೇ ಪರಿಹಾರ ಸೂಚಿಸಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಶೇ 40 ಅಥವಾ ಇನ್ನೂ ಹೆಚ್ಚು ಮೊತ್ತವನ್ನು ರಾಜ್ಯಗಳ ಮೇಲೆ ಹೇರಿರುವುದರಿಂದ, ರಾಜ್ಯಗಳ ಖರ್ಚು ಮಾಡುವ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು ಹಾಗೂ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಅನುದಾನ ತೋರಿಸಿದ್ದರೂ, ರಾಜ್ಯದ ಜನಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಯೋಜನೆಗಳನ್ನು ಬಜೆಟ್ ಹೊಂದಿಲ್ಲ. ಇದಕ್ಕೆ ಪ್ರತಿಯಾಗಿ, ಸದ್ಯದಲ್ಲೇ ವಿಧಾನಸಭಾ ಚುನಾವಣೆಗಳು ನಡೆಯಲಿರುವ ರಾಜ್ಯಗಳ ಬಗ್ಗೆ ಕೇಂದ್ರ ‘ವಿಶೇಷ ಕಾಳಜಿ’ ವ್ಯಕ್ತಪಡಿಸಿರುವುದರಿಂದ ಬಜೆಟ್ ಚುನಾವಣಾ ರಾಜಕೀಯದ ಆಯಾಮವನ್ನೂ ಪಡೆದುಕೊಂಡಿದೆ. ಪ್ರಸಕ್ತ ಬಜೆಟ್ ಮೂಲಕ, ಮೊರಾರ್ಜಿ ದೇಸಾಯಿ ಅವರ ನಂತರ ಹೆಚ್ಚು ಬಾರಿ ಬಜೆಟ್ (9 ಸಲ) ಮಂಡಿಸಿದ ಖ್ಯಾತಿಗೆ ನಿರ್ಮಲಾ ಸೀತಾರಾಮನ್ ಅವರು ಪಾತ್ರರಾಗಿದ್ದಾರೆ. ಆದರೆ, ಸಂಖ್ಯಾ ದಾಖಲೆಯ ಸಂಭ್ರಮವನ್ನು ಜನರ ಜೀವನ ಸುಧಾರಣೆಯ ಭಾಗವಾಗಿಸುವ ಸವಾಲನ್ನು ಅವರು ಸ್ವೀಕರಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.