
ಸಂಗೀತಾ ಕಟ್ಟಿ
ಹಿಂದೂಸ್ತಾನಿ ಸಂಗೀತ, ಭಕ್ತಿಗೀತೆ, ಜನಪದಗೀತೆ, ಸಿನಿಮಾ ಸಂಗೀತ, ಸುಗಮ ಸಂಗೀತ, ವಚನಗಳು-ಹೀಗೆ ಎಲ್ಲದರಲ್ಲಿಯೂ ತಮ್ಮ ವಿಶಿಷ್ಟ ಗಾಯನದ ಮೂಲಕ ಛಾಪು ಮೂಡಿಸಿರುವವರು ಸಂಗೀತಾ ಕಟ್ಟಿ. ರಾಷ್ಟ್ರಪೇಮದ ದ್ಯೋತಕವಾಗಿರುವ ‘ವಂದೇಮಾತರಂ’ ಹಾಡಿಗೆ ಸ್ವರ ಸಂಯೋಜನೆ ಹಾಗೂ ಗಾಯನ ಮಾಡಿಯೂ ಸೈ ಅನಿಸಿಕೊಂಡಿದ್ದಾರೆ. ಇಂಥ ಅನನ್ಯ ಪ್ರತಿಭೆ ಸಂಗೀತಾ ಕಟ್ಟಿ 1975, ನ. 14ಕ್ಕೆ ತಮ್ಮ 4ನೇ ವಯಸ್ಸಿಗೆ ಸಾರ್ವಜನಿಕವಾಗಿ ಕಛೇರಿ ನೀಡಿದ್ದರು. ಅಲ್ಲಿಂದ ಅವರು ತಿರುಗಿ ನೋಡಿದ್ದೇ ಇಲ್ಲ. ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ಸಂಗೀತ ಕಛೇರಿಗಳು, ಭಕ್ತಿಗೀತೆ, ಭಾವಗೀತೆ, ಸಿನಿಮಾ ಹಾಡುಗಳು ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಗೀತೆಗಳು, 400 ಆಲ್ಬಂ ಹಾಡುಗಳನ್ನು ಹಾಡಿದ್ದಾರೆ. ಅವರು ಆಲಾಪನೆ ಶುರುವಿಟ್ಟುಕೊಂಡು 50 ವರ್ಷ. ಈ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.
ನೀವು ಹಾಡಲು ವೇದಿಕೆ ಹತ್ತಿದಾಗ ನಾಲ್ಕು ವರ್ಷ ಅಲ್ವೇ?
ದೆಹಲಿಯಿಂದ ಪ್ರಕಟವಾಗುತ್ತಿದ್ದ ಆಕಾಶವಾಣಿ ಮ್ಯಾಗಜಿನ್‌ಗೆ ರಜತ ಸಂಭ್ರಮದ ಕಾಲ. ಆ ಕಾರಣಕ್ಕಾಗಿ ಆಕಾಶವಾಣಿ ಧಾರವಾಡವು ಮಕ್ಕಳ ದಿನಾಚರಣೆಯ ಅಂಗವಾಗಿ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಕ್ಕಳ ಕಾರ್ಯಕ್ರಮ ‘ಗಿಳಿವಿಂಡು’ವಿನ ಆಗಿನ ರೇಡಿಯೊ ಜಾಕಿಗಳಾದ ಅಕ್ಕಮ್ಮ (ಸುಶೀಲಾ ನಾಯಕ್) ಮತ್ತು ರೇಡಿಯೊ ಕಾಕಾ (ಹಿರೇಮಠ) ಈ ಆಹ್ವಾನಿತ ಶೋತೃಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ರೇಡಿಯೊ ಕಾಕಾ ನನ್ನನ್ನು ವೇದಿಕೆಗೆ ಕರೆದು, ಅಕ್ಕಮ್ಮನನ್ನು ಉದ್ದೇಶಿಸಿ ‘ಇವ್ರು ನಮ್ಮ ಗುರುಗಳು. ಅಂದು ಕಲಿಸಿದ್ದ ರಾಗವನ್ನು ಹೇಳ್ರಿ ಸ್ವಲ್ಪ’ ಎಂದು ಹುರಿದುಂಬಿಸುತ್ತಿದ್ದರು. ಮೊದಲಿನಿಂದಲೂ ಸಭಾಕಂಪನವೆಂಬುದು ಇರಲಿಲ್ಲ. ಅವರು ಕೇಳುತ್ತಾ ಹೋದಂತೆ ನನಗೆ ಗೊತ್ತಿರುವ ಸಾರಂಗ, ಮೇಘ, ಮಲ್ಹಾರ್ ರಾಗಗಳನ್ನೆಲ್ಲ ಹೇಳುತ್ತಾ ಹೋದೆ. ಅದು ನಂತರ ಆಕಾಶವಾಣಿಯಲ್ಲಿ ಪ್ರಸಾರವೂ ಆಯಿತು. ಅದಕ್ಕೂ ಮೊದಲು ಅಲ್ಲಲ್ಲಿ ಹಾಡುವ ಖಯಾಲಿ ಇತ್ತು. ಆದರೆ, ಇದು ಸಾರ್ವಜನಿಕವಾಗಿ ಮೊದಲ ಕಾರ್ಯಕ್ರಮ.
ಈ ಹೊತ್ತಿನಲ್ಲಿ ಗುರುಗಳನ್ನು ನೆನೆಯುವುದಾದರೆ...
ತಂದೆ ಎಚ್.ಎ. ಕಟ್ಟಿ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೂ ಸಂಗೀತ ಪ್ರೇಮಿಯಾಗಿದ್ದರು. ಎರಡನೇ ವಯಸ್ಸಿಗೆ ನಾನು ಹಲವು ರಾಗಗಳಿಗೆ ತಲೆದೂಗುತ್ತಿದ್ದನಂತೆ. ಅಪ್ಪನ ಸಂಗೀತ ಸಂಸ್ಕಾರ ನನ್ನೊಳಗೆ ಇಳಿಯುತ್ತಾ ಹೋಯಿತು. ಆಮೇಲೆ ಆರಂಭಿಕ ಸಂಗೀತಾಭ್ಯಾಸವನ್ನು ಶೇಷಗಿರಿ ದಂಡಾಪುರ ಬಳಿ ಮಾಡಿದೆ. ನಂತರ ಚಂದ್ರಶೇಖರ ಪುರಾಣಿಕ್‌ಮಠ ಅವರು ಖಯಾಲ್ ಗಾಯನದವರೆಗೆ ಹೇಳಿಕೊಟ್ಟರು. ಆಮೇಲೆ ಪುರಾಣಿಕ್‌ಮಠ ಅವರೇ ಖುದ್ದಾಗಿ ಬಸವರಾಜ ರಾಜಗುರು ಹತ್ತಿರ ಕರೆದುಕೊಂಡು ಹೋಗಿ ‘ ಇನ್ಮುಂದೆ ಇವಳು ನಿಮ್ಮ ಶಿಷ್ಯಳು ಹೇಳಿಕೊಡಿ’ ಎಂದು ಮನವಿ ಮಾಡಿದರು. ಆಮೇಲೆ ಕಿಶೋರಿ ಅಮ್ನೋಕರ್‌ರಂಥ ಮಹಾಗುರುಗಳ ಬಳಿ ಕಲಿಯುವ ಅವಕಾಶವೂ ದಕ್ಕಿತು.
ತಿರುವುಘಟ್ಟಗಳನ್ನು ತಿರುಗಿ ನೋಡುವುದಾದರೆ...
ಹಿಂದಿಯ ಜನಪ್ರಿಯ ಸಂಗೀತ ನಿರ್ದೇಶಕ ನೌಷಾದ್ ಆಲಿ ಬಗ್ಗೆ ಅಪ್ಪನಿಗೆ ಎಲ್ಲಿಲ್ಲದ ಅಭಿಮಾನ. ಹಾಗಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನೌಷಾದ್ ಆಲಿ ಅವರ ಬಗ್ಗೆ ಭಾಷಣ ಮಾಡಿದ್ದರು. ನಮ್ಮ ತಂದೆಯನ್ನು ಭೇಟಿ ಮಾಡುವ ಸಲುವಾಗಿ ನೌಷಾದ್ ಆಲಿ ಮನೆಗೆ ಬಂದಿದ್ದರು. ಅವರ ಆಶೀರ್ವಾದದ ಮಾತುಗಳು ನನ್ನನ್ನೂ ಸಂಗೀತ ಕ್ಷೇತ್ರದಲ್ಲಿಯೇ ಉಳಿಯುವಂತೆ ಪ್ರೇರೇಪಿಸಿತು. ಕಿಶೋರಿ ಅಮೋನ್ಕರ್ ಅವರು ಹೊಸ ಪ್ರತಿಭೆಗಳನ್ನು ಅಷ್ಟಾಗಿ ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ ಎನ್ನುವ ಮಾತಿದೆ. ಅಮೋನ್ಕರ್ ಅವರಿಗೆ ‘ಗುರುರಾಯ’ರೆಂದರೆ ಅಪರಿಮಿತ ಭಕ್ತಿ. ಹಾಗೆ ಮಂತ್ರಾಲಯದ ವ್ಯಕ್ತಿಯೊಬ್ಬರ ಜತೆ ಅಮೋನ್ಕರ್ ಅವರ ಮನೆಗೆ ಹೋಗಿದ್ದೆ. ಅಲ್ಲಿ ಅವರೇ ‘ಮೇರೆ ಪಾಸ್ ಆವೋ, ಮೇ ಸಿಕಾವೂಂಗಿ’ ಅಂಥ ಬಾಯಿಬಿಟ್ಟು ಹೇಳಿದ್ದರು. ಈಗಲೂ ಅವರಾಗಿಯೇ ಕೇಳಿದ್ದರು ಎಂಬುದನ್ನು ಹೇಳಿದರೆ ನಂಬಲು ಯಾರೂ ತಯಾರಿಲ್ಲ. ಅವರ ಮನೆಯಲ್ಲಿಯೇ ಐದು ವರ್ಷ ಗುರುಕುಲ ಪದ್ಧತಿಯಲ್ಲಿ ಕಲಿತೆ.
ಸಂಗೀತವನ್ನೇ ಧೇನಿಸಬೇಕೆಂಬ ನಿರ್ಧಾರ ಯಾವಾಗಿನಿಂದ?
ನನ್ನಮ್ಮ ನನಗೆ ಶಾಲೆಯಲ್ಲಿ ಶಿಕ್ಷಕಿಯೂ ಆಗಿದ್ದರು. ಅವಳಿಗೆ ನಾನು ಚೆನ್ನಾಗಿ ಓದಬೇಕು ಎನ್ನುವ ಆಸೆಯಿತ್ತು. ಆದರೆ ಅಪ್ಪ ವಿಜ್ಞಾನಿಯಾಗಿದ್ದರೂ ನನ್ನನ್ನು ಸಂಗೀತಗಾರ್ತಿಯಾಗಿ ರೂಪಿಸಬೇಕೆಂಬ ತುಡಿತವಿತ್ತು. ನನಗೂ ಸಂಗೀತವನ್ನೇ ವೃತ್ತಿಯಾಗಿ ಸ್ವೀಕರಿಸುವ ಆಸೆ ಆರಂಭದಲ್ಲಿ ಇರಲಿಲ್ಲ. ಓದಿನಲ್ಲಿಯೂ ಮುಂದಿದ್ದ ಕಾರಣ ಐಎಎಸ್ ಅಧಿಕಾರಿ ಆಗಬೇಕು ಎಂದುಕೊಂಡಿದ್ದೆ. ಬಸವರಾಜ ರಾಜಗುರು ‘ಸಂಗೀತವನ್ನೇ ಮುಂದುವರಿಸು’ ಎಂದು ಹೇಳಿದ್ದರು. ಅವರ ಅಕಾಲಿಕ ನಿಧನದ ನಂತರ ನನ್ನೊಳಗೆ ಒಂದು ನಿರ್ವಾತ ಶುರುವಾಯಿತು. ಅಲ್ಲಿಯವರೆಗೆ ಸಂಗೀತ ಕ್ಷೇತ್ರದ ಬಗ್ಗೆ ಗಂಭೀರತೆ ಇರಲಿಲ್ಲ. ನಂತರ ಗುರುಗಳ ಮಾತು ವೇದವಾಕ್ಯವಾಯಿತು. ಅಲ್ಲಿಂದ ಅದನ್ನೇ ವೃತ್ತಿಯಾಗಿ ಸ್ವೀಕರಿಸಲು ಶುರು ಮಾಡಿದೆ.
ಬದುಕಿನ ಮೂಲಮಂತ್ರವೇನು?
ಯಾವುದೇ ಪ್ರಕಾರವಿರಲಿ ಚಂದಕ್ಕೆ ಹಾಡಬೇಕು ಎನ್ನುವುದು ನನ್ನ ಮೂಲಮಂತ್ರ. ಹಾಗಾಗಿ ಬಂದ ಅವಕಾಶಗಳನ್ನೆಲ್ಲ ಅಚ್ಚುಕಟ್ಟಾಗಿ ಬಳಸಿಕೊಂಡೆ. ಈ ಬಗ್ಗೆ ಖುಷಿ ಹಾಗೂ ಹೆಮ್ಮೆ ಎರಡೂ ಇದೆ. ಎಷ್ಟು ಸಾಧನೆ ಮಾಡಿದ್ದೀನೋ ಗೊತ್ತಿಲ್ಲ. ಆದರೆ, ಮಾಡಿರುವ ಕೆಲಸಗಳನ್ನೆಲ್ಲ ಶ್ರದ್ಧೆಯಿಂದ ಮಾಡಿದ್ದೇನೆ. ಗಾಯಕರಿಗೆ ತಾಲೀಮಿನ ಜತೆಗೆ ಕೇಳ್ಮೆಯೂ ಬಹಳ ಮುಖ್ಯ.
ಸಂಗೀತ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯನ್ನು ಗುರುತಿಸುವುದಾದರೆ...
ಎಲ್ಲ ಕ್ಷೇತ್ರಗಳೂ ಬದಲಾವಣೆಯಿಂದ ಹೊರತಲ್ಲ. ಎಷ್ಟರ ಮಟ್ಟಿಗೆ ಬದಲಾವಣೆ ಬೇಕು ಎನ್ನುವುದು ಗೊತ್ತಿರಬೇಕು. ಗುರಿಯೇ ಇಲ್ಲದೇ ಪ್ರಯಾಣ ಮಾಡುತ್ತಿದ್ದೀವಿ ಅನಿಸುತ್ತೆ. ತಂತ್ರಜ್ಞಾನದ ಅತೀವ ಬಳಕೆಯಿಂದ ಎಲ್ಲೆಗಳೇ ಇರದ ಸಂಗೀತಕ್ಕೆ ಆಪತ್ತು ಇದೆ ಅನಿಸುತ್ತೆ. ಗಿಟಾರ್ ಹಿಡಿದ ಹುಡುಗ ಬಿಲಾವಲ್ ಎಂದು ಇನ್ನೇನೂ ರಾಗ ನುಡಿಸಿ, ಯೂಟ್ಯೂಬ್‌ನಲ್ಲಿ ಹಾಕುತ್ತಾನೆ. ಅದಕ್ಕೆ ಲಕ್ಷಾಂತರ ಲೈಕ್ಸ್ ಬಂದು ಬಿಡುತ್ತದೆ. ಯೂಟ್ಯೂಬ್‌ನಲ್ಲಿ ಬಿಲಾವಲ್ ಎಂದು ಕೊಟ್ಟರೆ ಅದೇ ಅಪಭ್ರಂಶ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ದಿಗ್ಗಜರ ಒಡನಾಟ ನಿಮ್ಮನ್ನು ರೂಪಿಸಿದ್ದು ಹೇಗೆ?
ಮಲ್ಲಿಕಾರ್ಜುನ ಮನ್ಸೂರ್ ಗಂಗೂಬಾಯಿ ಹಾನಗಲ್ಲ ಅವರ ಮುಂದೆಲ್ಲ ಕಛೇರಿ ನೀಡಿದ್ದೇನೆ. ಒಮ್ಮೆ ಗಂಗೂಬಾಯಿ ಅವರು ‘ಯೇ ಇಷ್ಟ ಸಾಕಾಗಂಗಿಲ್ಲ ಇನ್ನೂ ಭಾಳ ಮಾಡಬೇಕು ಆಕಿ’ ಅಂದಿದ್ದ ಮಾತುಗಳು ಒಳಗೆ ಇಳಿಯಿತು. ಅದು ನನ್ನನ್ನು ತೀವ್ರವಾಗಿ ಕಲಿಯುವಂತೆ ಮಾಡಿತು. 13ನೇ ವಯಸ್ಸಿಗೆ ಮಾಡಿದ್ದ ಸಂಗೀತ ಆಲ್ಬಂ ಅನ್ನು ಭೀಮಸೇನ ಜೋಶಿ ಅವರು ಬಿಡುಗಡೆ ಮಾಡಿದ್ದರು. ಕಿಶೋರಿ ಅಮೋನ್ಕರ್ ತುಂಬಾ ಶಿಸ್ತು. ಅವರ ಎಲ್ಲ ಮಾತುಗಳನ್ನು ತಪ್ಪದೇ ಪಾಲಿಸುತ್ತಿದ್ದೆ. ಅವರ ಮುಂದೆ ಪುಣೆಯಲ್ಲಿ ತಾಲೀಮು ಮಾಡುವಾಗ ತುಂಬಾ ಹೆದರುತ್ತಿದ್ದೆ. ಆದರೆ ಅದನ್ನೇ ಬೆಂಗಳೂರಿಗೆ ಬಂದು ಹಾಡುವಾಗ ಬಹಳ ಸಹಜವಾಗಿ ಸರಾಗವಾಗಿ ಹಾಡಲು ಆಗುತ್ತಿತ್ತು. ಎಂ. ಬಾಲಮುರಳಿ ಕೃಷ್ಣ ಅವರ ಜತೆ ಭಕ್ತಿಗೀತೆ ಹಾಡಿದ್ದೆ. ಆಗ ಭಯ ಶುರುವಾಗಿತ್ತು. ನನ್ನ ಭಯ ನೋಡಿ‘ ನೀನೇ ನನಗೆ ಹಾಡು ಹೇಳಿಕೊಡು’ ಅಂಥ ಹೇಳಿ ‘ಸರಿಯಾಗಿ ಹಾಡುತ್ತಿದ್ದೀನಾ’ ಅಂಥ ಕೇಳುತ್ತಿದ್ದರು. ಇನ್ನು ಮೇರುನಟ ರಾಜ್‌ಕುಮಾರ್ ಅವರಿಗೆ ಹಿಂದೂಸ್ತಾನಿ ಸಂಗೀತವೆಂದರೆ ಅಪಾರ ಪ್ರೀತಿ. ಅವರ ಜತೆಗೂ ಭಕ್ತಿಗೀತೆ ಹಾಡಲು ಅವಕಾಶ ದೊರೆಯಿತು. ಎಸ್.ಪಿ.ಬಾಲಸುಬ್ರಹ್ಮಣ್ಯ ಅವರು ಸಿಕ್ಕಾಗೆಲ್ಲ ‘ತಲ್ಲಿ’ ಎಂದೇ ಸಂಬೋಧಿಸುತ್ತಿದ್ದರು. ಇಂಥ ಗಂಧರ್ವರ ಒಡನಾಟ ನನ್ನನ್ನು ಮತ್ತಷ್ಟು ಗಟ್ಟಿಯಾಗಿ ನೆಲೆ ನಿಲ್ಲುವಂತೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.