ADVERTISEMENT

ಸಂಗತ: ನಟ್ಟು, ಬೋಲ್ಟ್‌ನಿಂದಾಚೆ...

ಚಲನಚಿತ್ರೋದ್ಯಮವನ್ನು ಒಂದು ಕೈಗಾರಿಕೆ ಎಂದು ಪರಿಗಣಿಸಿದರಷ್ಟೇ ಸಾಲದು

ಎಚ್.ಎಸ್.ಮಂಜುನಾಥ
Published 12 ಮಾರ್ಚ್ 2025, 23:30 IST
Last Updated 12 ಮಾರ್ಚ್ 2025, 23:30 IST
   

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗದ ಕಲಾವಿದರು, ಚಿತ್ರೋದ್ಯಮಿಗಳನ್ನು ಉದ್ದೇಶಿಸಿ, ‘ನಮ್ಮ ಜೊತೆ ಕೈಜೋಡಿಸದವರ ಬೋಲ್ಟು, ನಟ್‌ಗಳನ್ನು ಎಲ್ಲಿ ಟೈಟ್‌ ಮಾಡಬೇಕೆಂಬುದು ತಿಳಿದಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಚಿತ್ರರಂಗದವರಷ್ಟೇ ಅಲ್ಲದೆ ಹೊರಗಿನ ಕೆಲವರು ಸಹ ಪ್ರತಿಕ್ರಿಯಿಸಿದ್ದು ಆಯಿತು. ವಾಸ್ತವವಾಗಿ ಇಂಗ್ಲಿಷ್‌ನಲ್ಲಿ ನಟ್ಸ್ ಆ್ಯಂಡ್ ಬೋಲ್ಟ್ಸ್ ಎಂದರೆ ಯಾವುದೇ ವಿಷಯದ ಮೂಲಭೂತ, ಪ್ರಾಯೋಗಿಕ ವಿವರ. ಶಿವಕುಮಾರ್‌ ಅವರ ‘ಭಾಷೆ’ಯನ್ನು ಪಕ್ಕಕ್ಕಿಟ್ಟು, ಕನ್ನಡ ಚಿತ್ರೋದ್ಯಮದ ಸ್ಥಿತಿ ಸುಧಾರಿಸಲು ಕಾರ್ಯತಃ ಕೈಗೊಳ್ಳಬೇಕಾದ ಕ್ರಮಗಳೇನು ಎಂದು ಯೋಚಿಸಬೇಕು.

ಚಿತ್ರೋತ್ಸವದಿಂದ ಕನ್ನಡ ಚಿತ್ರರಂಗಕ್ಕೆ ಅಷ್ಟೇನೂ ನೇರ ಉಪಯೋಗ ಇಲ್ಲ. ಆದರೆ ನಿರ್ಮಾಪಕರು, ಹಂಚಿಕೆದಾರರು ಚಿತ್ರೋತ್ಸವದ ಸಂವಾದಗಳಲ್ಲಿ ಹಾಜರಿದ್ದಿದ್ದರೆ ಉಪಯುಕ್ತವಾಗುತ್ತಿತ್ತು. ‘ಪ್ರಾದೇಶಿಕ ಚಿತ್ರ ಹಂಚಿಕೆಯಲ್ಲಿನ ಸವಾಲುಗಳು, ಅವಕಾಶಗಳು’ ಕುರಿತ ಸಂವಾದ ಇದೇ 7ರಂದು ನಡೆಯಿತು. ಮುಕೇಶ್ ಮೆಹ್ತಾ (‘ದೃಶ್ಯಂ’ 1, 2 ಚಿತ್ರಗಳ ಹಂಚಿಕೆ ಮಾಡಿದವರು) ಹಾಗೂ ಬಲವಂತ್ ಸಿಂಗ್ (ತೆಲಂಗಾಣ, ಆಂಧ್ರಪ್ರದೇಶದಲ್ಲಿ ಹಂಚಿಕೆದಾರರು) ಸ್ವಂತ ಅನುಭವಗಳನ್ನು ಯಾವುದೇ ಭಿಡೆ ಇಲ್ಲದೆ ಪ್ರೇಕ್ಷಕರೊಡನೆ ಹಂಚಿಕೊಂಡರು. ಜತೆಗಿದ್ದ ಗಿರೀಶ್ ಜೌಹರ್, ಸಿನಿಮಾ ವೀಕ್ಷಕರ ಆದ್ಯತೆಗಳಲ್ಲಾದ ಸಂಪೂರ್ಣ ಬದಲಾವಣೆಯ ಬಗ್ಗೆ ಪ್ರಸ್ತಾಪಿಸಿದರು. ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ, ಅದರಲ್ಲೂ ಏಕತೆರೆ ಥಿಯೇಟರ್‌
ಗಳಿಗೆ ಆಕರ್ಷಿಸುವ ಅಗತ್ಯದ ಬಗೆಗೆ ಮೂವರೂ ಒತ್ತಿ ಹೇಳಿದರು. ಓಟಿಟಿ ಬಗೆಗೆ ಅತಿ ಆಸೆ ಇಟ್ಟುಕೊಳ್ಳಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. 

ಅಮೆರಿಕದಲ್ಲಿ ಯಾವ ಪ್ರದೇಶದಲ್ಲಿ ಥಿಯೇಟರ್ ಮೂಲಕ ಚಿತ್ರ ಬಿಡುಗಡೆ ಸಾಧ್ಯವಿಲ್ಲವೋ ಅಲ್ಲಿ ಓಟಿಟಿ ಮಾರ್ಗ ಹಿಡಿಯಲಾಗುತ್ತದೆ. ‘ಚಿತ್ರವೊಂದು ಮೊದಲು ಥಿಯೇಟರ್‌ಗಳಲ್ಲಿ ಬಂದರೆ ಅದಕ್ಕೆ ಗೋಚರತೆ (ವಿಸಿಬಿಲಿಟಿ) ಸಿಗುತ್ತದೆ. ಮುಂದೆ ಓಟಿಟಿಗೆ ಹೋದಾಗ ಇದು ಸಹಾಯಕವಾಗಬಹುದು’ ಎಂಬ ಮಾತು ಸರಿಯೆನಿಸುತ್ತದೆ. ನಟ ಅಮೀರ್ ಖಾನ್ ‘ಬಾಲಿವುಡ್‌ನ ಬಿಸಿನೆಸ್ ಮಾಡೆಲ್ಲೇ ಸರಿಯಿಲ್ಲ. ಕೆಲವು ದಿನಗಳ ನಂತರ ಓಟಿಟಿಯಲ್ಲಿ ಬರುತ್ತದೆ ಎಂದು ಮೊದಲೇ ಹೇಳಿದರೆ ಥಿಯೇಟರ್‌ಗೆ ಜನ ಬರುತ್ತಾರಾ?’ ಎಂದಿರುವುದು ಗಮನಾರ್ಹ. ಓಟಿಟಿ ಸ್ಟಾರ್‌ಗಳನ್ನು ಸೃಷ್ಟಿಸಲಾರದು ಎಂಬ ಬಲವಂತ್ ಅವರ ಮಾತಿನಲ್ಲೂ ಸತ್ವ ಇದೆ. ಸಾವಿರ ಚಿತ್ರಗಳಲ್ಲಿ ಐವತ್ತು ಓಟಿಟಿ ಅಥವಾ ಡಿಜಿಟಲ್ ಮೂಲಕ ಪ್ರದರ್ಶನಗೊಳ್ಳುತ್ತಿವೆ, ಅಲ್ಲಿ ಮೆಗಾ ಚಿತ್ರಗಳಿಗೆ ಮೊದಲ ಮಣೆ ಹಾಕಲಾಗುತ್ತಿದೆ, ಕನ್ನಡ ಚಿತ್ರಗಳಿಗೆ ಬೇಡಿಕೆಯೇ ಇಲ್ಲ- ಇವೂ ವಾಸ್ತವಿಕ ಅಂಶಗಳೇ.

ADVERTISEMENT

ಮಲ್ಟಿಪ್ಲೆಕ್ಸ್‌ ಬಂದಾಗ ದೊಡ್ಡ ನಿರೀಕ್ಷೆ ಇತ್ತು. ಕೆಲವರು ‘ಮಲ್ಟಿಪ್ಲೆಕ್ಸ್ ಚಿತ್ರ ಮಾಡಿದ್ದೇವೆ’ ಎಂದು ಹೇಳಿ
ಕೊಂಡಿದ್ದೂ ಉಂಟು. ಈಗ ಟಿಕೆಟ್ ದರ, ಜನ ಬರುವುದು, ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಸೂಕ್ತ ಸಮಯ ನೀಡದಿರುವುದು... ಹೀಗೆ ಹಲವು ಸಮಸ್ಯೆಗಳು ಕಂಡುಬಂದಿವೆ. ಎರಡು ಮತ್ತು ಮೂರನೇ ಶ್ರೇಣಿಯ ಊರುಗಳಲ್ಲಿ ಮಾಲ್ ನಿರ್ಮಿಸುವುದು ಕಷ್ಟ. ಅಲ್ಲಿ ಈಗಿರುವ ಚಿತ್ರಮಂದಿರಗಳ ಭೌತಿಕ ಸ್ಥಿತಿ ಚೆನ್ನಾಗಿಲ್ಲ. ಏಕಪರದೆಗಳ ನಿರ್ವಹಣೆ ತೆಲಂಗಾಣದಲ್ಲಿ ಚೆನ್ನಾಗಿದೆ ಎನ್ನಲಾಗಿದೆ. ಕೇರಳದ ತಿರುವನಂತಪುರದಲ್ಲೂ ಕೆಲವು ಚಿತ್ರಮಂದಿರಗಳನ್ನು ಉತ್ತಮಪಡಿಸಲಾಗಿದೆ. ‘ದಕ್ಷಿಣ ಭಾರತದ ಚಿತ್ರೋದ್ಯಮಿಗಳು ಏಕತೆರೆ ಪ್ರೇಕ್ಷಕ
ರನ್ನೇ ಹೆಚ್ಚು ನಂಬಿದರು, ಕೆಲವರು ಗೆದ್ದರು. ಆದರೆ ಹಿಂದಿಯವರು ಮಲ್ಟಿಪ್ಲೆಕ್ಸ್ ಕಲೆಕ್ಷನ್ ಅನ್ನು ಹೆಚ್ಚು ಅವಲಂಬಿಸಿ ಸೋತರು’ ಎಂಬ ತುಲನೆಯನ್ನೂ ವಿಶ್ಲೇಷಿಸಬೇಕಾಗಿದೆ.

ಆದಾಯ ಹಂಚಿಕೆಯು ಒಂದು ಬಹು ಚರ್ಚಿತ ವಿಷಯ. ನಿರ್ಮಾಪಕರು ಈ ಬಗೆಗೆ ದೂರುತ್ತಲೇ ಇರುತ್ತಾರೆ. ಮೊದಲ ಒಂದು ವಾರದ ನಂತರ ಇದರ ಶೇಕಡ ಪ್ರಮಾಣ ಎಷ್ಟಿರಬೇಕು ಎಂಬ ವಿಷಯ ಕಗ್ಗಂಟಾಗುತ್ತದೆ. ಪ್ರದರ್ಶಕರು ಹೆಚ್ಚಿನ ಆದಾಯದ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಗುತ್ತಿಗೆಯ ಮಾದರಿ ನಡೆಯುತ್ತಿದೆ.

ಈಗ ಮನರಂಜನೆಗೆ ಹಲವಾರು ಮಾರ್ಗಗಳಿವೆ, ಚಿತ್ರಮಂದಿರಕ್ಕೇ ಹೋಗಬೇಕೆಂದಿಲ್ಲ. ಈ ಬದಲಾದ ಪರಿಸ್ಥಿತಿಯಲ್ಲಿ ಕಡಿಮೆ ಬಜೆಟ್‌ನ ಚಿತ್ರ ನಿರ್ಮಿಸುವವರನ್ನು, ಏಕಪರದೆ ಚಿತ್ರಮಂದಿರಗಳನ್ನು ರಕ್ಷಿಸುವುದು ಹೇಗೆ? ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ ಕ್ರಮಗಳು ತತ್‍ಕ್ಷಣದ ಪರಿಣಾಮವನ್ನೇನೂ ಬೀರುವುದಿಲ್ಲ. ಗರಿಷ್ಠ ಟಿಕೆಟ್ ದರ ನಿಗದಿಯನ್ನು ಮಲ್ಟಿಪ್ಲೆಕ್ಸ್ ಮಾಲೀಕರು ವಿರೋಧಿಸ
ಬಹುದು. ಉದ್ದೇಶಿತ ಫಿಲಂ ಸಿಟಿ ಚಟುವಟಿಕೆಗಳಿಗೆ ತೆರೆದುಕೊಳ್ಳಲು ವರ್ಷಗಳೇ ಹಿಡಿಯಬಹುದು. ಚಲನ
ಚಿತ್ರ ಅಕಾಡೆಮಿಗೆ ಸೇರಿದ ಜಾಗದಲ್ಲಿ ಬಹುಪರದೆಗಳಿರುವ ಚಿತ್ರಮಂದಿರ ಸಮುಚ್ಚಯವನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಎಷ್ಟು ಜನ ಅತ್ತ ಹೋಗುತ್ತಾರೆ? ಸಾಮಾಜಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುವ ಚಲನಚಿತ್ರಗಳ ಸಂರಕ್ಷಣೆಗೆ ಚಲನಚಿತ್ರ ಭಂಡಾರ ಸ್ಥಾಪಿಸುವ ಇರಾದೆ ಸರ್ಕಾರಕ್ಕಿದೆ. ಇಲ್ಲಿ ಆಯ್ಕೆ ತುಂಬ ಮುಖ್ಯ.

ಈಗಾಗಲೇ ಕೆಲಮಟ್ಟಿಗೆ ರೋಗಗ್ರಸ್ತವಾಗಿರುವ ಚಿತ್ರರಂಗದಲ್ಲಿ ಚಿತ್ರ ನಿರ್ಮಾಣ ಸ್ವಲ್ಪಮಟ್ಟಿಗಾದರೂ ಲಾಭ ತರುವ ಚಟುವಟಿಕೆ ಆಗಬೇಕು. ಮುಖ್ಯ ಸಮಸ್ಯೆ ಎಂದರೆ, ವಾಣಿಜ್ಯ ಮಂಡಳಿಯಲ್ಲಿ ಬೌದ್ಧಿಕ ಬಂಡವಾಳ ಇರುವವರ ಕೊರತೆ ಇದೆ. ಆರ್ಥಿಕ ವಿಷಯಗಳ ಬಗೆಗೆ ಚಿಂತಿಸಿದರಷ್ಟೇ ಸಾಲದು. ನಿರ್ದೇಶಕರ ಸಂಘದಲ್ಲಿ ಕೆಲವರಿಗೆ ವಾಣಿಜ್ಯೇತರ ಆಯಾಮಗಳ ಬಗ್ಗೆ ಆಸಕ್ತಿ ಇರಬಹುದು. ಅವರ ಮಾತಿಗೆ ಬೆಲೆ ಸಿಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.